CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನನ್ನನ್ನು ಮುಗಿಸಲು ಸರ್ಕಾರದ ವ್ಯವಸ್ಥಿತ ಷಡ್ಯಂತ್ರ

ಅಕ್ರಮ ಗಣಿಗಾರಿಕೆಗೆ ಅನುಮತಿ ಕೊಟ್ಟ ಆರೋಪದ ಭೂತ ಮತ್ತೆ ಎದ್ದು ಕುಳಿತಿದೆಯಲ್ಲಾ?
     ಎದ್ದು ಕುಳಿತಿಲ್ಲ, ಎಬ್ಬಿಸಲಾಗಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ಇದಕ್ಕೆ ಹೆದರಿ ಓಡುವವನು ನಾನಲ್ಲ.  

ಮರು ತನಿಖೆ ನಡೆಸಲು ಸುಪ್ರೀಂಕೋರ್ಟ್‌  ಸೂಚನೆ ನೀಡಿದ್ದಲ್ಲವಾ?
      ಹೌದು. ಆದರೆ, ಸುಪ್ರೀಂಕೋರ್ಟ್‌ ಸೂಚನೆ ಆಧಾರದಲ್ಲಿ ನನಗೆ ಸಮನ್ಸ್‌ ಕೊಟ್ಟಿಲ್ಲ. ಯಾವುದ್ಯಾವುದೋ ದೂರಿಗೆ ನನ್ನನ್ನು ಬೇಕಂತಲೇ ಎಳೆತರಲಾಗುತ್ತಿದೆ. ಹಿಂದೆ ಇದೇ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್‌ ದೊರೆತಿದೆ. ಆದರೂ ಮತ್ತೆ ಸುಪ್ರೀಂನತ್ತ ಬೆರಳು ತೋರಿಸಿ ಕೆದಕಲಾಗುತ್ತಿದೆ.

ನಿಮ್ಮ ಮಾತಿನ ಅರ್ಥ? 
      ಜಂತಕಲ್‌ ಮೈನಿಂಗ್‌ ಕಂಪನಿಗೆ ಪರವಾನಗಿ ಪ್ರಕರಣದಲ್ಲಿ ಹೊಳಲ್ಕೆರೆ ಪೊಲೀಸ್‌ ಠಾಣೆಯಲ್ಲಿ ಆರ್‌ಎಫ್ಓ 2015ರಲ್ಲಿ ದಾಖಲಿಸಿರುವ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಎಫ್ಐಆರ್‌ನಲ್ಲಿ ನನ್ನ ಹೆಸರೇ ಇಲ್ಲ. ಆದರೂ ನನಗೆ ಸಮನ್ಸ್‌ ಕಳುಹಿಸೋದು ಯಾಕೆ? 2 ವರ್ಷ ಸುಮ್ಮನಿದ್ದು ಈಗ್ಯಾಕೆ ಕೈಗೆತ್ತಿಕೊಳ್ಳಲಾಗಿದೆ? ಎಫ್ಐಆರ್‌ನಲ್ಲಿ ಅದರ್ ಅಂತ ಬಳಸಿ ಯಾರನ್ನು ಯಾವಾಗ ಬೇಕಾದರೂ ಸೇರಿಸಬಹುದಾ? 
     
ನಿಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರೋರು ಯಾರು? 
      ನೇರವಾಗಿಯೇ ಹೇಳೆ¤àನೆ. ಈ ಸರ್ಕಾರದ ನೇತೃತ್ವ ವಹಿಸಿರುವವರೇ ಅದರ ರೂವಾರಿ.

ನಿಮ್ಮ ಆರೋಪಕ್ಕೆ ಪುರಾವೆಯೇನು?
      ಸೋಮವಾರ-ಮಂಗಳವಾರ  ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ಏನೆಲ್ಲಾ ಕಸರತ್ತು ಮಾಡಿದರು ಎಂಬುದು ಗೊತ್ತಿದೆ.

ಏನೇನು ಕಸರತ್ತು ಮಾಡಿದ್ದಾರೆ?
       ಈ ಕುಮಾರಸ್ವಾಮಿಯನ್ನು ಎರಡು ದಿನದ ಮಟ್ಟಿಗಾದರೂ ಜೈಲಿಗೆ ಕಳುಹಿಸಿ ವರ್ಚಸ್ಸಿಗೆ ಕಪ್ಪು ಚುಕ್ಕೆ ತರಲು ಇನ್ನಿಲ್ಲದ ಪ್ರಯತ್ನ ನಡೆಸಿ ಯಾವ್ಯಾವ ರೀತಿಯಲ್ಲಿ ಸಿಕ್ಕಿ ಹಾಕಿಸಬಹುದು ಎಂದು ತಮ್ಮ ಆಪ್ತವಲಯದ ಕಾನೂನು ತಜ್ಞರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಸಮಾಲೋಚನೆ ನಡೆಸಿದ್ದು ನನಗೆ ಗೊತ್ತಿಲ್ಲವೇ?

ನಮಗೂ ಅದಕ್ಕೂ ಸಂಬಂಧ ಇಲ್ಲ ಅಂತಾ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಹೇಳಿದ್ದಾರಲ್ಲಾ?
       ಹೌದು, ನಾನೂ ಮಾಧ್ಯಮಗಳಲ್ಲಿನ ಹೇಳಿಕೆ ಗಮನಿಸಿದ್ದೇನೆ. ಜಯಚಂದ್ರ ಅವರು ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಸಮನ್ಸ್‌ ಕಳುಹಿಸಿದೆ ಅಂತಾರೆ, ಇವರೇನು ಹೋಮ್‌ ಮಿನಿಸ್ಟರಾ? ಯಾವಾಗ ಹೋಂ ಖಾತೆ ಇನ್‌ಚಾರ್ಜ್‌ ತೆಗೆದುಕೊಂಡರು? ಇವರ ಕಣ್ಣೊರೆಸುವ ಆಟ ನನಗೆ ಗೊತ್ತಿಲ್ಲದೇ ಇರೋದಾ. ಯಾವ್ಯಾವ ಅಧಿಕಾರಿ ಯಾರ್ಯಾರ ಸಚಿವರ ಮನೆಗೆ ಹೋಗಿದ್ದರು ಎಂಬುದರ ಮಾಹಿತಿಯೂ ನನ್ನ ಬಳಿಯಿದೆ.

ನಿಮ್ಮ ವಿರುದ್ಧ ಯಾಕೆ ಷಡ್ಯಂತ್ರ ಮಾಡಬೇಕು?
      ಯಾಕೆಂದರೆ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಮುಗಿಸಬೇಕು. ರಾಜ್ಯದ ಜನರಲ್ಲಿ ನನ್ನ ಹಾಗೂ ನಮ್ಮ ಪಕ್ಷದ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯಕ್ಕೆ ಕಪ್ಪು ಚುಕ್ಕೆ ಇಡಬೇಕು. ಆಗ ರಾಜಕೀಯವಾಗಿ ಲಾಭ ಪಡೆಯಬಹುದಲ್ಲವೇ? ಅದಕ್ಕೆ ಇಷ್ಟೆಲ್ಲಾ ನಾಟಕ ನಡೆಯುತ್ತಿದೆ. ಸರ್ಕಾರಿ ಅಭಿಯೋಜಕರು ಏನು ವಾದ ಮಂಡಿಸಿದರು, ಕೋರ್ಟ್‌ ಹಾಲ್‌ನಲ್ಲಿದ್ದ ಎಸ್‌ಐಟಿ ಇನ್ಸ್‌ಪೆಕ್ಟರ್‌ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಯಾರ್ಯಾರಿಗೆ ಮೆಸೇಜ್‌ ಕಳುಹಿಸಿದರು ಎಂಬುದರ ಕಾಲ್‌ಲಿಸ್ಟ್‌ ತೆಗೆಸಲಿ ಗೊತ್ತಾಗುತ್ತದೆ.

ಮುಖ್ಯಮಂತ್ರಿ ಸಹಿತ ಸಚಿವರ ಷಡ್ಯಂತ್ರ, ಅಧಿಕಾರಿಗಳ ಶಾಮೀಲು ಅಂತ ದೂರಲು ಸ್ಪಷ್ಟ ಪುರಾವೆ ಬೇಕಲ್ಲವೇ?
      ಇವತ್ತಿಲ್ಲ ನಾಳೆ, ಇವರ ಜತೆ ಇರುವವರೇ ಏನೆಲ್ಲಾ ನಡೆಯಿತು. ಯಾವ ರೀತಿ ಮಾಸ್ಟರ್‌ ಪ್ಲಾನ್‌ ಮಾಡಲಾಯ್ತು ಎಂಬುದನ್ನು ರಾಜ್ಯದ ಜನತೆ ಮುಂದಿಡಲಿದ್ದಾರೆ. ಆಗ ಸತ್ಯ ಗೊತ್ತಾಗುತ್ತದೆ. ಆ ಸಮಯ ಬಂದೇ ಬರುತ್ತೆ. ಕಾದು ನೋಡಿ.

ನಿಜ ಹೇಳಿ, ಜಂತಕಲ್‌ ಮೈನಿಂಗ್‌ ಕಂಪನಿಗೆ ಪರವಾನಗಿ ಕೊಟ್ಟ ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲವಾ?
      ಆ ಪ್ರಕರಣದಲ್ಲಿ ಎಳ್ಳಷ್ಟೂ ನನ್ನ ಪಾತ್ರವಿಲ್ಲ. ಜಂತಕಲ್‌ ಮೈನಿಂಗ್‌ ಪ್ರಕರಣದಲ್ಲಿ ನಾನು ತಪ್ಪು ಮಾಡಿಲ್ಲ. ನಾನು 20 ತಿಂಗಳ ಅಧಿಕಾರವಧಿಯಲ್ಲಿ ಆ ಪ್ರಕರಣವಷ್ಟೇ ಅಲ್ಲ, ಯಾವೊಬ್ಬ ಅಧಿಕಾರಿಗೂ ಕಾನೂನು ಬಾಹಿರವಾಗಿ ಕೆಲಸ ಮಾಡಿ ಎಂದು ಒತ್ತಡ ಹಾಕಿದವನಲ್ಲ. 

ಹಾಗಾದರೆ ನಿರೀಕ್ಷಣಾ ಜಾಮೀನು ಯಾಕೆ ಪಡೆದಿರಿ?
      ನಮ್ಮ ವಕೀಲರ ಸಲಹೆ  ಮೇರೆಗೆ ಅರ್ಜಿ ಸಲ್ಲಿಸಿದ್ದೆ. ಇವರ ಷಡ್ಯಂತ್ರಗಳು ಗೊತ್ತಾದ ಮೇಲೆ ಸುಮ್ಮನಿರಲು ಸಾಧ್ಯವೇ?

ಸಿಎಂ ಆಗಿದ್ದ ನೀವು ಒತ್ತಡ ಹಾಕಿದ್ದಿರಿ ಎಂದು ಗಂಗಾರಾಮ್‌ ಬಡೇರಿಯಾ ಅವರೇ ಟಿಪ್ಪಣಿ ಬರೆದಿದ್ದಾರಂತೆ?
       ಹೇಗೆ ಸಾಧ್ಯ? ನನ್ನ ಕಚೇರಿಯಿಂದ ನಾನು ಯಾವುದೇ ಕರೆ ಮಾಡಿಯೇ ಇರಲಿಲ್ಲ. ಆಡಳಿತಾತ್ಮಕ ವಿಚಾರದಲ್ಲಿ ಕಾನೂನು ಬಾಹಿರವಾಗಿ ಕೆಲಸ ಮಾಡಲು ಒತ್ತಡ ಬಂದಾಗ ತಕ್ಷಣ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರಬೇಕು. ಗಂಗಾರಾಮ್‌ ಬಡೇರಿಯಾ ಯಾಕೆ ಆ ಕೆಲಸ ಮಾಡಲಿಲ್ಲ? 

ಹಾಗಾದರೆ ನಿಮ್ಮ ಹೆಸರು ಯಾಕೆ ಬರೆದರು?
       ಮುಖ್ಯಮಂತ್ರಿ ಕಚೇರಿಯಿಂದ ಒತ್ತಡ ಎಂದು ಬರೆದುಕೊಂಡರೆ ತಮ್ಮ ತಪ್ಪು ಮುಚ್ಚಿಕೊಳ್ಳಬಹುದು ಎಂದಿರಬಹುದು. ಅವರ ಮಗ ಗಗನ್‌ ಬಡೇರಿಯಾ ನಕಲಿ ದಾಖಲೆ ಸೃಷ್ಟಿಸಿದ್ದು, ಆ ನಂತರ ಜಂತಕಲ್‌ ಕಂಪನಿ ಮಾಲೀಕರ ಖಾತೆಯಿಂದ ಗಗನ್‌ ಬಡೇರಿಯಾಗೆ ಹೋಗಿದೆ ಎಂಬುದು ವರದಿಯಲ್ಲಿದೆ. ಹೀಗಿರುವಾಗ ನನ್ನ ಪಾತ್ರ ಎಲ್ಲಿಂದ ಬಂತು?

ಮತ್ಯಾವ ಕಾರಣಕ್ಕೆ ನಿಮ್ಮ ಹೆಸರು ತಳುಕು ಹಾಕಿಕೊಂಡಿದೆ? 
      ಅದನ್ನೇ ಹೇಳಿದ್ದು, ಇದು ರಾಜಕೀಯ ಷಡ್ಯಂತ್ರ. ನನಗೆ ಇನ್ನೊಂದು ಅನುಮಾನ ಎಂದರೆ, ಈ ಹಿಂದೆ ನಾನು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹೋರಾಟ ಮಾಡಲು ಮುಂದಾದಾಗ ಯಡಿಯೂರಪ್ಪ ಅವರೇ ನನ್ನನ್ನು ಮಣಿಸಲು ಮುಖ್ಯಮಂತ್ರಿ ಒತ್ತಡದಿಂದ ಪರವಾನಗಿ ಕೊಟ್ಟೆ ಅಂತ ಬರೆಯಿರಿ ಎಂದು ಹೇಳಿ ಬರೆಸಿರಬಹುದು. ಆಗ ಬಿಜೆಪಿಯವರು ಈಗ ಕಾಂಗ್ರೆಸ್‌ನವರು. ಒಟ್ಟಾರೆ ಎರಡೂ ಪಕ್ಷದವರಿಗೆ ನನ್ನನ್ನು ರಾಜಕೀಯವಾಗಿ ಮುಗಿಸುವುದೇ ಒಂದಂಶದ ಕಾರ್ಯಕ್ರಮ.

ಪ್ರಕರಣದ ತನಿಖೆಗೂ ನಿಮ್ಮ ಪಕ್ಷದ ಬೆಳವಣಿಗೆಗೆ ಕಡಿವಾಣ ಹಾಕುವುದಕ್ಕೂ ಏನು ಸಂಬಂಧ?
      ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದರೆ ನಾನು ಮಾನಸಿಕವಾಗಿ ಕುಗ್ಗುತ್ತೇನೆ. ಆ ಮೂಲಕ ಪಕ್ಷ ಸಂಘಟನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಹೀಗಾಗಿ, ಜೆಡಿಎಸ್‌ ಓಟಕ್ಕೆ ಬ್ರೇಕ್‌ ಬೀಳಲಿದೆ ಎಂಬ ನಿರೀಕ್ಷೆ ಇರಬಹುದು. ಆದರೆ, ಒಂದಂತೂ ಸತ್ಯ. ಇಂತಹ ಪ್ರಯತ್ನಗಳಿಂದ ಯಾವುದೇ ಫ‌ಲ ಸಿಗುವುದಿಲ್ಲ.
- ಎಚ್‌.ಡಿ. ಕುಮಾರಸ್ವಾಮಿ

ಸಂದರ್ಶನ:  ಎಸ್‌.ಲಕ್ಷ್ಮಿನಾರಾಯಣ

Back to Top