CONNECT WITH US  

ಶಂಕರಮೂರ್ತಿ ಮೇಲೇಕೆ ಮುನಿಸು?

ರಾಜ್ಯದ ವಿಧಾನಮಂಡಲದ ಇತಿಹಾಸದಲ್ಲಿ ಅಪರೂಪ ಎಂಬಂತೆ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಪದಚ್ಯುತಿಗೆ ಕಾಂಗ್ರೆಸ್‌ ನಿರ್ಣಯ ಮಂಡಿಸಿದೆ. ಇದಕ್ಕಾಗಿ ಜೆಡಿಎಸ್‌ ಬೆಂಬಲದ ನಿರೀಕ್ಷೆಯಲ್ಲಿದೆ. ಅತ್ತ ಬಿಜೆಪಿ ಸಹ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ತನ್ನದೇ ಆದ ಲೆಕ್ಕಾಚಾರಗಳೊಂದಿಗೆ ತಂತ್ರಗಾರಿಕೆ ರೂಪಿಸಿದೆ. ಆದರೆ, ಅಂತಿಮವಾಗಿ ಏನಾಗಲಿದೆ ಎಂಬುದು ಇನ್ನೂ ನಿಗೂಢವಾಗಿದೆ. ಸದನದಲ್ಲಿ ವಿಷಯ ಚರ್ಚೆಯಾಗಿ ಮತಕ್ಕೆ ಹಾಕಿದಾಗಷ್ಟೇ ಸ್ಪಷ್ಟತೆ ದೊರೆಯುವ ಲಕ್ಷಣಗಳು ಕಂಡಬರುತ್ತಿವೆ. ಪ್ರಸಕ್ತ ಬೆಳವಣಿ ಗೆಗಳ ಬಗ್ಗೆ ವಿಧಾನಪರಿಷತ್‌ನಲ್ಲಿ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಐವಾನ್‌ ಡಿಸೋಜಾ ಜತೆ "ಉದಯವಾಣಿ' ಮಾತುಕತೆ ನಡೆಸಿದಾಗ.

ಸಭಾಪತಿ ಶಂಕರಮೂರ್ತಿ ಅವರ ಪದಚ್ಯುತಿ ಅಗತ್ಯವಿದೆಯೇ?
ಶಂಕರ ಮೂರ್ತಿಯವರು ಆರು ವರ್ಷದಿಂದ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಹೆಚ್ಚು ಸದಸ್ಯರಿರುವ ದೊಡ್ಡ ಪಕ್ಷ. ನಮ್ಮ ಸದಸ್ಯರು 36 ಜನ ಇದ್ದೇವೆ. ಬಿಜೆಪಿ, ಜೆಡಿಎಸ್‌ಗಿಂತ ನಾವೇ ಹೆಚ್ಚಿನ ಸಂಖ್ಯೆಯಲ್ಲಿರಬೇಕಾದರೆ, ನಮ್ಮವರೇ ಸಭಾಪತಿ ಆಗಬೇಕು ಎನ್ನುವುದು ನಮ್ಮ ಪಕ್ಷದ ನಿಲುವು. ಹೀಗಾಗಿ, ಶಂಕರ ಮೂರ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್‌ ನೀಡಿದ್ದೇವೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲ ಮುಖ್ಯ. ಹಿಂದೆ ಬಿಜೆಪಿಗೆ ಸಂಖ್ಯಾಬಲ ಇದ್ದಾಗ ಅವರ ಪಕ್ಷದವರು ಸಭಾಪತಿಯಾಗಿದ್ದರು. ಇದೀಗ ನಮ್ಮ ಸಂಖ್ಯಾಬಲ ಹೆಚ್ಚಾಗಿದೆ, ನಮ್ಮವರು ಸಭಾಪತಿ ಇರಬೇಕು. ಇದು ನ್ಯಾಯವಲ್ಲವೇ?

ಆದರೆ ಅವರನ್ನು ಸಭಾಪತಿ ಸ್ಥಾನದಿಂದ ಇಳಿಸಲು ಗುರುತರ ಆರೋಪ ಇರಬೇಕಲ್ಲವೇ? 
ನೋಡಿ, ಅವರ ವಿರುದ್ಧ ಆರೋಪ ಮಾಡೋದಕ್ಕೆ ನಮ್ಮ ಬಳಿ ಸಾಕಷ್ಟು ಮಾಹಿತಿ ಇದೆ. ಆದರೆ, ಸಭಾಪತಿ ಸ್ಥಾನದಲ್ಲಿ ಇರುವವರ ಬಗ್ಗೆ ಆರೋಪ ಹೊರಿಸಿ  ಆ ಸ್ಥಾನಕ್ಕೆ ಅಗೌರವ ತೋರುವುದು ಸರಿಯಲ್ಲ. ಹೀಗಾಗಿಯೇ ನಾವು ವಿಧಾನ ಪರಿಷತ್‌ ನಿಯಮ 165 ಪ್ರಕಾರ ಪದಚ್ಯುತಿಗೆ ನೋಟಿಸ್‌ ನೀಡುವಾಗಲೂ ಯಾವುದೇ ಆರೋಪಗಳನ್ನು ಸೇರಿಸಿಲ್ಲ. ಅವರು ನಮ್ಮ ಸರ್ಕಾರ ಬಂದ ಮೇಲೆ ನಾಲ್ಕು ವರ್ಷ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.  ಅವರು ಗೌರವಯುತವಾಗಿ ರಾಜೀನಾಮೆ ನೀಡಿದರೆ, ಆ ಸ್ಥಾನದ ಮರ್ಯಾದೆ ಉಳಿಯುತ್ತದೆ.  

ಈ ವಿಷಯದಲ್ಲಿ ನಿಮಗೆ ಜೆಡಿಎಸ್‌ ಬೆಂಬಲ ಬೇಕಲ್ಲವೇ?
ಹಾಗೇನಿಲ್ಲ, ನಾವು ನಮ್ಮದೇ ಆದ ತಂತ್ರಗಾರಿಕೆ ರೂಪಿಸಿದ್ದೇವೆ. ಆದರೂ ಜೆಡಿಎಸ್‌ ಕಾಂಗ್ರೆಸ್‌ ಬೆಂಬಲಿಸಲಿದೆ ಎಂಬ ವಿಶ್ವಾಸವಿದೆ.

ಹಿಂದೆಯೂ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆಯಲ್ಲಾ?
ಜೆಡಿಎಸ್‌ನವರು ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಜೊತೆ ಸೇರಿಕೊಂಡು ಆಡಳಿತ ನಡೆಸುತ್ತಿದ್ದಾರೆ. ನಾವು ಈಗ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇಲ್ಲಿಯೂ ಜಾತ್ಯತೀತ ಪಕ್ಷಗಳು ಒಟ್ಟಿಗೆ ಸೇರುತ್ತವೆ ಎಂಬ ನಂಬಿಕೆ ನಮಗಿದೆ. ಜೆಡಿಎಸ್‌ ಪಕ್ಷ ಕೋಮುವಾದಿ ಪಕ್ಷದೊಂದಿಗೆ ಇರುವುದಾದರೆ, ಅವರ ನಿಲುವು ಮತದಾನದ ಸಂದರ್ಭದಲ್ಲಿ ಗೊತ್ತಾಗುತ್ತದೆ. ಬಿಜೆಪಿ ಸಂಬಂಧ ಕಡೆದುಕೊಂಡು ಹೊರ ಬರಲು ಜೆಡಿಎಸ್‌ಗೂ ಇದು ಒಳ್ಳೆಯ ಅವಕಾಶ. ಅವರು ಜಾತ್ಯತೀತ ಶಕ್ತಿಗಳ ಜೊತೆಗೆ ಕೈ ಜೋಡಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ. 

ತಾನು ಬಿಜೆಪಿಯ ಜತೆ ನಿಲ್ಲುವುದಾಗಿ ಜೆಡಿಎಸ್‌ ಹೇಳಿದೆಯಲ್ಲಾ?
ರಾಜ್ಯದಲ್ಲಿ ಅವರೂ ಒಂದು ರಾಜಕೀಯ ಪಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ಅವರು ನಡೆದುಕೊಳ್ಳುತ್ತಾರೆ. ಆದರೆ, ಈ ವಿಷಯದಲ್ಲಿ ನಮ್ಮ ಜೊತೆಗೆ ನಿಲ್ತಾರೆ ಅನ್ನುವ ನಂಬಿಕೆ ಇದೆ. ಅವರ ನಡೆಯನ್ನೂ ರಾಜ್ಯದ ಜನತೆ ಗಮನಿಸುತ್ತಾರೆ. ದೇವೇಗೌಡರು ಕಾಂಗ್ರೆಸ್‌ ಸಭಾಪತಿಯಾಗಲು ಬೆಂಬಲ ಸೂಚಿಸಿದ್ದಾರೆ. ಆದರೆ, ಕುಮಾರಸ್ವಾಮಿ ಬೇರೆ ರಾಜಕೀಯ ಕಾರಣಗಳಿಗೆ ಕಾಂಗ್ರೆಸ್‌ನಿಂದ ದೂರ ಉಳಿದಿದ್ದಾರೆ. ಅವರಿಗೆ ಮುಖ್ಯಮಂತ್ರಿ ಆಗುವ ಬಯಕೆ ಇದೆ. ಬಿಜೆಪಿ ಜೊತೆ ಹೋದರೆ, ಸಿಎಂ ಆಗುತ್ತೇನೆ ಎಂಬ ನಂಬಿಕೆ ಅವರಿಗಿದೆ. ಹೀಗಾಗಿ ಅವರು ನಮ್ಮಿಂದ ದೂರ ಉಳಿಯುವ ಪ್ರಯತ್ನ ಮಾಡುತ್ತಿರಬಹುದು. ಆವರೊಂದಿಗೆ ನಮ್ಮ ನಾಯಕರು ಮಾತುಕತೆ ನಡೆಸುತ್ತಾರೆ. 

ನಿಮಗೆ ಸ್ಪಷ್ಟ ಬಹುಮತ ಇಲ್ಲ, ಆದರೂ ಇಂಥ ಪ್ರಯತ್ನ ಯಾಕೆ?
ಖಂಡಿತವಾಗಿಯೂ ಇಲ್ಲ. ನಮ್ಮ ಸದಸ್ಯರು ನಮ್ಮ ಜೊತೆಗಿ ದ್ದಾರೆ. ನಮ್ಮ ಪಕ್ಷದ ಸದಸ್ಯರು ಪಕ್ಷದ ಮಾತು ಮೀರಿ ನಡೆದುಕೊಂಡಾಗ ನಮಗೆ ಸೋಲಾಗುತ್ತದೆ. ಆದರೆ, ಈಗಾಗಲೇ ಎಲ್ಲರಿಗೂ ವಿಪ್‌ ಜಾರಿ ಮಾಡಲಾಗಿದೆ. ಎಲ್ಲರೂ ಕಡ್ಡಾಯವಾಗಿ ಕಲಾಪದಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ. ಮತದಾನ ನಡೆಯುವ ಸಂದರ್ಭದಲ್ಲಿ ಯಾರಾದರೂ ಗೈರಾದರೆ, ಅವರು ತಮ್ಮ ಸದಸ್ಯತ್ವ ಕಳೆದುಕೊಳ್ಳುತ್ತಾರೆ. 

ಅವಿಶ್ವಾಸ ನಿರ್ಣಯಕ್ಕೆ ನೋಟಿಸ್‌ ನೀಡಿರುವುದು ಪಕ್ಷದ ಕೆಲ ಸದಸ್ಯರಿಗೆ ಇಷ್ಟ ಇಲ್ಲವಂತೆ?
ಹಾಗೇನಿಲ್ಲ. ನೋಟಿಸ್‌ ನೀಡಿರುವುದು ನನ್ನೊಬ್ಬನ ತೀರ್ಮಾನ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್‌ ಅವರ ಸೂಚನೆಯ ಮೇರೆಗೆ ನಾವು ನೋಟಿಸ್‌ ನೀಡಿದ್ದೇವೆ. ಇದರಲ್ಲಿ ಯಾರಿಗೂ ಅಸಮಾಧಾನ ಇಲ್ಲ. 

ಕಾಂಗ್ರೆಸ್‌ಗೆ ಪಕ್ಷೇತರರು ಬೆಂಬಲ ನೀಡ್ತಾರಾ?
ನಮಗೆ ಜೆಡಿಎಸ್‌ ಬೆಂಬಲ ಇಲ್ಲದಿದ್ದರೂ, ಎರಡು ಮತಗಳ ಕೊರತೆ ಇದೆ. ಅದಕ್ಕಾಗಿ ಒಂದು ರಾಜಕೀಯ ಪಕ್ಷವಾಗಿ ನಾವು ಏನು ಲೆಕ್ಕಾಚಾರ ಹಾಕಬೇಕೋ ಅದನ್ನು ಮಾಡುತ್ತಿದ್ದೇವೆ. ಐವರಲ್ಲಿ ಮೂವರು ಪಕ್ಷೇತರರು ನಮ್ಮ ಪಕ್ಷದ ಸಹ ಸದಸ್ಯರಾಗಿದ್ದಾರೆ. ಉಳಿದ ಇಬ್ಬರು ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಎಂ.ಡಿ. ಲಕ್ಷ್ಮೀ ನಾರಾಯಣ ಅವರನ್ನು ಬಿಜೆಪಿಯವರು ಕರೆದು ಅವರ ವಿರುದ್ಧ ಕೇಸ್‌ ಇದೆ ಅಂತ ಹೇಳಿ, ಧಮಕಿ ಹಾಕುತ್ತಿದ್ದಾರೆ ಅಂತ ಹೇಳ್ತಿದಾರೆ. ಆದರೆ, ಅವರು ಕಾಂಗ್ರೆಸ್‌ ಜೊತೆಗೆ ನಿಲ್ತಾರೆ ಎನ್ನುವ ವಿಶ್ವಾಸ ನನಗಿದೆ.  ಪಕ್ಷೇತರಷ್ಟೇ ಏಕೆ, ಜೆಡಿಎಸ್‌ ಹಾಗೂ ಬಿಜೆಪಿಯ ಕೆಲ ಶಾಸಕರೂ ನಮ್ಮ 
ಜೊತೆ ಇದ್ದಾರೆ. 

ಭತ್ಯೆ ವಿಚಾರದಲ್ಲಿ ನೋಟಿಸ್‌ ಕೊಟ್ರಾ ಅಂತ ಶಂಕರಮೂರ್ತಿ ವಿಚಾರದಲ್ಲಿ ಸಿಟ್ಟಾ?
ಕಾಂಗ್ರೆಸ್‌ ಶಾಸಕರಿಗೆ ನೋಟಿಸ್‌ ಕೊಟ್ಟಿರುವುದಕ್ಕೂ ನಾವು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಭತ್ಯೆ ವಿಚಾರದಲ್ಲಿ ವಿವರಣೆ ಕೇಳಿದ್ದಾರೆ ಅದಕ್ಕೆ ಸೂಕ್ತ ಉತ್ತರ ನೀಡುತ್ತಾರೆ. ನಮ್ಮ ಶಾಸಕರು ಹುದ್ದೆ ಕಳೆದುಕೊಳ್ಳುವಂತಹ ಅಪರಾಧ ಮಾಡಿಲ್ಲ. ಆ ವಿಷಯದಲ್ಲಿ ಶಂಕರಮೂರ್ತಿ ವಿರುದ್ಧ ದ್ವೇಷ ಸಾಧಿಸುವ ಪ್ರಮೇಯವೇ ಬರುವುದಿಲ್ಲ.

ಕಾಂಗ್ರೆಸ್‌ ಪಕ್ಷೇತರರ ಖರೀದಿಗೆ ಮುಂದಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ...
ಈ ಚುನಾವಣೆಯಲ್ಲಿ ಶಾಸಕರನ್ನು ಹಣ ಕೊಟ್ಟು ಖರೀದಿ ಮಾಡುವ ಅವಶ್ಯಕತೆಯಿಲ್ಲ. ಇದರಲ್ಲಿ ಕಾಂಗ್ರೆಸ್‌ ಪಕ್ಷ ಯಾವುದೇ ರೀತಿಯ ಕುದುರೆ ವ್ಯಾಪಾರ ನಡೆಸುತ್ತಿಲ್ಲ. ಇದು ನೈತಿಕತೆಯ ಪ್ರಶ್ನೆ. ನಾವು ಯಾವುದೇ ಪ್ರತಿಷ್ಠೆಗಾಗಿ 
ಇದನ್ನು ಮಾಡುತ್ತಿಲ್ಲ. 

ಈ ಪ್ರಯತ್ನದಲ್ಲಿ ಸೋತರೆ ಮುಖಭಂಗ ಆಗೋದಿಲ್ಲವೇ?
ಈ ವಿಷಯದಲ್ಲಿ ನಮಗೇನು ಮುಖಭಂಗ ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ನಮಗೆ ಅಗತ್ಯವಿರುವ ಬಹುಮತ ಪಡೆಯುವ ವಿಶ್ವಾಸ ಇದೆ. ಜೆಡಿಎಸ್‌ನಲ್ಲಿ ದಿನಕ್ಕೊಂದು ಲೆಕ್ಕಾಚಾರ ನಡೆಯುತ್ತಿರುವುದರಿಂದ ಕೆಲವರು ಸದನಕ್ಕೆ ಗೈರು ಹಾಜರಾಗುವ ಮೂಲಕ ನಮಗೆ ಬೆಂಬಲ ನೀಡುವ ವಿಶ್ವಾಸವೂ ಇದೆ. 

ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡ್ತಿದೀರಿ ಅನಿಸುವುದಿಲ್ಲವೇ?
ನಾವು ಕಾರಣ ಇಲ್ಲದೇ ಅವರನ್ನು ಕೆಳಗಿಳಿಸುತ್ತಿಲ್ಲ. ನಮ್ಮ ಸಂಖ್ಯಾಬಲದ ಆಧಾರದಲ್ಲಿ ನಮ್ಮ ಪಕ್ಷಕ್ಕೆ ಬರುವ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಹಿಂದೆ ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ, ಜೆಡಿಎಸ್‌ನ ಪುಟ್ಟಣ್ಣ ಅವರನ್ನು  ಉಪ ಸಭಾಪತಿ ಸ್ಥಾನದಿಂದ ಕೆಳಗಿಳಿಸಿ ವಿಮಲಾ ಗೌಡ ಅವರನ್ನು ಉಪ ಸಭಾಪತಿ ಮಾಡಿದ್ದರು. ಅದುವರೆಗೂ ವಿರೋಧ ಪಕ್ಷದಲ್ಲಿರುವವರೇ ಉಪ ಸಭಾಪತಿಯಾಗುತ್ತಿದ್ದ ಸಂಪ್ರದಾಯವಿತ್ತು. ಹೀಗಾಗಿ ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. 

ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ಎಸ್‌.ಆರ್‌. ಪಾಟೀಲ ದೂರ ಉಳಿದಿದ್ದಾರಂತೆ?
ಹಾಗೇನಿಲ್ಲಾ. ಸದನದಲ್ಲಿ ವಿಷಯ ಪ್ರಸ್ತಾಪಿಸುವ ಸಂದರ್ಭದಲ್ಲಿ ಅವರು ಸದನದಲ್ಲಿ ಹಾಜರಿರಲಿಲ್ಲ ಅಷ್ಟೇ, ನಮ್ಮ ಸಚಿವರಾದ ಎಂ.ಆರ್‌. ಸೀತಾರಾಂ ಕೂಡ ಹಾಜರಿರಲಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಈ ಬೆಳವಣಿಗೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾರಿಗೂ ಬೇಸರ ಇಲ್ಲ.  

ಸದನಲ್ಲಿ ಸದಸ್ಯರ ಹಾಜರಾತಿ ಕಡಿಮೆ ಆಗ್ತಿದೆ...
ಹೌದು. ಇತ್ತೀಚೆಗೆ ಶಾಸಕರು ಸದನಕ್ಕೆ ಹಾಜರಾಗುವುದಕ್ಕೇ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಕೆಳ ಮನೆಗೆ ಹೋಲಿಸಿದರೆ, ನಮ್ಮ ಹಾಜರಾತಿ ಸಂಖ್ಯೆ ಉತ್ತಮವಾಗಿದೆ. ಬಹುತೇಕರಿಗೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ಬಂದಾಗ ಮಾತ್ರ ಸದನಕ್ಕೆ ಹಾಜರಾದರೆ ಸಾಕು ಎನ್ನುವ ಮನೋಭಾವ ಬೆಳೆದಿದೆ. ಅಲ್ಲದೇ, ಬೇರೆಯವರ ವಿಷಯ ಬಂದಾಗ ನಾವು ಚರ್ಚಿಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸದನಕ್ಕೆ ಬಾರದಿದ್ದರೂ, ಮಂತ್ರಿಗಳ ಬಳಿ ಹೋದರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇಲ್ಲಿ 
ಕುಳಿತು ಆಗೋದೇನಿದೆ ಅಂದುಕೊಳ್ಳುತ್ತಾರೆ. ಸದಸ್ಯರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವದಷ್ಟೇ ಅಲ್ಲ. ಮುಖ್ಯವಾಗಿ ಕಾನೂನು ಮಾಡುವ ಜವಾಬ್ದಾರಿಯೂ ಇದೆ. ಹಾಜರಾತಿ ಹೆಚ್ಚಿಸಲು ಪ್ರಶ್ನೋತ್ತರ ಕಲಾಪದಲ್ಲಿಯೂ ಎಲ್ಲ ಸದಸ್ಯರಿಗೆ ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗೆ ಮನವಿ ಮಾಡಿದ್ದೇನೆ. 

ಮೇಲ್ಮನೆ ಚಿಂತಕರ ಚಾವಡಿ ಎಂಬ ಮಾತಿತ್ತು. ಈಗಲೂ ಅದೇ ಗೌರವ ಉಳಿಸಿಕೊಂಡಿದೆಯಾ ?
ಸರ್ಕಾರದ ಮುಖ್ಯ ಸಚೇತಕನಾಗಿ ಪರಿಷತ್‌ ತನ್ನ ಗೌರವವನ್ನು ಉಳಿಸಿಕೊಂಡು ಹೋಗಬೇಕೆಂಬ ಹಂಬಲ ನನ್ನದು. ಅದೇ ರೀತಿ ಅದು ಮುಂದುವರಿಯಲು ಹೊಸ ಹೊಸ ವಿಷಯಗಳ ಮೇಲೆ ಚರ್ಚೆ ನಡೆಯಬೇಕು. ಹೊಸ ಸದಸ್ಯರು ಎಲ್ಲರೂ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಕಾರಣಕ್ಕೆ ಹಿಂದಿನ ಸಾಲಿನ ಸದಸ್ಯರಿಗೂ ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗೆ ಮನವಿ ಮಾಡಿಕೊಂಡಿದ್ದೇನೆ. ಕೇವಲ ಮುಂದಿನ ಸಾಲಿನ ನಾಯಕರು ಮಾತನಾಡಿ ಹೋಗುವುದರಿಂದ ಹೊಸ ಸದಸ್ಯರಿಗೆ ಸದನದ ಬಗ್ಗೆ ಬೇಸರ ಮೂಡುತ್ತದೆ. ಹೀಗಾಗಿ ಅವರಿಗೂ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದರೆ, ಅವರೂ ಹೊಸ ವಿಷಯಗಳ ಮೇಲೆ ಚರ್ಚೆ ಮಾಡುತ್ತಾರೆ. ಸದನಕ್ಕೂ ಉಪಯುಕ್ತ ಮಾಹಿತಿ ಬರುತ್ತವೆ.

ನಮ್ಮಲ್ಲೂ ಅರ್ಹರಿದ್ದಾರೆ
ನಮ್ಮಲ್ಲಿಯೂ ಮೋಟಮ್ಮ,  ಎಚ್‌.ಎಂ. ರೇವಣ್ಣ, ಕೆ.ಸಿ. ಕೊಂಡಯ್ಯ ಸೇರಿದಂತೆ ಅನೇಕ ಸಮರ್ಥ ನಾಯಕರಿದ್ದಾರೆ. ಹೀಗಾಗಿ ಯಾರು ಸಭಾಪತಿ ಆಗಬೇಕು ಅನ್ನುವುದನ್ನು ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಈಗ ನಮ್ಮ ಮುಂದಿರುವುದು ಸಭಾಪತಿಯನ್ನು ಕೆಳಗಿಳಿಸುವುದಷ್ಟೇ.  

ಸಂದರ್ಶನ ಶಂಕರ ಪಾಗೋಜಿ 

Trending videos

Back to Top