CONNECT WITH US  

ಬೀದಿಗಿಳಿದಾದ್ರೂ ಜಾರ್ಜ್‌ ರಾಜೀನಾಮೆ ಪಡೀತೀವಿ

ನಾನು ಹಿಂದೂ ನಾಯಕ, ಹಿಂದುತ್ವ ನನ್ನ ಅಜೆಂಡಾ 

ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದರಿಂದ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡುವವರೆಗೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದರು. ಇತ್ತ ವಿಧಾನಮಂಡಲದ ಉಭಯ ಸದನಗಳಲ್ಲೂ ಬಿಜೆಪಿ ಈ ಕುರಿತು ಹೋರಾಟ ನಡೆಸಿತಾದರೂ ಒಂದೇ ದಿನಕ್ಕೆ ಅದು ಥಂಡಾ ಆಗಿದೆ. ಹೀಗಾಗಿ ಈ ವಿಚಾರದಲ್ಲಿ ಬಿಜೆಪಿ ಹೋರಾಟದಿಂದ ದೂರ ಸರಿದಿದ್ದೇಕೆ? ಒಂದು ದಿನ ಗದ್ದಲ ಎಬ್ಬಿಸಿ ಸುಮ್ಮನಾಗಿದ್ದು ಯಾಕೆ? ಯಡಿಯೂರಪ್ಪ ಸೂಚನೆ ಠುಸ್‌ ಆಯ್ತಾ? ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆಯಾ? ಈ ಎಲ್ಲ ವಿಚಾರಗಳ ಬಗ್ಗೆ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಅವರೊಂದಿಗೆ ಮಾತುಕತೆಗೆ ಇಳಿದಾಗ...

 ಬೆಳಗಾವಿಯ ವಿಧಾನಮಂಡಲ ಅಧಿವೇಶನ ಹೇಗೆ ನಡೆಯುತ್ತಿದೆ?
ರಾಜ್ಯ ಸರ್ಕಾರ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ. ಪ್ರತಿ ಪಕ್ಷಗಳು ಸಾಕಷ್ಟು ವಿಚಾರಗಳನ್ನು ಸರ್ಕಾರದ ಗಮನಕ್ಕೆ ತಂದರೂ ಯಾವುದಕ್ಕೂ ಸ್ಪಂದನೆ ಇಲ್ಲ, ಪ್ರತಿಕ್ರಿಯೆಯೂ ಇಲ್ಲ. ಎಲ್ಲದಕ್ಕೂ ಪಲಾಯನ ಮಾಡಲಾಗುತ್ತಿದೆ. ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್‌ ಹಾಕಿದ್ದರೂ ಸಚಿವ ಜಾರ್ಜ್‌ ರಾಜೀನಾಮೆ ಕೊಡಿಸಲ್ಲ ಎಂಬುದು ಭಂಡತನ ವಲ್ಲವೇ? ಮೊದಲು ಪ್ರಕರಣ ಸಿಐಡಿ ತನಿಖೆಗೆ ಕೊಟ್ಟಾಗ ರಾಜೀನಾಮೆ ಕೊಟ್ರಾ, ಈಗ್ಯಾಕೆ ಕೊಡಲ್ಲ? ಆಗ ಕ್ಲೀನ್‌ಚಿಟ್‌ ಪಡೆದುಕೊಳ್ಳಬಹುದು ಎಂಬ ಧೈರ್ಯದಿಂದ ರಾಜೀನಾಮೆ ಕೊಟ್ರಾ?

ನೀವು ಜಾರ್ಜ್‌ ರಾಜೀನಾಮೆ ವಿಚಾರದಲ್ಲಿ ಬಿಗಿ ಪಟ್ಟು ಹಿಡಿಯಲಿಲ್ಲವಲ್ಲಾ?
ಉಭಯ ಸದನಗಳಲ್ಲೂ ನಾವು ನಮ್ಮ ಕೆಲಸ ಮಾಡಿದ್ದೇವೆ. ನೈತಿಕತೆ ಇದ್ದರೆ ಜಾರ್ಜ್‌ ಕೈಲಿ ರಾಜೀನಾಮೆ ಕೊಡಿಸಬೇಕಿತ್ತು. ಅದು ಬಿಟ್ಟು ಸಮರ್ಥನೆ ಮಾಡಿಕೊಳ್ಳೋ ವರ್ತನೆಗೆ ಏನೆನ್ನ ಬೇಕು? ರಾಜ್ಯದ ಜನತೆಗೆ ಇವರ ಭಂಡತನ ಗೊತ್ತಾಗಿದೆ.

ನೀವು ಎರಡೂ ಸದನಗಳಲ್ಲಿ ಸುಮ್ಮನಾದಿರಲ್ಲಾ?
ನೋಡಿ. ಇಲ್ಲಿ ಬಂದಿರುವುದು ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರ ಈಡೇರಿಸಲು. ನಮಗೆ ಜಾರ್ಜ್‌ ವಿಚಾರದಷ್ಟೇ ಈ ಭಾಗದ ಸಮಗ್ರ ಅಭಿವೃದ್ಧಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೂ ಅತಿ ಮುಖ್ಯ. ಇದನ್ನೇ ಹಿಡಿದುಕೊಂಡು ಹೋದರೆ ಕಲಾಪ ನಡೆಯದಂತಾಗುತ್ತದೆ. ಸರ್ಕಾರಕ್ಕೂ ಅದೇ ಬೇಕು. ಗಲಾಟೆ ಮಾಡ್ತಾರೆ ಎಂದು ಟೀಕಿಸುತ್ತಾರೆ. ಹೀಗಾಗಿ, ಸದನ ಸುಗಮವಾಗಿ ನಡೆಯಲಿ ಎಂದು ಸುಮ್ಮನಾಗಿದ್ದೇವೆ.

ಯಡಿಯೂರಪ್ಪ ಅವರು ಜಾರ್ಜ್‌ ರಾಜೀನಾಮೆ ಕೊಡು ವ ವರೆಗೂ ಅಧಿವೇಶನ ನಡೆಸಲು ಬಿಡಲ್ಲ ಅಂದಿದ್ರು?
ಹೌದು. ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದರು. ಆದರೆ, ಇಲ್ಲಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಬೆಂಗಳೂರಿನಲ್ಲಿ ಅಧಿವೇಶನ ನಡೆದಿದ್ದರೆ ಜಾರ್ಜ್‌ ರಾಜೀನಾಮೆ ಕೊಡುವ ವರೆಗೂ ಬಿಡುತ್ತಿರಲಿಲ್ಲ. 

ಹಾಗಾದರೆ ಬಿಜೆಪಿ ಈ ವಿಚಾರದಲ್ಲಿ ಹೋರಾಟ ಕೈ ಬಿಡ್ತಾ?
ನೋ. ಸದನದ ಹೊರಗೆ ಬೀದಿಯಲ್ಲಿ ನಾವು ಹೋರಾಟ ಮಾಡ್ತೇವೆ. ಜಾರ್ಜ್‌ ರಾಜೀನಾಮೆ ಪಡೆದೇ ತೀರುತ್ತೇವೆ. ಸುಪ್ರಿಂಕೋರ್ಟ್‌ ತೀರ್ಪಿಗೆ ಗೌರವ ತಂದೇ ತರ್ತೇವೆ. ರಾಜ್ಯ ಸರ್ಕಾರಕ್ಕಂತೂ ಸುಪ್ರಿಂಕೋರ್ಟ್‌ ಮೇಲೆ ಗೌರವ ಇಲ್ಲ.

ಸಿಬಿಐ ಎಫ್‌ಐಆರ್‌ ಹಾಕಿದ್ದಕ್ಕೆ ರಾಜೀನಾಮೆ ಕೊಡಬೇಕಾದರೆ ಕೇಂದ್ರದ 20 ಕ್ಕೂ ಹೆಚ್ಚು ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲಾ?
ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುತ್ತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ, ನಾವು ಹೋರಾಟ ಮಾಡುತ್ತಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಅಲ್ಲಿ ಹೋರಾಟ ಮಾಡಲಿ ಬಿಡಿ. ಎಲ್ಲದಕ್ಕೂ ವಿತಂಡವಾದ, ಪ್ರತಿಷ್ಠೆ ಯಾಕೆ? ವೈದ್ಯರ ವಿಚಾರದಲ್ಲಿ ಇವರ ವರ್ತನೆಯಿಂದ ಜನ ಸಾಯುವಂತಾಗಿದೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೆಲೆ ಸರ್ಕಾರ ನಿಯಂತ್ರಣ ಇರಬೇಕು ಎಂದು ಹೇಳ್ತಾರಲ್ಲಾ?
ಸರ್ಕಾರ ನಿಯಂತ್ರಣ ಇಟ್ಟುಕೊಳ್ಳಲಿ. ಆದರೆ, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರ ಚರ್ಚೆಯ ನಂತರ ವಿಧೇಯಕ ತರಬೇಕಿತ್ತಲ್ಲವೇ? ರಾಜ್ಯದಲ್ಲಿ ಶೇ.80 ರಷ್ಟು ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ಸೇರಿದವರು. ಶೇ.20 ರಷ್ಟು ಮಾತ್ರ ಸರ್ಕಾರಿ ವೈದ್ಯರು. ಇದನ್ನು ಸರ್ಕಾರ ಮೊದಲು ಅರ್ಥಮಾಡಿಕೊಳ್ಳಬೇಕು. ರಮೇಶ್‌ಕುಮಾರ್‌ ಪ್ರತಿಷ್ಠೆಗೆ ಜನ ಸಾಮಾನ್ಯರು ಕಷ್ಟ ಅನುಭವಿಸುವಂತಾಗಿದೆ.

ಹಾಗಾದರೆ ವಿಧೇಯಕಕ್ಕೆ ನಿಮ್ಮ ವಿರೋಧ ಇದೆಯಾ?
ಖಂಡಿತ. ಈಗಿನ ಸ್ವರೂಪದ ವಿಧೇಯಕಕ್ಕೆ ನಮ್ಮ ವಿರೋಧ ಇದೆ. ಹಾಗಂತ ಯಾರೋ ಕೆಲವು ವೈದ್ಯರು ಜನರನ್ನು ಸುಲಿಗೆ ಮಾಡುವುದನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಅದಕ್ಕೊಂದು ರೀತಿ ನೀತಿ ಇರುತ್ತದೆ. ಹಿಟ್ಲರ್‌ ರೀತಿ ವರ್ತಿಸಬಾರದು. ಇದು ಪ್ರಜಾಪ್ರಭುತ್ವ.

ವಿಧೇಯಕ ವಿಚಾರದಲ್ಲಿ ರಮೇಶ್‌ಕುಮಾರ್‌ ಅವರು ಪಟ್ಟು ಹಿಡಿದಿದ್ದಾರಲ್ಲಾ?
ಅವರು ವಾಸ್ತವ ಸಂಗತಿ ಅರ್ಥಮಾಡಿಕೊಳ್ಳುತ್ತಿಲ್ಲ. ಪರಿಷತ್‌ನಲ್ಲಿ ನಾವು ಆ ಬಗ್ಗೆ ಪ್ರಸ್ತಾಪ ಮಾಡಿದಾಗಲೂ ತನಗೆ ವೈಯಕ್ತಿಕವಾಗಿ ಅಪಮಾನ ಆಯಿತು ಎಂದು ಹೇಳಿದರೆ ಜನರಿಗೆ ತೊಂದರೆ ತಪ್ಪಿಸುವ ಬಗ್ಗೆ ಹೇಳಲೇ ಇಲ್ಲ. ಟಿಪ್ಪು ಜಯಂತಿಯಿಂದ ಹಿಡಿದು ಎಲ್ಲ ವಿಚಾರಗಳಲ್ಲೂ ಸರ್ಕಾರದ್ದು ಇದೇ ಧೋರಣೆ.

ಟಿಪ್ಪು ಜಯಂತಿಯಲ್ಲಿ ಯಡಿಯೂರಪ್ಪ ಭಾಗವಹಿಸಿ ಟೋಪಿ ಹಾಕಿಕೊಂಡು ಕತ್ತಿ ಹಿಡಿದಿದ್ದರು. ಈಗ ರಾಜಕೀಯ ಕಾರಣಗಳಿಗಾಗಿ ಟೀಕೆ ಮಾಡ್ತಿದಾರೆ ಅಂತ ಸಿದ್ದರಾಮಯ್ಯ ಹೇಳಿದ್ದಾರಲ್ಲಾ?
ಹೌದು, ಯಡಿಯೂರಪ್ಪ ಹಿಂದೆ ಟಿಪ್ಪು ಸಮಾವೇಶ ಮಾಡಿ ದಾಗ ಹೋಗಿದ್ದರು. ಆದರೆ, ಇತಿಹಾಸ ಏನು ಎಂದು ತಿಳಿದ ನಂತರ ಅರಿವಾಗಿದೆ. ಟಿಪ್ಪು ಮತಾಂಧ, ದೇವಾಲಯ, ಚರ್ಚ್‌ ಧ್ವಂಸ ಮಾಡಿದವ. ಮಂಗಳೂರು ನಗರಾಭಿವೃದ್ಧಿ ಪ್ರಾಧಿ
ಕಾರ ಹೊರತಂದಿರುವ ಮಂಗಳೂರು ದರ್ಶನ ಸಂಪುಟದಲ್ಲಿ ಟಿಪ್ಪು 60 ಸಾವಿರ ಕ್ರೈಸ್ತರನ್ನು ಕೊಲೆ ಮಾಡಿದ್ದು ಉಲ್ಲೇಖವಿದೆ. ಕರಾವಳಿ ಭಾಗದಲ್ಲಿ ನೆತ್ತರಕೆರೆ ಎಂಬ ಪ್ರದೇಶವಿದೆ. ಟಿಪ್ಪು ಕೊಂದ ಕ್ರೈಸ್ತರ ರಕ್ತ ಹರಿದು ಕೆರೆಯಂತಾಗಿದ್ದರಿಂದ ನೆತ್ತರಕೆರೆ ಎಂಬ ಹೆಸರು ಬಂದಿತು ಎಂಬುದು ಅಲ್ಲಿನ ಜನರು ಹೇಳುತ್ತಾರೆ. ಈ ಪುಸ್ತಕ ವಿನಯಕುಮಾರ್‌ ಸೊರಕೆ ಸಚಿವ ರಾಗಿದ್ದಾಗಲೇ ಬಿಡುಗಡೆಯಾಗಿದೆ. ಆ ಕಾರ್ಯಕ್ರಮದಲ್ಲಿ ರಮಾನಾಥ್‌ ರೈ, ಅಭಯಚಂದ್ರ ಜೈನ್‌ ಸಹ ಉಪಸ್ಥಿತರಿದ್ದರು. 

ಹಿಂದೂಗಳ ಮತ ಗಟ್ಟಿ ಮಾಡಿಕೊಳ್ಳಲು ಟಿಪ್ಪು ವಿಚಾರದಲ್ಲಿ ಬಿಜೆಪಿ ವಿರೋಧ ಮಾಡು¤ ಅಂತಾರಲ್ಲಾ?
ಒಬ್ಬ ಮತಾಂಧ, ಕ್ರೂರಿಯನ್ನು ನಾವೇಕೆ ಒಪ್ಪಿಕೊಳ್ಳಬೇಕು? ಅಬ್ದುಲ್‌ ಗಫಾರ್‌ಖಾನ್‌, ಅಬ್ದುಲ್‌ ಕಲಾಂ ಅವರ ಜಯಂತಿ ಆಚರಿಸಲಿ. ಅದು ಬಿಟ್ಟು ಬೇಕಂತಲೇ ಟಿಪ್ಪು ಜಯಂತಿ ಯಾಕೆ? ಸಿದ್ದರಾಮಯ್ಯ ಜಾತಿ-ಜಾತಿ ನಡುವೆ, ಧರ್ಮ-ಧರ್ಮದ ನಡುವೆ ಬೆಂಕಿ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಲಿಂಗಾಯಿತ -ವೀರಶೈವ, ಬಡ್ತಿ ಮೀಸಲಾತಿ, ಒಳ ಮೀಸಲಾತಿ, ಜಾತಿ ಸಮೀಕ್ಷೆ ಎಲ್ಲವನ್ನೂ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಸಿದ್ದರಾಮಯ್ಯ ನಿಜವಾಗಿಯೂ ಹಿಂದುಳಿದ ಹಾಗೂ ದಲಿತರ ವಿರೋಧಿ.

ನಿಮ್ಮ ಮಾತಿನ ಅರ್ಥ?
ನೋಡಿ ಸಿದ್ದರಾಮಯ್ಯ ಅವರು ಎಂದೂ ಹಿಂದುಳಿದ ಹಾಗೂ ದಲಿತರ ಪರವಾಗಿ ಆ ಸಮುದಾಯದ ನಾಯಕರನ್ನು ಬೆಳೆ ಯಲು ಬಿಟ್ಟಿಲ್ಲ. ಬಾಯಲ್ಲಿ ಮಾತ್ರ ಅಹಿಂದ ಮಂತ್ರ. ಆದರೆ, ಯಾರೂ ಬೆಳೆಯದಂತೆ ತುಳಿಯವಲ್ಲಿ ಅವರು ಎಕ್ಸ್‌ ಪರ್ಟ್‌. ದಲಿತ ಸಮುದಾಯದ ವಿ. ಶ್ರಿನಿವಾಸಪ್ರಸಾದ್‌ ಅವರನ್ನು ಬಿಡಲಿಲ್ಲ, ಇವರನ್ನು ಕಾಂಗ್ರೆಸ್‌ಗೆ ಕರೆತಂದ ಎಚ್‌.ವಿಶ್ವನಾಥ್‌ ಅವರನ್ನೂ ಬಿಡಲಿಲ್ಲ. ತಾನು ಬಿಟ್ಟರೆ ಯಾರೂ ಬೆಳೆಯ
ಬಾರದು ಎಂಬುದು ಅವರ ಗುಣ.

ಆದರೂ ಸಿದ್ದರಾಮಯ್ಯ ಕುರುಬ ಸಮುದಾಯದ ನಾಯಕರಲ್ಲವೇ?
ಹಾಗಂತ ಅವರು ಬಿಂಬಿಸಿಕೊಳ್ಳುತ್ತಿದ್ದಾರೆ. ವಾಸ್ತವವೇ ಬೇರೆ. ನಾನಂತೂ ಕುರುಬ ನಾಯಕನಾಗಿ ಮಾತ್ರ ಬಿಂಬಿಸಿಕೊ
ಳ್ಳಲು ಬಯಸುವುದಿಲ್ಲ. ನಾನೂ ಹಿಂದೂ ಎಂದು ಗುರುತಿಸಿಕೊಳ್ಳಲು ಬಯಸುತ್ತೇನೆ. ಹಿಂದುತ್ವ ನನ್ನ ಅಜೆಂಡಾ, ಜತೆಗೆ ಕುರುಬ ಸಮುದಾಯ ಸೇರಿ ಹಿಂದುಳಿದ ವರ್ಗಗಳು ಜಾಗ್ರತೆಯಾಗಬೇಕು ಎಂಬ ನೈಜ ಕಾಳಜಿ ಹೊಂದಿದ್ದೇನೆ. ಅದಕ್ಕಾಗಿಯೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿದ್ದೆ. ಕುಲ ಕುಲ ಕುಲ ಎಂದು ಹೊಡೆದಾಡದಿರಿ ಎಂಬ ಕನಕದಾಸರ ವಿಚಾರ ನನಗೆ ಸ್ಫೂರ್ತಿ.

ಆದರೆ, ಬ್ರಿಗೇಡ್‌ ಕೈ ಬಿಟ್ಟಿರಲ್ಲಾ?
ಹಾಗೇನೂ ಇಲ್ಲ. ರಾಯಣ್ಣ ಬ್ರಿಗೇಡ್‌ಗೆ ಉತ್ತಮ ಸ್ಪಂದನೆ ದೊರಕಿತ್ತು. ನಿಜಕ್ಕೂ ಅದೊಂದು ಹಿಂದುಳಿದ ಸಮುದಾಯದ ಜಾಗೃತಿ ಅಭಿಯಾನದಂತಾಗಿತ್ತು. ಆದರೆ, ಪಕ್ಷದ ವಿಚಾರಕ್ಕೆ ಬಂದಾಗ ಕೆಲವೊಂದು ಅನಗತ್ಯ ಗೊಂದಲಕ್ಕೆ ಕಾರಣವಾಗಬಾರದು ಎಂದು ಸುಮ್ಮನಾದೆವು. 

ಬಿಜೆಪಿಯಲ್ಲಿ ನಿಮ್ಮ ಹಾಗೂ ಯಡಿಯೂರಪ್ಪ ನಡುವಿನ ವಿರಸ ಕೊನೆಯಾಯ್ತಾ?
ಅದೆಲ್ಲವೂ ಮುಗಿದ ಅಧ್ಯಾಯ. ಈಗ ನಾವೆಲ್ಲರೂ ಒಟ್ಟಾಗಿ ದ್ದೇವೆ, ಒಟ್ಟಿಗೆ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿದ್ದೇವೆ. ನಾನು ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಅನಂತ ಕುಮಾರ್‌, ಸದಾನಂದಗೌಡ ಎಲ್ಲರೂ ಸೇರಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತರ್ತೇವೆ. ಅದಕ್ಕಾಗಿಯೇ ಪರಿವರ್ತನಾ ಯಾತ್ರೆ ಹೊರಟಿದ್ದು ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ.

ಬೆಂಗಳೂರಿನಲ್ಲಿ ಮೊದಲ ದಿನವೇ ಫ್ಲಾಪ್‌ ಷೋ ಆಯ್ತಲ್ಲಾ?
ಆ ದಿನ ಬಿರು ಬಿಸಿಲು. ನಾವು ಶಾಮಿಯಾನ ಸಹ ಹಾಕಿರಲಿಲ್ಲ. ಮೋಟಾರು ಬೈಕ್‌ಗಳಲ್ಲಿ ಕಾರ್ಯಕರ್ತರು ಬಂದಿದ್ದರು. ಆದರೆ, ಚದುರಿ ಹೋಗಿದ್ದರಿಂದ ಕಾಣಲಿಲ್ಲ. ಆದರೆ, ಇದೀಗ ಹೋದ ಕಡೆಯಲ್ಲಾ ನಮ್ಮ ನಿರೀಕ್ಷೆಗೂ ಮೀರಿ ಜನ ಬರಿ¤ದಾರೆ.

ಕುಂದಾಪುರ ಸೇರಿದಂತೆ ಕೆಲವೆಡೆ ಗೊಂದಲ-ಗದ್ದಲ ಇತ್ತಲ್ಲಾ?
ಸಣ್ಣಪುಟ್ಟ ಸಮಸ್ಯೆ ಎಲ್ಲ ಕಡೆ, ಎಲ್ಲ ಪಕ್ಷಗಳಲ್ಲೂ ಇರುತ್ತವೆ. ಆದರೆ, ಒಟ್ಟಾರೆಯಾಗಿ ರಾಜ್ಯದ ಜನ ಬಿಜೆಪಿಯನ್ನು ಬಯಸುತ್ತಿದ್ದಾರೆ.

ಸಿದ್ದರಾಮಯ್ಯ ಫೀಲ್ಡಿಗೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ?
ಅದೇ ಭಂಡತನ ಅನ್ನೋದು. ಹಾಗೇ ಹೇಳಬೇಕಲ್ಲಾ? ಕಾಂಗ್ರೆಸ್‌ ಸ್ಥಿತಿ ಏನಾಗಿದೆ ಎಂಬುದು ಚುನಾವಣೆ ಫಲಿತಾಂಶ ಬಂದ ಮೇಲೆ ತಾನೆ ಗೊತ್ತಾಗೋದು? ಕಳೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಮತ ವಿಭಜನೆಯಾಗಿದ್ದರಿಂದ ಇವರು ಅಧಿಕಾರಕ್ಕೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇವರದೇ ಪಕ್ಷ ಅಧಿಕಾರದಲ್ಲಿದ್ದರೂ ಬಿಜೆಪಿ 17 ಸ್ಥಾನ ಪಡೆಯಿತು. ಕಾಂಗ್ರೆಸ್‌ಗೆ ಬಂದಿದ್ದು 9 ಸೀಟು ಮಾತ್ರ. ಇದು ನೆನಪಿರಲಿ.

ಏಕವಚನ ವಾರ್‌ ಯಾಕೆ?
ನೋಡಿ ಕಳ್ಳನನ್ನು ಕಳ್ಳ ಎಂದರೆ ಕೋಪ ಬರುತ್ತೆ. ನಾನು ಸತ್ಯ ಹೇಳಿದ್ರೆ ತಲೆ ಸರಿಯಿಲ್ಲ, ಮೆದುಳು ಇಲ್ಲ ಅಂದ್ರೆ ಇನ್ನೇನು ಅನ್ನಬೇಕು ಹೇಳಿ? ಸಿದ್ದರಾಮಯ್ಯ ಸತ್ಯವನ್ನು ಎಂದೂ ಒಪ್ಪುವುದಿಲ್ಲ. ಬೇಕಂತಲೇ ಪ್ರಚೋದನೆ ಮಾಡಿ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾರೆ. 

ಸಂದರ್ಶನ: ಎಸ್‌.ಲಕ್ಷ್ಮೀನಾರಾಯಣ


Trending videos

Back to Top