CONNECT WITH US  

ಮುಂಬಯಿ ವಿವಿ : "ಕನ್ನಡ ಪ್ರಜ್ಞೆ  ನಿನ್ನೆ ಇಂದು ನಾಳೆ' ವಿಚಾರ ಸಂಕಿರಣ

ಮುಂಬಯಿ: ಒಳ್ಳೆಯ ಕಾವ್ಯದಲ್ಲಿ ಅನನ್ಯತೆ ಇರಬೇಕು, ಹೊಸ ಬಗೆಯದ್ದಾಗಿರಬೇಕು ಎನ್ನು ವುದನ್ನು ನಾವು ಅ ಕಾಲದಲ್ಲಿಯೇ  ಕಾಣುತ್ತೇವೆ. ಅದು ಹಾಗೇ ಮುಂದು ವರಿದು ಅಡಿಗರ ಸ್ವಂತಿಕೆಯ ಹುಡುಕಾಟ ಆಗಿರಬಹುದು, ಕುವೆಂಪು ಅವರು ತಮ್ಮ ಕೃತಿಗಳ ಮೂಲಕ ಹೊಸ ಸಂವೇದನೆಯನ್ನು ಉಂಟು ಮಾಡಿದರಲ್ಲಾಗಲೀ ನಾವು ಕಾಣಬಹುದು. ಹೇಗೆ ವಿಶ್ವಪ್ರಜ್ಞೆ ವ್ಯಕ್ತಿ ಪ್ರಜ್ಞೆಯಾಗಿ ಹರಿಯುತ್ತದೆ ಎನ್ನುವುದಕ್ಕೆ ನಿದರ್ಶನವೇ ಕನ್ನಡ ಪ್ರಜ್ಞೆ. ಅದು ಸಾಂಘಿಕವಾಗಿ ಬುದ್ಧಿ ಪೂರ್ಣತೆಯುಳ್ಳದ್ದು. ಎಲ್ಲವನ್ನೂ ಸ್ವೀಕರಿಸುವ ಗುಣ ಕನ್ನಡಕ್ಕಿದೆ. ಧರ್ಮ ಮತ್ತು ಪ್ರಭುತ್ವದ ನೆಲೆ ಯಲ್ಲೂ ನಾವು ಕನ್ನಡ ಪ್ರಜ್ಞೆಯನ್ನು ಕಾಣಬಹುದು ಎಂದು  ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ಗೀತಾ ವಸಂತ್‌ ಅವರು ನುಡಿದರು.

ಅ. 27 ರಂದು ಮುಂಬಯಿ ವಿವಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಪ್ರೊ|  ಬರಗೂರು ರಾಮ ಚಂದ್ರಪ್ಪ ಪ್ರತಿಷ್ಠಾನ ಬೆಂಗಳೂರು ಇವರು ಆಯೋಜಿಸಿದ್ದ ಕನ್ನಡ ಪ್ರಜ್ಞೆ; ನಿನ್ನೆ, ಇಂದು ನಾಳೆ ಎಂಬ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ರೂಪ ಮತ್ತು ಗುಣದ ವಿಷಯದಲ್ಲಿ ಕನ್ನಡ ಮೇರು ಸ್ಥಾನವನ್ನು ಅಲಂಕರಿಸಿದೆ. ಕನ್ನಡವನ್ನು ಕಟ್ಟುವ, ವೈಭವೀಕರಿಸುವ ಕಾಲವೊಂದಿತ್ತು. ಹೇಗೆ ವಿಶ್ವಪ್ರಜ್ಞೆ ಭಾರತದ ಮಾತೆಯ ಮೂಲಕ ಕನ್ನಡ ತಾಯಿ ತಾವರೆಯ ಪರಿಮಳವಾಗಿ ಬಂದಿದೆಯೋ ಹಾಗೆಯೇ ಕನ್ನಡ ಪ್ರಜ್ಞೆಯೂ ನದಿಯಂತೆ ನಿರಂತರ ವಾಗಿ ಹರಿಯುವಂತದ್ದು. ಕನ್ನಡದ ಜನತೆಯ ಓದಾರ್ಯ, ಸಹಿಷ್ಣುತೆ, ಪರಧರ್ಮ ಪರ ವಿಚಾರಗಳನ್ನು ಸಹಿಸಿಕೊಂಡು ಬಾಳಿದ ನಮ್ಮ ಜನರಲ್ಲೂ ಕನ್ನಡದ ಪ್ರಜ್ಞೆ ಜಾಗೃತವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡಕ್ಕೆ ಅಂತ್ಯವಿಲ್ಲ
ಅಧ್ಯಕ್ಷತೆ ವಹಿಸಿದ್ದ  ಸಿನೆಮಾ ನಿರ್ದೇಶಕ,  ಸಾಹಿತಿ, ನಾಡೋಜ ಪ್ರೊ| ಬರಗೂರು ರಾಮಚಂದ್ರಪ್ಪ  ಮಾತನಾಡಿ, ಕನ್ನಡ ಅನ್ನುವುದು ಭಾಷೆಯೂ ಹೌದು, ಬಹು ಭಾಷಿಕವೂ ಹೌದು, ಜೀವನವೂ ಹೌದು. ಮನುಷ್ಯನ ಮನಸಿನೊಳಗೆ ಒಂದು ಹಳ್ಳಿಯಿದೆ. ಶಿಕ್ಷಣದಲ್ಲಿ, ಆಡಳಿತದಲ್ಲಿ ಕನ್ನಡ ಇಲ್ಲದೇ ಹೋದರೆ ಕನ್ನಡಕ್ಕೆ ಆತಂಕಗಳಿವೆ. ಆದರೆ ಅಂತ್ಯವಂತೂ ಇಲ್ಲ. ಧರ್ಮಶಾಸ್ತ್ರವೂ ಆಗಬಾರದು, ಶಾಸ್ತ್ರವೂ ಆಗಬಾರದು. ಕನ್ನಡದ ಬಗ್ಗೆ ಅಭಿಮಾನವಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ  ಡಾ| ಜಿ.ಎನ್‌. ಉಪಾಧ್ಯ ಅವರು ಕನ್ನಡ ಪ್ರಜ್ಞೆ ಎನ್ನುವುದು ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಇವೆಲ್ಲವನ್ನು ಹಾಗೂ ಎಲ್ಲರನ್ನು ಒಳಗೊಳ್ಳುವ ಪ್ರಜ್ಞೆ.  ಕನ್ನಡದ ಕೆಲಸವೆಂದರೆ ಏಕವಲ್ಲ ಅನೇಕ ಎಂಬ ಬರಗೂರು ಅವರ ಮಾತು ಗಮನೀಯ ಅಂಶ. ಕಳೆದ ಎರಡು ದಶಗಳಲ್ಲಿ ಮುಂಬಯಿಯಲ್ಲಿ ಕನ್ನಡಿಗರು ಕನ್ನಡದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಅಂಶ. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಬರಗೂರು ರಾಮಚಂದ್ರಪ್ಪ ಅವರು ನಮ್ಮೊಂದಿಗೆ ಇರುವುದು ಖುಷಿ ಪಡುವ ಸಂಗತಿ. ಹೊಸ ತಲೆಮಾರಿನಲ್ಲಿ ಸೃಷ್ಟಿಸಿದ ಅವರ ವಿಚಾರಧಾರೆ ಮೌಲಿಕವಾದುದು ಎಂದು ಎಲ್ಲರನ್ನೂ ಸ್ವಾಗತಿಸಿದರು.

ಗೌರವಾರ್ಪಣೆ 
ರಂಗನಟ ಮೋಹನ್‌ ಮಾರ್ನಾಡ್‌,  ಅಜೆಕಾರು ಕಲಾಭಿ
ಮಾನಿಗಳ ಬಳಗದ ಸಂಚಾಲಕರು, ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಸಾಧಕರಿಗೆ ಗೌರವ ಮಾಲಿಕೆಯಲ್ಲಿ ವಿಭಾಗದ ವತಿಯಿಂದ ಸಮ್ಮಾನಿಸಲಾಯಿತು. 

ಚಿಣ್ಣರ ಬಿಂಬದ ಶಿಕ್ಷಕರಾದ ವನಿತಾ ನೋಂಡಾ, ಗೀತಾ ಹೇರಳ, ರೂಪಾ ಶೆಟ್ಟಿ ಹಾಗೂ ಪ್ರತಿಭಾವಂತ ಬಾಲಕ ವಿಕ್ರಮ್‌ ಪಾಟ್ಕರ್‌ ಅವರನ್ನು ಗೌರವಿಸಲಾಯಿತು. ಡಾ| ಶ್ಯಾಮಲಾ ಪ್ರಕಾಶ್‌ ಅವರ ಸ್ವಾಗತಗೀತೆಯೊಂದಿಗೆ ಕಾರ್ಯ ಕ್ರಮ ಆರಂಭವಾಯಿತು. 

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ| ನಿರಂಜನ ಸಿ.ಎಸ್‌. ವಂದಿಸಿದರು.

ಪ್ರೊ| ಬರಗೂರು ಅವರ ಎಲ್ಲ ಸಿನೆಮಾಗಳ‌ನ್ನು ನೋಡಿ ಮಾತನಾಡುವ ಇಚ್ಛೆಯಿತ್ತು. ಎಲ್ಲವನ್ನು ವೀಕ್ಷಿಸುವುದು ಸಾಧ್ಯವಾಗದೇ ಇದ್ದರೂ ಕೆಲವನ್ನು ಬಹಳ ಕುತೂಹಲದಿಂದ ನೋಡಿದಾಗ ಅವರ ಸಿನೆಮಾಗಳು ಕೇವಲ ಮನೋರಂಜನೆಗಾಗಿ ಸೀಮಿತವಾಗಿರದೆ ಉತ್ತಮ ಸಂದೇಶವನ್ನೂ ರವಾನಿಸಿವೆ. ಮನುಜ ಪಥಕ್ಕೆ ಸನ್ಮಾರ್ಗವನ್ನು ತೋರಿಸುವ ಕಾರ್ಯವನ್ನು ಅವರು ತಮ್ಮ ಬರೆಹ ಹಾಗೂ ಸಿನೆಮಾದ ಮೂಲಕ ಮಾಡಿದ್ದಾರೆ. ಹೊರನಾಡ ಕನ್ನಡಿಗರ ಕುರಿತು ಪ್ರೊ| ಬರಗೂರು ಅವರಿಗೆ ವಿಶೇಷ ಕಾಳಜಿಯಿದೆ. 

- ಡಾ| ಭರತ್‌ ಕುಮಾರ್‌ ಪೊಲಿಪು, ರಂಗಕರ್ಮಿ

Trending videos

Back to Top