CONNECT WITH US  

ಮೂಡುಬೆಳ್ಳೆ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ:ವಿಶೇಷ ಸಭೆ

ಮುಂಬಯಿ: ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ವಿಶೇಷ ಸಭೆ ಜು. 15ರಂದು ಸಂಜೆ 4ರಿಂದ ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್‌ ಕಟ್ಟಡದ ಸಭಾಗೃಹದಲ್ಲಿ ಜರಗಲಿದೆ.

ದೇವಸ್ಥಾನದ ಇತಿಹಾಸ ಉಡುಪಿಯ ಮೂಡುಬೆಳ್ಳೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಓರ್ವ ಬಂಟ ಮಹಿಳೆಯಿಂದ ಸ್ಥಾಪಿತಗೊಂಡ ಈ ದೇವಸ್ಥಾನವು ಅಂದು ಬೆಳ್ಳೆಯ ಮುಳ್ಳುಗುಡ್ಡೆ ಎಂಬ ಸುಮಾರು 2 ಎಕರೆ ಸ್ಥಳದಲ್ಲಿ ಸೂರ್ಯನ ಕಿರಣದಂತೆ ಸರ್ವರಿಗೂ ಬೆಳಕು ನೀಡುತ್ತಾ ಬಂದಿದ್ದು, ಇಂದು ಈ ಸ್ಥಳ ದೇವರ ಗುಡ್ಡೆ ಎಂದೇ ಕರೆಯಲ್ಪಡುತ್ತಿದೆ. ಮಾತ್ರವಲ್ಲ ಸುಮಾರು 800 ವರ್ಷಗಳ ಹಿಂದೆ ಇದ್ದ ಈ ಬಂಟ ಮಹಿಳೆ ಬಳ್ಳಾಲ್ದಿಗೆ ನಾಲ್ಕು ಹೆಣ್ಮಕ್ಕಳು ಮತ್ತು ಪುತ್ರನೋರ್ವ ಇದ್ದ ಎಂಬ ಇತಿಹಾಸವಿದೆ. ತನ್ನ ಮಕ್ಕಳಿಗೆ ತನಗೆ ಪಾರಂಪರಿಕವಾಗಿ ಬಂದಂತಹ ಆಸ್ತಿಯನ್ನು ವಿಂಗಡಿಸಿ ದೊಡ್ಡವಳಿಗೆ ಮೇಲ್ಮನೆ ಎಂಬ ಸ್ಥಳ, ಎರಡನೆಯವಳಿಗೆ ಕೆಳಮನೆ ಎಂಬ ಸ್ಥಳ, ಮೂರನೆಯವಳಿಗೆ ಪಡುಮನೆ, ನಾಲ್ಕನೆಯವಳಿಗೆ ಬಡಗುಮನೆ ಮತ್ತು ಪುತ್ರನಿಗೆ ಮೂಡುಮನೆಯ ಆಸ್ತಿಯನ್ನು ನೀಡಿದಳು ಎಂಬ ಕತೆ ಇಂದಿಗೂ ಚಾಲ್ತಿಯಲ್ಲಿದೆ.

ಬಳ್ಳಾಲ್ದಿಗೆ ಒಲಿದು ಬಂದ ಶಿವಲಿಂಗ 
ಬಲಬದಿಯಲ್ಲಿ ಸುಬ್ರಹ್ಮಣ್ಯ, ಎಡಬದಿಯಲ್ಲಿ ಮಹೇಶ್ವರ, ನಡುಮಧ್ಯೆ  ಪಾಪನಾಶಿನಿ  ಎಂಬ ನದಿಯೊಂದು ನಿತ್ಯ ನಿರಂತರವಾಗಿ ಹರಿಯುತ್ತ ಸಮುದ್ರವನ್ನು ಸೇರುತ್ತಿದೆ. ನದಿ ತೀರದಲ್ಲಿ ವಾಸ ಮಾಡಿಕೊಂಡಿರುವ ಎಲ್ಲರನ್ನು ಶುಭ್ರಗೊಳಿಸುವ ಜತೆಗೆ, ಆಸರೆಯನ್ನು ನೀಡಿ ಈ ಪರಿಸರದ ಜನತೆಯ ಕೃಷಿ ಭೂಮಿಯನ್ನು ಫಲವತ್ತಾಗಿಸಿದೆ. ಇಲ್ಲಿಯ ಕೃಷಿಕರು ನೀರಿನ ಕೊರತೆಯನ್ನು ಎಂದೂ ಕಂಡುಕೇಳಿದವರಲ್ಲ. ಅನುಭವಿಸಿದವರಲ್ಲ ಎನ್ನಬಹುದು. ಬಳ್ಳಾಲ್ದಿಯ ಮಗ ಒಂದು ದಿನ ಗ್ರಾಮೀಣ ಕ್ರೀಡೆಯಾಗಿದ್ದ ಕುಟ್ಟಿ-ದೊಣ್ಣೆ ಆಟವಾಡುತ್ತಿದ್ದಾಗ ಗುಡ್ಡೆಯಲ್ಲಿದ್ದ ಬೃಹತ್‌ ಕಲ್ಲೊಂದಕ್ಕೆ ಈ ಕುಟ್ಟಿ ತಾಗಿ ಕಲ್ಲಿನಿಂದ ರಕ್ತ ಹೊರ ಚಿಮ್ಮಿತು. ಇದನ್ನು ಕಂಡ ಬಳ್ಳಾಲ್ದಿ ಇದು ಶಿವಲಿಂಗ ಆಗಿರಬೇಕು ಎಂದು ಗ್ರಹಿಸಿ ಅಲ್ಲಿಯೇ ಸಣ್ಣ ಗುಡಿಯೊಂದನ್ನು ಕಟ್ಟಿ ಸ್ವತಃ ಪೂಜೆ ಮಾಡತೊಡಗಿದರು. ಕಾಲಕ್ರಮೇಣ ಉಡುಪಿ ಅನಂತಪುರ ದೇವಸ್ಥಾನದ ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬಂದರು  ಎಂಬ ದಾಖಲೆಯೂ ಇದೆ.
ಕಣ್ಮನ ಸೆಳೆಯುವ ಸೂರ್ಯ ದೇವರ ಗುಡಿ ಸೂರ್ಯ ದೇವರನ್ನು ಕಾಣದೆ ಊಟ ತಿಂಡಿಯನ್ನು ಸೇವಿಸದ ಬಳ್ಳಾಲ್ದಿ ಅಂದಿನ ಕಾಲದಲ್ಲಿ ಮೂರು ದಿನ
ಸೂರ್ಯನನ್ನೇ ಕಾಣದಂತಹ ವಾತಾವರಣ ಬಂದೊದಗಿ ದಾಗ ಸೂರ್ಯನಾರಾಯಣನ ಗುಡಿಯೊಂದನ್ನು ನಿರ್ಮಿಸಿ ಅಲ್ಲಿ ಸೂರ್ಯನನ್ನು ಕಾಣುವ ತಪಸ್ಸು ಮಾಡಿದ್ದಳು ಎಂಬ ಉಲ್ಲೇಖವಿದೆ. ಇಂದಿಗೂ ಇಲ್ಲಿ ಸೂರ್ಯದೇವರ ಗುಡಿ ಇದೆ. ಕೋಟಿ-ಚೆನ್ನಯರು ಈ ಮೇಲ್ಮನೆಗೆ ಭೇಟಿಯಿತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡ ಕಥೆಯನ್ನು ಅನೇಕ ಹಿರಿಯ ತಲೆಮಾರಿನ ಸದ್ಭಕ್ತರು ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ ಇಲ್ಲೇ ಹತ್ತಿರದ ತಳಬೈಲ್‌ನಲ್ಲಿ ತಮ್ಮ ಛತ್ರ ಇದೆ ಎಂದು ಹೇಳಿ ಅಲ್ಲಿಗೆ ಬಳ್ಳಾಲ್ದಿಯನ್ನು ಬರಮಾಡಿಕೊಂಡು ಅಲ್ಲಿ ಬೈದರ್ಕಳ ಗುಡಿಯನ್ನು ನಿರ್ಮಿಸುವಂತೆ ವಿನಂತಿಸಿದರು ಎಂಬ ಉಲ್ಲೇಖವಿದೆ.

ನಾಲ್ಕು ಮನೆಗಳ ನೇತೃತ್ವ 
ಅನೇಕ ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿರುವ ಈ ಕಾರಣಿಕ ಕ್ಷೇತ್ರದ ಉಸ್ತುವಾರಿಯನ್ನು ಬೆಳ್ಳೆ ಮೇಲ್ಮನೆ ಮತ್ತು ಬೆಳ್ಳೆ ಕೆಳಮನೆ ಕುಟುಂಬಸ್ಥರು ನೋಡಿಕೊಂಡು ಬರುತ್ತಿದ್ದು, ಇದೀಗ ಬಹಳಷ್ಟು ಶಿಥಿಲಾವಸ್ಥೆಯಲ್ಲಿರುವ ಈ ಕ್ಷೇತ್ರವನ್ನು ನಾಡಿನ ಅನೇಕ ಪುಣ್ಯ ಕ್ಷೇತ್ರಗಳಂತೆ ಜೀರ್ಣೋದ್ಧಾರಗೊಳಿಸಬೇಕು ಎಂದು ಬೆಳ್ಳೆ ಮೇಲ್ಮನೆ, ಬೆಳ್ಳೆ ಕೆಳಮನೆ, ಬೆಳ್ಳೆ ಪಡುಮನೆ, ಬೆಳ್ಳೆ ಬಡಗುಮನೆ, ಬೆಳ್ಳೆ ಮೂಡುಮನೆ ಈ ಐದು ಪಂಚ ಪಾಂಡವರಂತಹ ಒಮ್ಮತದ ಪ್ರತಿಷ್ಠಿತ ಮನೆಗಳವರು ಮತ್ತು ಗ್ರಾಮಸ್ಥರು ಮುಂದಾಗಿದ್ದಾರೆ.

ನಾಲ್ಕು ಕೋ. ರೂ. ಗಳ ಯೋಜನೆ 
ಸುಮಾರು ನಾಲ್ಕು ಕೋ. ರೂ.ಗಳ ವೆಚ್ಚದ ಯೋಜನೆ ಇದಾಗಿದ್ದು, ಕರ್ನಾಟಕ ಸರಕಾರದ ದತ್ತಿ ಇಲಾಖೆಯ ಮುಖ್ಯಸ್ಥ ಮತ್ತು ದೇವಸ್ಥಾನದ ಆಡಳಿತ ವರ್ಗ ಹಾಗೂ ಅನುವಂಶಿಕ ಮೊಕ್ತೇಸರರಾದ ಬೆಳ್ಳೆ ಮೇಲ್ಮನೆ ಮತ್ತು ಬೆಳ್ಳೆ ಕೆಳಮನೆಯವರು ಜೀರ್ಣೋದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಸೂರ್ಯನಾರಾಯಣ, ಶ್ರೀ ಗಣಪತಿ ದೇವರ ಗುಡಿಯ ಜತೆಗೆ ಶ್ರೀ ರುದ್ರ ಮಹಾಲಿಂಗೇಶ್ವರನ ಗರ್ಭಗುಡಿ, ಸುತ್ತುಪೌಳಿ, ತೀರ್ಥಮಂಟಪ, ಬಾವಿ, ಪಾಕಶಾಲೆ, ಭೋಜನ ಶಾಲೆ, ದೈವ ದೇವತೆಗಳ ಗುಡಿ, ಒಳಾಂಗಣ, ಹೊರಾಂಗಣ, ಸ್ವಾಗತ ಗೋಪುರ ನಿರ್ಮಾಣ, ದೋಷ ನಿವಾರಣೆ, ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಗಳನ್ನು ನೆರವೇರಿಸಲು ಈಗಾಗಲೇ ಜೀರ್ಣೋದ್ಧಾರ ಸಮಿತಿಯೊಂದನ್ನು ರಚಿಸಿ, 2016, ಅಕ್ಟೋಬರ್‌ 2ರಂದು ಶಿಲಾಮಯ ಮುಹೂರ್ತ ಕಾರ್ಯವೂ ನಡೆದಿದೆ.

ಜೀರ್ಣೋದ್ಧಾರಕ್ಕೆ ಕಾರ್ಯಪ್ರವೃತ್ತಗೊಂಡ ನೂತನ ಸಮಿತಿ 
ಪ್ರಸ್ತುತ ಹರಿದಾಸ್‌ ಐತಾಳ್‌ ಅವರ ಮಾರ್ಗದರ್ಶನ, ಎಂಜಿನಿಯರ್‌ ಪ್ರಸಾದ್‌ ಕುತ್ಯಾರ್‌ ಅವರ ಸಂಪೂರ್ಣ ಸಹಕಾರದ ಜತೆಗೆ ನಾಡಿನ ಹೆಸರಾಂತ ಶಿಲ್ಪಿಗಳನ್ನು ಈ ಬೃಹತ್‌ ಯೋಜನೆಗೆ ಸೇರಿಸಲಾಗಿದೆ. ಮುಂಬಯಿ ಭಕ್ತಾದಿಗಳು, ಹಿತೈಷಿಗಳು, ಊರ ಬಂಧುಗಳು ಸಲಹೆ-ಸೂಚನೆಗಳನ್ನು ನೀಡಲು ಬಂಟರ ಸಂಘದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳೆ ಮೇಲ್ಮನೆ ಮತ್ತು ಆನುವಂಶಿಕ ಮೊಕ್ತೇಸರ ಡಾ| ರಾಮರತನ್‌ ರೈ, ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರ ಡಾ| ಎಚ್‌. ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಬೆಳ್ಳೆ ಮೇಲ್ಮನೆ ಉದಯ ಶೆಟ್ಟಿ ಮತ್ತು ಸುಬ್ರಹ್ಮಣ್ಯ ಆಚಾರ್‌, ಜತೆ ಕಾರ್ಯದರ್ಶಿಯಾಗಿ ನಾಗರಾಜ ಕಾಮತ್‌, ಕೋಶಾಧಿಕಾರಿಯಾಗಿ ಚಂದ್ರಕಾಂತ್‌ ರಾವ್‌, ಕಾರ್ಯಕಾರಿ ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಅರ್ಚಕರು ಮತ್ತು ಪರಿಚಾರಿಕ ವರ್ಗದವರು, ಗ್ರಾಮಸ್ಥರು ಈ ದೇವತಾ ಕಾರ್ಯದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಜೀರ್ಣೋದ್ದಾರ ಸಹಾಯಕ್ಕಾಗಿ ಮನವಿ 
ದೇಣಿಗೆ ನೀಡಲಿಚ್ಛಿಸುವ ಸದ್ಭಕ್ತರು ಕರ್ನಾಟಕ ಬ್ಯಾಂಕ್‌ನ ಕಟ್ಟಿಂಗೇರಿ ಶಾಖೆಯ ಉಳಿತಾಯ ಖಾತೆ ನಂಬರ್‌ 4212500100746501, ಐಎಫ್‌ಎಸ್‌ಸಿ ನಂಬರ್‌ ಕೋಡ್‌ ಕೆಎಆರ್‌ಬಿ0000421, ಅಂಚೆ ಮೂಡುಬೆಳ್ಳೆ ಇಲ್ಲಿಗೆ ಕಳುಹಿಸಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ  ಬೆಳ್ಳೆ ಮೇಲ್ಮನೆ ಕಿಶೋರ್‌ ಶೆಟ್ಟಿ (9324546078), ವಿನಯ ಶೆಟ್ಟಿ ಪಾಲೆಮಾರು (9819852223), ರಮೇಶ್‌ ಶೆಟ್ಟಿ ಪಾಲೆಮಾರು (9769101017), ಅಜಿತ್‌ ಶೆಟ್ಟಿ ಬಡಗುಮನೆ (9221077450), ಶ್ರೀನಿವಾಸ ಶೆಟ್ಟಿ ಪಡುಮನೆ (9967812790) ಡಾ| ಪ್ರಕಾಶ್‌ ಶೆಟ್ಟಿ ಕೆಳಮನೆ (9821911918) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Trending videos

Back to Top