CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪ್ರತಿಪಕ್ಷಗಳಿಗೆ ಅಧಿಕಾರದ ಹಗಲು ಕನಸು!

ಮುಂದಿನ ವರ್ಷ ಎದುರಾಗುವ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ತಾಲೀಮು ಆರಂಭಿಸಿರುವ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕ ಎಸ್‌.ಎಂ.ಕೃಷ್ಣ  ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ಜತೆಗೆ ಪಕ್ಷದ ವಿದ್ಯಮಾನಗಳ ಬಗ್ಗೆ ಕೆಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲು ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂಬ ಅಭಿಪ್ರಾಯವೂ ಇದೆ. ಈ ಸಂದರ್ಭದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿ ಮತ್ತು ಮುಂದಿನ ರಾಜಕಾರಣದ ಬಗ್ಗೆ  "ಉದಯವಾಣಿ'ಯೊಂದಿಗೆ ನೇರಾ ನೇರ ಮಾತನಾಡಿದ್ದಾರೆ. 

ನೀವು ಪಕ್ಷದ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದೀರಂತೆ ?
ನಾನು ಅಧ್ಯಕ್ಷ ಆಗಲು ಯಾವುದೇ ಅರ್ಜಿ ಹಾಕಿಕೊಂಡು ಕೂತಿಲ್ಲ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ. ಪಕ್ಷ ನನಗೆ ಮಂತ್ರಿ ಸ್ಥಾನದ ಜವಾಬ್ದಾರಿ ನೀಡಿದೆ. ಅದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಅಧ್ಯಕ್ಷರು ಯಾರು ಆಗಬೇಕು ಎನ್ನುವುದನ್ನು ನಮ್ಮ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಅಧ್ಯಕ್ಷರ ಆಯ್ಕೆ ನನ್ನ ಒಬ್ಬನ ತೀರ್ಮಾನ ಅಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ  ಮುಂದಿರುವ ಗುರಿ. 

ಪರಮೇಶ್ವರ್‌ ಅವರೇ ಮತ್ತೂಂದು ಅವಧಿಗೆ ಮುಂದುವರೆಯೋ ಪ್ರಯತ್ನ ನಡೆಸಿದ್ದಾರಂತೆ ? ಅವರ ಅಧ್ಯಕ್ಷತೆಯಲ್ಲಿಯೇ ಚುನಾವಣೆ ಎದುರಿಸ್ತೀರಾ ?
ಪರಮೇಶ್ವರ್‌ ಅವರು ಅಧ್ಯಕ್ಷರಾಗಿ ಆರು ವರ್ಷದಿಂದ ಉತ್ತಮ ಕೆಲಸ ಮಾಡಿಕೊಂಡು ಹೋಗ್ತಿದಾರೆ. ಅಧ್ಯಕ್ಷ ಹುದ್ದೆಗೆ ಯಾರು ಬಂದರೂ ನನಗೇನು ತೊಂದರೆಯಿಲ್ಲಾ. ಸದ್ಯ ನಮ್ಮ ಪಕ್ಷ ಅಧಿಕಾರದಲ್ಲಿದೆ, ನಮ್ಮ ಮುಖ್ಯಮಂತ್ರಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿಯೇ ನಾವೆಲ್ಲಾ ಚುನಾವಣೆಗೆ ಹೋಗ್ತಿàವಿ.

ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ ಎಸ್‌.ಆರ್‌.ಪಾಟàಲ್‌ ಅವರಿಗೆ ನೀವು ಅಡ್ಡಿಯಾಗಿದ್ದೀರ ಅಂತ ಪಕ್ಷದಲ್ಲಿ ಮಾತು ಕೇಳಿಬರುತ್ತಿದೆಯಲ್ಲ?
ಅಧ್ಯಕ್ಷರನ್ನ ಬದಲಾಯಿಸೋದು, ಬಿಡೋದು ಹೈಕಮಾಂಡ್‌ ನೋಡಿಕೊಳ್ಳುತ್ತದೆ. ನಾನು ಯಾರ ಅಧ್ಯಕ್ಷಗಿರಿಗೂ ಅಡ್ಡಿಯಾಗಿಲ್ಲ. ಯಾರೇ ಬಂದು ಆ ಸ್ಥಾನದಲ್ಲಿ ಕುಳಿತರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡ್ತೇನೆ. 

ಹಾಗಿದ್ರೆ, ನೀವು ಮುಖ್ಯಮಂತ್ರಿ ರೇಸಲ್ಲೂ ಇಲ್ವಾ ? 
ನಾನು ಸದ್ಯಕ್ಕೆ ಸಿಎಂ ರೇಸಲ್ಲಿ ಇಲ್ಲ. ನನಗಿನ್ನೂ ಐವತ್ತೈದು ವರ್ಷ. ಇನ್ನೂ ಸಾಕಷ್ಟು ಟೈಮ್‌ ಇದೆ. ಯಾಕ್‌ ಅಷ್ಟೊಂದು ಅವಸರ ಮಾಡೋದು. ವಿಧುರ ಒಂದ್‌ ಮಾತ್‌ ಹೇಳ್ತಾನೆ. ಶುಭಗಳಿಗೆ ಬರಬೇಕಾದರೆ ಯಾವುದಕ್ಕೂ ಕಾಯುದಿಲ್ವಂತೆ. ಆ ಗಳಿಗೆ ಬರೋವರೆಗೂ ನಾವು ನಮ್ಮ ಕರ್ತವ್ಯ ಮಾಡಬೇಕು. ನಾನು ಅಧಿಕಾರಕ್ಕೆ ಬರೋದ್ಕಿಂತ ಕಾರ್ಯಕರ್ತ ರಕ್ಷಣೆ ಮುಖ್ಯ. ಮುಂದಿನ ಚುನಾವಣೆಯಲ್ಲಿ ನಾವೇ ಸ್ಪಷ್ಟ ಬಹುಮತದಿಂದ ಗೆಲ್ಲುತ್ತೇವೆ. ಅದರಲ್ಲಿ ಅನುಮಾನ ಬೇಡ. ಪಾಪ ಬಿಜೆಪಿಯವರು ಕನಸು ಕಾಣಿ¤ದಾರೆ. ಅವರು ಕನಸಲ್ಲಿ ಅಧಿಕಾರ ಅನುಭವಿಸಿ ಖುಷಿ ಪಡಲಿ. 

ಈ ಸರ್ಕಾರ ಕೆಲವೇ ಸಮುದಾಯಕ್ಕೆ ಸೀಮಿತ ಆಗಿದೆ ಅಂತ ನಿಮ್ಮ ಪಕ್ಷದ ಹಿರಿಯ ನಾಯಕರೇ ಮಾತಾಡ್ತಾರಲ್ಲಾ ?
ಅವರೆಲ್ಲಾ ರಾಜಕೀಯದಲ್ಲಿ ಪೊಟೆನ್ಸಿಯಾಲಿಟಿ ಇಲ್ಲದಿರೋರು. ನೀವು ಜಾಫ‌ರ್‌ ಷರೀಫ್ ಅವರ ಹೇಳಿಕೆ ಬಗ್ಗೆ ಮಾತಾಡ್ತಿದೀರಲ್ವಾ ?
ಕುರುಬರ ಸರ್ಕಾರ ಅಂತ ಹೇಳಿ ಮತ್ತೆ ಅವರ್ಯಾಕೆ ಕ್ಷಮೆ ಕೇಳಿದರು. ನಮ್ಮ ಸರ್ಕಾರದಲ್ಲಿ ಲಿಂಗಾಯತರಿಗೆ, ಒಕ್ಕಲಿಗರಿಗೆ ಹೆಚ್ಚಿನ ಮಂತ್ರಿ ಸ್ಥಾನ ನೀಡಲಾಗಿದೆ. ಪಾಪ, ಸಿಎಂ ಹಿಂದುಳಿದ ಸಮುದಾಯದಲ್ಲಿ ಹುಟ್ಟಿದ್ದೇ ತಪ್ಪಾ ? ಸರ್ಕಾರದ ಬಗ್ಗೆ ಮಾತನಾಡುವ ನಾಯಕರ್ಯಾರು ಸಕ್ರಿಯ ರಾಜಕಾರಣದಲ್ಲಿ ಇಲ್ಲಾ. ಅವರ ಹೇಳಿಕೆಗಳ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲಾ. 

ನಿಮ್ಮ ಪಕ್ಷದಲ್ಲಿ ಹಿರಿಯರಿಗೆ ಮರ್ಯಾದೆ ಇಲ್ಲಾ ಅಂತ ಎಸ್‌.ಎಂ. ಕೃಷ್ಣ ಪಕ್ಷ ಬಿಟ್ಟು ಹೋದ್ರಲ್ಲಾ ?
ಎಸ್‌.ಎಂ. ಕೃಷ್ಣ ಅವರ ಬಗ್ಗೆ ನಾನು ಈಗ ಮಾತಾಡುವುದಿಲ್ಲ.  ಸಂದರ್ಭ ಬಂದಾಗ ಅವರ ಬಗ್ಗೆ ಡಿಟೇಲಾಗಿ ಮಾತಾಡ್ತೀನಿ. ಅವರು ನಮ್ಮ  ಪಕ್ಷದ ದೊಡ್ಡ ನಾಯಕರು. ಅವರು ಕಾಂಗ್ರೆಸ್‌ ಪಕ್ಷದಲ್ಲಿಯೇ ಉಳಿಯಬೇಕು ಅಂತ ಬಯಸುವವನು ನಾನು. ನಾವು ಎಲ್ಲ ನಾಯಕರಿಗೂ ಗೌರವ ಕೊಡ್ತೀವಿ. ಬಿಜೆಪಿಯಲ್ಲಿ ಅಡ್ವಾಣಿಗೆ ಏನು ಮರ್ಯಾದೆ ಕೊಡ್ತಿದ್ದಾರೆ. ಮುರಳಿ ಮನೋಹರ್‌ ಜೋಶಿ ಅವರಿಗೆ ಎಷ್ಟು ಮರ್ಯಾದೆ ಕೊಡ್ತಿದಾರೆ ಅಂತ ಗೊತ್ತಾ ನಿಮಗೆ ? ಪಾರ್ಲಿಮೆಂಟಿಗೆ ಬಂದರೆ, ಅವರಿಗೆ ಬಿಜೆಪಿಯವರು ನಮಸ್ಕಾರಾನೂ ಮಾಡೋದಿಲ್ಲ.

ಕೃಷ್ಣ ಪಕ್ಷ ಬಿಟ್ಟಿರೋದ್ರಿಂದ ನಿಮಗೆ ಭವಿಷ್ಯದಲ್ಲಿ ರಾಜಕೀಯವಾಗಿ ಲಾಭ ಆಗುತ್ತೆ ಅಂತಾರೆ ?
ರೀ, ನನಗ್ಯಾವ ರೀತಿ ಲಾಭ ಆಗಬೇಕ್ರೀ. ಎಸ್‌.ಎಂ. ಕೃಷ್ಣ  ಅವರು ನಮ್ಮ ಪಕ್ಷ ಬಿಟ್ಟು ಹೋಗಿರುವುದು ನನಗೆ ಲಾಭ ನಷ್ಟಕ್ಕಿಂತ ನೋವಾಗಿದೆ. ಅದನ್ನೆಲ್ಲ ಈಗ  ವಿವರಿಸಿ ಹೇಳಲಾಗದು . ನಾನು ಯಾವ ಸಿಎಂ ಹಾಗೂ ಪಿಎಂನ ಮಗ ಅಲ್ಲಾ. ಪಕ್ಷದಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದೀನಿ. ಜನರು ನನ್ನ ಮೇಲೆ ವಿಶ್ವಾಸ ಇಟ್ಟು ಆರು ಸಾರಿ ಗೆಲ್ಲಿಸಿಕೊಂಡು ಬಂದಿದ್ದಾರೆ. ನಾನು ಯಾವುದೂ ಲಾಭ ಆಗುತ್ತೆ ನಷ್ಟ ಆಗುತ್ತೆ ಅಂತ ಲೆಕ್ಕಾ ಹಾಕ್ತಾ ಕೂತಿಲ್ಲಾ.

ದೇವೇಗೌಡರು ಮತ್ತು ಕೃಷ್ಣ ನಂತರ ನೀವೇ ಒಕ್ಕಲಿಗ ನಾಯಕರಾಗಬೇಕು ಅಂತ ಬಯಸಿದ್ದೀರಂತೆ ?
ನಾನು ಯಾವುದೇ ಸಮುದಾಯದ ನಾಯಕತ್ವ ವಹಿಸಿಕೊಳ್ಳೋದಕ್ಕೆ ಹೋಗ್ತಿಲ್ಲ. ಒಕ್ಕಲಿಗೆ ಸಮುದಾಯದಲ್ಲಿ ಹುಟ್ಟಿದ್ದೀನಿ. ಒಕ್ಕಲಿಗ ಸಂಘದವರು ಗೊಂದಲ ಮಾಡಿಕೊಂಡು ತಿಂಗಳಿಗೊಬ್ಬ ಅಧ್ಯಕ್ಷರನ್ನ ಚೇಂಜ್‌ ಮಾಡ್ತಿದಾರೆ. ಅದರಿಂದ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಅದನ್ನ ಸರಿಪಡಿಸೋಣ ಅಂತ ಸಮಾಜದ ಹಿರಿಯರಾಗಿರೋ ದೇವೇಗೌಡರನ್ನ ಭೇಟಿ ಮಾಡಿ ಮನವಿ ಮಾಡಿದೀನಿ. ಅವರು ಎಲ್ಲವನ್ನು ಸರಿಪಡಿಸುವ ಕೆಲಸ ಮಾಡ್ತಾರೆ. ಇದರಲ್ಲಿ ನನ್ನ ವೈಯಕ್ತಿಕ ಸ್ವಾರ್ಥ ಏನೂ ಇಲ್ಲ. ನಾನು ಒಂದು ಸಮುದಾಯಕ್ಕೆ ಮೀಸಲಾದ ವ್ಯಕ್ತಿಯೂ ಅಲ್ಲ. 

ಕೆಎಂಎಫ್ ಅಧ್ಯಕ್ಷರು ನಿಮ್ಮ ಶಿಷ್ಯರಾಗಿದ್ದರೂ ನಿಮ್ಮ ಮಾತು ಕೇಳುತ್ತಿಲ್ಲವಲ್ಲ? ಅವರ ಹಿಂದೆ ನಿಮ್ಮವರೇ ಇದ್ದಾರಂತಲ್ಲಾ ?
ಕೆಎಂಎಫ್ ವಿಷಯ ಅದು ಸಪರೇಟ್‌. ಅದನ್ನ ನಾನು ಇಲ್ಲಿ ಚರ್ಚೆ ಮಾಡೋದಿಲ್ಲ. ಅವನಿಗೆ ಈಗಾಗಲೇ ಮಾತನಾಡಿದ್ದೇನೆ. ನಾನು ಒಮ್ಮೆ ಹೇಳಿದ ಮೇಲೆ ಅದರಂತೆ ನಡೆದುಕೊಳ್ಳೋನು. ಅವನ ಹಿಂದೆ ಯಾರಿದ್ದರೂ ಅಷ್ಟೆ. ನಾನು ಕೊಟ್ಟ ಮಾತು ಉಳಿಸಿಕೊಳ್ತೀನಿ. ಅದರ ಬಗ್ಗೆ ಈಗ ಹೆಚ್ಚಿಗೆ ಮಾತಾಡೋಕೆ ಇಷ್ಟಾ ಪಡಲ್ಲಾ. 

ನಿಮ್ಮ  ಸರ್ಕಾರ ಅವಧಿ ಪೂರೈಸಲ್ಲಾ ಅಂತ ಕುಮಾರಸ್ವಾಮಿ ಹೇಳ್ತಿದಾರೆ ?
ಅವರು ದೊಡ್ಡವರು. ಅವರು ಭವಿಷ್ಯ ಹೇಳ್ತಾರೆ, (ವ್ಯಂಗ್ಯ) ಹೇಳಲಿ. ಆದ್ರೆ, ಅವರ ಭವಿಷ್ಯ ನಿಜಾ ಆಗಲ್ಲಾ. ನಾವೇ ಸರ್ಕಾರ ರಚಿಸ್ತೀವಿ ಅಂತ ಕನಸು ಬೇರೆ ಕಾಣುತ್ತಿದ್ದಾರೆ. 

ಅವರ ಕನಸು ನನಸಾಗ್ಲಿ ಅಂತ ಪ್ರಾರ್ಥಿಸಲ್ವಾ ನೀವು ?
ಅವರ ಕನಸು ಕನಸಾಗೇ ಉಳಿಯುತ್ತೆ. ಮುಂದಿನ ಚುನಾವಣೇಲಿ ನೋಡಿ, ಅವರ ಕನಸು ನುಚ್ಚು ನೂರಾಗಿ ಹೋಗುತ್ತೆ. ನಾನ್ಯಾಕ್‌ ಅವರ ಬಗ್ಗೆ ಪ್ರಾರ್ಥನೆ ಮಾಡ್ಲಿ. 

ಬಹುಮತ ಬರದಿದ್ರೆ, ಯಾರ್‌ ಜೊತೆ ಕೈ ಜೋಡಿಸ್ತೀರಾ? ಯಡಿಯೂರಪ್ಪನವರ ಜೊತೆ ನಿಮಗೆ ಒಳ್ಳೆ ಸ್ನೇಹ ಇದೆಯಂತೆ ?
ನೋಡಿ, ರಾಜಕೀಯ ಸಿದ್ಧಾಂತವೇ ಬೇರೆ, ವ್ಯವಹಾರವೇ ಬೇರೆ. ರಾಜಕೀಯದ ಹೊರತಾಗಿ ಯಡಿಯೂರಪ್ಪ ನನಗೆ ಒಳ್ಳೆಯ ಸ್ನೇಹಿತರು. ಹಾಗಂತ ರಾಜಕೀಯದಲ್ಲಿ ನಾನು ಅವರ ವಿರುದ್ಧ ಮಾತಾಡಲ್ಲಾ ಅಂತ ಯಾರು ಹೇಳಿದರು ? ಅವರ ವಿರುದ್ಧ ಸಾಕಷ್ಟು ಮಾತಾಡಿದೀನಿ. ಮುಂದಿನ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಅನ್ನೋ ಪ್ರಶ್ನೆನೇ ಬರೋದಿಲ್ಲ. ನಾವೇ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡ್ತೀವಿ. 

ಪಕ್ಷದ ಹೈಕಮಾಂಡ್‌ಗೆ ದುಡ್ಡು ಕೊಡುವ ಪದ್ಧತಿ ಇದಿಯಾ ? ಪರಮೇಶ್ವರ್‌ ಎಲ್ಲರಿಗೂ ದುಡ್ಡು ಕೊಡಿ ಅಂತ ಪತ್ರ ಕೂಡ ಬರೆದ್ದಿರಂತಲ್ಲಾ ಹೌದಾ ?
ಹೈಕಮಾಂಡ್‌ಗೆ ದುಡ್ಡು ಕೊಡುವ ಪದ್ಧತಿ ಇದಿಯೋ, ಇಲ್ಲವೋ ನಂಗೆ ಗೊತ್ತಿಲ್ಲÉ. ನಾನು ಅಧ್ಯಕ್ಷನಾಗಿ ಆ ಥರದ ಕೆಲಸ ಮಾಡಿಲ್ಲ. ನಾನು ಕಾರ್ಯಾಧ್ಯಕ್ಷನಾಗಿದ್ದಾಗ ದೇಶಪಾಂಡೆಯವರು ಅಧ್ಯಕ್ಷರಾಗಿದ್ದರು. ಅವರು ಏನ್‌ ಮಾಡ್ತಿದ್ದರೋ ನಂಗ್‌ ಗೊತ್ತಿಲ್ಲಾ. ನೀವು ಅವರನ್ನೇ ಕೇಳಬೇಕು. ನಮ್ಮ ಪಕ್ಷದಲ್ಲಿ ಒಂದು ಪದ್ಧತಿ ಇದೆ. ಶಾಸಕರು ಮತ್ತು ಸಂಸದರು ಒಂದು ತಿಂಗಳ ಸಂಬಳ ಕೊಡಬೇಕು ಅಂತ ಮೊದಲಿನಿಂದಲೂ ರೂಢಿಯಲ್ಲಿದೆ. ಅದರಂತೆ ನಾವು ಪಕ್ಷಕ್ಕೆ ನಮ್ಮ ಒಂದು ತಿಂಗಳ ಸಂಬಳ ಕೊಡ್ತೀವಿ. ಪಕ್ಷ ನಡೀಬೇಕಲ್ಲಾ. 

ಎರಡು ಉಪ ಚುನಾವಣೆ ಬರ್ತಿದೆ. ಕಾಂಗ್ರೆಸ್‌ಗೆ ಅಭ್ಯರ್ಥಿ ಸಿಗ್ತಿಲ್ಲಾ ಅಂತ ಬಿಜೆಪಿಯವರು ಹೇಳ್ತಿದಾರೆ ?
ಬಿಜೆಪಿಯವರೇನು ಪಕ್ಷದ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದಾರಾ? ಅವರು ಯಾರನ್ನು ಅಭ್ಯರ್ಥಿ ಮಾಡಿದ್ದು? ನಮ ಪಕ್ಷಕ್ಕೆ ಅನೇಕರು ಬರ್ತಿದ್ದಾರೆ. ಅದರಂತೆ ಈಗೊಬ್ಬರು ಸೇರ್ಪಡೆ ಆಗ್ತಿದಾರೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬರೋರ ದೊಡ್ಡ ದಂಡೇ ಇದೆ. ಎಲ್ಲರೂ ಕಣ್‌ ಬಿಟ್ಟು ನೋಡಬೇಕು ಅಂತ ನಾಯಕರುಗಳೇ ಕಾಂಗ್ರೆಸ್‌ ಕಡೆಗೆ ಮುಖ ಮಾಡಿದ್ದಾರೆ. ಟೈಮ್‌ ಬರಲಿ ಎಲ್ಲಾ ಪಟ್ಟಿ ಮಾಡಿ ಒಮ್ಮೆಲೆ ಕೊಡ್ತೀನಿ. 

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಅದು ನಿಜಾನಾ? 
ಯಡಿಯೂರಪ್ಪ ಅವರು ಒಂದು ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರೋರು. ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಮತ್ತೆ ಮುಖ್ಯಮಂತ್ರಿ ಆಗೋ ಕನಸು ಕಾಣಿ¤ರೋರು. ಅವರು ಈ ರೀತಿಯ ಬೇಸ್‌ಲೆಸ್‌ ಹೇಳಿಕೆ ನೀಡಿದರೆ, ಅವರ ಸ್ಥಾನಕ್ಕೆ ಅಗೌರವ ತೋರಿದಂತಾಗುತ್ತದೆ. ಅವರು ಮಾಡುವ ಆರೋಪಕ್ಕೆ ಏನಾದರೂ ದಾಖಲೆ ಕೊಡಬೇಕಲ್ಲಾ. ಹಿರಿಯ ನಾಯಕರು ದಾಖಲೆ ಇಟ್ಟುಕೊಂಡು ತೂಕದ ಮಾತನಾಡಬೇಕು. ಅದು ಬಿಟ್ಟು ಈ ರೀತಿ ಆರೋಪ ಮಾಡುವುದು ಶೋಭೆ ತರೋದಿಲ್ಲಾ. 

ಈ ಸಂದರ್ಭದಲ್ಲಿ ಈ ರೀತಿಯ ಆರೋಪ ಮಾಡುವುದಕ್ಕೆ ಏನ್‌ ಕಾರಣ ?
ಯಡಿಯೂರಪ್ಪ ಅವರು ಅಸ್ತಿತ್ವಕ್ಕಾಗಿ ಪರದಾಡ್ತಿದಾರೆ. ಅವರಿಗೆ ಅವರ ಪಕ್ಷದಲ್ಲಿಯೇ ಮರ್ಯಾದೆ ಇಲ್ಲ. ಕೇಂದ್ರದಲ್ಲಿಯೂ ಅವರನ್ನು ಯಾರೂ ಕೇಳುತ್ತಿಲ್ಲ. ರಾಜ್ಯದಲ್ಲಿಯೂ ಅವರ ಮಾತಿಗೆ ಯಾರೂ ಬೆಲೆ ಕೊಡುತ್ತಿಲ್ಲ. ಮುಂದೆ ಸಿಎಂ ಆಗಬೇಕು ಅಂತ 
ಹೈಕಮಾಂಡ್‌ ನಾಯಕರನ್ನ ಮೆಚ್ಚಿಸಲಿಕ್ಕೆ ಈ ರೀತಿಯ ಆರೋಪ ಮಾಡ್ತಿದಾರೆ. ಇದರಿಂದ ಅವರು ಏನೂ ಸಾಧಿಸೋಕ್‌ ಆಗಲ್ಲಾ. ಯಾವುದೇ ಹಗರಣಗಳಿಲ್ಲದೇ ಈ ಸರ್ಕಾರ ಜನರ ಪರವಾಗಿ ಉತ್ತಮ ಕೆಲಸ ಮಾಡ್ತಿರೋದನ್ನ ಸಹಿಸೋದಕ್ಕೆ ಅವರಿಗೆ ಆಗ್ತಿಲ್ಲಾ. 

ಸಿಎಂ ಮೇಲೆ ಅಷ್ಟೊಂದು ಗಂಭೀರ ಆರೋಪ ಬಂದರೂ ನೀವು ಅವರ ಸಮರ್ಥನೆಗೆ ನಿಂತಿಲ್ಲ ಅನ್ನೋ ಆರೋಪ ಇದೆಯಲ್ಲಾ ?
ಯಾರು ಹೇಳಿದ್ದು ಹಾಗೆ ? ನಮ್ಮ ಪಕ್ಷದಲ್ಲಿ ನಾವೆಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ಸಮರ್ಥನೆ ಮಾಡಿಕೊಳ್ಳಲು ನಮ್ಮ ಪಕ್ಷದಲ್ಲಿ ವಕ್ತಾರರನ್ನ ನೇಮಿಸಿದ್ದೇವೆ. ನಾನು ಸಂಪೂರ್ಣವಾಗಿ ಸಿಎಂ ಪರವಾಗಿ ನಿಂತಿದೀನಿ. ನಮ್ಮ ಸಿಎಂ ಸಿಂಪಲ್‌ ಮತ್ತು  ಹಾನೆಸ್ಟ್‌ ಆಗಿದಾರೆ. ಯಾವುದೇ ಅಬ್ಬರ ಇಲ್ಲದೆ, ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲದೆ, ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗ್ತಿದಾರೆ.

ಡಿ.ಕೆ.ಶಿವಕುಮಾರ್‌ ಇಂಧನ ಸಚಿವ

Back to Top