CONNECT WITH US  

ಕನ್ನಡ ವಿಭಾಗ ಮುಂಬಯಿ ವಿವಿ: ವಿಶೇಷ ಉಪನ್ಯಾಸ ಕಾರ್ಯಕ್ರಮ

ಮುಂಬಯಿ: ಕನ್ನಡ ಪ್ರಜ್ಞೆ ಮತ್ತು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಬಹುತ್ವದ ಕಲ್ಪನೆಯನ್ನು ನಾನು ಇಂದಿನ ಕಾರ್ಯಕ್ರಮದಲ್ಲಿ ಕಾಣುವ ಭಾಗ್ಯ ಒದಗಿತು. ಕನ್ನಡದ ಬಗೆಗಿನ ಕಳಕಳಿ ನಮ್ಮ ಆತ್ಮದಲ್ಲಿ ಕೊರೆಯುತ್ತಿರಬೇಕು. ಯಾಕೆಂದರೆ ವಲಸೆ ಬಂದ ನಮ್ಮವರು ಕನ್ನಡ ಉಳಿಸಿ ಬೆಳೆಸುವ ತುರ್ತು ಏನೆಂಬುವುದರ ಅರಿವಿದೆ. ಸರ್ಟಿಫಿಕೇಟ್‌ನಿಂದ ಪಿಎಚ್‌.ಡಿವರೆಗೆ ಕನ್ನಡ ನಿರಂತರವಾಗಿ ಕನ್ನಡ ವಿಭಾಗದಲ್ಲಿ ಹರಿದು ಬರುತ್ತಿದೆ ಎನ್ನುವಾಗ ಅಭಿಮಾನವಾಗುತ್ತದೆ. ಸಮಗ್ರ ನೆಲೆಯಲ್ಲಿ ವಿದ್ಯಮಾನಗಳ ಮೂಲಕ ಕನ್ನಡದ ಸಾಧನೆ, ಸಾಧಕರನ್ನು ದಾಖಲೀಕರಿಸುವ ಕಾರ್ಯ ಕನ್ನಡ ವಿಭಾಗದಲ್ಲಿ ನಡೆಯುತ್ತಿದೆ. ಭಾಷೆಯ ಮೂಲಕ, ಸಂಸ್ಕೃತಿಯ ಅರಿವಿನ ಮೂಲಕ ಕನ್ನಡವನ್ನು ಕಟ್ಟಿ ಬೆಳೆಸಬೇಕು ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ, ರಂಗತಜ್ಞ ಡಾ| ಭರತ್‌ ಕುಮಾರ್‌ ಪೊಲಿಪು ಅವರು ಅಭಿಪ್ರಾಯ ಪಟ್ಟರು.

ಅವರು ಇತ್ತೀಚೆಗೆ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಕನ್ನಡ ಸರ್ಟಿಫಿಕೇಟ್‌ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಇದೊಂದು ಅವಿಸ್ಮರಣೀಯವಾದ ಅನುಭವದ ಕಾರ್ಯಕ್ರಮ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕನ್ನಡೇತರರು, ಕನ್ನಡ ಬಾರದವರು ಕನ್ನಡ ಕಲಿಯುತ್ತಿರುವುದು ಅಭಿಮಾನದ ವಿಷಯ. ಇದನ್ನು ಕಂಡಾಗ ಮುಂಬಯಿ ಕನ್ನಡವನ್ನು ಉಳಿಸುತ್ತಿದೆ ಬೆಳೆಸುತ್ತಿದೆ. ಕನ್ನಡಕ್ಕೆ ಅಳಿವಿಲ್ಲ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಹೊಸತಲೆಮಾರಿಗೆ ಕನ್ನಡದ ದೀಕ್ಷೆಯನ್ನು ಕೊಡುತ್ತಿರುವುದು ಹರ್ಷದಾಯಕವಾದುದು ಎಂದರು.

ಅಕ್ಷಯ ಪತ್ರಿಕೆಯ ಸಂಪಾದಕರಾದ ಡಾ| ಈಶ್ವರ ಅಲೆವೂರು ಅವರು ಮಾತನಾಡಿ, ಕನ್ನಡ ಬಾರದವರು, ಕನ್ನಡೇತರರು ದೊಡ್ಡ ಪ್ರಮಾಣದಲ್ಲಿ ಕನ್ನಡ ಕಲಿಕೆಯಲ್ಲಿ ನಿರತರಾಗಿರುವುದು ಆಶಾದಾಯಕ ಬೆಳವಣಿಗೆಯೇ ಸರಿ. ಅಂತರ್ಭಾಷೀಯ, ಅಂತರ್ಜಾತೀಯ ವಿವಾಹಗಳು ಹೆಚ್ಚುತ್ತಿರುವುದರಿಂದ ವ್ಯವಹಾರದ ದೃಷ್ಟಿಯಿಂದಲೂ ಭಾಷೆಗಳ ಕಲಿಕೆ ಅನಿವಾರ್ಯ. ಕನ್ನಡ ವಿಭಾಗ ಉನ್ನತ ಅಧ್ಯಯನದ ಜೊತೆಗೆ ಕನ್ನಡ ಕಲಿಕಾ ತರಗತಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು ಭಾಷೆ ಒಂದು ಸಂಪತ್ತು. ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಸುದೀರ್ಘ‌ ಇತಿಹಾಸವಿದೆ. ಇಲ್ಲಿ ಕನ್ನಡವನ್ನು ಕಲಿತವರು ಕರ್ನಾಟಕದ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.  ಸರಕಾರ ಉದ್ಯೋಗ ಮೀಸಲಾತಿಯನ್ನು ಕೂಡಾ ಪೋಷಿಸುತ್ತಿದೆ. ಅನುವಾದ ಕಾರ್ಯದಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ. ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು ಆಗಿರುವುದರಿಂದ ಸಂವಹನ ಸಂಪರ್ಕ ವ್ಯವಹಾರದ ದೃಷ್ಟಿಯಿಂದಲೂ ಭಾಷಾ ಕಲಿಕೆ ಪ್ರಯೋಜನಕಾರಿ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಸರ್ಟಿಫಿಕೇಟ್‌ ಕೋರ್ಸನ್ನು ನಡೆಸಿಕೊಂಡು ಬರುತ್ತಿರುವ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಕಲಿನಾ ಕ್ಯಾಂಪಸ್‌, ಶ್ಯಾಮಲಾ ಪ್ರಕಾಶ್‌ ಪನ್ವೇಲ್‌ ಕರ್ನಾಟಕ ಸಂಘ, ಶ್ರೀಪಾದ ಪತಕಿ ನವಿಮುಂಬಯಿ ಕನ್ನಡ ಸಂಘ, ಗೀತಾ ಆರ್‌.ಎಸ್‌, ಉಮಾರಾವ್‌ ಹಾಗೂ ಅನಿತಾ ಅಣುಶಕ್ತಿ ಕನ್ನಡ ಸಂಘ ಅವರ ಸಹಕಾರ ಮಹತ್ವದ್ದಾಗಿದೆ. ಇದೀಗ ಥಾಣೆಯಲ್ಲಿ ಕುಮುದಾ ಆಳ್ವ ಅವರು ಕನ್ನಡ ಕಲಿಕೆಯಲ್ಲಿ ನಿರತರಾಗಿರುವುದು ಸಂತೋಷದ ಸಂಗತಿ ಎಂದು ಕನ್ನಡ ಕಲಿತ ವಿದ್ಯಾರ್ಥಿಗಳಿಗೂ, ಮಕ್ಕಳು ಕನ್ನಡ ಕಲಿಯಲು ಪ್ರೋತ್ಸಾಹಿಸಿದ  ಪಾಲಕರಿಗೂ ಧನ್ಯವಾದ ತಿಳಿಸಿದರು.

ಮನೋರಂಜನ ಕಾರ್ಯಕ್ರಮದ ಅಂಗವಾಗಿ ಶ್ರೀಪಾದ ಪತಕಿ, ಕುಮಾರಿ ಮುನ್ಷಿ ಸುನಿಧಿ ವೇಣುಗೋಪಾಲ್‌ ಅವರು ಹಾಡು ಹಾಡಿದರು. ಆತ್ರೇಯ ಪ್ರದ್ಯುಮ್ನ ಸಂಜೀವ್‌ ಅವರಿಂದ ಕೊಳಲು ವಾದನ ನೆರವೇರಿತು. ಶಿಕ್ಷಕರಾದ ಶ್ಯಾಮಲಾ ಪ್ರಕಾಶ್‌, ಶ್ರೀಪಾದ ಪತಕಿ, ಅನಿತಾ, ಗೀತಾ ಆರ್‌.ಎಸ್‌, ಕುಮುದಾ ಆಳ್ವ ಉಪಸ್ಥಿತರಿದ್ದರು. ಸುರೇಖಾ ದೇವಾಡಿಗ, ನಳಿನಾ ಪ್ರಸಾದ್‌, ದಿನಕರ್‌ ಚಂದನ್‌, ಸುಧೀರ್‌ ದೇವಾಡಿಗ, ಸುರೇಖಾ ಶೆಟ್ಟಿ,  ಅನಿತಾ ಪೂಜಾರಿ ತಾಕೋಡೆ, ಉದಯ ಶೆಟ್ಟಿ, ಮುಕುಂದ ಶೆಟ್ಟಿ, ಲಕ್ಷಿ¾à ಪೂಜಾರಿ ಹಾಗೂ ಪಾಲಕರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


Trending videos

Back to Top