CONNECT WITH US  

21ನೇ ಅಖಿಲ ಭಾರತ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ ಸಮಾರೋಪ

ಮುಂಬಯಿ: ಕಳೆದ ಇಪ್ಪತ್ತು ವರ್ಷಗಳಿಂದ ಕುವೆಂಪು ಸ್ಮಾರಕ ಸ್ಪರ್ಧೆ ಆಯೋಜಿಸುವ ಮೂಲಕ ಕರ್ನಾಟಕ ಸಂಘ ಮುಂಬಯಿ ನೂರಾರು ರಂಗ ತಂಡಗಳಿಗೆ ಆತಿಥ್ಯವನ್ನು ನೀಡಿದೆ. ಸಂಘದ ಈ ಆತಿಥ್ಯಕ್ಕೆ ಪ್ರತಿ ಆತಿಥ್ಯ ಎಂಬಂತೆ ನೂತನ ಕಟ್ಟಡ ನಿರ್ಮಾಣ ಯೋಜನೆಯಲ್ಲಿ ಸಂಘಕ್ಕೆ ಸಹಾಯ ಮಾಡಲು ಈ ಎಲ್ಲ ರಂಗ ತಂಡಗಳು ಮುಂದೆ ಬರಬೇಕು. ರಂಗ ಕಲಾವಿದರು ಈ ನೂತನ ಕಟ್ಟಡ ನಿರ್ಮಾಣದಲ್ಲಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬ ಬಗ್ಗೆ ಯೋಚಿಸುವಂತಾಗ ಬೇಕು. ಹಂಸಕ್ಷೀರ ನ್ಯಾಯದಂತೆ ಅತ್ಯಂತ ಪಾರದರ್ಶಕವಾದ ತೀರ್ಪು ನೀಡ ಲಾಗುವ ಈ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ರಂಗ ಕಲಾವಿದರಿಗೆ ಅಭಿಮಾನದ ಸಂಗತಿ ಎಂದು ರಂಗನಟ, ರಂಗ ಸಂಘಟಕ,  ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಹಾಯಕ ಅಭಿಯಂತ ಆರ್‌. ನರೇಂದ್ರ ಬಾಬು ಹೇಳಿದರು.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಆಯೋಜಿಸಿರುವ 21ನೇ ಅಖೀಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆಯು ಮೈಸೂರು ಅಸೋಸಿ ಯೇಶನ್‌ ಸಭಾಗೃಹದಲ್ಲಿ ಎರಡು ದಿನಗಳ ಕಾಲ ಜರಗಿದ್ದು ಸೆ. 9 ರಂದು ಸಂಜೆ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ಬಹುಮಾನ ವಿತರಿಸಿ ಮಾತನಾಡಿದ ಅವರು, ರಂಗನಟನಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಇದೇ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಯಲ್ಲಿ ಹಲವು ಸಲ ಬಹುಮಾನ ಪಡೆದಿರುವ  ತನ್ನನ್ನು ಇಂದು ಈ ತೂಕದ  ವೇದಿಕೆಯಲ್ಲಿ ಕುಳ್ಳಿರಿಸಿ ಗೌರವಿಸಿ ರಂಗ ವಿನಯವನ್ನು ಸಂಘವು ಗುರುತಿಸಿರುವುದು ಸಂತೋಷವಾಗಿದೆ.  ರಂಗ ಭೂಮಿ ಸಂಸ್ಕೃತಿ ಇಂತಹ ಸ್ಪರ್ಧೆಗಳ ಕಾರಣ  ಎಂದಿಗೂ ಸಾಯೋದಿಲ್ಲ ಎಂದು ಅವರು ಅಭಿಮಾನದಿಂದ ನುಡಿದರು.
ಮುಖ್ಯ ಅತಿಥಿ ಖ್ಯಾತ ಹಾಸ್ಯ ಕಲಾವಿದ ರಂಗನಟ ವೈ. ವಿ. ಗುಂಡೂರಾವ್‌ ಮಾತನಾಡಿ,  ನಾಟಕ ಎನ್ನುವುದು ಪ್ರದರ್ಶನವಲ್ಲ, ಅದು ಪ್ರಯೋಗ  ಟಿವಿ,  ಸಿನಿಮಾಗಳಲ್ಲಿ ಮನುಷ್ಯ ಚಿಕ್ಕದಾಗಿ - ದೊಡ್ಡದಾಗಿ ಕಾಣಿಸಿದರೆ ನಾಟಕದಲ್ಲಿ ಮಾತ್ರ ಇದ್ದಂತೆಯೇ ಕಾಣಿಸುತ್ತಾನೆ. ಅಲ್ಲಿ ಸಮಸ್ಯೆಗಳಿಗೆ ಪರಿಹಾರ ಇರುವುದು. ಅದು ಯಾವುದು ಎನ್ನುವುದನ್ನು ಪ್ರೇಕ್ಷಕರು ಹುಡುಕಿಕೊಳ್ಳಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಪದ್ಮಶ್ರೀ ದೊಡ್ಡರಂಗೇಗೌಡ ತಮ್ಮ ರಂಗ ಅನುಭವಗಳನ್ನು ಹಂಚಿಕೊಂಡರು.  ಅಧ್ಯಕ್ಷತೆಯನ್ನು ವಹಿಸಿದ ಸಂಘದ ಉಪಾಧ್ಯಕ್ಷ, ಅಕ್ಷಯ ಸಂಪಾದಕ ಡಾ|  ಈಶ್ವರ ಅಲೆವೂರು ಮಾತನಾಡಿ,  ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಯ ಮೂಲಕ ಇಷ್ಟೊಂದು ರಂಗ ಕಲಾವಿದರು, ನಿರ್ದೇಶಕರು, ಸಾಹಿತಿಗಳನ್ನು ಒಂದೆಡೆ ಕಾಣುವುದೇ ಸೌಭಾಗ್ಯ. ಇದೇ ಉತ್ಸುಕತೆ ಮುಂದಿನ ದಿನಗಳಲ್ಲೂ ಮುಂದುವರಿಯಲಿ ಎಂದು ಆಶಿಸಿದರು. 

ತೀರ್ಪುಗಾರರಾಗಿ ಪಾಲ್ಗೊಂಡ  ರಂಗಕರ್ಮಿ ವಸಂತ ಬನ್ನಾಡಿ  ಮಾತನಾಡಿ,  ಇಂತಹ ಸ್ಪರ್ಧೆಯಲ್ಲಿ ವಿಶೇಷ ಶಕ್ತಿ ಇದೆ. ಹವ್ಯಾಸಿ ತಂಡಗಳಿಗೆ ನಾಟಕ ಸ್ಪರ್ಧೆಯೇ ಸ್ಫೂರ್ತಿ. ರಂಗಭೂಮಿಗೆ ಇಂದು ಸುವರ್ಣಕಾಲ. ದೊಡ್ಡ ದೊಡ್ಡ ನಾಟಕಗಳು ಹಣಕ್ಕಾಗಿ ಪ್ರದರ್ಶನ ನೀಡುವುದೂ ಇದೆ. ಹಲವು ತಟಸ್ತ ಗೊಂಡಿರುವುದು. ಆದರೆ ಮುಂಬಯಿಯಲ್ಲಿ ಕರ್ನಾಟಕ ಸಂಘವು ಎನರ್ಜಿ ರೀತಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ನುಡಿದರು.

ಇನ್ನೋರ್ವ ತೀರ್ಪುಗಾರರಾದ ಪ್ರಸಿದ್ಧ ರಂಗಕರ್ಮಿ ಸತೀಶ ಸಾಸ್ವೆಹಳ್ಳಿಯವರು ಮಾತನಾಡಿ, ನಾಟಕ ಎನ್ನುವುದು ನಟರ ಮಾಧ್ಯಮ. ಆದರೆ ಇಂದು ತಾಂತ್ರಿಕತೆ ಬಹಳಷ್ಟು ಮುಂದೆ ಬರುತ್ತಿರುವ ದೃಶ್ಯವಿದೆ ಎಂದರು.

ತೀರ್ಪುಗಾರರಾದ ಪ್ರಸಿದ್ಧ ರಂಗಕರ್ಮಿ ವಿದ್ದು ಉಚ್ಚಿಲ್‌ ಮಾತನಾಡಿ,  ಸ್ಪರ್ಧೆ ನೆಪದಲ್ಲಿ ರಂಗಭೂಮಿಯವರು ಒಟ್ಟು ಸೇರುವುದೇ ಸಂತೋಷ. ಇದು ರಂಗಭೂಮಿಯವರಿಗೆ ಜಾತ್ರೆ. ರಂಗಭೂಮಿಯ ಕಟ್ಟುವಿಕೆ ಇಂತಹ ಸ್ಪರ್ಧೆಗಳ ಮೂಲಕ ಗಟ್ಟಿಗೊಳ್ಳುತ್ತದೆ. ರಂಗ ಭೂಮಿಯು ಶ್ರಮವನ್ನು ಬೇಡುವ ಮಾಧ್ಯಮ ಎಂದರು. ಕತೆಗಾರ ಸಂಘಟಕ ಓಂದಾಸ್‌ ಕಣ್ಣಂಗಾರ್‌ ಸ್ವಾಗತಿಸಿ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆ ಬೆಳೆದು ಬಂದ ಬಗೆಯನ್ನು ವಿವರಿಸಿದರು. ಅಮರೀಶ್‌ ಪಾಟೀಲ್‌, ಸುರೇಂದ್ರ ಮಾರ್ನಾಡ್‌, ಅನಿತ ಪೂಜಾರಿ, ಮಲ್ಲಿಕಾರ್ಜುನ ಬಡಿಗೇರ, ದುರ್ಗಪ್ಪ ಕೊಟಿಯವರ್‌, ಸುಶೀಲಾ ದೇವಾಡಿಗ ವೇದಿಕೆಯ ಗಣ್ಯರನ್ನು  ಪರಿಚಯಿಸಿದರು.
ಸಂಘದ ಗೌರವ  ಕೋಶಾಧಿಕಾರಿ ಎಂ. ಡಿ. ರಾವ್‌, ಉಪಾಧ್ಯಕ್ಷ ಡಾ| ಈಶ್ವರ ಅಲೆವೂರು , ಗೌ|  ಕಾರ್ಯದರ್ಶಿ ಡಾ|  ಭರತ್‌ ಕುಮಾರ್‌ ಪೊಲಿಪು ಗಣ್ಯರನ್ನು ಗೌರವಿಸಿದರು. ಕತೆಗಾರ ರಾಜೀವ ನಾರಾಯಣ ನಾಯಕ ಸಭಾ ಕಾರ್ಯಕ್ರಮ ನಿರೂಪಿಸಿದರು. ಓಂದಾಸ್‌ ಕಣ್ಣಂಗಾರ್‌ ವಂದಿಸಿದರು.  ಗೌ. ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ಬಹುಮಾನಿತರ  ಯಾದಿ ಓದಿ ಹೇಳಿದರು.  ವೇದಿಕೆಯ ಗಣ್ಯರು ವಿಜೇತರಿಗೆ ಬಹುಮಾನ ಪ್ರದಾನಿಸಿದರು.

ಬಾಲಕೃಷ್ಣನ ಪಾತ್ರದ ಮೂಲಕ ಬಣ್ಣ ಹಚ್ಚಿಕೊಂಡು ರಂಗಭೂಮಿಗಿಳಿದೆ. ಅನೇಕ ಸ್ತ್ರೀ ಪಾತ್ರಗಳನ್ನೂ ಮಾಡಿದ್ದೆ. ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರು ಕ್ಲಾಸ್‌ ಮೇಟ್‌ ಆಗಿದ್ದು ಅವರ ಜೊತೆಗೂ ನಾಟಕದಲ್ಲಿ ಅಭಿನಯಿಸಿದ್ದೆ. ಕಲಾವಿದರು ಶಕ್ತಿಯನ್ನು ಆಹ್ವಾನ ಮಾಡಬೇಕಾಗುತ್ತದೆ. ರಂಗ ಭೂಮಿಯವರಿಗೆ  ಶಿಸ್ತು ಬೇಕು. ಚಿತ್ರ ಗೀತೆಗಳನ್ನು ಬರೆಯುವ ಸಮಯ ನನಗೆ ರಂಗಭೂಮಿಯ ಅನುಭವಗಳಿಂದ ಲಾಭವಾಗಿದೆ. ಭಾರತದ ಸಮಕಾಲೀನ ರೋಗಗ್ರಸ್ತ 
ಸಮಾಜಕ್ಕೆ ಕಾಯಕಲ್ಪ ಮಾಡುವಂತಹ ಸಮಾಜ ಮುಖೀ ನಾಟಕಗಳು ಮೂಡಿ ಬರಲಿ.
 ಪದ್ಮಶ್ರೀ ದೊಡ್ಡರಂಗೇಗೌಡ , ಹಿರಿಯ ರಂಗಕರ್ಮಿ, ಸಾಹಿತಿ


Trending videos

Back to Top