CONNECT WITH US  

ರಾಹುಲ್‌ ತಲೆಕೆಡಿಸಿಕೊಂಡಿದ್ದು ಏತಕ್ಕೆ?

ಬೆಳಗಾವಿ ರಾಜಕಾರಣ, ರಾಜ್ಯ ಕಾಂಗ್ರೆಸ್‌ ಬಗ್ಗೆ ದೂರು ಕೊಟ್ರಾ?

ಮುಂದಿನ ವಿಧಾನಸಭೆ ಚುನಾವಣೆಗೆ ರಣೋತ್ಸಾಹದಲ್ಲಿ ಸಿದ್ಧತೆ ನಡೆಸಿರುವ ರಾಜ್ಯ ಕಾಂಗ್ರೆಸ್‌ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ "ಬಹಿರಂಗ ಕಾಳಗ' ತಲೆಬಿಸಿಯಾಗಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ನೇತೃತ್ವದಲ್ಲಿ ಸತೀಶ್‌ ಹಾಗೂ ರಮೇಶ್‌ ಜಾರಕಿಹೊಳಿ ಅವರನ್ನು ಕರೆಸಿ ಸಂಧಾನ ನಡೆಸಿದರೂ ವೈಮನಸ್ಸು ಬಗೆಹರಿಯದ ಕಾರಣ ಖುದ್ದು ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ  ರಾಹುಲ್‌ಗಾಂಧಿ ಮಧ್ಯಪ್ರವೇಶ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಹುಲ್‌ ಸೂಚನೆ ಮೇರೆಗೆ ಸತೀಶ್‌ ಜಾರಕಿಹೊಳಿ ಸೋಮವಾರ ರಾತ್ರಿಯೇ ದೆಹಲಿ ವಿಮಾನ ಏರಿ ಮಂಗಳವಾರ ಬೆಳಗ್ಗೆ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ಕುತೂಹಲ ಮೂಡಿಸಿದೆ. ಈ ವಿದ್ಯಮಾನ ಕಾಂಗ್ರೆಸ್‌ ವಲಯದಲ್ಲೂ ಹುಬ್ಬೇರಿಸಿದೆ. ದೆಹಲಿಯಲ್ಲಿರುವ ಸತೀಶ್‌ ಜಾರಕಿಹೊಳಿ ಜತೆ ನೇರಾ-ನೇರ ಮಾತುಕತೆಗೆ ಇಳಿದಾಗ

ಇದ್ದಕ್ಕಿದ್ದಂತೆ ದೆಹಲಿ ಪ್ರವಾಸ ಮಾಡಿದ್ರಲ್ಲಾ?
      ಇದು ದಿಢೀರ್‌ ಏನಲ್ಲ. ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡುವ ವಿಚಾರ ಇತ್ತು. ಸೋಮವಾರ ಸಂಜೆ ಅವರ ಕಚೇರಿಯಿಂದ ದೂರವಾಣಿ ಕರೆ ಮಾಡಿ ಬರಲು ಹೇಳಿದರು, ಬಂದೆ. ರಾಹುಲ್‌ಗಾಂಧಿ ಅವರ ಜತೆ ಸುದೀರ್ಘ‌ ಸಮಾಲೋಚನೆ ನಡೆಸಿದೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಭಿನ್ನಮತ ಕುರಿತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣು ಗೋಪಾಲ್‌ ನಡೆಸಿದ ಸಂಧಾನ ವಿಫ‌ಲವಾಗಿದ್ದರಿಂದ ರಾಹುಲ್‌ಗಾಂಧಿ ಮಧ್ಯಪ್ರವೇಶ ಮಾಡಿದ್ದರಂತೆ?
      ಹಾಗೇನಿಲ್ಲ. ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಸಮಸ್ಯೆಗೂ ನಾನು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದಕ್ಕೂ ಸಂಬಂಧ ವಿಲ್ಲ. ಆ ಸಮಸ್ಯೆಯನ್ನು ಇಲ್ಲಿವರೆಗೂ ತರುವ ಅಗತ್ಯವಿಲ್ಲ.

ಹಾಗಾದರೆ, ಸೋಮವಾರ ಕೆಪಿಸಿಸಿಯಲ್ಲಿ ನಡೆದ ಸಂಧಾನ ಮಾತುಕತೆ ಬೆನ್ನಲ್ಲೇ ದೆಹಲಿಗೆ ಬಂದಿದ್ಯಾಕೆ?
      ರಾಹುಲ್‌ ಗಾಂಧಿ ಭೇಟಿ ಮಾಡುವ ಕಾರ್ಯಕ್ರಮ ಇತ್ತು. ಸೋಮವಾರ ಕರೆ ಮಾಡಿ ಬರುವಂತೆ ಹೇಳಿದರು ಬಂದೆ. 

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನ ವಿಚಾರದಲ್ಲಿ ರಾಹುಲ್‌ ಗಾಂಧಿ ಏನು ಹೇಳಿದರು?
      ಬೆಳಗಾವಿ ಜಿಲ್ಲೆ ಸಮಸ್ಯೆ ಚರ್ಚೆಯೇ ಆಗಲಿಲ್ಲ. ಅದು ಎಐಸಿಸಿ ಮಟ್ಟಕ್ಕೆ ಬರುವುದಲ್ಲ. ಅದು ಕೆಪಿಸಿಸಿ ಹಂತದ ಸಮಸ್ಯೆ. ಸೋಮವಾರ ನಡೆದ ಸಭೆಯಲ್ಲಿ ಬಹುತೇಕ ಎಲ್ಲ ಸಮಸ್ಯೆ ಮುಗಿದಿದೆ.

ನಿಜವಾಗಿಯೂ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಸಮಸ್ಯೆ , ಜಾರಕಿಹೊಳಿ ಸಹೋದರರ ಸಂಘರ್ಷ ಬಗೆಹರಿದಿದೆಯಾ?
     ಹೌದು. ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಮಸ್ಯೆ ಇರುವುದು ನಿಜ. ಆ ಎಲ್ಲ ಸಮಸ್ಯೆಗಳ ಬಗ್ಗೆ ಎಐಸಿಸಿ ಉಸ್ತುವಾರಿ ವೇಣುಗೋಪಾಲ್‌ ಅವರ ಸಮ್ಮುಖದಲ್ಲಿ ಮಾತನಾಡಿ ಬಹುತೇಕ ಬಗೆಹರಿಸಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಸಮ್ಮುಖದಲ್ಲೇ ಎಲ್ಲ ಚರ್ಚೆಯಾಗಿದೆ.

ರಾಹುಲ್‌ ಗಾಂಧಿ ಅವರ ಜತೆ ಏನು ಚರ್ಚಿಸಿದಿರಿ?
     ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಿದೆ. ಇನ್ನೂ ಎರಡು ಮೂರು ಬಾರಿ ಭೇಟಿ ಮಾಡುವಂತೆಯೂ ಸೂಚಿಸಿದ್ದಾರೆ.

ಇನ್ನೂ ಎರಡು ಮೂರು ಬಾರಿ ರಾಹುಲ್‌ ಅವರನ್ನು ಭೇಟಿ ಮಾಡುವುದು ಎಂದರೆ ಯಾವ ವಿಚಾರಕ್ಕೆ?
     ಪಕ್ಷ ಸಂಘಟನೆಗೆ. ರಾಹುಲ್‌ ಗಾಂಧಿ ಅವರು ನಮ್ಮ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು. ಅವರು ಕರ್ನಾಟಕ ಸೇರಿ ಇಡೀ ದೇಶದ ಸಂಘಟನೆ ಬಗ್ಗೆ ಗಮನಹರಿಸಿದ್ದಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ಚರ್ಚಿಸಲು ಮುಂದೆ ಅಗತ್ಯ ಬಿದ್ದಾಗ ಬರುವಂತೆ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಅವರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿ ಕುರಿತು ಅಳಲು ತೋಡಿಕೊಂಡರಂತೆ?
     ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಿಮಗೆ ಸಿಟ್ಟೇಕೆ?
     ನನಗೆ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಸಿಟ್ಟಿಲ್ಲ. 

ನಿಮ್ಮನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಮುನಿಸಿಕೊಂಡಿದ್ದೀರಂತೆ?
     ನಾನೇ ಸಚಿವ ಸ್ಥಾನ ಬೇಡ ಎಂದು ಬಿಟ್ಟುಕೊಟ್ಟಿರುವಾಗ ಕೈ ಬಿಡುವ ಪ್ರಶ್ನೆ ಎಲ್ಲಿಂದ ಬರುತ್ತೆ?

ರಾಹುಲ್‌ ಗಾಂಧಿ ನಿಮಗೆ ಹೇಳಿದ್ದಾದರೂ ಏನು?
      ಪಕ್ಷ ಸಂಘಟನೆಯಲ್ಲಿ ಕರ್ನಾಟಕ ಮತ್ತು ರಾಷ್ಟ್ರಮಟ್ಟದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು. ನಾನೂ ಪಕ್ಷಕ್ಕೆ ನಮ್ಮನ್ನು ಬಳಕೆ ಮಾಡಿಕೊಳ್ಳಿ ಎಂದು ಹೇಳಿದೆ. ಅದಕ್ಕೆ ಅವರು ಒಪ್ಪಿದರು. ಅವರ ಮಾತಿನಂತೆ ನಾನೂ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಿಗೆ ರಾಹುಲ್‌ಗಾಂಧಿ ಅವರ ಭೇಟಿ ಕಷ್ಟ. ಅಂಥದ್ದರಲ್ಲಿ ಸತೀಶ್‌ ಜಾರಕಿಹೊಳಿಗೆ ತಕ್ಷಣ ಸಾಧ್ಯವಾಗಿದ್ದು ಹೇಗೆ?
       ಅದರಲ್ಲಿ ವಿಶೇಷ ಏನೂ ಇಲ್ಲ. ರಾಹುಲ್‌ ಗಾಂಧಿಯವರು ಬರಲು ಹೇಳಿದರು ಬಂದೆ. ಬುಧವಾರ ರಾಷ್ಟ್ರೀಯ ಮಟ್ಟದ ಮುಖಂಡರ ಸಭೆ ನಡೆಯಲಿದ್ದು ಅದರಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಭಾಗವಹಿಸುತ್ತೇನೆ.

ರಾಹುಲ್‌ ಖುದ್ದು ಕರೆ ಮಾಡಿ ಕರೆಸಿಕೊಂಡಿದ್ದು ಸತೀಶ್‌ ಜಾರಕಿಹೊಳಿ ಹೈಕಮಾಂಡ್‌ ವಲಯದಲ್ಲೂ ಪ್ರಭಾವಿ ಎಂಬ ಸಂದೇಶವಾ?
       ಪಕ್ಷದ ಸಂಘಟನೆ ವಿಚಾರದಲ್ಲಿ ನಮ್ಮ ಬದ್ಧತೆ, ನಿಲುವು ಮತ್ತು ಸಾಮರ್ಥ್ಯ ಏನು ಎಂಬುದು ರಾಹುಲ್‌ ಗಾಂಧಿ ಸೇರಿದಂತೆ ಹೈಕಮಾಂಡ್‌ನ‌ ಎಲ್ಲ ನಾಯಕರಿಗೂ ಗೊತ್ತಿದೆ.

ರಾಹುಲ್‌ ಗಾಂಧಿ ತಲೆಕೆಡಿಸಿಕೊಂಡಿದ್ದು ಜಾರಕಿಹೊಳಿ ಸಹೋದರರ ಜಗಳದ ಬಗ್ಗೆಯಾ? ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನ ಭಿನ್ನಮತದ ಬಗ್ಗೆಯಾ? 
      ಅದ್ಯಾವುದೂ ಅಲ್ಲ. ಪಕ್ಷದ ಸಂಘಟನೆ ಬಗ್ಗೆ ರಾಹುಲ್‌ಗಾಂಧಿ ಅವರು ಮಾರ್ಗದರ್ಶನ ಮಾಡಿದ್ದಾರೆ.

ಹಾಗಾದರೆ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ನಲ್ಲೇ ಇರ್ತಾರಾ?
       ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ. ನಾನೆಂದೂ ಕಾಂಗ್ರೆಸ್‌ ಬಿಡ್ತೇನೆ ಎಂದು ಹೇಳಿರಲಿಲ್ಲ. 

ಜೆಡಿಎಸ್‌ ಸೇರ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವಲ್ಲಾ?
       ಅದೆಲ್ಲವೂ ಊಹಾಪೋಹ. ಜೆಡಿಎಸ್‌ನಲ್ಲಿ ನನಗೆ ಸ್ನೇಹಿತರು ಇದ್ದಾರೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್‌ ಸೇರ್ತೇನೆ ಎಂದಲ್ಲ. 

ನಿಜ ಹೇಳಿ ರಾಹುಲ್‌ ಗಾಂಧಿಗೆ ಕರ್ನಾಟಕದ ಕಾಂಗ್ರೆಸ್‌ ಬಗ್ಗೆ ಏನೂ ಹೇಳಿಲ್ಲವಾ?
       ಖಂಡಿತಾ ಹೇಳಿದ್ದೇನೆ. ಸರ್ಕಾರದ ಸಾಧನೆ, ಪಕ್ಷದ ಬದ್ಧತೆ, ಸಿದ್ಧಾಂತ, ನೀತಿ ಆಧಾರದಲ್ಲಿ ಸಂಘಟಿತವಾಗಿ ಕೆಲಸ ಮಾಡಿದರೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬಹುದು. ಮತ್ತಷ್ಟು "ಸ್ಟಫ್' ಆಗಬೇಕು. ಆ ನಿಟ್ಟಿನಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ಹೇಳಿದ್ದೇನೆ.

ನಿಮ್ಮ ಅಭಿಪ್ರಾಯಕ್ಕೆ ರಾಹುಲ್‌ ಗಾಂಧಿ ಸ್ಪಂದನೆ ಹೇಗಿತ್ತು?
       ಉತ್ತಮವಾಗಿತ್ತು. ಅವರೂ ಅದೇ ನಿಟ್ಟಿನಲ್ಲಿ ಯೋಚಿಸುತ್ತಿ ದ್ದಾರೆ. ಜತೆಗೆ ರಾಜ್ಯದ ಬೆಳವಣಿಗೆಗಳ ಬಗ್ಗೆ ಅವರಿಗೂ ಸಂಪೂರ್ಣ ಮಾಹಿತಿಯಿದೆ. ಅವರೂ  ಎಲ್ಲವನ್ನೂ ಗಮನಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮಿಹೆಬ್ಟಾಳ್‌ಕರ್‌ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ದೂರು ಕೊಟ್ಟಿದ್ದೀರಂತೆ?
   
   ನಿಮಗೆ ಮೊದಲೇ ಹೇಳಿದ್ದೇನೆ. ಬೆಳಗಾವಿ ವಿಚಾರ ದೆಹಲಿವರೆಗೂ ಬರುವ ಅವಶ್ಯಕತೆ ಇಲ್ಲ. ಕೆಪಿಸಿಸಿಯಲ್ಲಿ ಸಿಎಂ, ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಲ್ಲಿನ ಸಮಸ್ಯೆ ಬಗೆಹರಿದಿದೆ.

ರಾಹುಲ್‌ ಭೇಟಿ ನಂತರ ತುಂಬಾ ನಿರಾಳವಾಗಿರುವಂತಿದೆಯಲ್ಲಾ?
       ಹೌದು. ಪಕ್ಷ, ಸರ್ಕಾರ ಕುರಿತು ನಮ್ಮ ಮನಸ್ಸಿನಲ್ಲಿದ್ದ ಭಾವನೆ ಅವರ ಬಳಿ ಹೇಳಿಕೊಂಡಿದ್ದೇನೆ. ಪಕ್ಷಕ್ಕೆ ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದೇನೆ. ಅವರೂ ಎಲ್ಲವನ್ನೂ ಸಮಾಧಾನದಿಂದ ಕೇಳಿ, ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಿದ್ದಾರೆ. 

ಸತೀಶ್‌ ಜಾರಕಿಹೊಳಿ ಈಗ ಮುಕ್ತ ಮನಸ್ಸಿನಿಂದ ಮುಂದಿನ ಚುನಾವಣೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಕೆಲಸ ಮಾಡ್ತಾರಾ?
      ಖಂಡಿತಾ. ನಾನು ಪಕ್ಷದ ಪರ ಕೆಲಸ ಮಾಡುವ ವಿಷಯದಲ್ಲಿ ಎಂದೂ ಹಿಂದೇಟು ಹಾಕಿದವನಲ್ಲ. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲೂ ನಮ್ಮದೇ ಆದ ಶ್ರಮ ಹಾಕಿದ್ದೆ.

ರಾಹುಲ್‌ ಗಾಂಧಿ ಭೇಟಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ಪ್ರಸ್ಥಾಪವಾಯ್ತಾ?
       ಪಕ್ಷ ಸಂಘಟನೆ ವಿಷಯ ಚರ್ಚೆ ಮಾಡುವಾಗ ಎಲ್ಲ ವಿಚಾರಗಳೂ ಬಂದವು. ನನ್ನ ಅಭಿಪ್ರಾಯವನ್ನೂ ಕೇಳಿದರು, ಹೇಳಿದ್ದೇನೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾರು ಅಂತ ಹೇಳಿದಿರಾ?
       ಆ ರೀತಿ ಆಯ್ಕೆ ಏನೂ ಹೇಳಿಲ್ಲ. ಪಕ್ಷ ಅಧಿಕಾರಕ್ಕೆ ತರುವ ಸಾಮರ್ಥ್ಯ ಇರುವವರನ್ನು ನೇಮಿಸಿ. ಪ್ರಾದೇಶಿಕವಾರು ಆದ್ಯತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ಪರಿಗಣಿಸಿ ಆಯ್ಕೆ ಮಾಡಿ ಎಂದಷ್ಟೇ ಹೇಳಿದ್ದೇನೆ. ಒಟ್ಟಾರೆ ರಾಜ್ಯದ ಸ್ಥಿತಿಗತಿ ವಿವರಿಸಿದ್ದೇನೆ. ಮುಂದಿನ ತೀರ್ಮಾನ ಹೈಕಮಾಂಡ್‌ ಕೈಗೊಳ್ಳುತ್ತದೆ.

ಸಂಕಷ್ಟದಲ್ಲೂ ಜತೆಗಿದ್ದೆ
ನಾನು ಸಿದ್ದರಾಮಯ್ಯ ಆಪ್ತ ಬಳಗದಲ್ಲಿದ್ದದ್ದೂ ಹೌದು. ರಾಜಕೀಯವಾಗಿ ಸಂಕಷ್ಟದಲ್ಲಿದ್ದಾಗಲೂ ಅವರ ಜತೆಯೇ ನಿಂತಿದ್ದೂ ಹೌದು. ಕೆಲವು ವಿಚಾರಗಳಲ್ಲಿ ಬೇಸರ ಆಗಿದ್ದೂ ಹೌದು. ಆದರೆ, ಅದು ಈಗ ಸರಿ ಹೋಗಿದೆ. ಸಚಿವ ಸ್ಥಾನದಿಂದ ತೆಗೆದಿದ್ದಕ್ಕೆ ನಾನು ಅಸಮಾಧಾನಗೊಂಡಿರಲಿಲ್ಲ. ನಾನಾಗಿಯೇ ಸಚಿವ ಸ್ಥಾನ ಬಿಟ್ಟುಕೊಟ್ಟೆ. ನನಗೆ ಪದವಿ ಬಗ್ಗೆ ಎಂದೂ ವ್ಯಾಮೋಹ ಇರಲಿಲ್ಲ, ಈಗಲೂ ಇಲ್ಲ. ನನಗೆ ರಾಹುಲ್‌ಗಾಂಧಿ ಭೇಟಿ ತೃಪ್ತಿ ತಂದಿದೆ.

ಪಕ್ಷ, ಸರ್ಕಾರ ಕುರಿತು ನಮ್ಮ ಮನಸ್ಸಿನಲ್ಲಿದ್ದ ಭಾವನೆಯನ್ನು ರಾಹುಲ್‌‌ ಬಳಿ ಹೇಳಿಕೊಂಡಿದ್ದೇನೆ. ಪಕ್ಷಕ್ಕೆ ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದೇನೆ. ಅವರೂ ಎಲ್ಲ ಸಮಾಧಾನದಿಂದ ಕೇಳಿ, ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಿದ್ದಾರೆ.
- ಸತೀಶ್‌ ಜಾರಕಿಹೊಳಿ 
ಮಾಜಿ ಸಚಿವ

∙ ಸಂದರ್ಶನ: ಎಸ್‌. ಲಕ್ಷ್ಮಿನಾರಾಯಣ

Trending videos

Back to Top