CONNECT WITH US  

ಚಿಣ್ಣರಬಿಂಬ ಮೀರಾರೋಡ್‌: ಸಾಂಸ್ಕೃತಿಕ ಉತ್ಸವ ಸಮಾರೋಪ

ಮುಂಬಯಿ: ಜಾತಿಯ ಪರಿಧಿ ಯನ್ನು ಮೀರಿ ಎಲ್ಲಾ ಸಮಾಜದ ಮಕ್ಕಳಿಗೆ ಸಮಾನ ರೀತಿಯ ಸಂಸ್ಕೃತಿ-ಸಂಸ್ಕಾರಗಳನ್ನು ನೀಡುತ್ತಿರುವ ಪ್ರಕಾಶ್‌ ಭಂಡಾರಿ ಅವರ ನಾಯಕತ್ವದ ಚಿಣ್ಣರ ಬಿಂಬವು ಮುಂಬಯಿ ಹಾಗೂ ಇತರ ಉಪನಗರಗಳಲ್ಲಿ ಹರಡಿ ನಿಂತಿರುವುದು ಅಭಿನಂದನೀಯ. ಮಕ್ಕಳು ಕೇವಲ ವಿದ್ಯೆಯನ್ನು ಪಡೆದಾಕ್ಷಣ ಎಲ್ಲವನ್ನೂ ತಿಳಿದಂತಾಗುವುದಿಲ್ಲ. ವಿದ್ಯೆ ಯೊಂದಿಗೆ ಸಂಸ್ಕೃತಿ, ಸಂಸ್ಕಾರಗಳು ಜೀವನದಲ್ಲಿ ಅಳವಡಿಕೆಗೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವಿದ್ಯೆಯಿಂದ ವಿನಯ ಪ್ರಾಪ್ತಿಯಾದರೆ, ಉತ್ತಮ ಸಂಸ್ಕೃತಿ, ಸಂಸ್ಕಾರಗಳಿಂದ ಸಮಾಜ ಮತ್ತು ದೇಶ ಬಲಿಷ್ಠಗೊಳ್ಳುತ್ತದೆ ಎಂದು ಬಂಟರ ಸಂಘ ಮುಂಬಯಿ ಪಶ್ಚಿಮ ವಲಯದ ಸಮನ್ವಯಕ, ಬೊರಿವಲಿ ಉದ್ಯಮಿ ಮುಂಡಪ್ಪ ಎಸ್‌. ಪಯ್ಯಡೆ  ನುಡಿದರು.

ಸೆ. 24 ರಂದು ಭಾಯಂದರ್‌ ಪೂರ್ವದ ಮದರ್‌ ಮೇರೀಸ್‌ ಇಂಗ್ಲೀಷ್‌ ಹೈಸ್ಕೂಲ್‌ ಸಭಾಗೃಹದಲ್ಲಿ ನಡೆದ ಚಿಣ್ಣರ ಬಿಂಬ ಮೀರಾರೋಡ್‌-ಭಾಯಂದರ್‌- ವಸಾಯಿ -ನಲಸೋಪರ ಶಿಬಿರಗಳ ಮಕ್ಕಳ ವಾರ್ಷಿಕ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಚಿಣ್ಣರ ಬಿಂಬದ ಮಕ್ಕಳ ಪ್ರತಿಯೊಂದು ಕಾರ್ಯಕ್ರಮಗಳನ್ನು ಸಮೀಪದಿಂದ ಬಲ್ಲವನಾಗಿದ್ದೇನೆ. ಇಂತಹ ಶಿಬಿರಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ, ತುಳು-ಕನ್ನಡಿಗರ ಮಕ್ಕಳು ಸಂಸ್ಕೃತಿ-ಸಂಸ್ಕಾರಗಳೊಂದಿಗೆ ಅರಳಬೇಕು ಎಂದು ನುಡಿದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಇದರ ಮಾಜಿ ಅಧ್ಯಕ್ಷ ಗೋಪಾಲ್‌ ಪುತ್ರನ್‌ ಮಾತನಾಡಿ, ನಮ್ಮ ಭಾಷೆಯಲ್ಲೇ ನಾಡಿನ ಸಂಸ್ಕೃತಿಯಿದೆ. ಇಂದಿನ ಮಕ್ಕಳಿಗೆ ಭಾಷೆ ಮತ್ತು ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಉದ್ಧೇಶದಿಂದ ಹುಟ್ಟಿಕೊಂಡ ಚಿಣ್ಣರ ಬಿಂಬದ ಸೇವಾ ಕಾರ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಚಿಣ್ಣರು ಉತ್ತಮ ಬದುಕನ್ನು ರೂಪಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರಕಾಶ್‌ ಭಂಡಾರಿ ಅವರ ತಂಡದ ಸಾಧನೆ ಶ್ಲಾಘನೀಯವಾಗಿದೆ ಎಂದರು.

ಅತಿಥಿಯಾಗಿ ಪಾಲ್ಗೊಂಡ ಮೀರಾ-ಡಾಹಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರು ಮಾತನಾಡಿ, ಚಿಣ್ಣರ ಬಿಂಬದ ಶಿಬಿರದಲ್ಲಿ ಎಲ್ಲಾ ಪಾಲಕರು ಮಕ್ಕಳನ್ನು ಬಲವಂತವಾಗಿ ಸೇರಿಸಬೇಕು. ಚಿಣ್ಣರ ಬಿಂಬದಲ್ಲಿ ಭಾಷೆ ಮತ್ತು ಸಂಸ್ಕಾರದ ಅರಿವು ಮೂಡಿಸುತ್ತಾರೆ. ಇಲ್ಲಿ ಕಲಿತ ಮಕ್ಕಳು ದೇಶಕ್ಕೆ ಮಾದರಿಯಾಗುತ್ತಾರೆ ಎಂದು ನುಡಿದರು.

ಯುನೈಟೆಡ್‌ ರಬ್ಬರ್‌ ಇಂಡಸ್ಟಿÅàಯಲ್‌ ಇದರ ಮಾಲಕ ಅಜಿತ್‌ ರೈ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸಬೇಕು. ಬದುಕಿನಲ್ಲಿ ಯಶಸ್ವಿಗೆ ವಿಜ್ಞಾನ ಕೂಡ ಸಹಕಾರಿಯಾಗುತ್ತದೆ. ಪ್ರಕಾಶ್‌ ಭಂಡಾರಿ ಅವರು ಮಕ್ಕಳಿಗೆ ಶಿಸ್ತನಉನ ನೀಡುತ್ತ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾರೆ. ಅವರಿಗೆ ಅಭಿನಂದನೆಗಳು ಎಂದು ಹೇಳಿ ಮಕ್ಕಳಿಗೆ ಶುಭಹಾರೈಸಿದರು.

ಮೀರಾರೋಡ್‌ ಸಾಯಿಬಾಬಾ ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ಡಾ| ಎನ್‌. ಅಂಬರೀಷ್‌ ಹೆಗ್ಡೆ ಅವರು ಮಾತನಾಡಿ, ಚಿಣ್ಣರಿಗೆ ಸೂಕ್ತ ಸಲಹೆಗಳನ್ನು ನೀಡುತ್ತಿರುವ ಚಿಣ್ಣರ ಬಿಂಬದ ಕಾರ್ಯ ಅಭಿನಂದನೀಯ. ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಬೆಳೆಯಲು ಮಕ್ಕಳು  ತಾಳ್ಮೆ ಮತ್ತು ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು, ಚಿಣ್ಣರ ಬಿಂಬದ ಚಿಣ್ಣರು ಉತ್ತಮವಾಗಿ ಬೆಳೆಯಲು  ಅವರ ಪಾಲಕರ ಶ್ರಮ ಅಪಾರವಾಗಿದೆ. ನಲಸೋಪರ ಮತ್ತು ವಿರಾರ್‌ನಲ್ಲಿ ಶಿಬಿರ ಮತ್ತೆ ಪ್ರಾರಂಭವಾಗಲಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಮೀರಾ- ಭಾಯಂದರ್‌ ಮಹಾನಗರ ಪಾಲಿಕೆಗೆ ನಗರ ಸೇವಕರಾಗಿ ಆಯ್ಕೆಗೊಂಡ ಹೊಟೇಲ್‌ ಉದ್ಯಮಿ, ಮೀರಾ-ಡಹಾಣೂ ಬಂಟ್ಸ್‌ನ ಅಧ್ಯಕ್ಷ ಅರವಿಂದ ಎ. ಶೆಟ್ಟಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿ ಸಮ್ಮಾನಿಸಲಾಯಿತು. ಆಶ್ರಿತಾ ಕೊಠಾರಿ, ಹಸ್ತಾ ಶೆಟ್ಟಿ, ಸುವಿದಾ ಶೆಟ್ಟಿ ಮತ್ತು ಶ್ರೀ ರಕ್ಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದಿನಪೂರ್ತಿ ನಡೆದ ಶಿಬಿರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. 

ಮಕ್ಕಳ ಸಾಂಸ್ಕೃತಿಕ ಉತ್ಸವದ ನಡುವೆ ಪಾಲಕರಿಗೆ ಇಂದಿನ ಗಂಡಸರು ಮನೆಯಲ್ಲಿ ಕೆಲಸ ಮಾಡಬೇಕೋ ಬೇಡವೋ ಎಂಬ ವಿಷಯದ ಮೇಲೆ ಚರ್ಚಾ ಕಾರ್ಯಕ್ರಮ ನಡೆಯಿತು. ಚರ್ಚಾ ಕೂಟವನ್ನು ಅಶೋಕ್‌ ಪಕ್ಕಳ ಅವರು ನಡೆಸಿಕೊಟ್ಟರು.


Trending videos

Back to Top