CONNECT WITH US  

ಕಲೆಯ ಉಳಿವಿನಲ್ಲಿ ಪೊಲ್ಯರ ಪಾತ್ರ ಅತಿ ಮಹತ್ತರ

ಯಕ್ಷಧ್ವನಿ  ಮುಂಬಯಿ ವಾರ್ಷಿಕೋತ್ಸವ  ಸಂಭ್ರಮದಲ್ಲಿ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ

ಮುಂಬಯಿ: ಯಕ್ಷಧ್ವನಿ ಮುಂಬಯಿ ಇದರ 14ನೇ ವಾರ್ಷಿಕೋತ್ಸವ ಸಂಭ್ರಮವು ನ.4 ರಂದು ಅಪರಾಹ್ನ ಭಾಂಡೂಪ್‌ ಪಶ್ಚಿಮದ ಜಯಶ್ರೀ ಪ್ಲಾಜಾದಲ್ಲಿರುವ ಜಗನ್ನಾಥ್‌ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಈ ಸಂದರ್ಭದಲ್ಲಿ ಮುಂಬಯಿಯ ಹಿರಿಯ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರ ಯಕ್ಷರಂಗಕ್ಕೆ ಕೊಡುಗೆಯ ಬಗ್ಗೆ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದ್ದು, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲ್ಯ ಲಕ್ಷಿ¾à ನಾರಾಯಣ ಶೆಟ್ಟಿ ಅವರು ತೆಂಕು ಮತ್ತು ಬಡಗು ತಿಟ್ಟುಗಳೆರಡಲ್ಲೂ ಮೇರು ಭಾಗವತರಾಗಿ ಮಿಂಚಿದ ಪ್ರಸಿದ್ಧ ಭಾಗವತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಅವರಂತಹ ಭಾಗವತರನ್ನು ಇದುವರೆಗೂ ಯಾರೂ ಕಂಡಿಲ್ಲ. ಕಾಳಿಂಗ ನಾವುಡರೊಡನೆ ದ್ವಂದ ಭಾಗವತಿಕೆ ನಡೆಸಿದ ಕೀರ್ತಿ ಅವರಿಗಿದೆ. ಮುಂಬಯಿಯಲ್ಲಿ ಯಕ್ಷಗಾನದ ಉಳಿವಿನಲ್ಲಿ ಪೊಲ್ಯರ ಪಾತ್ರ ಮಹತ್ತರವಾಗಿದೆ ಎಂದರು.

ಸಮನ್ವಯಕರಾಗಿ ಆಗಮಿಸಿದ ಪ್ರಸಿದ್ಧ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಮಾತನಾಡಿ, ಪೊಲ್ಯ ಅವರೋರ್ವ ಮೇರು ಭಾಗವತರಾಗಿದ್ದು, ಅವರು ಶಿಷ್ಯಂದಿರನ್ನು ತಯಾರಿಸದಿರುವುದು ದೊಡ್ಡ ಕೊರತೆಯಾಗಿದೆ. ಆದ್ದರಿಂದ ಮುಂದೆಯೂ ಯೋಚಿಸಿ ಯಕ್ಷ ರಂಗಕ್ಕೆ ಅವರು ಶಿಷ್ಯರನ್ನು ರೂಪಿಸುವ ಕಡೆಗೆ ಗಮನ ಹರಿಸಬೇಕು ಎಂದು ನುಡಿದರು.

ಯಕ್ಷಗಾನ ಕಲಾವಿದ ಶೇಣಿ ಶ್ಯಾಂ ಭಟ್‌,  ಯಕ್ಷಗಾನ ಸಾಹಿತಿ ಕೊಲ್ಯಾರು ರಾಜು ಶೆಟ್ಟಿ, ಯಕ್ಷಗಾನ ಸಂಘಟಕ ದಾಮೋದರ ಶೆಟ್ಟಿ ಇರುವೈಲು, ಕಲಾವಿದ ವಿಠಲ್‌ ಪ್ರಭು, ಭಾಗವತರಾದ ಮಾಳ ರಾಘವೇಂದ್ರ ಭಟ್‌ ಮೊದಲಾದವರು ಪೊಲ್ಯರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು ಮಾತನಾಡಿ, ಭಾಗವತಿಕೆಯಿಂದಲೇ ನಾನು ಅಭಿಮಾನಿಗಳನ್ನು ಪಡೆದಿದ್ದೇನೆ. ಯಕ್ಷಗಾನದಲ್ಲಿ ನಿಷ್ಠಾವಂತರಾಗಿ ದುಡಿಯುವವರಿಗೆ ನಾನು ಖಂಡಿತವಾಗಿಯೂ ಭಾಗವತಿಕೆಯ ಬಗ್ಗೆ ಕಲಿಸಲು ಸಿದ್ಧನಿದ್ದೇನೆ ಎಂದು ಹೇಳಿ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭಹಾರೈಸಿದರು.

ಪ್ರಸಿದ್ಧ ಹಾಸ್ಯ ಕಲಾವಿದ ಜಯರಾಮ್‌ ಆಚಾರ್ಯ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಖರ್‌ ಶೆಟ್ಟಿ ಇನ್ನ ಅವರು ವಹಿಸಿ ಮಾತನಾಡಿ ಶುಭಹಾರೈಸಿದರು. ಆಶೀರ್ವಚನ ನೀಡಿದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಅವರು, ಹಿಂದೂ ಧರ್ಮದಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವು ಯಕ್ಷಗಾನದಿಂದ ಆಗಬೇಕು. ಇಂದು ಹಿಂದೂ ಧರ್ಮವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಧರ್ಮದ ಆಚಾರ- ವಿಚಾರಗಳನ್ನು ಮೂಢನಂಬಿಕೆ ಎಂದು ಬಿಂಬಿಸಿ ಹಿಂದು ಧರ್ಮವನ್ನು ಅವಹೇಳನ ಮಾಡುವ ಕೆಲಸವು ನಡೆಯುತ್ತಿದೆ. ಈ ಬಗ್ಗೆ ನಾವು ಜಾಗೃತರಾಗಿರಬೇಕು. ಮಕ್ಕಳಿಗೆ ಅದರ ಅರಿವನ್ನು ಮೂಡಿಸಬೇಕು, ಭಕ್ತಿಯ ಮಾರ್ಗದಲ್ಲಿ ನಡೆದರೆ ನಮಗೆ ಜ್ಞಾನದ ಅರಿವಾಗುತ್ತದೆ ಎಂದರು.

ವೇದಿಕೆಯಲ್ಲಿ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ರವಿ ಎಸ್‌. ಮಂಜೇಶ್ವರ, ಕರ್ನಾಟಕ ಸಂಘ ಭಾಂಡೂಪ್‌ನ ಅಧ್ಯಕ್ಷ ಗಿರೀಶ್‌ ಆರ್‌. ಶೆಟ್ಟಿ, ಬಂಟರ ಸಂಘ ಮೀರಾ-ಭಾಯಂದರ್‌ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್‌ ಶೆಟ್ಟಿ, ಶ್ರೀ ಶನೀಶ್ವರ ಮಂದಿರ ಭಟ್ಟಪಾಡಿ ಭಾಂಡೂಪ್‌ನ ಅಧ್ಯಕ್ಷ ದಯಾನಂದ ಶೆಟ್ಟಿ, ತೀಯಾ ಬೆಳಕಿನ ಸಂಪಾದಕ ಶ್ರೀಧರ  ಸುವರ್ಣ, ಸಸಿಹಿತ್ಲು ಭಗವತೀ ಸಂಘದ ಕೋಶಾಧಿಕಾರಿ ರಮೇಶ್‌ ಸಾಲ್ಯಾನ್‌, ಉದ್ಯಮಿ ಸುಧಾಕರ ಬೆಳ್ಚಡ, ಘಾಟ್‌ಕೋಪರ್‌ ಬಿಜೆಪಿ ದಕ್ಷಿಣ ಸಮಿತಿಯ ಸದಾನಂದ ಶೆಟ್ಟಿ ಕಿನ್ನಿಗೋಳಿ, ಉದ್ಯಮಿ, ರಾಜೇಶ್‌ ಸುವರ್ಣ, ಜನಪ್ರಿಯ ಯಕ್ಷಗಾನ ಮಂಡಳಿಯ ಅಧ್ಯಕ್ಷ ರವೀಂದ್ರ ಪೈ, ಉದ್ಯಮಿ ಕೆ. ಜೆ. ಕೋಟ್ಯಾನ್‌, ಸೀತಾರಾಮ ಜಿ. ಕರ್ಕೇರ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಶಂಭು ಕೆ. ಸನಿಲ್‌ ಅವರ ಧಾರ್ಮಿಕ ಗ್ರಂಥ ಅಮೃತ ಸರೋವರವನ್ನು ಬಿಡುಗಡೆಗೊಳಿಸಲಾಯಿತು. 

ರಂಗನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಧ್ವನಿಯ ಸಂಯೋಜಕ ಯಕ್ಷಗಾನ ಕಲಾವಿದ ರಾಜ ತುಂಬೆ ಅವರು ಸಂಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಊರಿನ ಹಾಗೂ ಮುಂಬಯಿಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗದಾಯುದ್ಧ ಯಕ್ಷಗಾನ ಪ್ರದರ್ಶನಗೊಂಡಿತು.  

ಚಿತ್ರ-ವರದಿ : ಸುಭಾಷ್‌ ಶಿರಿಯಾ

Trending videos

Back to Top