CONNECT WITH US  

ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕ ಹೆಸರಿಡಲು ಒತ್ತಾಯ

ಮುಂಬಯಿ: ಕರ್ನಾಟಕದ ಹೆಮ್ಮೆಯ ತುಳುನಾಡ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಉತ್ಸವವು ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ಕಳೆದ ಮಾ. 11 ರಿಂದ ಒಂದು ವಾರಗಳವರೆಗೆ ನಡೆದು ಮಾ.  18 ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಮಾರೋಪಗೊಂಡಿತು.

ಈ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ವೀರರಾಣಿ ಅಬ್ಬಕ್ಕಳನ್ನು ಚಾರಿತ್ರಿಕವಾಗಿ ಗುರುತಿಸಲು ಹಲವು ಠರಾವುಗಳನ್ನು ಮಂಡಿಸಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕನ ಹೆಸರಿಡುವುದು. ಉಲ್ಲಾಳದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಯನ್ನು ನಗರದ ಮುಖ್ಯ ಸ್ಥಳದಲ್ಲಿ ಸ್ಥಾಪನೆ ಮಾಡುವುದು. ಸರಕಾರ ಲಕ್ಕುಂಡಿ ಉತ್ಸವ ಹಾಗೂ ಹಂಪಿ ಉತ್ಸವದ ಮಾದರಿಯಲ್ಲಿ ಪ್ರತಿವರ್ಷ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಅಬ್ಬಕ್ಕ ರಾಣಿ ಉತ್ಸವವನ್ನು  ಆಚರಿಸುವುದು.     ಅತ್ತಿಮಬ್ಬೆ ಪ್ರಶಸ್ತಿ ಮಾದರಿಯಲ್ಲಿ ಪ್ರತಿ ವರ್ಷರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ವತಿಯಿಂದ ನೀಡುವುದು. ಮಂಗಳೂರು ರೈಲ್ವೇ ನಿಲ್ದಾಣದಿಂದ ಹೊರಡುವ ಯಾವುದಾದರೂ ರೈಲಿಗೆ ವೀರರಾಣಿ ಅಬ್ಬಕ್ಕನ ಹೆಸರಿಡುವುದು. ಮಂಗಳೂರು ವಿಶ್ವವಿದ್ಯಾಲಯಕ್ಕೆ ವೀರರಾಣಿ ಅಬ್ಬಕ್ಕರಾಣಿ ಹೆಸರಿಡುವುದು, ಪಠ್ಯ ಪುಸ್ತಕದಲ್ಲಿ ವೀರರಾಣಿ ಅಬ್ಬಕ್ಕಳ ಚರಿತ್ರೆಯನ್ನು  ಸೇರಿಸುವುದು ಇನ್ನಿತರ ವಿಷಯಗಳನ್ನು ತಿಳಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರಕುಮಾರ್‌ ಅವರು ತಮ್ಮ ಭಾಷಣದಲ್ಲಿ, ಈ ಕಾರ್ಯಕ್ರಮದ ಮೂಲಕ ಅಬ್ಬಕ್ಕನನ್ನು ರಾಷ್ಟ್ರ ರಾಜಧಾನಿಯಲ್ಲಿ ಬೆಳಕಿಗೆ ತಂದ ಎಲ್ಲರಿಗೂ ಅವಳ ವಂಶಸ್ಥಳಾಗಿ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಆಕೆಯ ಆಶೀರ್ವಾದದಿಂದಲೇ ನಮ್ಮ ಈ ಚೌಟ ವಂಶವೂ ಬೆಳೆದಿದೆ. ಜಾಗತಿಕ ಇತಿಹಾಸದಲ್ಲಿ ಉಳ್ಳಾಲ ರಾಣಿ ಅಬ್ಬಕ್ಕಳಿಗೆ ವಿಶಿಷ್ಟ ಸ್ಥಾನಮಾನ ಇದೆ. ಸ್ವಾತಂತ್ರÂ ಹೋರಾಟದ ಮುಂಚೂಣಿಯಲ್ಲಿದ್ದ ಅಬ್ಬಕ್ಕನ ಚರಿತ್ರೆಯನ್ನು ನಮ್ಮ ಎಳೆಯ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮಹಿಳೆಯರು ಮಹಿಳಾ ಮೀಸಲಾತಿಗೆ ಕಾಯದೆ ಸರಳತೆಯ, ಸ್ವಾಭಿಮಾನದ ಪ್ರತೀಕವಾದ ಅಬ್ಬಕ್ಕನ ಆದರ್ಶವನ್ನು ಮುನ್ನುಡಿಯಾಗಿ ಇಟ್ಟುಕೊಂಡು ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು. ಈ ಉತ್ಸವ ಮಾನವ ಸಂಬಂಧದ ಮನಸ್ಸುಗಳನ್ನು ಒಗ್ಗೂಡಿಸಿದೆ. ಆ ಮೂಲಕ ಕಾರ್ಯಕ್ರಮವೂ ಅರ್ಥಪೂರ್ಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳದ  ಡಿ. ಸುರೇಂದ್ರ ಕುಮಾರ್‌ ಅವರು ಮಾತನಾಡುತ್ತ, ದೆಹಲಿ ಕರ್ನಾಟಕ ಸಂಘವು ಯುಗಾದಿಯಂದು ರಾಣಿ ಅಬ್ಬಕ್ಕನನ್ನು ಸ್ಮರಿಸಿರುವುದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಇದರ ಸಹಾಯಕ ನಿರ್ದೇಶಕರಾದ  ಚಂದ್ರಹಾಸ ರೈ  ಬಿ. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾದ ಭಾರತೀ ಶಂಕರ್‌ ಅವರು ಕರಾವಳಿಯಲ್ಲಿರುವ ಮಹಿಳಾ ಪ್ರಾತಿನಿಧ್ಯವನ್ನು ನಾವು ನಿಜಕ್ಕೂ ಮೆಚ್ಚಲೇಬೇಕು. ಈ ಪ್ರಾತಿನಿಧ್ಯಕ್ಕೆ ಸುಮಾರು 450 ವರ್ಷಗಳೇ ಹಿಂದೆಯೇ ಅಬ್ಬಕ್ಕಳೇ ನಾಂದಿಯಾಡಿದಳೆಂದರೆ ತಪ್ಪಾಗಲಾರದು. ಜೊತೆಗೆ ಬೆಂಗಳೂರಿನಲ್ಲಿ ಅಬ್ಬಕ್ಕನ ಕಂಚಿನ ಪ್ರತಿಮೆ ಸ್ಥಾಪಿಸಲು ಮುಂದಾದವರಲ್ಲಿ ನಾನೂ ಒಬ್ಬಳು. ಆಕೆಯೇ ನನ್ನ ಜೀವನದ ಪ್ರೇರಣೆ ಎಂಬುದಾಗಿ ಹೇಳಿದರು.

ಖ್ಯಾತಿ ಸಾಹಿತಿ ಮತ್ತು ಜಾನಪದ ವಿದ್ವಾಂಸರಾದ ಪ್ರೊ| ಎ. ವಿ. ನಾವಡ ಅವರು ಮಾತನಾಡಿ,  ಕರಾವಳಿಯಲ್ಲಿ ಜೈನ ಅರಸು ಮನೆತನದ ಪ್ರಭಾವವೇ ಹೆಚ್ಚಾಗಿತ್ತು. 12 ರಾಣಿಯಂದಿರು ಕರಾವಳಿಯಲ್ಲಿ ರಾಜ್ಯಭಾರ ಮಾಡಿದ್ದರು. ಹಾಗಾಗಿ ಅಬ್ಬಕ್ಕನ ಅಧ್ಯಯನದ ಜೊತೆಗೆ ಕರಾವಳಿಯನ್ನು ಆಳಿದ ರಾಣಿಯಂದಿರ ಅಧ್ಯಯನವನ್ನು ನಡೆಸಬೇಕು. ಇದೇ ಸಂದರ್ಭದಲ್ಲಿ ಅಬ್ಬಕ್ಕ ಉತ್ಸವವು ಅಕಾಡೆಮಿಯಾಗಿ ನಡೆಯಬೇಕು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ಸ್ವಾಗತಿಸಿದರು. ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ, ಉಳ್ಳಾಲದ ಪ್ರಧಾನ ಕಾರ್ಯದರ್ಶಿ  ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು.   ವಾಣಿ ವಿ. ಆಳ್ವ ಅವರು ವಂದಿಸಿದರು.

ಇದೇ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ವತಿಯಿಂದ ಈ ಬಾರಿ ಐಎಎಸ್‌ನಲ್ಲಿ ಪ್ರಥಮ ರ್‍ಯಾಂಕ್‌ ಪಡೆದ ಕು| ನಂದಿನಿ ಕೆ. ಆರ್‌. ಹಾಗೂ ದೆಹಲಿ ಕರ್ನಾಟಕದ ಸಂಘದಲ್ಲಿ ಸಕ್ರಿಯವಾಗಿ ಸಾಂಸ್ಕೃತಿಕ, ರಂಗ ಸಂಘಟನೆಯಲ್ಲಿ ತೊಡಗಿಸಿಕೊಂಡ ನೂರಕ್ಕೂ ಹೆಚ್ಚು ಮಹಿಳೆಯರನ್ನು ಅನಿತಾ ಸುರೇಂದ್ರ ಕುಮಾರ್‌, ಸುರೇಂದ್ರ ಕುಮಾರ್‌, ಉಳ್ಳಾಲ ನಗರ ಸಭೆಯ ಆಯುಕ್ತರಾದ ವಾಣಿ ವಿ. ಆಳ್ವ ಅವರು ಗೌರವಿಸಿದರು. 

ಸಮಾರೋಪ ಸಮಾರಂಭದ ನಂತರ ಮಂಗಳೂರಿನ ನೃತ್ಯಲಹರಿ, ಬನ್ನಂಜೆ ಮಹಿಳಾ ಕಲಾ ಬಳಗ ಮತ್ತು ಬೀದರಿನ ನೂಪುರ ನೃತ್ಯ ಅಕಾಡೆಮಿಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


Trending videos

Back to Top