CONNECT WITH US  

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಸಿಎಂ ಯಾರು?

ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ 2013ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ಡಾ.ಜಿ.ಪರಮೇಶ್ವರ್‌ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರಿಂದ ಮುಖ್ಯಮಂತ್ರಿ ಹುದ್ದೆ ಸ್ಪರ್ಧೆಯಿಂದ ದೂರ ಉಳಿಯುವಂತಾಗಿತ್ತು. ಇದೀಗ ಮತ್ತೆ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುತ್ತಿರುವ ಅವರು ಸತತ ಆರು ವರ್ಷದಿಂದ ಪಕ್ಷ ಮುನ್ನಡೆಸಿಕೊಂಡು ಬರುತ್ತಿರುವ ದಾಖಲೆ ನಿರ್ಮಿಸಿದ್ದಾರೆ. 2013ರಂತೆ 2018ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಅವರ ಅಧ್ಯಕ್ಷತೆಯಲ್ಲೇ ಚುನಾವಣೆ ಎದುರಿಸಲಿದೆ. ಪರಮೇಶ್ವರ್‌ ಅವರು ಚುನಾವಣಾ ಸಿದ್ಧತೆ, ತಮ್ಮ ಮುಂದಿರುವ ಸವಾಲುಗಳ ಕುರಿತು ಉದಯವಾಣಿಯೊಂದಿಗೆ  ನೇರಾನೇರ ಮಾತಿಗಿಳಿದಾಗ..

ಸಾಕಷ್ಟು ಸ್ಪರ್ಧೆ ಮಧ್ಯೆಯೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿರುವುದಕ್ಕೆ ಏನನ್ನಿಸುತ್ತಿದೆ?
ಇದು ಮತ್ತೂಂದು ಸವಾಲು, ಆದರೆ, ಈ ಬಾರಿಯ ಸವಾಲು 2013ಕ್ಕಿಂತ ಭಿನ್ನವಾಗಿದ್ದು, ಇಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಲಾಭ ಏನೆಂದರೆ, ನಮ್ಮ ಸರಕಾರ ಐದು ವರ್ಷ ಯಶಸ್ವಿಯಾಗಿ ಅಧಿಕಾರ ನಡೆಸಿ ಉತ್ತಮ ಆಡಳಿತ ಕೊಟ್ಟಿದೆ. ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಆಗಿದೆ. ಜನರಲ್ಲಿ ಸರಕಾರದ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ, ಉತ್ತಮ ಆಡಳಿತ ನೀಡಿದ ಸಮಾಧಾನ ಇದೆ. ಬಿಜೆಪಿ ಸರಕಾರದ ಹಾಗೆ ನಮ್ಮಲ್ಲಿ ಒಳ ಜಗಳ, ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿ ಅಧಿಕಾರದಲ್ಲಿ ಮೂರು ಜನ ಮುಖ್ಯಮಂತ್ರಿಗಳಾದರು. ನಮ್ಮಲ್ಲಿ ಒಬ್ಬರೇ ಮುಖ್ಯಮಂತ್ರಿ. ಹೀಗಾಗಿ ಉತ್ತಮ ಆಡಳಿತ ನೀಡಲು ಅನುಕೂಲ ಆಗಿದೆ.

ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಎದುರಾಗುವುದಿಲ್ಲವೇ?
ಸರಕಾರ ವಿಪರೀತ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ತೊಡಗಿಕೊಂಡಾಗ ಆಡಳಿತ ವಿರೋಧಿ ಅಲೆ ಬರುತ್ತದೆ. ನಮ್ಮ ಸರಕಾರದಲ್ಲಿ ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ. ಯಾರ ವಿರುದ್ಧವೂ ಭ್ರಷ್ಟಾಚಾರ ಸಾಬೀತಾಗಿಲ್ಲ. ಜನರು ಸ್ಟೀಲ್‌ ಬ್ರಿಡ್ಜ್ ಯೋಜನೆ ಬೇಡ ಎಂದಾಗ ಅವರ ಭಾವನೆಗೆ ಸ್ಪಂದಿಸಿ ಹಿಂದೆ ಸರಿದಿದ್ದೇವೆ. ಅಂದರೆ, ಜನರ ಇಚ್ಛೆಗೆ ತಕ್ಕಂತೆ ಸರಕಾರ ನಡೆದಿದೆ ಎಂಬುದು ಇದರಿಂದ ಸಾಬೀತಾಗಿದೆ. 

ನಿಮ್ಮದು ಕೇವಲ ಅಹಿಂದ ಸರಕಾರ ಎಂಬ ಆರೋಪ ಇದೆಯಲ್ಲಾ?
ಅದು ಕೇವಲ ರಾಜಕೀಯ ವಿರೋಧಿಗಳು ಹೇಳುವ ಮಾತು. ನಮ್ಮ ಸರಕಾರ ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಸಾಲ ಮನ್ನಾ ಯೋಜನೆಗಳು ಯಾವುದೂ ಜಾತಿ ಆಧಾರದಲ್ಲಿ ಜಾರಿಗೆ ತಂದ ಯೋಜನೆಗಳಲ್ಲ. ಕೆಲವು ಇಲಾಖೆಗಳಲ್ಲಿ ನಿರ್ಧಿಷ್ಠ ಸಮುದಾಯಗಳಿಗೆ ಅನುಕೂಲವಾಗುವ ಯೋಜನೆ ಜಾರಿಗೊಳಿಸಬೇಕಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರ ಪರ, ಅಲ್ಪಸಂಖ್ಯಾತರ ಇಲಾಖೆಯಿಂದ ಅಲ್ಪಸಂಖ್ಯಾತರಿಗೆ ಅನುಕೂಲವಾಗುವ ಯೋಜನೆಗಳನ್ನೇ ಜಾರಿಗೆ ತರಬೇಕು. ಸಮಾಜದಲ್ಲಿ ತುಳಿತ ಕ್ಕೊಳಗಾದವರನ್ನು ಮೇಲೆತ್ತಬೇಕು ಎಂದು ಸಂವಿಧಾನ ಹೇಳುತ್ತದೆ. ಅದರಂತೆ ನಡೆದುಕೊಂಡರೆ ಅದು ಅಹಿಂದ ಸರಕಾರ ಹೇಗಾಗುತ್ತದೆ?

ಕಾಂಗ್ರೆಸ್‌ನಲ್ಲಿ ಮೇಲ್ಜಾತಿಯವರನ್ನು ಕಡೆಗಣಿಸ ಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿದೆ ?
ಯಾವುದೇ ಸಮುದಾಯವನ್ನೂ ಕಡೆಗಣಿಸಿಲ್ಲ. ಹಿಂದಿನ ಚುನಾವಣೆಯಲ್ಲಿ 43 ಜನ ಲಿಂಗಾಯತರಿಗೆ ಟಿಕೆಟ್‌ ನೀಡಿದ್ದು, 23 ಮಂದಿ ಆಯ್ಕೆಯಾಗಿದ್ದಾರೆ. 19 ಜನ ಒಕ್ಕಲಿಗರು ಶಾಸಕರಾಗಿದ್ದಾರೆ. ಅವರಿಗೆಲ್ಲಾ ಅವಕಾಶ ಸಿಕ್ಕಿರುವುದು ಕಾಂಗ್ರೆಸ್‌ನಲ್ಲೇ ತಾನೆ. ಕೆಪಿಸಿಸಿ ಹುದ್ದೆಗೆ ಡಿ.ಕೆ.ಶಿವಕುಮಾರ್‌ ಮತ್ತು ಎಸ್‌.ಆರ್‌. ಪಾಟೀಲ್‌ ಇಬ್ಬರೂ ಪ್ರಯತ್ನ ಪಟ್ಟಿದ್ದರು. ಒಂದೇ ಹುದ್ದೆಯನ್ನು ಎಲ್ಲರಿಗೂ ಕೊಡಲು ಆಗುವುದಿಲ್ಲ. ಶಿವಕುಮಾರರ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಿಗಿಂತ ದೊಡ್ಡ ಹುದ್ದೆ ಅದು. ಅದೇ ರೀತಿ ಎಸ್‌.ಆರ್‌.ಪಾಟೀಲರಿಗೆ ಕಾರ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. 

ನಿಮ್ಮ ಸುತ್ತಲೂ ಹುದ್ದೆಗಳನ್ನು ಸೃಷ್ಟಿಸಿ, ನಿಮ್ಮ ಅಧಿಕಾರ ಮೊಟಕುಗೊಳಿಸಿದಂತಿದೆ?
ನನಗೇನೂ ಆ ರೀತಿ ಅನಿಸುತ್ತಿಲ್ಲ. ಎಲ್ಲರಿಗೂ ಪಕ್ಷದಲ್ಲಿ ಸಮಾನ ಅಧಿಕಾರ ಹಂಚಿಕೆ ಮಾಡಿದೆ. ಎಲ್ಲರಿಗೂ ಪಕ್ಷವನ್ನು ಅಧಿಕಾರಕ್ಕೆ ತರುವುದೊಂದೇ ಗುರಿ ಇದೆ. ಹೀಗಾಗಿ ನನ್ನ ಅಧಿಕಾರ ಮೊಟಕಾಗಿದೆ ಎಂದೆನಿಸುವುದಿಲ್ಲ. ಈ ಪರಿಸ್ಥಿತಿಯಲ್ಲಿ ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕು. ಡಿ.ಕೆ. ಶಿವಕುಮಾರ್‌ ಹಾಗೂ ಎಸ್‌.ಆರ್‌. ಪಾಟೀಲ್‌ ಅವರೂ ಕೂಡ ಸದ್ಯದ ಪರಿಸ್ಥಿತಿಗೆ ಹೊಂದಿಕೊಂಡು ಹೋಗಬೇಕು.

ಪಕ್ಷವನ್ನು ಅಧಿಕಾರಕ್ಕೆ ತಂದರೂ ಒಳ್ಳೆಯ ಅಧಿಕಾರ ಅನುಭವಿಸಲಾಗಿಲ್ಲ ಎಂಬ ಕೊರಗಿದೆಯೇ?
ನಾನು ಸಚಿವನಾಗಿ ಇನ್ನೂ ಒಂದು ವರ್ಷ ಕೆಲಸ ಮಾಡಲು ಅವಕಾಶ ಇತ್ತು. ಯಾರೂ ಗೃಹ ಖಾತೆ ಬಿಟ್ಟುಕೊಡಿ ಅಂತ ಕೇಳಿರಲಿಲ್ಲ. ಆದರೆ, ಚುನಾವಣೆ ವರ್ಷ ಆಗಿರುವುದರಿಂದ ಈ ಸಂದರ್ಭದಲ್ಲಿ ಪಕ್ಷದ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಪ್ರತಿಪಕ್ಷಗಳ ಮಾತಿಗೆ ಸಚಿವನಾಗಿ ಉತ್ತರ ಕೊಡುವುದಕ್ಕಿಂತ ಪಕ್ಷದ ಅಧ್ಯಕ್ಷನಾಗಿ ಮುಕ್ತವಾಗಿ ಮಾತನಾಡಲು ಹೆಚ್ಚು ಸ್ವಾತಂತ್ರ್ಯ ಇರುತ್ತದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದರೆ ಸಚಿವ ಸ್ಥಾನ ಬಿಡಬೇಕಾಗಿದ್ದು ಅನಿವಾರ್ಯ. ಸಚಿವನಾಗಿ ಗೃಹ ಇಲಾಖೆಯಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿರುವ ಸಮಾಧಾನ ಇದೆ. ಕೊರಗುವ ಮನಸ್ಥಿತಿ ನನ್ನದಲ್ಲ.

ಈ ಚುನಾವಣೆಯಲ್ಲಿ ನಿಮಗೆ ಯಾರು ನೇರ ಸ್ಪರ್ಧಿ?
ರಾಜ್ಯದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳಿವೆ. ಹಳೆ ಮೈಸೂರು ಭಾಗದಲ್ಲಿ ನಮಗೆ ಜೆಡಿಎಸ್‌ ನೇರ ಸ್ಪರ್ಧಿಯಾದರೆ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ನೇರ ಸ್ಪರ್ಧಿ. ಕಾಂಗ್ರೆಸ್‌ ಮಾತ್ರ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಎದುರಿಸಲಿದೆ ಮತ್ತು ನೀಡಲಿದೆ.

ಜೆಡಿಎಸ್‌ ಬಗ್ಗೆ ಸಾಫ್ಟ್ ಕಾರ್ನರ್‌ ಏಕೆ?
ಯಾರ ಬಗ್ಗೆಯೂ ಸಾಫ್ಟ್ ಕಾರ್ನರ್‌ ಇಲ್ಲ. ನಮ್ಮ ಸರಕಾರ ಹಾಗೂ ಪಕ್ಷದ ಬಗ್ಗೆ ಅವರು ಸಾಕಷ್ಟು ಮಾತಾಡಿದಾರೆ. ನಾವೂ ಅವರ ಬಗ್ಗೆ ಮಾತಾಡಿದ್ದೇವೆ. ನಾವು ಸ್ವತಂತ್ರವಾಗಿಯೇ ಚುನಾವಣೆ ಎದುರಿಸುತ್ತೇವೆ. ಸಮ್ಮಿಶ್ರ ಸರಕಾರದ ಆಲೋಚನೆ ಇಲ್ಲ. ನಾವು ಆಂತರಿಕ ಸಮೀಕ್ಷೆ ನಡೆಸಿದ್ದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ವಿಶ್ವಾಸ  ಇದೆ. ಹೀಗಾಗಿ ಯಾರನ್ನೂ ಓಲೈಸಬೇಕಾದ ಪರಿಸ್ಥಿತಿ ನಮಗಿಲ್ಲ.

ಅವಧಿಗೂ ಮೊದಲೇ ಚುನಾವಣೆ ಬರುತ್ತಾ?
ಇಲ್ಲ. ನಾವು ಐದು ವರ್ಷ ಪೂರೈಸುತ್ತೇವೆ. ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಮುಂತಾದವರು ಬಂದು ಇಲ್ಲಿ ಟೆಂಟ್‌ ಹಾಕಿ ಕೂತರೂ ನಮಗೆ ಭಯವಿಲ್ಲ. ಗುಜರಾತ್‌ ಜತೆಗೆ ಚುನಾವಣೆ ಮಾಡುವ ಆಲೋಚನೆ ಸರಕಾರಕ್ಕಿಲ್ಲ. 

ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗುತ್ತಾರೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿ ಎಂದು ಹೈಕಮಾಂಡ್‌ ಹೇಳಿದೆ. ಬಹುಮತ ಬಂದ ಮೇಲೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾದರೆ ನಮಗೇನೂ ತೊಂದರೆಯಿಲ್ಲ. 

ನಿಮ್ಮ ಅಧ್ಯಕ್ಷತೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಸ್ಥಾನ ಕೇಳುವುದು ನಿಮ್ಮ ಹಕ್ಕಲ್ಲವೇ?
ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೆ ನನ್ನ ಕೆಲಸ. ಮುಖ್ಯ ಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಈ ಪಕ್ಷದಲ್ಲಿ ವೈಯಕ್ತಿಕ ಹಕ್ಕು ಎಂಬುದಿಲ್ಲ.

ದಲಿತ ಮುಖ್ಯಮಂತ್ರಿಯ ಬೇಡಿಕೆ ಏನಾಯಿತು?
ನಮ್ಮ ಪಕ್ಷದಲ್ಲಿ ಯಾವ ನಾಯಕರೂ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕೇಳಿಲ್ಲ. ಮಲ್ಲಿಕಾರ್ಜುನ ಖರ್ಗೆಯಾಗಲಿ, ನಾನಾಗಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕೋರಲೂ ಇಲ್ಲ. ಆ ವಿಷಯ ಪ್ರಸ್ತಾಪಿಸಿದ್ದು ಪಕ್ಷದ ಹೊರಗಿನವರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ?
ಸ್ಪರ್ಧೆ ಮಾಡಬೇಕೆಂದು ನಿರ್ಧರಿಸಿದ್ದೇನೆ. ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಕೊರಟಗೆರೆ ನನ್ನ ಸ್ವಕ್ಷೇತ್ರವಾದರೆ, ರಾಯಭಾಗ್‌, ಮೂಡಿಗೆರೆ, ನೆಲಮಂಗಲ, ದೇವನಹಳ್ಳಿಯಲ್ಲಿ ಸ್ಪರ್ಧೆ ಮಾಡುವಂತೆ ಅಲ್ಲಿನವರು ಕೇಳಿಕೊಂಡಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್‌ ತೀರ್ಮಾನಿಸಬೇಕಾಗುತ್ತದೆ.

ಪರಮೇಶ್ವರ್‌ ಅವರಿಗೆ ಮೀಸಲು ಕ್ಷೇತ್ರವೇ ಬೇಕೇ?
ನಾನು ತುಮಕೂರು ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡ ಬೇಕೆಂದು ಬಯಸಿದ್ದೆ. ಆದರೆ, ಮೀಸಲು ಕ್ಷೇತ್ರವಿದ್ದರೂ ಆ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಂದು ಸಾಮಾನ್ಯ ವರ್ಗದ ಅಭ್ಯರ್ಥಿಗೆ ಅನ್ಯಾಯ ಮಾಡಿದ ಹಾಗಾಗುತ್ತದೆ ಎಂದು ಕೆಲವರು ವಿರೋಧಿಸಿದ್ದಾರೆ. ನಾನು ದಲಿತನಾದರೂ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ. ಆದರೆ, ಸಮಾಜ ನಮ್ಮನ್ನು ಸಾಮಾನ್ಯ ವರ್ಗದವರಂತೆ ಸ್ಪೀಕರಿಸುವ ಮನಸ್ಥಿತಿ ಬೆಳೆಸಿಕೊಂಡಿಲ್ಲ. ಹೀಗಾಗಿ ಮೀಸಲು ಕ್ಷೇತ್ರದಲ್ಲೇ ಸ್ಪರ್ಧಿಸುವುದು ಅನಿವಾರ್ಯ ಎನ್ನುವಂತಾಗಿದೆ.

ಸಚಿವರು ತಮಗೂ ಪಕ್ಷಕ್ಕೂ ಸಂಬಂಧ ಇಲ್ಲದಂತೆ ಇದ್ದಾರಲ್ಲಾ?
ಹೌದು, ಬಹಳಷ್ಟು ಜನ ಸಚಿವರು ಆ ರೀತಿ ನಡೆದು ಕೊಳ್ಳುತ್ತಿದ್ದಾರೆ. ಆದರೆ, ಪಕ್ಷ ಅದೆಲ್ಲವನ್ನೂ ಗಮನಿಸುತ್ತಿದೆ. ಚುನಾವಣೆ ನಂತರ ಮತ್ತೆ ಸರಕಾರ ಬಂದಾಗ ಅವರು 
ಸಚಿವ ಸ್ಥಾನಕ್ಕಾಗಿ ಪಕ್ಷದ ಕಚೇರಿಗೆ ಬರಬೇಕು. ಆ ಸಂದರ್ಭದಲ್ಲಿ ಅವರು ಅಧಿಕಾರದಲ್ಲಿದ್ದಾಗ ಪಕ್ಷಕ್ಕಾಗಿ ಎಷ್ಟು ಕೆಲಸ ಮಾಡಿದ್ದಾರೆ ಎಂದು ಕೇಳುತ್ತೇವೆ. ಇದು ಮುಖ್ಯಮಂತ್ರಿಗಳ ಗಮನದಲ್ಲಿಯೂ ಇದೆ. 

ನೀವು ಪಕ್ಷದ ಅಧ್ಯಕ್ಷರಾಗಿದ್ದಾಗ ಹಿರಿಯ ನಾಯಕರು ಪಕ್ಷ ತೊರೆಯುತ್ತಿದ್ದಾರಲ್ಲಾ ?
ಪಕ್ಷ ತೊರೆಯುವ ಯಾವುದೇ ನಾಯಕರೂ ನೇರವಾಗಿ ಯಾರ ವಿರುದ್ಧವೂ ಆರೋಪ ಮಾಡಿಲ್ಲ. ನಾನು ತಪ್ಪಾಗಿ ನಡೆದುಕೊಂಡಿದ್ದರೆ, ಆ ರೀತಿಯ ಆರೋಪ ಬಂದರೆ ಅವರ ಕ್ಷಮೆ ಕೇಳುತ್ತೇನೆ.

ಜೆಡಿಎಸ್‌ ಅಮಾನತುಗೊಂಡವರಿಗೆ ಟಿಕೆಟ್‌ ಖಾತ್ರಿಯಾಗಿದೆಯಾ?
ನಮ್ಮ ಕಡೆಯಿಂದ ಏಳೂ ಜನರಿಗೂ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದೇವೆ. ಈ ಸಂದರ್ಭದಲ್ಲಿ ಅವರು ರಾಜಿನಾಮೆ ನೀಡಿದರೆ ಮತ್ತೆ ಉಪ ಚುನಾವಣೆ ಬರುತ್ತದೆ ಎನ್ನುವ ಕಾರಣಕ್ಕೆ ಅವರು ಪಕ್ಷ ಸೇರ್ಪಡೆಯಾಗಿಲ್ಲ. 

ಬೆರೆ ಪಕ್ಷದ ನಾಯಕರು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆಯೇ?
ಬಹಳಷ್ಟು ಜನ ನಾಯಕರು ಕಾಂಗ್ರೆಸ್‌ ಬಾಗಿಲು ಬಡಿಯುತ್ತಿದ್ದಾರೆ. ಹಾಗೆಂದು ಎಲ್ಲರನ್ನೂ ಸೇರಿಸಿಕೊಂಡು ಓವರ್‌ಲೋಡ್‌ ಮಾಡಿಕೊಳ್ಳುವುದಿಲ್ಲ. ಯಾವುದೇ ಷರತ್ತು ಇಲ್ಲದೆ ಬರುವವರಿಗೆ ಮುಕ್ತ ಅವಕಾಶವಿದೆ. ಗೆಲ್ಲುವ ಅಭ್ಯರ್ಥಿ ಎಂಬುದು ಹೈ ಕಮಾಂಡ್‌ಗೆ ಮನವರಿಕೆಯಾದರೆ ಬಂದವರಿಗೂ ಟಿಕೆಟ್‌ ಕೊಡುತ್ತೇವೆ. 

ಇದುವರೆಗಿನ ಆಡಳಿತದಲ್ಲಿ ನಿಮ್ಮ ಸರಕಾರಕ್ಕೆ 10ಕ್ಕೆ ಎಷ್ಟು ಅಂಕ ಕೊಡ್ತೀರಾ ?
ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಪೂರ್ಣಾಂಕ ಕೊಡುತ್ತೇನೆ. ಆದರೆ, ಮಂತ್ರಿಗಳ ವಿಷಯದಲ್ಲಿ ಅಷ್ಟು ಅಂಕ ಕೊಡಲು ಆಗುವುದಿಲ್ಲ. ನಾವು ಒಟ್ಟಾರೆ ಸರಕಾರ ವನ್ನು ನೋಡಿದಾಗ ಉತ್ತಮ ಆಡಳಿತ ಕೊಟ್ಟಿದೆ ಅಂತ ಹೇಳಬಹುದು. ಕೆಲವು ಮಂತ್ರಿಗಳು ಅಷ್ಟು ಅಂಕ ಪಡೆಯಲು ಸಾಧ್ಯವಾಗದಿರಬಹುದು.

ಯಾರ್ಯಾರಿಗೆ ಟಿಕೆಟ್‌?
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್‌ ಕೊಡಬೇಕು ಎಂದುಕೊಂಡಿದ್ದೇವೆ. ಆದರೆ, ಆಂತರಿಕ ಸಮೀಕ್ಷೆಯಲ್ಲಿ ಕೆಲವು ಶಾಸಕರು ಸೋಲುತ್ತಾರೆ ಎಂಬ ವರದಿ ಬಂದ ಮೇಲೆ ಅವರಿಗೆ ಟಿಕೆಟ್‌ ನೀಡುವುದು ಅನುಮಾನ. ಹಾಲಿ ಶಾಸಕರು ಸೋಲುವ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕುವುದು ಅನಿವಾರ್ಯ. ರಾಹುಲ್‌ ಗಾಂಧಿ ಕೂಡ ಅದೇ ಸೂಚನೆ ನೀಡಿದ್ದಾರೆ. 

ಸಂದರ್ಶನ ಶಂಕರ ಪಾಗೋಜಿ

Trending videos

Back to Top