CONNECT WITH US  

ಕರ್ನಾಟಕದ ಆದಿತ್ಯನಾಥ್‌ ಆಗ್ತೀರಾ?

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಬಾರಿ ಮಠಾಧೀಶರ ಓಲೈಕೆ ಕಾರ್ಯವೂ ನಡೆಯುತ್ತಿದ್ದು, ದಲಿತರನ್ನು ಮನೆಗೆ ಊಟಕ್ಕೆ ಕರೆಯುವ ನೆಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರನ್ನು ಕರೆಸಿದ್ದರು. ಇದು ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ.  ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜಕೀಯಕ್ಕೆ ಬರ್ತಾರಾ? ಯಡಿಯೂರಪ್ಪ ಮನೆಗೆ ಅವರು ಊಟಕ್ಕೆ ಹೋಗಿದ್ದರ ಹಿಂದೆ ರಾಜಕಾರಣ ಇದೆಯಾ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಸ್ವಾಮೀಜಿ ಅವರೊಂದಿಗೆ ನೇರಾ-ನೇರ ಮಾತುಕತೆಗೆ ಇಳಿದಾಗ...

ನೀವು ಯಡಿಯೂರಪ್ಪ ಮನೆಗೆ ಊಟಕ್ಕೆ ಹೋಗಿದ್ದು ಬಹಳ ಚರ್ಚೆಯಾಗುತ್ತಿದೆಯಲ್ಲಾ?
ಊಟಕ್ಕೆ ಕರೆದರೆ ಹೋಗುವುದು ಸೌಜನ್ಯ. ಯಡಿಯೂರಪ್ಪ ಅವರು ಆಹ್ವಾನ ಕೊಟ್ಟಿದ್ದೂ ಹೌದು, ನಾನೂ ಹೋಗಿದ್ದೂ ಹೌದು. ಆದರೆ, ಇದಕ್ಕೆಲ್ಲಾ ಅಪಾರ್ಥ ಕಲ್ಪಿಸಿದರೆ ನಾನೇನು ಮಾಡಲಿ? 

ಹಾಗಲ್ಲ, ಚುನಾವಣೆ ಹೊಸ್ತಿಲಲ್ಲಿ ಇಂತಹ ಬೆಳವಣಿಗೆಯಾದಾಗ ಚರ್ಚೆಗೆ ಗ್ರಾಸವಾಗುವುದು ಸಹಜವಲ್ಲವೇ?
ಯಡಿಯೂರಪ್ಪ ಅವರು ಮೊದಲಿನಿಂದಲೂ ನಮ್ಮ ಮಠದ ಬಗ್ಗೆ ಗೌರವವುಳ್ಳವರು. ಮುಖ್ಯಮಂತ್ರಿಯಾಗಿದ್ದಾಗ ಮಠಕ್ಕೆ ಸಹಾಯ ಸಹ ಮಾಡಿದ್ದಾರೆ. ಹೀಗಾಗಿ, ಅವರ ಆಹ್ವಾನಕ್ಕೆ ಗೌರವ ಕೊಟ್ಟು ನಾನು ಹೋಗಿದ್ದೆ. ಇದಕ್ಕೆ ರಾಜಕೀಯ ತಳುಕು ಹಾಕುವುದು ಸರಿಯಲ್ಲ.

ಯಡಿಯೂರಪ್ಪ ಮನೆಗೆ ಊಟಕ್ಕೆ ಹೋಗಲು ಮಠದ ಭಕ್ತರ ಒಪ್ಪಿಗೆ ಇತ್ತಾ? 
ಮಠದ ಭಕ್ತರ ವಿರೋಧದ ಪ್ರಶ್ನೆಯೇ ಇಲ್ಲ. ದಲಿತ ಸಮುದಾಯದವರನ್ನು ಮಾತ್ರ ಊಟಕ್ಕೆ ಕರೆದರೆ ರಾಜಕೀಯ ಎಂಬ ಬಣ್ಣ ಕಟ್ಟುತ್ತಾರೆ ಎಂಬ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ನನ್ನನ್ನು ಊಟಕ್ಕೆ ಕರೆದಿದ್ದರು. ಹೀಗೆಂದು ಅವರೇ ಹೇಳಿದರು. ಹೀಗಾಗಿ, ಇದು ಸೌಹಾರ್ದಯುತ ಅಷ್ಟೇ.

ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ನಿಮಗೆ ರಾಜಕೀಯ ಸೇರಲು ಆಹ್ವಾನ ಕೊಟ್ಟಿದ್ದಾರಂತೆ?
ಇಲ್ಲ. ಅಂತಹ ಯಾವುದೇ ಮಾತುಕತೆ ನಡೆದಿಲ್ಲ. ಅವೆಲ್ಲವೂ ಊಹಾಪೋಹ. ಯಡಿಯೂರಪ್ಪ ಮನೆಗೆ ಊಟಕ್ಕೆ ಹೋಗಿ ಬಂದ ನಂತರ ಮಠದ ಭಕ್ತರು ಈ ಬಗ್ಗೆ ನನ್ನನ್ನು ಕೇಳಿದ್ದುಂಟು, ನಾನು ವಾಸ್ತವಾಂಶ ತಿಳಿಸಿದ್ದೇನೆ.

ಬಿಜೆಪಿ ರಾಜಕೀಯಕ್ಕೆ ಮಾದಾರ ಚೆನ್ನಯ್ಯ ಸ್ವಾಮಿ "ದಾಳ' ಆಗ್ತಿದಾರೆ ಅನ್ನೋ ಮಾತಿದೆಯಲ್ಲಾ?
ಅದು ಮಠ ಹಾಗೂ ನನ್ನ ಬಗ್ಗೆ ಮೊದಲಿಂದಲೂ ಒಂದು ರೀತಿಯ ನಕಾರಾತ್ಮಕ ಧೋರಣೆ ಹೊಂದಿರುವವರ ಕೊಂಕು ನುಡಿ. ಮಠದ ಭಕ್ತರಿಗೆ ವಾಸ್ತವಾಂಶ ಗೊತ್ತಿದೆ. ನಾನು ಯಾವ ಪಕ್ಷ ಅಥವಾ ವ್ಯಕ್ತಿಗೆ ದಾಳ ಆಗುವ ಪ್ರಶ್ನೆಯೇ ಇಲ್ಲ. ನಾನು ಸಮುದಾಯದ ಒಳಿತು ಬಯಸುವವನು.

ಮಾದಾರ ಚೆನ್ನಯ್ಯ ಸ್ವಾಮೀಜಿ ಮಠದ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಇದೆಯಲ್ಲಾ?
ಅಂತಹ ಟೀಕೆಗಳಿಗೆ ಉತ್ತರಿಸುವುದಿಲ್ಲ. ಅದರ ಅಗತ್ಯವೂ ಇಲ್ಲ. ಹಿಂದಿನಿಂದಲೂ ಎಲ್ಲ ಮಠಗಳ ವಿರುದ್ಧ ಇದ್ದಂತೆ ನಮ್ಮ ವಿರುದ್ಧವೂ ಒಂದು ವರ್ಗ ಅಥವಾ ಗುಂಪು ಇದೆ. ಅದು ಇಂತಹ ವದಂತಿ ಹಬ್ಬಿಸುತ್ತದೆ. ಟೀಕೆ ಆರೋಗ್ಯಕರವಾಗಿದ್ದರೆ ಉತ್ತರಿಸುತ್ತೇನೆ, ಇಲ್ಲದಿದ್ದರೆ ಮೌನ ವಹಿಸುತ್ತೇನೆ. ಪೇಜಾವರ ಶ್ರೀಗಳು ದಲಿತರ ಕಾಲೋನಿಗೆ ಹೋದಾಗ ನಾನು ಜತೆಗೂಡಿದ್ದೆ. ಅದಕ್ಕೂ ಟೀಕೆಗಳು ಬಂದಿದ್ದವು. ಹೀಗಾಗಿ, ಟೀಕೆಗಳು ಮಾಡುವವರು ಇದ್ದೇ ಇರ್ತಾರೆ.

ಹಾಗಾದರೆ ನಿಮಗೂ ವಿರೋಧಿಗಳಿದ್ದಾರೆ ಎಂದಾಯ್ತು?
ವಿರೋಧಿಗಳು ಅಂತಲ್ಲ. ಎಂದೂ ನಮ್ಮ ಮಠಕ್ಕೆ ಬರದವರು ಮಠದ ಬಗ್ಗೆ ಒಳ್ಳೆಯ ಭಾವನೆ ಇಲ್ಲದವರು ಬೇಕಂತಲೇ ಇಲ್ಲ ಸಲ್ಲದ ವಿಚಾರ ಹುಟ್ಟುಹಾಕುತ್ತಿರುತ್ತಾರೆ. ಆದರೆ, ನಮ್ಮ ಭಕ್ತರಿಗೆ ವಾಸ್ತವ ಹಾಗೂ ಸತ್ಯಾಂಶ ಗೊತ್ತಿದೆ. ಸ‌‌ಮುದಾಯದ ಬಗ್ಗೆ ನಮ್ಮ ಕಾಳಜಿ ಮತ್ತು ಸೇವೆ ಭಕ್ತರಿಗೆ ತಿಳಿದಿದೆ. ಮಠಕ್ಕೆ ಸಂಬಂಧಪಡದವರ ಟೀಕೆಗಳಿಗೆ ನಾನು ಉತ್ತರಿಸಬೇಕಿಲ್ಲ. 

ಮಾದಾರ ಚೆನ್ನಯ್ಯ ಸ್ವಾಮೀಜಿ ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆಯಲ್ಲಾ?
ಸದ್ಯಕ್ಕೆ ಅಂತಹ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಆಗಿಲ್ಲ. ಹೀಗಾಗಿ, ನಾನು ಆ ಬಗ್ಗೆ ಮಾತನಾಡುವುದೂ ಇಲ್ಲ.  

ಒಂದೊಮ್ಮೆ ಬಿಜೆಪಿಯವರು ನಿಮಗೆ ಆಹ್ವಾನ ನೀಡಿದರೆ?
ಆಗ ಮಠದ ಭಕ್ತರು ಹಾಗೂ ಮಠದ ಜತೆ ಸತತ ಸಂಪರ್ಕ ಹೊಂದಿರುವ ಸಮುದಾಯದ ಬಗ್ಗೆ ಕಾಳಜಿ ಹೊಂದಿರುವ ಕೇಂದ್ರದ ಮಾಜಿ ಸಚಿವಾದ ಕೆ.ಎಚ್‌.ಮುನಿಯಪ್ಪ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಚಿತ್ರದುರ್ಗ ಸಂಸದ ಚಂದ್ರಪ್ಪ ಸೇರಿ ಎಲ್ಲರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಮಠದ ಭಕ್ತರ ತೀರ್ಮಾನವೇ ಅಂತಿಮವಾಗಲಿದೆ.

ಹಾಗಾದರೆ ನಿಮಗೆ ರಾಜಕೀಯದ ಬಗ್ಗೆ ಆಸಕ್ತಿ ಇರುವುದು ನಿಜ ಅಂತಾಯ್ತು?
ಹಾಗಂತಲ್ಲ. ಮಠದ ಜತೆ ಮೊದಲಿನಿಂದಲೂ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಂಪರ್ಕ ಹೊಂದಿದ್ದಾರೆ. ನನಗೂ ವೈಯಕ್ತಿಕವಾಗಿ ಸಂಘ ಪರಿವಾರದ ನಾಯಕರು, ಬಿಜೆಪಿ ನಾಯಕರ ಜತೆ ಉತ್ತಮ ಬಾಂಧವ್ಯ  ಇದೆ. ಆದರೆ, ನಾನೇನು ರಾಜಕೀಯ ಪ್ರವೇಶ ಮಾಡಿಲ್ಲವಲ್ಲ?

ಮುಂದೆ ಅಂತಹ ಸನ್ನಿವೇಶ ಬರಬಹುದಾ?
ಅದು ನನಗೆ ಗೊತ್ತಿಲ್ಲ, ಬಂದಾಗ ಆ ಬಗ್ಗೆ ತೀರ್ಮಾನ ಮಾಡಲಾಗುವುದು

ಅಂತಹ ಸಂದರ್ಭ ಬಂದರೆ ಚಿತ್ರದುರ್ಗ ಲೋಕಸಭೆ ಕ್ಷೇತ್ರವಾ, ಹೊಳಲ್ಕೆರೆ ವಿಧಾನಸಭೆ ಕ್ಷೇತ್ರವಾ?
ರಾಜಕೀಯ ಪ್ರವೇಶದ ಇಚ್ಛೆ ಸದ್ಯಕ್ಕಿಲ್ಲ ಎಂದ ಮೇಲೆ ಕ್ಷೇತ್ರ ಆಯ್ಕೆ ಮಾತು ಯಾಕೆ?

ನೀವೇ ಹೇಳಿದ್ದೀರಿ, ಬಿಜೆಪಿ ನಾಯಕರ ಜತೆ ಸಂಪರ್ಕ ಇದೆ ಎಂದು ಹಾಗಾದರೆ ನಿಮಗೆ ಬಿಜೆಪಿ ಮೇಲೆ ಒಲವು ಎಂದಾಯ್ತು?
ನಾನು ಬಿಜೆಪಿ ನಾಯಕರ ಜತೆ ಸಂಪರ್ಕ ಎಂದೆ. ಒಲವು, ನಿಲುವು ಹೇಳಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಯಡಿಯೂರಪ್ಪ, ಈಶ್ವರಪ್ಪ, ಅಶೋಕ್‌ ಅವರು ಮಠಕ್ಕೆ ಸಹಾಯ ಮಾಡಿದ್ದಾರೆ. ಅದೇ ರೀತಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೂ ಮಠದ ಮೇಲೆ ಗೌರವ ಇದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಮಠಕ್ಕೆ ಸಹಾಯ ಮಾಡಿದ್ದಾರೆ. ಈಗಲೂ ದೇವೇಗೌಡರು ನಮ್ಮ ಹಾಗೂ ಮಠದ ಬಗ್ಗೆ ಪ್ರೀತಿ ಹೊಂದಿದ್ದಾರೆ. 

ಬಿಜೆಪಿ, ಜೆಡಿಎಸ್‌ ಪಕ್ಷ ಹಾಗೂ ನಾಯಕರು ಮಠಕ್ಕೆ ಸಹಾಯ ಮಾಡಿದ ಬಗ್ಗೆ ಹೇಳುತ್ತಿದ್ದೀರಿ, ಕಾಂಗ್ರೆಸ್‌ ನಾಯಕರ ಬಗ್ಗೆ ಹೇಳುತ್ತಿಲ್ಲ?
ಕೆ.ಎಚ್‌.ಮುನಿಯಪ್ಪ, ಚಂದ್ರಪ್ಪ ಮಠದ ಜತೆ ಸಂಪರ್ಕ ಇದ್ದಾರೆಂದು ಹೇಳಿದೆನಲ್ಲಾ.

ಹಾಗಲ್ಲ, ಮಠಕ್ಕೆ ಸಹಾಯ ಮಾಡಿದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಏನೂ ಹೇಳಿಲ್ಲವಲ್ಲ?
ಏನೂ ಸಹಾಯ ಆಗಿಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ನಾವೂ ಈ ಸರ್ಕಾರಕ್ಕೆ ಯಾವ ಸಹಾಯ ಕೇಳಿಲ್ಲ, ಅವರೂ ಮಾಡಿಲ್ಲ.

ಜೆಡಿಎಸ್‌ ಪಕ್ಷದಿಂದ ಚುನಾವಣೆಗೆ ಸ್ಪರ್ಧೆಗೆ ಆಹ್ವಾನ ಬಂದರೆ ಒಪ್ಪಿಕೊಳ್ಳುತ್ತೀರಾ?
ಮೊದಲಿಗೆ ಇನ್ನೂ ರಾಜಕೀಯ ಪ್ರವೇಶದ ಚರ್ಚೆ, ಪ್ರಸ್ತಾಪ ಆಗಿಲ್ಲ. ಹೀಗಿರುವಾಗ ಬಿಜೆಪಿ, ಜೆಡಿಎಸ್‌ ಪ್ರಶ್ನೆ ಉದ್ಭವಿ ಸುವುದಿಲ್ಲ. ಆದರೆ, ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಮೂರೂ ಪಕ್ಷಗಳಲ್ಲೂ ಮಠದ ಬಗ್ಗೆ ಗೌರವ ಇರುವವರು ಇದ್ದಾರೆ.

ಯಾವುದೇ ಮಠದ ಶ್ರೀಗಳು ರಾಜಕಾರಣಕ್ಕೆ ಬರುವುದು ಸರಿಯಾ?
ಇಲ್ಲಿ ಸರಿ ಅಥವಾ ತಪ್ಪು ಎಂಬುದಕ್ಕಿಂತ ಅಗತ್ಯತೆ ಮತ್ತು ಅನಿವಾರ್ಯತೆ, ಸಮುದಾಯದ ಒಳಿತು, ಸಮಾಜ ಸೇವೆ ಇವಿಷ್ಟೂ ವಿಚಾರಗಳ ಪರಾಮರ್ಶೆ ಮುಖ್ಯ. 

ಮಾದಾರ ಚೆನ್ನಯ್ಯ ಸ್ವಾಮೀಜಿ ಕರ್ನಾಟಕದ "ಯೋಗಿ ಆದಿತ್ಯನಾಥ್‌' ಆಗ್ತಾರಾ?
ಅಯ್ಯೋ, ಅಂತಹ ಭ್ರಮೆ ನನಗಿಲ್ಲ. ಅಷ್ಟು ದೊಡ್ಡವನೂ ನಾನಲ್ಲ.

ಸಂಘಪರಿವಾರ ನಿಮ್ಮ ಹೆಸರೂ ಸೂಚಿಸಿದೆಯಂತೆ?
ಅದೆಲ್ಲಾ ನನಗೆ ಗೊತ್ತಿಲ್ಲ. ಅಂತಹ ಯಾವುದೇ ಬೆಳವಣಿಗೆ ನಮ್ಮ ಗಮನಕ್ಕೂ ಬಂದಿಲ್ಲ. 

ಒಳ ಮೀಸಲಾತಿ ಬಗ್ಗೆ ನಿಮ್ಮ ನಿಲುವು ಏನು?
ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು ಎಂಬುದೇ ನಮ್ಮ ನಿಲುವು. ಆದರೆ, ಆ ವರದಿ ಎಲ್ಲಿ ಹೋಯ್ತು ಎಂದೇ ಗೊತ್ತಾಗುತ್ತಿಲ್ಲ. ಹುಬ್ಬಳ್ಳಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಾನು ನಿಮ್ಮೊಂದಿಗಿದ್ದೇನೆ ಎಂದರು. ನಾವು , ವರದಿ ಜಾರಿಗೊಳಿಸಿ ಎಂದು ಮನವಿ ಮಾಡಿದೆವು. ಕೇಂದ್ರ ಸರ್ಕಾರಕ್ಕೆ  ಈಗಾಗಲೇ ಕಳುಹಿಸಬೇಕಿತ್ತು, ಆ ಕೆಲಸ ಸರ್ಕಾರ ಮಾಡಿಲ್ಲ.

ಸಾಮಾಜಿಕ ಆರ್ಥಿಕ ಶೈಕ್ಷಣಿಕ  ಗಣತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಾಜ್ಯ ಸರ್ಕಾರ ಆ ಗಣತಿ ತೋರಿಸಿಯೇ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ನೆಪ ಹೇಳುತ್ತಿದೆ. ಆಯ್ತು, ಅದು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಗಣತಿಯೋ, ಜಾತಿ ಜನಗಣತಿಯೋ ಅದರ ವರದಿಯಾದರೂ ಬಹಿರಂಗಪಡಿಸಲಿ.

ವರದಿ ಬಹಿರಂಗಪಡಿಸಿದರೆ ನಿಮ್ಮ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ಸಿಗುತ್ತಾ?
ಸತ್ಯಾಂಶ ಜಗತ್ತಿಗೆ ಗೊತ್ತಾಗುತ್ತದೆ. ನಾವು ಮಾದಿಗ ಜನಾಂಗ 50 ರಿಂದ 60 ಲಕ್ಷ ಜನಸಂಖ್ಯೆ ಇದ್ದೇವೆ ಎಂದು ಹೇಳೆ¤àವೆ. ಕೆಲವರು ಇಲ್ಲ ಅಂತಾರೆ, ಆಯ್ತು, ಜಾತಿ ಜನಗಣತಿ ವರದಿ ಬಹಿರಂಗಗೊಳಿಸಲಿ, ಯಾರು ಎಷ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ. ಅದರ ಆಧಾರದಲ್ಲೇ ಮೀಸಲಾತಿ ಕೊಡಲಿ. ಆದರೆ, ಸರ್ಕಾರ ವಿನಾಕಾರಣ ವಿಳಂಬ ಮಾಡಿ ಗೊಂದಲ ಯಾಕೆ ಸೃಷ್ಟಿಸಬೇಕು?

ಈ ಸರ್ಕಾರ ನ್ಯಾ.ಸದಾಶಿವ ಆಯೋಗ ವರದಿ ಜಾರಿ ಹಾಗೂ ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವ ನಂಬಿಕೆ ಇದೆಯಾ?
ಅದು ಸರ್ಕಾರದ ಜವಾಬ್ದಾರಿ. ನಾವಂತೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅದು ಸಮುದಾಯದ ಒಕ್ಕೊರಲ ಬೇಡಿಕೆ.

ತಳುಕು ಹಾಕಬಾರದು
ಮುರುಘಾ ಶರಣರು ನನಗೆ ದೀಕ್ಷೆ ಕೊಟ್ಟು ಮಠಕ್ಕೆ ಜಮೀನು ಕೊಟ್ಟವರು. ಆದಿಚುಂಚನಗಿರಿ ಶ್ರೀಗಳು ಕಟ್ಟಡ ಕಟ್ಟಲು ಸಹಾಯ ಮಾಡಿದವರು. ಸಿರಿಗೆರೆ ಹಾಗೂ ಪೇಜಾವರ ಶ್ರೀಗಳು ನಮಗೆ  ಮಾರ್ಗದರ್ಶಕರು. ನಮ್ಮ ಮಠ ಎಲ್ಲ ಧರ್ಮದವರನ್ನೂ ಪಕ್ಷದವರನ್ನೂ ಗೌರವಿಸುತ್ತದೆ. ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಸಮುದಾಯಗಳನ್ನು ತಮ್ಮತ್ತ ಸೆಳೆಯಲು ಕಾರ್ಯತಂತ್ರ ರೂಪಿಸುವುದು ಹೊಸದೇನಲ್ಲ. ಆದರೆ, ಪ್ರತಿಯೊಂದು ನಡೆಗೂ ರಾಜಕೀಯ ತಳುಕು ಹಾಕಬಾರದು.

ಸಂದರ್ಶನ ಎಸ್‌.ಲಕ್ಷ್ಮಿನಾರಾಯಣ 


Trending videos

Back to Top