CONNECT WITH US  

ಬಿಲ್ಲವರ ಅಸೋಸಿಯೇಶನ್‌ ಚೆಂಬೂರು:ಶೈಕ್ಷಣಿಕ ನೆರವು ವಿತರಣೆ

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಚೆಂಬೂರು ಸ್ಥಳೀಯ ಸಮಿತಿಯ ವತಿಯಿಂದ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಶ್ಯಾಮಲಾ ಹರಿಶ್ಚಂದ್ರ ಸಾಲ್ಯಾನ್‌, ಕೇಂದ್ರ ಕಚೇರಿಯ ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ತೋನ್ಸೆ, ಸದಸ್ಯರಾದ ಉಮೇಶ್‌ ಕೋಟ್ಯಾನ್‌, ಗಣೇಶ್‌ ಬಂಗೇರ, ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ವೇಣುಗೋಪಾಲ್‌ ಕಾಪು, ಗೌರವ ಕಾರ್ಯದರ್ಶಿ ಚರಣ್‌ ಕುಮಾರ್‌ ಅಂಚನ್‌, ಗೌರವ ಕೋಶಾಧಿಕಾರಿ ನಾಗೇಶ್‌ ಕೋಟ್ಯಾನ್‌ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ವಿಭಾಗದ ಶಿಲ್ಪಾ, ಯಶೋಧಾ ಮತ್ತು ಶಶಿಪ್ರಭ ಅವರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಚರಣ್‌ ಕುಮಾರ್‌ ಅಂಚನ್‌ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. 2017ನೇ ಜೂನ್‌ನಲ್ಲಿ ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ಅಂತಾರಾಷ್ಟ್ರೀಯ ಟೆನ್ನಿಸ್‌, ವಾಲಿಬಾಲ್‌ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಗೆದ್ದ ಚೆಂಬೂರಿನ ಕು| ಅದಿತಿ ಸತೀಶ್‌ ಸಾಲ್ಯಾನ್‌ ಅವರು ಅಸೋಸಿಯೇಶನ್‌ ವತಿಯಿಂದ ಸಮ್ಮಾನಿಸಲಾಯಿತು.

ಕೊಡುಗೈದಾನಿ ಗೀತಾ ಮೈನ್ಸ್‌ವೇರ್‌ನ ಮಾಲಕ ನಿತ್ಯಾನಂದ ಪೂಜಾರಿ ಅವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ಯಾಮಲಾ ಹರಿಶ್ಚಂದ್ರ ಸಾಲ್ಯಾನ್‌ ಅವರು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌, ದೂರದರ್ಶನ ಇತ್ಯಾದಿ ಸಾಮಾಜಿಕ ಜಾಲತಾಣಗಳತ್ತ ಆಕರ್ಷಿತರಾಗದೆ, ಓದಿನ ಕಡೆಗೆ ಹೆಚ್ಚಿನ ಗಮನ ನೀಡಿ, ತಾವು ನಿಂತ ನದಿಯ ನೀರಾಗದೆ, ಹರಿವ ನದಿಯ ನೀರಾಗಬೇಕು. ಜೀವನದಲ್ಲಿ ಉನ್ನತ ವಿದ್ಯಾರ್ಜನೆ ಗಳಿಸಿ ಯಶಸ್ವಿಯಾಗುವ ಸತತ ಪ್ರಯತ್ನ ಮಕ್ಕಳಲ್ಲಿರಲಿ ಎಂದರು.

ಬಿಲ್ಲವರ ಅಸೋಸಿಯೇಶನ್‌ ಮತ್ತು ಬಿಲ್ಲವ ಜಾಗೃತಿ ಬಳಗದ ವಿಲಿನೀಕರಣ ಪ್ರಕ್ರಿಯೆ ಒಂದು ಒಳ್ಳೆಯ ಸಂಕೇತವಾಗಿದೆ. ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲಿನ ನವೀಕರಣ ಮತ್ತು ಎಂಜಿನಿಯರಿಂಗ್‌ ಕಾಲೇಜು ಜಯ ಸುವರ್ಣರ ಮನದಾಸೆ. ಇದಕ್ಕೆ ನಾವೆಲ್ಲರೂ ಸ್ಪಂದಿಸಿ ಸಹಕರಿಸುವ ಎಂದು ಕಾರ್ಯಾಧ್ಯಕ್ಷ ಸಂಜೀವ ಪಿ. ಬಂಗೇರ ಅವರು ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.

ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಬಂಗೇರ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ತೋನ್ಸೆ ಅವರು ಮಾತನಾಡಿದರು. ರಂಜನ್‌ ಕುಮಾರ್‌ ಅಮೀನ್‌ ಮಾತನಾಡಿ ಶುಭ ಹಾರೈಸಿದರು. ಸುಮಾರು 25 ವಿದ್ಯಾರ್ಥಿಗಳಿಗೆ ಅತಿಥಿ-ಗಣ್ಯರು ಶೈಕ್ಷಣಿಕ ನೆರವು ವಿತರಿಸಿ ಶುಭ ಹಾರೈಸಿದರು. ಶಿಲ್ಪಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ಗೌರವ ಕಾರ್ಯದರ್ಶಿ ಚರಣ್‌ಕುಮಾರ್‌ ಅಂಚನ್‌ ವಂದಿಸಿದರು. ಸ್ಥಳೀಯ ಸಮಿತಿಯ ರಾಮ ಪೂಜಾರಿ, ಜಯ ಅಮೀನ್‌, ಯೋಗಿನಿ ಕರ್ಕೇರ, ಜಲಜಾಕ್ಷೀ ಪೂಜಾರಿ, ಶೀಲಾ ಪೂಜಾರಿ, ಯುವ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು, ಸದಸ್ಯ ಬಾಂಧವರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.


Trending videos

Back to Top