CONNECT WITH US  

ಸುರಂಗ ಅಗೆದು ಬಂಗಾರ ತೆಗೆಯುವವರೂ  "ಕೆಂಪು ಕಣಗಿಲೆ'ಯೂ

ಆ ಊರಿನ  ಹೆಸರು ಯಕ್ಷನಗರಿಯಂತೆ. ಅಲ್ಲಿಯ ಜನ ಭೂತ ಹೊಕ್ಕವರಂತೆ ಸುರಂಗ ಅಗೆದು ಬಂಗಾರದ ಗಟ್ಟಿಗಳನ್ನು  ತೆಗೆಯುತ್ತಿರುತ್ತಾರೆ. ಹಗಲೆಲ್ಲ ಗುಲಾಮಗಿರಿಯ ಪಾಡು, ಇರುಳು ಸುರೆಯ ಜಾಡು. ಒಳಹೊರಗಿನ ಒತ್ತಡಗಳ ನಿತ್ಯ ಸಂಗಾತಿ. ತಮ್ಮೂರಿಗೆ ಹೋಗುವ  ದಾರಿಯೂ ಮನಸ್ಸೂ ಮುಚ್ಚಿದೆ ಎಂಬ ಅರಿವಿನೊಂದಿಗೆ ಸವೆಯುತ್ತಿದೆ ಆಯುಷ್ಯ. ಬಿಡುಗಡೆಯೆಂಬುದು  ಆ  ನಿಸರ್ಗ ಮತ್ತು ನಾಡಿನಿಂದಲೇ  ಬಹಿಷ್ಕೃತ. ದುಡಿಸಿಕೊಳ್ಳುವ ಕುಟಿಲ ಆಡಳಿತಾಧಿಕಾರಿಯ ಜೊತೆಗೆ ಚಾಟಿ ಹಿಡಿದ ಕೊತ್ವಾಲ. ಮರುಳು ಮಾಡುವ ನಯ ವಂಚಕ, ಜಪಮಾಲೆಯ ಪುರಾಣಿಕ. ವ್ಯವಸ್ಥೆಯ ಪೋಷಣೆಯೊಂದೇ ಉದ್ದೇಶವಾಗಿರುವ ಜ್ಞಾನಭಂಡಾರ. ಜನರ ಉಪಯುಕ್ತತೆಯನ್ನು ಮೀರುವ ಹೃದಯವಂತಿಕೆಯೇ ಇರದ ದಮನಶೀಲ ಪರಿಸರದ ತುಂಬಾ  ಸಂಶಯದ ಸಂಕೋಲೆಗಳೇ.

ಎತ್ತರದ ವೇದಿಕೆಯ ರಾಜಮಹಲು. ಬಂಗಾರದ ಧ್ವಜ. ಪರದೆಯ ಹಿಂದೆ  ಅವಿತುಕೊಂಡು ಜನರಿಂದಲೂ ಸ್ವತಃ ತನ್ನಿಂದಲೂ  ದೂರವಾಗಿ, ಧ್ವನಿಯೊಂದರಿಂದಲೇ ಸಂವಹನ ನಡೆಸುತ್ತ, ಬಂಗಾರದ ಮುಸುಕು ಹೊದ್ದ  ಕ್ರೂರ ದೊರೆ. ವೇದಿಕೆಯ ಕೆಳಗೆ ಆಆಆ ಎನ್ನುತ್ತ ಬಾಯ್ದೆರೆದು ಕಬಳಿಸುವ ಸುರಂಗ. ಎಡ ಬಲಗಳಲ್ಲಿ ಹಗ್ಗ ಬಿಗಿದ ಕಂಬಗಳು. ಎಡ ಪಾರ್ಶ್ವದಲ್ಲಿ ಇಣುಕುವ ಕೆಂಪು ಹೂವುಗಳ ಒಂದು ಪುಟ್ಟ ಗೆಲ್ಲು. ಎಚ್‌. ಕೆ. ವಿಶ್ವನಾಥ್‌ರ ಸಾಂಕೇತಿಕ ರಂಗಸಜ್ಜಿಕೆ ಥೀಮನ್ನು ಸಮರ್ಥಿಸುತ್ತದೆ...

ಅಂತರ್ಜಾಲ ಪತ್ರಿಕೆ ಅವಧಿ ತನ್ನ  10 ವರ್ಷಗಳ ಸಂಭ್ರಮಕಾಗಿ ಬೆಂಗಳೂರಿನ ರಂಗಶಂಕರದಲ್ಲಿ ಆಯೋಜಿಸಿದ ಶ್ರೀಪಾದ್‌ ಭಟ್‌ ರಂಗ ಉತ್ಸವದ ಎರಡನೆಯ ದಿನ ಜೂ. 16ರಂದು ಮೈಸೂರಿನ ನಟನ ತಂಡದ  "ಕೆಂಪು ಕಣಗಿಲೆ' ಪ್ರಯೋಗದ ಸಂದರ್ಭ. ರವೀಂದ್ರನಾಥ್‌ ಟಾಗೋರರ Rಛಿಛ Olಛಿಚnಛಛಿrs (ಬಂಗಾಳಿ 

ಮೂಲ: ರೌಕೊ¤ ಕೊರೊಬಿ) ನಾಟಕದ ಕನ್ನಡ ಅನುವಾದವನ್ನು ಕೆ. ವಿ. ಸುಬ್ಬಣ್ಣನವರು ಈಗಾಗಲೇ ಮಾಡಿದ್ದಾರೆ. ಶ್ರೀಪಾದ್‌ ಭಟ್ಟರ ಸಾರಥ್ಯದ ಈ ವ್ಯಾಖ್ಯಾನ ಮೂಲದ ಜಟಿಲತೆಯನ್ನು ತಿಳಿಗೊಳಿಸಿ, ಕಾವ್ಯಗುಣಕ್ಕೆ ಲೋಪವಾಗದಂತೆ  ಪ್ರತಿಮೆಗಳನ್ನು ದಾಟಿಸುತ್ತಲೇ ಸುಸಂಗತ ದೃಶ್ಯಗಳ ಶಕ್ತಿಶಾಲಿ ಜೋಡಣೆಯ ಮೂಲಕ ನೋಡುಗರಿಗೆ ಟಾಗೋರರ ಆಶಯವನ್ನು ತಲುಪಿಸುತ್ತದೆ. ಇಲ್ಲಿÉ Rಛಿಛ Olಛಿಚnಛಛಿrs ಗೂ ಅದರ ಹಾಡುಗಳಿಗೂ ಸೊಗಸಾದ ಅಕ್ಷರರೂಪ  ನೀಡಿದ ಲೇಖಕಿ "ಸುಧಾ ಆಡುಕಳ'ರ  ಪಾತ್ರವೂ ಮಹತ್ವದ್ದು .

ಯಕ್ಷನಗರಿಯ ಅಮಾನುಷ ವಾತಾವರಣಕ್ಕೆ ಉಲ್ಲಾಸದ ಬುಗ್ಗೆಯಂತೆ ಬರುವ ನಂದಿನಿ ಒಂದು ಶಕ್ತಿಯೇ ಸರಿ (ಟಾಗೋರರ ಹಲವಾರು ನಾಟಕಗಳ ಕೇಂದ್ರಬಿಂದು ಸ್ತ್ರೀತ್ವವೇ). ಸ್ವಾತಂತ್ರÂ, ಸ್ವಾರ್ಥವಿಲ್ಲದ ಪ್ರೀತಿ, ನಿಸರ್ಗ ಮತ್ತು ಜೀವಂತಿಕೆಯ ಸಂಕೇತವಾಗಿರುವ ಈಕೆ ತನ್ನ  ಮಾತು, ಹಾಡು, ನರ್ತನದಿಂದ  ಅಲ್ಲಿಯ ಯಂತ್ರಗಳಲ್ಲೂ ಮನುಷ್ಯತ್ವದ  ಹಂಬಲ ಹುಟ್ಟಿಸುತ್ತಾಳೆ. ತಾನು ತೊಟ್ಟ ಕೆಂಪು ಕಣಗಿಲೆಗಳನ್ನು ನೀಡಿದ ಸಂಗಾತಿ ರಂಜನನ  ಬಗ್ಗೆ ಮಾತನಾಡುತ್ತಾಳೆ. ದೊರೆಯ ದಬ್ಟಾಳಿಕೆಯನ್ನು ಧೈರ್ಯದಿಂದ ಎದುರಿಸಿ ಆತನಿಗೆ ಸವಾಲೆಸೆಯುತ್ತಾಳೆ.  ನಿಧಿಯ ದರ್ಶನ ಸಾಕು ಎನ್ನುವ ದೊರೆಗೆ ರಂಜನನನ್ನು ಕಂಡರೆ ಮತ್ಸರ.

ಈ ರಂಜನನ ಹೆಸರು ಹಲವರ ನಾಲಿಗೆಯ ಮೇಲೆ ಕುಣಿದಾಡಿದರೂ ಆತ ಈ ಪ್ರಯೋಗದಲ್ಲಿ ಒಮ್ಮೆಯೂ  ಕಾಣಿಸಿಕೊಳ್ಳುವುದೇ ಇಲ್ಲ!. ರಂಜನನನ್ನು  ಒಬ್ಬ ವ್ಯಕ್ತಿಯಾಗಿ ಅಲ್ಲ, ರಂಜನೆಗೆ ಪ್ರತಿಮೆಯಾಗಿ ಸ್ವೀಕರಿಸುವ ನಿರ್ದೇಶಕರು ಧನಸಂಗ್ರಹದ ಸಾರ್ವಭೌಮತ್ವದ ಈ ಕಾಲದಲ್ಲಿ ಕಲೆಗಳು ಉಂಟುಮಾಡಬಲ್ಲ ಆದ್ರìತೆಯೇ ಮನುಷ್ಯನನ್ನು ಎಚ್ಚರಗೊಳಿಸಬಲ್ಲವು ಎಂಬ ನಂಬಿಕೆಯನ್ನು ರವಾನಿಸುತ್ತಾರೆ. ಕಿಶೋರನೆಂಬ ಪಾತ್ರ ಹರಿವಾಣದಲ್ಲಿ  ತಂಬೂರಿ, ಗೆಜ್ಜೆ ಮತ್ತು ಕಣಗಿಲೆ ಹೂವಿನ ಹಾರ  ತಂದುಕೊಟ್ಟಾಗ ಸಮರಕ್ಕೆ ಹೊರಡುವ ಯೋಧೆಯಂತೆೆ ನಂದಿನಿ ಅವುಗಳನ್ನು ತೊಡುವ ಕಲ್ಪನೆ ಇಡೀ ನಾಟಕದ ಇಂಗಿತವನ್ನು ಕಟ್ಟಿಕೊಡುತ್ತದೆ.

ಪ್ಲಾಟ್‌ ಅನಾವರಣಗೊಳ್ಳುತ್ತ ಹೋಗಿ, ಪಾತ್ರಗಳ ಆಂತರ್ಯ ಅವರ ಮಾತು ಮತ್ತು ಹಾವಭಾವಗಳ ಮಾರ್ಗದಿಂದ ಪ್ರೇಕ್ಷಕರನ್ನು ತಲುಪುತ್ತಿದ್ದಂತೆ ಹೊಳೆದ ಒಂದು ವಿಷಯವನ್ನು ಹೇಳಲೇಬೇಕು. ಇದು ತೊಂಬತ್ತಕ್ಕೂ  ಹೆಚ್ಚು ವರ್ಷಗಳ ಹಿಂದೆ, ಬ್ರಿಟಿಷರು ನಮ್ಮಲ್ಲಿದ್ದ ಕಾಲದಲ್ಲಿ ಬರೆಯಲ್ಪಟ್ಟ ನಾಟಕವೋ ಇಂದಿನ ನಾಟಕವೋ ಎಂಬ ಗೊಂದಲ!.  

"ಒಂದು ಸುರಂಗ ಮುಗಿದರೆ ಇನ್ನೊಂದು. ಇನ್ನೊಂದು ಮುಗಿದರೆ ಮತ್ತೂಂದು. ಈ ನಗರದಲ್ಲಿ ಸಾಲುಸಾಲು ಸಂಖ್ಯೆಗಳೇ, ಇದಕ್ಕೆ  ಕೊನೆಯಿಲ್ಲ. ಅದಕ್ಕೇ ಅವರ ಪಾಲಿಗೆ ನಾವು ಮನುಷ್ಯರಲ್ಲ, ಬರಿಯ ಸಂಖ್ಯೆಗಳು'. "(ಕೊತ್ವಾಲನ) ಚಾಟಿಯ ದಾರ, ಪುರಾಣಿಕನ ಜಪಮಾಲೆಯ ದಾರ ಎರಡನ್ನೂ ಒಂದೇ ವಸ್ತುವಿನಿಂದ ಮಾಡುತ್ತಾರೆ'. ಸಾರ್ವಕಾಲಿಕ ಮೌಲ್ಯದ ಇಂತಹ ಸಂಭಾಷಣೆಯ ತುಣುಕುಗಳಿಗೆ ಪ್ರೇಕ್ಷಕರು ಸ್ಪಂದಿಸಿದೆ ಇರುವುದಾದರೂ ಹೇಗೆ?, ರಂಗದ ಮೇಲಿನ ಪಾತ್ರಗಳ  ಮಾತುಗಳೇ ಪ್ರೇಕ್ಷಕರಿಗೆ ಕನ್ನಡಿ ತೋರಿಸಿದವೆ ಅಥವಾ ಜನಸಾಮಾನ್ಯರ ಅನುಭವವೇ ರಂಗದ ಮೇಲಿನ ಪಾತ್ರಗಳ ಮಾತಾಗಿ ಹೊಮ್ಮಿತೆ ! ಪಾತ್ರ ಮತ್ತು ಸಹೃದಯರ ನಡುವಿನ ಅಂತರವನ್ನು ಇಲ್ಲವಾಗಿಸಿದ ಇಂತಹ ಸಾರ್ಥಕ ಕ್ಷಣಗಳು ರಂಗಭೂಮಿಯ ಅಭಿವ್ಯಕ್ತಿ ಸಾಮರ್ಥಯಕ್ಕೆ  ನಿದರ್ಶನವಾಗಿದ್ದವು.

ನಾಟಕದ ಮುಖ್ಯ ಭೂಮಿಕೆಯನ್ನು  "ದಿಶಾ ರಮೇಶ್‌' ನಿರ್ವಹಿಸಿರುವ  ರೀತಿಗೆ ಸಲಾಮ್‌!. ಸುಶ್ರಾವ್ಯ ಹಾಡುಗಾರಿಕೆ ಮತ್ತು ಮನೋಹರ ನರ್ತನದಿಂದ  ಪಾತ್ರವನ್ನು ಪೋಷಿಸುತ್ತಲೇ ಅವರು ಕೊನೆಯವರೆಗೂ ಅದೇ ಎನರ್ಜಿಯನ್ನು ಕಾಯ್ದುಕೊಂಡು ಬಂದಿರುವುದು ಅಸಾಧಾರಣ ಸಾಧನೆ. ರಾಜನಿಗೆ ಜೋಗುಳ ಹಾಡುವಾಗ  ಅದನ್ನು  ಕೋಮಲತೆಯಿಂದ ಆರಂಭಿಸಿ ಪ್ರತಿಭಟನೆಯ ಉತ್ತುಂಗಕ್ಕೆ ಕೊಂಡೊಯ್ದ  ಪರಿಯೇ ಆಗಲೀ, ಕ್ಲೈಮ್ಯಾಕ್ಸ್‌ನಲ್ಲಿ  ಇಳಿದು ಬಾ ಎಂಬ ಹಾಡಿನ ಏರುಸ್ಥಾಯಿಯೇ ಆಗಲೀ ಪ್ರೇಕ್ಷಕರಲ್ಲಿ  ವಿದ್ಯುತ್ಸಂಚಲನವನ್ನು ಉಂಟು ಮಾಡಿದವು.

ಬಂಡವಾಳಶಾಹಿ ದೊರೆಯ ಪಾತ್ರದಲ್ಲಿ "ಮೇಘ ಸಮೀರ' ಅದಕ್ಕೆ ತಕ್ಕುದಾದ ಅಭಿನಯವನ್ನು ಇನ್ನೊಂದೇ ಬಗೆಯಲ್ಲಿ ನಿಭಾಯಿಸುತ್ತಾರೆ. ಧ್ವನಿಯ ಕರ್ಕಶತೆ ಹಾಗೂ ಅಂಗಾಂಗಗಳ ಚಲನವಲನಗಳ ಶೈಲೀಕೃತ  ಅಭಿನಯದ ಮಾದರಿ ಇದು. ಇವರು ಯಕ್ಷಗಾನದ ಮುಖವರ್ಣಿಕೆ ಹಾಗೂ ಭಾರೀ  ವೇಷಭೂಷಣಗಳಿಂದ ರಾಕ್ಷಸೀತನವನ್ನೂ ಅದರೊಳಗೆ ಯಾವುದೋ
ಮೂಲೆಯಲ್ಲಿ ಅಡಗಿದ್ದು ಕರುಣೆಗೆ ಪಾತ್ರನಾಗುವ ಮನುಷ್ಯನನ್ನೂ ಅಭಿವ್ಯಕ್ತಿಸಬೇಕಾಗುತ್ತದೆ. ರಾಜ ಮಹಲಿನ ಸೀಮಿತ ಸ್ಥಳದಲ್ಲಿಯೇ ಈ ಪಾತ್ರಕ್ಕೆ ವ್ಯಾಪಕ ಮೂವೆ¾ಂಟ್‌ಗಳನ್ನು ನೀಡಿ ನಿರ್ದೇಶಕರು ವ್ಯವಸ್ಥೆಯ ಉದ್ದಗಲಕ್ಕೂ ಚಾಚಿಕೊಂಡ ದಬ್ಟಾಳಿಕೆಯನ್ನು ಸೂಚಿಸುತ್ತಾರೆ. ಕೊನೆಯ ದೃಶ್ಯ ತನ್ನ ಅದ್ಭುತ ಸಂಯೋಜನೆಯಿಂದ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತದೆ.

ಹಾಗೆ ನೋಡಿದರೆ ಬಿಶುವಿನ ಪಾತ್ರ ಚಿಕ್ಕದೇ. ಆದರೆ ನಟ "ಅಖೀಲೇಶ್‌ ಕೃಷ್ಣ'  ತಮ್ಮ  ಸಹಜ ಅಭಿನಯ, ಅನುಭವಿಸಿಕೊಂಡು ನುಡಿಯುವ ಸಾಲುಗಳು, ಭಾವಪೂರ್ಣವಾಗಿ  ಹಾಡುವ ಪದಗಳ ಮೂಲಕ  ಪಾತ್ರವನ್ನು ಅದರ ವಿವಿಧ ಆಯಾಮಗಳಲ್ಲಿ ರೇಖೀಸಿ ನಮ್ಮ ನಿಮ್ಮ ನಡುವಿನ ಒಬ್ಬ ಜೀವಂತ ವ್ಯಕ್ತಿಯನ್ನೇ ಕಣ್ಣ ಮುಂದೆ ತರುತ್ತಾರೆ.

ನಟನದ ನಟನಟಿಯರ ಶಿಸ್ತು, ಬದ್ಧತೆ ಹಾಗೂ ವೃತ್ತಿಪರ ಪೂರ್ವ ಸಿದ್ಧತೆಯನ್ನು ಮೆಚ್ಚಲೇಬೇಕು. ಸಂಕೇತಗಳ ಸಾಮ್ರಾಜ್ಯದಂತಿರುವ ಟಾಗೋರರ ಕೃತಿಯನ್ನು ಭಟ್ಟರು ತಮ್ಮ ಬತ್ತಳಿಕೆಯಲ್ಲಿರುವ ಸಂಗೀತ -ನೃತ್ಯ-ವರ್ಣಾದಿ ಆಯುಧಗಳಿಂದ ಕನ್ನಡದ ಒಂದು ಅದ್ಭುತ ಪ್ರಯೋಗ ವನ್ನಾಗಿಸಿ ಇಂದಿನ ವಾಸ್ತವದ‌ ಅನೇಕ ತಲ್ಲಣಗಳನ್ನು ರಂಗದ ಮೇಲೆ ಸೆರೆಹಿಡಿದಿದ್ದಾರೆ. ಹಿನ್ನೆಲೆ ಸಂಗೀತ, ಪಾತ್ರಗಳೇ ಹಾಡುವ ಸುಂದರ ಹಾಡುಗಳು (ಭಟ್ಟರ ಸಂಗೀತ ಸಂಯೋಜನೆ), ಪಾತ್ರಗಳ ಸ್ವಭಾವ, ವರ್ಗಕ್ಕೆ ಅನುಗುಣವಾದ ವೇಷ ಭೂಷಣ ಇವೆಲ್ಲವೂ  Willing suspension of disbelief ಇಂಬುಗೊಡುತ್ತವೆ. ರೂಢಿಗತವಾಗಿ ತರ್ಕವೊಂದಕ್ಕೇ ಬಹುಪಾಲು ಅಂಟಿಕೊಳ್ಳುವ  ಚಿಕಿತ್ಸಕ ಮನಸ್ಸೂ ರಂಗ ಮಂದಿರದಿಂದ ಹೊರಬರುವಾಗ ಟಾಗೋರರ "ಎಲ್ಲಿ  ಮನಕಳುಕಿರದೊ  ಎಲ್ಲಿ  ತಲೆ ಬಾಗಿರದೊ.. ..ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ'  ಹಾಡು ಪ್ರತಿನಿಧಿಸುವ ಮೌಲ್ಯಗಳತ್ತ ತುಡಿಯುತ್ತದೆ. ಎಲ್ಲ ಸಿನಿಕತನದ ನಡುವೆಯೂ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿರು ಕಣಗಿಲೆಯೇ ಎಂದು ಆಶಿಸುತ್ತದೆ

ಅಹಲ್ಯಾ ಬಲ್ಲಾಳ್‌ 

Trending videos

Back to Top