CONNECT WITH US  

ನೀವು ಅಲ್ಪಸಂಖ್ಯಾಕರನ್ನು ಓಲೈಸುತ್ತಿದ್ದೀರಂತೆ?

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕಲ್ಲಡ್ಕದಲ್ಲಿ  ಇತ್ತೀಚೆಗೆ ನಡೆದ ಅಹಿತಕರ ಘಟನೆ ಆ ಭಾಗದಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಇದರ ನಡುವೆ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ  ಭಟ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ 307 ಪ್ರಕರಣ ದಾಖಲಿಸಿ ಬಂಧಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಆರೋಪ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. 
ನಿಜಕ್ಕೂ ಅಲ್ಲಿ ನಡೆಯುತ್ತಿರುವುದೇನು? ಎಂಬುದರ ಬಗ್ಗೆ ರಮಾನಾಥ ರೈ ಹಾಗೂ ಕಲ್ಲಡ್ಕ ಪ್ರಭಾಕರ ಭಟ್‌ ಜತೆ ನೇರಾ-ನೇರ ಮಾತಿಗಿಳಿದಾಗ...

- ಏನಾಗುತ್ತಿದೆ ಕಲ್ಲಡ್ಕದಲ್ಲಿ?
ನಾನು ತುಂಬಾ ನೋವಿನಲ್ಲಿದ್ದೇನೆ. ಎಲ್ಲ ಧರ್ಮದವರೂ ಶಾಂತಿಯಿಂದ ಬಾಳ್ವೆ ನಡೆಸಬೇಕು, ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂಬ ಮೂಲಮಂತ್ರದೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿರುವ ನನ್ನ ಮತ ಕ್ಷೇತ್ರದಲ್ಲಿ ನಡೆಯುತ್ತಿರುವ ಘಟನಾವಳಿಗಳು ತೀರಾ ಆಘಾತ ತಂದಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್‌ ಕರೋಪಾಡಿ ಕೊಲೆ ಮರೆಯುವ ಮುನ್ನ ಬೆಂಜನಪದವು ಬಳಿ ಮತ್ತೂಬ್ಬ ಯುವಕ ಅಶ್ರಫ್ ಎಂಬುವನ ಕೊಲೆಯಾಗಿದೆ. ಯಾರದ್ದೇ ಆಗಲಿ, ಕೊಲೆ ಸಮರ್ಥನೀಯವಲ್ಲ, ಇದು ನನ್ನನ್ನು ಭಾದಿಸುತ್ತಿದೆ.

- ಕಲ್ಲಡ್ಕದ ವಿದ್ಯಮಾನಗಳಿಗೆ ನಿಜವಾಗಿಯೂ ಕಾರಣ ಏನು?
ಚುನಾವಣೆ. ವಿಧಾನಸಭೆ ಚುನಾವಣೆ ಹತ್ತಿರ ಬಂತಲ್ಲವೇ? ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋಮು ಗಲಭೆ ಸೃಷ್ಟಿಸುವ ಹುನ್ನಾರ. ಬಂಟ್ವಾಳದಲ್ಲಿ ನಾನು ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ, ಅಭಿವೃದ್ಧಿಯಲ್ಲಿ ಕ್ಷೇತ್ರ ಹಿಂದೆ ಬಿದ್ದಿಲ್ಲ, ನನ್ನ ವಿರುದ್ಧ ಪಿತೂರಿ ಮಾಡಲು ಯಾವುದೇ ವಿಷಯ ಸಿಗುವುದಿಲ್ಲ, ಹೀಗಾಗಿ, ಕೋಮು ಸಾಮರಸ್ಯ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.

- ಇದರ ಹಿಂದೆ ಯಾರಿದ್ದಾರೆ?
ಸಂಘ ಪರಿವಾರ, ಪ್ರಚೋದನಾಕಾರಿ ಭಾಷಣ

- ಸಂಘ ಪರಿವಾರ ಎಂದರೆ ಸಾಮೂಹಿಕವಾಗಿ ಎಲ್ಲರೂ ಸೇರುತ್ತಾರಲ್ಲಾ?
ಕಲ್ಲಡ್ಕದಲ್ಲಿ ಸಂಘ ಪರಿವಾರ ಎಂದರೆ ಪ್ರಭಾಕರ ಭಟ್‌ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

- ಪ್ರಭಾಕರ ಭಟ್‌ ಪ್ರಚೋದನೆ ಮಾಡುತ್ತಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಬಲವಾದ ಸಾಕ್ಷಿ ಏನು?
ಅವರ ಪ್ರಚೋದನಾಕಾರಿ ಭಾಷಣ. ಜಲೀಲ್‌ ಕರೋಪಾಡಿ ಹತ್ಯೆ ಆರೋಪಿ ಮಿಥುನ್‌ ಪರ ವಕಾಲತ್ತು. ಈ ಹಿಂದೆ ನಜೀರ್‌ ಹಾಗೂ ಮುಸ್ಲಿಂ ಎಂದು ತಿಳಿದು ಹಿಂದೂ ಯುವಕ ಹರೀಶ್‌ ಪೂಜಾರಿ ಹತ್ಯೆಯಲ್ಲೂ ಮಿಥುನ್‌ ಆರೋಪಿ. ಇಷ್ಟಾದರೂ ಪ್ರಭಾಕರ ಭಟ್‌ ಅವರು ಮೇಲೆ ಸಂಭಾವಿತರಂತೆ ನಟಿಸಿ ಮಿಥುನ್‌ ಪರ ಮಾತನಾಡುತ್ತಾರೆ. ಜಲೀಲ್‌ ಕೊಲೆಯಾದ ಮರುದಿನ ಆತನ ಪರ ಸುದ್ದಿಗೋಷ್ಠಿ ನಡೆಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

- ನೀವು ಪ್ರಭಾಕರ ಭಟ್‌ ಅವರನ್ನು ಐಪಿಸಿ ಸೆಕ್ಷನ್‌ 307 ಪ್ರಕರಣ ದಾಖಲಿಸಿ ಬಂಧಿಸಿ ಎಂದು ಸೂಚಿಸಿದ್ದು ನಿಜವಾ?
ನಾನು ಅವರೊಬ್ಬರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳಿದ್ದಲ್ಲ. ಅವರನ್ನೂ ಸೇರಿದಂತೆ ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಕಾನೂನು-ಸುವ್ಯವಸ್ಥೆ ಕಾಪಾಡುವುದು ನನ್ನ ಹೊಣೆಗಾರಿಕೆಯಲ್ಲವೇನು? ಪ್ರಾರಂಭದಲ್ಲೇ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವೇಚನೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.

- ಹಾಗಾದರೆ, ಅಲ್ಲಿ ಪೊಲೀಸ್‌ ವೈಫ‌ಲ್ಯ ಇತ್ತಾ?
ಈಗ ನಾನು ಆ ಬಗ್ಗೆ ಹೆಚ್ಚೇನು ಮಾತನಾಡ ಬಯಸುವುದಿಲ್ಲ.

- ಪ್ರಭಾಕರ  ಭಟ್‌ ಅವರು ಪುಕ್ಕಲ ಎಂದಿದ್ದು ಹೌದಾ?
ಪುಕ್ಕಲ ಅಲ್ಲದಿದ್ದರೆ ಮತ್ತೇನು? ದುರ್ಬಲ ಹಿಂದುಳಿದ ವರ್ಗದ ಯುವಕರಿಗೆ ಉನ್ಮಾದ ತುಂಬಿ ಅಮಾಯಕರ ಪ್ರಾಣ ಬಲಿತೆಗೆದುಕೊಳ್ಳುತ್ತಿರುವವರನ್ನು ಇನ್ನೇನೆಂದು ಕರೆಯಬೇಕು. ಆತನ ಕುಟುಂಬದವರ್ಯಾರಾದರೂ ಸಂಕಷ್ಟಕ್ಕೆ ಸಿಲುಕಿದ್ದಾರಾ? ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಜಾಯಮಾನ ಅವರದು. ನನ್ನ ಜಿಲ್ಲೆಯ ಅಮಾಯಕ ಹಿಂದುಳಿದ ವರ್ಗದ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ಇದು ನನಗೆ ಅತ್ಯಂತ ನೋವು ತರುವ ವಿಚಾರ. ವಿದ್ಯೆ, ಉದ್ಯೋಗದ ನಂತರ ಉತ್ತಮ ಜೀವನ ನಡೆಸಬೇಕಾದ ಯುವಕರು ಬಲಿಪಶು ಆಗುತ್ತಿದ್ದಾರೆ.  

- ಪ್ರಭಾಕರ ಭಟ್‌ ಹಾಗೂ ನಿಮ್ಮ ನಡುವೆ ವೈಮನಸ್ಯಕ್ಕೆ ಕಾರಣ ಏನು?
ನೋಡಿ, ನಾನು ಜೀವನದಲ್ಲಿ ಯಾರನ್ನೂ ದ್ವೇಷಿಸಿದವನಲ್ಲ. ಎಲ್ಲರನ್ನೂ ಪ್ರೀತಿಸಿದವನು. ವೈಯಕ್ತಿಕವಾಗಿ ನನಗೇನು ಅವರ ಬಗ್ಗೆ ದ್ವೇಷ ಇಲ್ಲ. ಆದರೆ, ಅವರ ಪ್ರಚೋದನಾಕಾರಿ ಭಾಷಣದಿಂದ ಕೋಮು ಸಾಮರಸ್ಯ ಹಾಳಾಗುತ್ತಿದೆ. ಅದರ ಬಗ್ಗೆಯಷ್ಟೇ ನನ್ನ ವಿರೋಧ. ಅವರು ಸಂಭಾವಿತ, ಸಭ್ಯರಂತೆ ಮಾತನಾಡುತ್ತಾರೆ, ಆದರೆ, ಮಾಡುವುದೆಲ್ಲಾ ಪ್ರಚೋದನೆಯ ಕೆಲಸ. ಹಿಂದೊಮ್ಮೆ ಇಸ್ಮಾಯಿಲ್‌ ಎಂಬುವರ ಕೊಲೆ ಪ್ರಕರಣದಲ್ಲಿ ಅವರೂ ಆರೋಪಿಯಾಗಿದ್ದರು. ಇದೀಗ ಖುಲಾಸೆಯಾಗಿರಬಹುದು. ಆದರೆ, ಅವರ ಹಿನ್ನೆಲೆ ಏನು ಎಂಬುದು ಆ ಭಾಗದ ಜನರಿಗೆ ಗೊತ್ತಿದೆ. 

- ಆಯ್ತು, ನಿಮ್ಮ ಮೇಲೆ ಯಾಕೆ ಪ್ರಭಾಕರ ಭಟ್‌ ಅವರಿಗೆ ಕೋಪ?
ಅದನ್ನು ನೀವು ಅವರಿಗೆ ಕೇಳಬೇಕು. ಬಂಟ್ವಾಳದಲ್ಲಿ ಕೇಳಿ ರಮಾನಾಥ ರೈ ಏನು ಅಂತ ಹೇಳ್ತಾರೆ. ಎಪಿಎಂಸಿ, ಪಿಎಲ್‌ಡಿ ಬ್ಯಾಂಕ್‌ನಿಂದ ಹಿಡಿದು ಜಿಲ್ಲಾ ಪಂಚಾಯಿತಿವರೆಗೆ ಕಾಂಗ್ರೆಸ್‌ ಬಲ ಇದೆ. ಪ್ರಭಾಕರ ಭಟ್‌ ಅವರ ಕಲ್ಲಡ್ಕದಲ್ಲಿ ಅವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿ ಮಾಡುವ ಜನ ಇದ್ದಾರೆ. ಅಲ್ಪಸಂಖ್ಯಾಕ, ಬಹುಸಂಖ್ಯಾತ ಮತೀಯವಾದಿಗಳ ವಿರೋಧದ ನಡುವೆಯೂ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇನೆ. ಜನ ನನ್ನ ಕೈ ಹಿಡಿದಿದ್ದಾರೆ. ಯಾಕೆಂದರೆ ಅವರಿಗೆ ನಾನು ಏನು ಎನ್ನುವುದು ಗೊತ್ತು. ನಾನು ಸುಳ್ಳು ಹೇಳಲು ಹೋಗುವುದಿಲ್ಲ.

- ನೀವು ಅಲ್ಪಸಂಖ್ಯಾಕರನ್ನು ಓಲೈಸುತ್ತಿದ್ದೀರಂತೆ?
ಭಾರತೀಯ ಜನತಾ ಪಾರ್ಟಿಯವರು  ಸುಳ್ಳು ಹೇಳುವುದನ್ನೇ ಕಸುಬು ಮಾಡಿಕೊಂಡಿದ್ದಾರೆ. ಅಮಾಯಕರಿಂದ ಅಮಾಯಕರನ್ನು ಹತ್ಯೆ ಮಾಡಿಸುವುದು ನ್ಯಾಯವಾ? ನಾನು ಮೊದಲು ಮನುಷ್ಯ. ಯಾವುದೇ ಧರ್ಮದವರ ಸಾವು-ನೋವು ನೋಡಿ ಆನಂದಿಸುವ ವಿಕೃತ ವ್ಯಕ್ತಿ ನಾನಲ್ಲ. ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಮತ ಕ್ಷೇತ್ರದಲ್ಲಿ ಅಲ್ಪಸಂಖ್ಯಾಕರ ಮತೀಯ ಸಂಘಟನೆಗಳು, ಬಹುಸಂಖ್ಯಾತ ಮತೀಯ ಸಂಘಟನೆಗಳು ಎರಡೂ ನನ್ನ ವಿರುದ್ಧ ಇವೆ. ಎರಡನ್ನೂ ನಾನು ವಿರೋಧಿಸುವವನು. ನಾನು ಎದೆಮುಟ್ಟಿಕೊಂಡು ಹೇಳುತ್ತೇನೆ ನೂರಕ್ಕೆ ನೂರರಷ್ಟು ಸೆಕ್ಯುಲರ್‌ ಮನುಷ್ಯ.

- ಈ ಹಿಂದೆ ಸಂಘಪರಿವಾರಕ್ಕೆ ಸೇರಿದವರು ಕೊಲೆ ಆದಾಗ ಮೌನ ವಹಿಸಿದ್ದರು ಎಂದು ಬಿಜೆಪಿಯವರು ದೂರುತ್ತಾರಲ್ಲಾ?
ಯಾವುದಾದರೂ ಘಟನೆ ಇದ್ದರೆ ಹೇಳಲಿ. ನನಗೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ಭೇದ ಭಾವವಿಲ್ಲ. ನಾನು ನನ್ನ ಜೀವನದಲ್ಲಿ ತಪ್ಪು ಮಾಡಿದವರ ಪರ ಇದ್ದರೆ ಅಥವಾ ತಪ್ಪು ಮಾಡಿದವರಿಗೆ ರಕ್ಷಣೆ ಕೊಟ್ಟ ಒಂದೇ ಒಂದು ಉದಾಹರಣೆ ಕೊಟ್ಟರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನಾನು ಕ್ಷೇತ್ರದಲ್ಲಿದ್ದರೆ ಬೆಳಗ್ಗೆಯಿಂದ ಸಂಜೆವರೆಗೆ ಪ್ರತಿ ಮನೆ ಕಾಲನಿಗೆ ಹೋಗುತ್ತೇನೆ. ಆದರೆ, ಎಂದೂ ಜಾತಿ, ಧರ್ಮ ನೋಡಿದವನಲ್ಲ. ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ. ಆದರೆ, ಬಿಜೆಪಿ, ಸಂಘ ಪರಿವಾರದವರಿಗೆ ಏನೂ ಮಾಡಲು ಕೆಲಸ ಇಲ್ಲ, ಅಮಾಯಕ ಹುಡುಗರಿಗೆ ಇಲ್ಲದ್ದು ತಲೆ ತುಂಬುತ್ತಾರೆ.

- ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿನಾ ಒತ್ತಡ ತಂದು ವರ್ಗಾವಣೆ ಮಾಡಿÕದ್ರಂತೆ?
ಅದು ಗೃಹ ಇಲಾಖೆಗೆ ಬಿಟ್ಟದ್ದು. ನನ್ನದೇನೂ ಪಾತ್ರ ಇಲ್ಲ.

- ಪ್ರವಾಸಿ ಮಂದಿರದಲ್ಲಿ ಆದದ್ದಾದರೂ ಏನು?
ಅದು ಕಲ್ಲಡ್ಕದ ಕೆಲವು ಮುಸ್ಲಿಂ ಯುವಕರು ಬಂದಿದ್ದರು. ಪೊಲೀಸರು ಮನೆಗಳಲ್ಲಿರುವ ಹಿರಿಯರನ್ನು ಬಂಧಿಸುತ್ತಿದ್ದಾರೆ ಎಂದು ಹೇಳಿದರು. ಹೀಗಾಗಿ, ನಾನು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದೆ. ಅವರು ಹತ್ತಿರದಲ್ಲೇ ಇದ್ದೇನೆ, ಬರ್ತೇನೆ ಅಂದ್ರು.  

ಅವರು ಬಂದಾಗ ನಾನು ಯುವಕರನ್ನು ಹೊರಗೆ ಕಳುಹಿಸಿದೆ. ತಪ್ಪು ಯಾರೇ ಮಾಡಿದ್ದರೂ ಕ್ರಮ ಕೈಗೊಳ್ಳಿ, ನಾನು ತಪ್ಪು ಮಾಡಿದವರ ಪರ ಎಂದೂ ನಿಲ್ಲುವುದಿಲ್ಲ. ಆದರೆ, ಅಮಾಯಕರನ್ನು ಬಂಧಿಸಬೇಡಿ. ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಎಂದಷ್ಟೇ ಹೇಳಿದೆ. ಬೇಕಾದರೆ ವೀಡಿಯೋ ಸಂಪೂರ್ಣ ವೀಕ್ಷಿಸಿದರೆ ಅದು ಗೊತ್ತಾಗುತ್ತದೆ. ಆದರೆ, ಅರ್ಧಂಬರ್ಧ ವೀಡಿಯೋ ತುಣುಕು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಅಪಪ್ರಚಾರ ಮಾಡಲಾಗುತ್ತಿದೆ.

- ಸಂದರ್ಶನ: ಎಸ್‌.ಲಕ್ಷ್ಮೀನಾರಾಯಣ 


Trending videos

Back to Top