CONNECT WITH US  

ಪ್ರತ್ಯೇಕ ಧರ್ಮಕ್ಕೆ ಯಾರ ಕೃಪೆಯೂ ಬೇಕಿಲ್ಲ

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಸಿದ್ದಗಂಗಾ ಶ್ರೀಗಳು ವಿರೋಧ ವ್ಯಕ್ತಪಡಿಸಿರುವುದರಿಂದ ವೀರಶೈವ ಮಹಾಸಭೆಯ ಬೇಡಿಕೆಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತಂತಾಗಿದೆ. ಎರಡೂ ಪ್ರತ್ಯೇಕ ಧರ್ಮದ ಬೇಡಿಕೆಯ ಮುಂಚೂಣಿ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌. ಈ ಬಗ್ಗೆ ಶರಣ ಪ್ರಕಾಶ್‌ ಪಾಟೀಲ್‌ ಜತೆ ನೇರಾ -ನೇರ ಮಾತುಕತೆಗೆ ಇಳಿದಾಗ.

ವೀರಶೈವ -ಲಿಂಗಾಯತರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೀರಾ ಯಶಸ್ವಿಯಾಗುತ್ತಾ ?
ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಏನು ಪ್ರಯತ್ನ ಮಾಡಬೇಕೋ ಮಾಡುತ್ತಿದ್ದೇನೆ. ಶಾಮನೂರು ಶಿವಶಂಕರಪ್ಪ, ಈಶ್ವರ್‌ ಖಂಡ್ರೆ ಅವರೊಂದಿಗೆ ಮಾತನಾಡಿ ದ್ದೇನೆ. ಅದೇ ರೀತಿ ಎಂ.ಬಿ. ಪಾಟೀಲ್‌, ಹೊರಟ್ಟಿ, ರಾಯರೆಡ್ಡಿ  ಎಲ್ಲರೂ ಸೇರಿ ಒಗ್ಗಟ್ಟಾಗಿ ಹೋಗೋಣ ಎಂಬ ತೀರ್ಮಾನಕ್ಕೆ ಬಂದಿದ್ದೇವೆ.

ವೀರಶೈವ ಲಿಂಗಾಯತ ಬೇರೆ ಎಂದಿದ್ದೀರಿ ಈಗ ಒಂದೇ ಅಂತಿದೀರಾ?
ನಮ್ಮ ಸಮಾಜ ಸ್ವತಂತ್ರ ಧರ್ಮ ಆಗಬೇಕು ಎಂಬ ಬೇಡಿಕೆ ಯಲ್ಲಿ ಎಲ್ಲರದೂ ಒಂದೇ ಅಭಿಪ್ರಾಯ  ಇದೆ. ವೀರಶೈವ ಮಹಾಸಭೆ ವೀರಶೈವ ಲಿಂಗಾಯತ ಬೇಕು ಅಂತಾರೆ, ಲಿಂಗಾಯತ ಸ್ವತಂತ್ರ ಧರ್ಮ ಬೇಕು ಎನ್ನುವವರು ವೀರಶೈವ ಬೇಡ ಅಂತಾರೆ. ಪ್ರತ್ಯೇಕ ಧರ್ಮ ಬೇಕು ಎನ್ನುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರತ್ಯೇಕ ಧರ್ಮ ಬೇಡ ಅನ್ನುವವರು ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕು. ಶೇಕಡಾ 90ರಷ್ಟು ಜನರು ಸ್ವತಂತ್ರ ಧರ್ಮ ಆಗಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.

ವೀರಶೈವ ಲಿಂಗಾಯತ ಪ್ರತ್ಯೇಕ ಅಂತ ನೀವು ಒಪ್ಪುತ್ತೀರಾ?
ಇಲ್ಲಾ ವೀರಶೈವರೂ ಬಸವಣ್ಣನ ಆರಾಧಕರು, ಅವರು ಲಿಂಗಾಯತರಿಂದ ಭಿನ್ನರಲ್ಲ. ವೀರಶೈವ ಬೇಕೋ ಲಿಂಗಾಯತ ಬೇಕೋ ಅನ್ನುವ ವಿಷಯದಲ್ಲಿ ಮಾತ್ರ ಭಿನ್ನಾಭಿ ಪ್ರಾಯ ಇದೆ. ಕೆಲವು ಮುಖಂಡರು ಲಿಂಗಾಯತ ಮಾತ್ರ ಶಿಫಾರಸ್ಸು ಮಾಡಿದರೆ ಅವಕಾಶ ಸಿಗುತ್ತದೆ ಎಂಬ ಅಭಿ ಪ್ರಾಯ ಇದೆ. ವೀರಶೈವ ಪದವನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ವೀರಶೈವ ಮಹಾಸಭೆಯ ವಾದ.ಹೀಗಾಗಿ ಅವರು ಲಿಂಗಾಯತ ಮಾತ್ರ ಪ್ರತ್ಯೇಕ ಧರ್ಮ ಎನ್ನುವುದನ್ನು ಒಪ್ಪುತಿಲ್ಲ. ವೀರಶೈವ ಮಹಾಸಭೆಯವರು ಬಸವಣ್ಣನ ತತ್ವ ಪಾಲಿಸುತ್ತೇವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿಯ ಕೆಲವೇ ಕೆಲವು ಜನರು ಮಾತ್ರ ವಿರೋಧಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಪ್ರೇರಣೆಯಿಂದ ಅವರು ಹಿಂದೂ ಧರ್ಮದಲ್ಲಿಯೇ ಉಳಿಯಲು ಈ ರೀತಿ ಹೇಳುತ್ತಿದ್ದಾರೆ.

ಬಿಜೆಪಿಯವರು ವಿರೋಧಿಸಿದರೆ ಧರ್ಮಕ್ಕೆ ಮಾನ್ಯತೆ ಸಿಗುತ್ತಾ ?
ಬಿಜೆಪಿಯವರು ಒಪ್ಪಲಿ ಬಿಡಲಿ, ಬಿಜೆಪಿಯ ನಾಯಕರೂ ಈ ಹಿಂದೆಯೇ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಆಗಬೇಕೆಂದು ಸಹಿ ಹಾಕಿದ್ದಾರೆ. ಅವರು ಈಗ ಸಂಘ ಪರಿವಾರದ ಒತ್ತಡಕ್ಕೆ ಮಣಿದು ಆ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಆರ್‌ಎಸ್‌ಎಸ್‌ ಮಾತು ಕೇಳಿ ಈ ಮಾತು ಹೇಳುತ್ತಿದ್ದಾರೆ. ಅವರು ಹಿಂದೂ ಧರ್ಮದ ಪ್ರತಿಪಾದಕರು ಎಂದು ಬಿಜೆಪಿ ನಿರ್ದೇಶನದಂತೆ ಅವರು ಮಾತನಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಪಂಚ ಪೀಠಾಧೀಶರು ವಿರೋಧಿಸುತ್ತಿದ್ದಾರಲ್ಲ.
ನಮಗೆ ಅವರ ಬಗ್ಗೆ ಗೌರವ ಇದೆ. ಅವರ ಆಚರಣೆಗಳು ಮೊದಲಿನಿಂದಲೂ ಜಾರಿಯಲ್ಲಿವೆ. ಅವುಗಳ ಬಗ್ಗೆ ನಾನೇನು ಹೇಳಲ್ಲÉ. ನಾವು ಯಾರದೋ ಒಬ್ಬರ ಅಭಿಪ್ರಾಯಕ್ಕೆ ಕಾಯುವುದಿಲ್ಲ. ಇದು ಜನರ ಅಭಿಪ್ರಾಯ. ಇಲ್ಲಿ ಜನಭಿಪ್ರಾಯವೇ ಅಂತಿಮ. ನಮ್ಮದು ಸ್ವತಂತ್ರ ದೇಶ ಜನರ ಅಭಿಪ್ರಾಯಕ್ಕೆ ಬೆಲೆ ಇದೆ. ಪಂಚ ಪೀಠಾಧೀಶರು ಅವರ ಅಭಿಪ್ರಾಯ ಹೇಳಬಹುದು. ಆದರೆ, ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಮಾನ್ಯತೆ ಸಿಗುತ್ತದೆ. 

ಲಿಂಗಾಯತ ಹೋರಾಟ ಮಾಡುವವರು ವೀರಶೈವರು ಬೇಡ ಅಂತಾರಲ್ಲಾ?
ನಮ್ಮ ಹೋರಾಟಗಾರರಲ್ಲಿ ಆ ಅಭಿಪ್ರಾಯ ಇಲ್ಲ. ಸ್ವತಂತ್ರ ಧರ್ಮ ಆಗುವ ವಿಷಯದಲ್ಲಿ ಅಭಿಪ್ರಾಯ ಬೇರೆ ಇದೆ. ಅದನ್ನು ಸರಿಪಡಿಸಲಿಕ್ಕೆ ಮಾತುಕತೆ ಪ್ರಯತ್ನ ನಡೆಯುತ್ತಿರುವುದು.

ಎಂ.ಬಿ ಪಾಟೀಲರು ಲಿಂಗಾಯತ ಮಾತ್ರ ಇರಬೇಕು ಅಂತಾರಲ್ಲಾ ?
ಎಂ.ಬಿ. ಪಾಟೀಲರು ಆ ರೀತಿಯ ವಾದ ಮಾಡಿದ್ದಾರೆ. ಆದರೆ, ಈಗ ಎರಡೂ ಕಡೆಯ ಮುಖಂಡರು ಒಂದಾಗಿ ಹೋಗಬೇಕೆನ್ನುವ ಮಾತುಕತೆಗೆ ಒಪ್ಪಿದ್ದಾರೆ. ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಒಂದಾಗಿ ಹೋಗಿ ಅಂತ ಹೇಳಿದ್ದಾರೆ. ಅದೇ ಪ್ರಯತ್ನವನ್ನು ನಾವು ಮಾಡುತ್ತೇವೆ. ಹೋರಾಟಗಾರರಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಎಲ್ಲವನ್ನು ಮಾತುಕತೆಯ ಮೂಲಕ ಪರಿಹರಿಸುತ್ತೇವೆ.

ವೀರಶೈವ ಮಹಾಸಭೆಯ ಹೆಸರು ಬದಲಾಯಿಸುವ ಬೇಡಿಕೆ ಇದೆಯಾ?
ಆ ರೀತಿಯ ಚರ್ಚೆ ಯಾವುದೂ ಆಗಿಲ್ಲ. ಈಗ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು ಎನ್ನುವುದಷ್ಟೇ ಎಲ್ಲರ ಅಭಿ ಪ್ರಾಯ. ಮೊದಲು ಎಲ್ಲರೂ ಒಂದಾಗಿ ಚರ್ಚಿಸಿದ ನಂತರ ಮುಂದಿನ ತೀರ್ಮಾನ.

ಧರ್ಮದ ಹೋರಾಟದಲ್ಲಿ ಸಚಿವರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಯ್ತಾ ?
ನಮ್ಮ ಸಚಿವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಯಾವ ಹೆಸರಲ್ಲಿ ಆಗಬೇಕು ಎನ್ನುವ ಬಗ್ಗೆ ತಾಂತ್ರಿಕವಾಗಿ ಯಾವುದು ಸರಿ ಎನ್ನುವುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಬೇರೆ ಸಣ್ಣ ಪುಟ್ಟ ಗೊಂದಲಗಳನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಬಹುದು.

ಇದರ ಹಿಂದೆ ಕೆಲವರ ಹಿಡನ್‌ ಅಜೆಂಡಾ ಇದೆಯಂತೆ ?
ಇದರಲ್ಲಿ ಯಾರದ್ದೂ ಹಿಡನ್‌ ಅಜೆಂಡಾ ಇಲ್ಲಾ. ಲಿಂಗಾಯತ ಪ್ರತ್ಯೇಕ ಧರ್ಮ ಆದರೆ, ಧಾರ್ಮಿಕ ಅಲ್ಪ ಸಂಖ್ಯಾತರ ಕೋಟಾದಡಿ ಶಿಕ್ಷಣ ಸಂಸ್ಥೆಗಳಿಗೆ ಲಾಭ ಆಗುತ್ತೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಈಗ ನೀಟ್‌, ಸಾಮಾನ್ಯ ಕೌನ್ಸೆಲಿಂಗ್‌ ಬಂದಿರುವುದರಿಂದ ಯಾರಿಗೂ ಯಾವುದೇ ಅನುಕೂಲ ಇಲ್ಲ. 

ಧರ್ಮದ ವಿಚಾರದಲ್ಲಿ ಮಂತ್ರಿಗಳಿಗೆ ಏನು ಕೆಲಸ ?
ಮಂತ್ರಿಗಳು ಯಾರಾದರೇನು, ಸರ್ಕಾರ ಏನೂ ಇದರಲ್ಲಿ ಭಾಗವಹಿಸಿಲ್ಲ. ಜನರು ಮಂತ್ರಿಗಳ ಮಾತಿಗೆ ಗೌರವ ಕೊಡುತ್ತಾರೆ. ಮಂತ್ರಿಗಳು ತಮ್ಮ ಸಮಾಜದ ಬಗ್ಗೆ ಅಭಿಪ್ರಾಯ ಮಂಡಿಸಲಿಕ್ಕೆ ಅವಕಾಶ ಇಲ್ವಾ ?

ಒಗ್ಗಟ್ಟಾಗಿ ಬನ್ನಿ ಅಂತ ಮುಖ್ಯಮಂತ್ರಿಯವರು ಹೇಳಿದ್ದಾರಂತೆ, ನಿಮ್ಮಲ್ಲಿ ಒಗ್ಗಟ್ಟೇ ಇಲ್ವಲ್ಲಾ ?
ಆ ಮಾತು ಸರಿಯಲ್ಲ, ನಮ್ಮಲ್ಲಿ ಒಗ್ಗಟ್ಟು ಖಂಡಿತಾ ಇದೆ, ನಾವೆಲ್ಲರೂ ಒಟ್ಟಿಗೆ ಹೋಗುತ್ತೇವೆ.

ಮುಖ್ಯಮಂತ್ರಿಯವರು ಲಿಂಗಾಯತರನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ ಅಂತಾರೆ ?
ಮುಖ್ಯಮಂತ್ರಿಯವರು ಯಾಕೆ ಲಿಂಗಾಯತರನ್ನು ಒಡೆಯುತ್ತಾರೆ? ಅದರಿಂದ ಅವರಿಗೇನು ಲಾಭ ? ಕಾಂಗ್ರೆಸ್‌ನಲ್ಲಿ ಸಾಕಷ್ಟು ಲಿಂಗಾಯತ ಶಾಸಕರಿದ್ದಾರೆ. ಎಲ್ಲ ಪಕ್ಷಗಳಲ್ಲಿ ಎಲ್ಲ ಸಮಾಜದ ಮುಖಂಡರಿದ್ದಾರೆ. ಲಿಂಗಾಯತರ ಬೆಂಬಲ ಇಲ್ಲದೇ ಯಾರಾದರೂ ಗೆದ್ದು ಬರಲು ಸಾಧ್ಯವಿದೆಯೇ? ಎಲ್ಲ ಪಕ್ಷದವರು ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕು ಎಂದು ಕೈ ಜೋಡಿಸಿದರೆ, ಎಲ್ಲ ಪಕ್ಷಗಳಿಗೂ ಅನುಕೂಲ ಆಗಲಿದೆ. ಹೀಗಾಗಿ ಎಲ್ಲ ಪಕ್ಷದವರು ಕೈ ಜೋಡಿಸಬೇಕು.

ಜಾತಿ ಗಣತಿಯಲ್ಲಿ ಲಿಂಗಾಯತರು ಕಡಿಮೆ ಅಂತ ಹೇಳಿದ್ದಾರಲ್ಲಾ ?
ಜಾತಿ ಸಮೀಕ್ಷೆಯ ಅಧಿಕೃತ ಮಾಹಿತಿ ಇನ್ನೂ ಸ್ಪಷ್ಟವಾಗಿ ಹೊರಬಂದಿಲ್ಲ. ಬಿಜೆಪಿಯವರು ಇದನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮಠಾಧೀಶರಲ್ಲಿಯೂ ಭಿನ್ನಾಭಿಪ್ರಾಯ ಇದೆಯಲ್ಲ?
ಸಮಾಜಕ್ಕಿಂತ ಯಾರೂ ದೊಡ್ಡವರಲ್ಲ. ಮಠಾಧೀಶರಾಗಿರ ಬಹುದು. ರಾಜಕಾರಣಿಗಳಾಗಿರಬಹುದು. ಸ್ವಂತ ಅಭಿಪ್ರಾಯಕ್ಕಿಂತ  ಸಮಾಜದ ಒಳಿತಿಗೆ ಮಾತ್ರ ಪ್ರಯತ್ನ ಮಾಡಬೇಕು. ಮಠಾಧೀಶರನ್ನೂ ಒಗ್ಗೂಡಿಸುವ ಪ್ರಯತ್ನ ನಡೆಸುತ್ತೇವೆ.

ಕಲಬುರ್ಗಿ ಸಮಾವೇಶ ಲಿಂಗಾಯತಕ್ಕೋ ವೀರಶೈವಕ್ಕೋ?
ಕಲಬುರ್ಗಿ ಸಮಾವೇಶ ಈಗಾಗಲೇ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಅಂತ ತೀರ್ಮಾನ ಆಗಿದೆ. ಈಗ ಎಲ್ಲರೂ ಒಂದೇ ವೇದಿಕೆಗೆ ಬರಬೇಕೆಂಬ ಅಭಿಪ್ರಾಯ ಬಂದರೆ, ಅವಾಗ ಏನಿಡಬೇಕೋ ತೀರ್ಮಾನಿಸುತ್ತೇವೆ. ಒಂದಾಗದಿದ್ದರೇ ಈಗಿರುವ ಬೇಡಿಕೆಯಲ್ಲಿಯೇ ಸಮಾವೇಶ ನಡೆಯಲಿದೆ.

ಲಿಂಗಾಯತ ನಾಯಕರ ನಡುವೆ ವಾಗ್ವಾದ ಹೆಚ್ಚಾಯ್ತು ಅನಿಸಲ್ವಾ ?
ಲಿಂಗಾಯತ ನಾಯಕರು ಯಾರೂ ವೈಯಕ್ತಿಕವಾಗಿ ದೂಷಿಸುವುದು ಸರಿಯಲ್ಲ. ಸೋಮಣ್ಣ ಅವರು ಎಂ.ಬಿ. ಪಾಟೀಲರ ಬಗ್ಗೆ ಏಕ ವಚನದಲ್ಲಿ ಮಾತನಾಡಿದರೆ ಅದು ತಪ್ಪು. ಯಾರೂ ಯಾರ ಬಗ್ಗೆಯೂ ಆರೋಪ ಮಾಡುವುದರಿಂದ ಪರಿಹಾರ ಸಿಗುವುದಿಲ್ಲ.

ನಿಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡುತ್ತದೆಯೇ?
ನಮ್ಮದು ಪ್ರಜಾಪ್ರಭುತ್ವ ದೇಶ. ನಾವು ಯಾವುದೇ ಸರ್ಕಾರ ವನ್ನು ಅವಲಂಬಿಸಿ ಹೋರಾಟ ಮಾಡುತ್ತಿಲ್ಲ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಕಾನೂನು ಹೋರಾಟದ ಮೂಲಕ ಪಡೆದುಕೊಳ್ಳುತ್ತೇವೆ. ಯಾರ ಕೃಪೆಯೂ ನಮಗೆ ಬೇಕಿಲ್ಲ. ನಮಗೆ ಪ್ರತ್ಯೇಕ ಧರ್ಮ ಬೇಕು ಎನ್ನುವ ಬಗ್ಗೆ ನ್ಯಾಯಾಲಯವನ್ನು ಹೇಗೆ ಮನವರಿಕೆ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. 

ವೀರಶೈವಕ್ಕೆ ಅಪ್ಪ ಇಲ್ಲ ಅಮ್ಮ ಇಲ್ಲಾ ಅಂತಾರೆ ?
ನಾನು ಆ ಚರ್ಚೆಗೆ ಅಭಿಪ್ರಾಯ ವ್ಯಕ್ತಪಡಿಸಲ್ಲ. ಅದು ಬಹು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾವು ಒಗ್ಗಟ್ಟಾಗಿ ಹೋಗಬೇಕೆಂದು ಬಯಸುತ್ತೇನೆ. ವೀರಶೈವರು ಲಿಂಗಾಯತರು ಬೇರೆ ಅನ್ನುವುದನ್ನು ನಾನು ಒಪ್ಪುವುದಿಲ್ಲ. ಹಿಂದಿನಿಂದ ಕೆಲವು ಆಚರಣೆಗಳನ್ನು ಮಾಡಿಕೊಂಡು ಬಂದಿರುವುದನ್ನು ಬಿಡಲು ಕೆಲವರಿಗೆ ಆಗದಿರಬಹುದು. ಹಾಗಂತ ನಾವು ಅವರನ್ನು ಬಿಡಲು ಆಗುವುದಿಲ್ಲ. 

ನಿಮ್ಮ ವಾದ ಯಾರ ಪರವಾಗಿದೆ ? ಲಿಂಗಾಯತವೋ, ವೀರಶೈವವೋ ?
ನಾನು ಯಾವುದೇ ಗುಂಪಿನ ಜೊತೆಗೆ ಗುರುತಿಸಿಕೊಳ್ಳುವುದಿಲ್ಲ. ನಾನು ಬಸವಣ್ಣನ ಅಭಿಮಾನಿ. ವೀರಶೈವರೂ ಬಸವ ತತ್ವದ ಮೇಲೆ ಅಭಿಮಾನ ಹೊಂದಿದ್ದಾರೆ. ಅವರು ಬಸವ ತತ್ವ ವಿರೋಧಿಗಳು ಎನ್ನುವುದನ್ನು ನಾನು ಒಪ್ಪುವುದಿಲ್ಲ.

ರಾಜಕೀಯ ಪಕ್ಷವಿಲ್ಲ
ಇದರ ಹಿಂದೆ ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರ ಇಲ್ಲ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯ ಹಿಂದೆ ತತ್ವ ಮುಖ್ಯವಾಗಿದೆ. ವೀರಶೈವ ಇರಬೇಕಾ ಲಿಂಗಾಯತ ಇರಬೇಕಾ ಅನ್ನೋದು ಮುಖ್ಯ ಅಲ್ಲ. ನಮ್ಮ ಮುಂದಿನ ಪೀಳಿಗೆ ಕಾಯಕ ಮತ್ತು ದಾಸೋಹ ತತ್ವ ಗೌರವಿಸುವ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಅನುಕೂಲ ಆಗಲಿದೆ. ಪ್ರತ್ಯೇಕ ಧರ್ಮದಿಂದ ಸವಲತ್ತು ಸಿಗುತ್ತದೆ ಎನ್ನುವುದು ಎರಡನೇ ವಿಷಯ.

ಸಂದರ್ಶನ, ಶಂಕರ ಪಾಗೋಜಿ


Trending videos

Back to Top