CONNECT WITH US  

ಕಾಂಗ್ರೆಸ್‌ ಮುಕ್ತ ಕರ್ನಾಟಕ ಬಯಸುತ್ತಿದ್ದಾರೆ ಜನ

ನಾನೇ ಹೈಕಮಾಂಡ್‌ ಅನ್ನೋ ರೀತಿ ಮುಖ್ಯಮಂತ್ರಿ ವರ್ತಿಸುತ್ತಿದ್ದಾರೆ

"ನಾನೇ ಹೈಕಮಾಂಡ್‌ ಅನ್ನೋ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಈ ಮೆರವಣಿಗೆ ನಿಲ್ಲಿಸುವ ಕಾಲ ಹತ್ತಿರವಾಗುತ್ತಿದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಜನ ಕಾಯುತ್ತಿದ್ದಾರೆ. ಗುಜರಾತ್‌, ಹಿಮಾಚಲ ಪ್ರದೇಶದ ಚುನಾವಣೆ ಫ‌ಲಿತಾಂಶ ದೊಡ್ಡ ಬಲ ತಂದಿದೆ. ಬರೆದಿಟ್ಟುಕೊಳ್ಳಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗಳಿಸುವುದು ಖಚಿತ'. ಪರಿವರ್ತನಾ ರ್ಯಾಲಿ ಪ್ರವಾಸದಲ್ಲಿರುವ ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿಶ್ವಾಸದ ನುಡಿಯಿವು. 

ಗುಜರಾತ್‌ ಚುನಾವಣೆ ಫ‌ಲಿತಾಂಶದಿಂದ ನಿಮ್ಮ ಮುಖದಲ್ಲಿ ಗೆಲುವಿನ ನಗೆ ಕಾಣಿಸುತ್ತಿದೆ. ಇದು ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಗೆಲ್ಲುವೆವೆಂಬ ಭರವಸೆಯ ನಗುವೆ?
ಖಂಡಿತವಾಗಿಯೂ ಹೌದು. ಗುಜರಾತ್‌, ಹಿಮಾಚಲ ಪ್ರದೇಶ ಚುನಾವಣೆ ಫ‌ಲಿತಾಂಶ ದೊಡ್ಡ ಶಕ್ತಿ ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ಖಚಿತ. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ಕಾಂಗ್ರೆಸ್‌ ಮುಕ್ತ ಕರ್ನಾಟಕದ ಸಂದೇಶವಿದು. ಸತತ ಆರು ಬಾರಿ ಗುಜರಾತ್‌ನಲ್ಲಿ ಪಕ್ಷ ಅಧಿಕಾರ ಹಿಡಿದಿದೆ. ಶೇಕಡಾವಾರು ಮತ ಗಳಿಕೆಯಲ್ಲೂ ಹೆಚ್ಚಳವಾಗಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ, ಅವರೀಗ ಗುಜರಾತ್‌ನಲ್ಲಿ ಇಲ್ಲ. ಆದರೂ ಅಲ್ಲಿನ ಜನ ಅವರ ಮೇಲಿನ ವಿಶ್ವಾಸದಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಎರಡೂ ರಾಜ್ಯಗಳ ಫ‌ಲಿತಾಂಶ ಬಿಜೆಪಿ ಹಾಗೂ ಪಕ್ಷದ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತರಿಸಿದೆ. ನಿರೀಕ್ಷೆ ಮೀರಿ ಸ್ಥಾನ ಗಳಿಸಿ ವಿಶ್ವಾಸ ಇಮ್ಮಡಿಗೊಳಿಸಿದೆ.

ಗುಜರಾತ್‌ನಲ್ಲಿ ಕಾಂಗ್ರೆಸ್‌ ಸಾಕಷ್ಟು ಸುಧಾರಣೆ ಕಂಡಿದೆ. ಬಿಜೆಪಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಿರುವಾಗ ಗುಜರಾತ್‌ ಚುನಾವಣೆ ಫ‌ಲಿತಾಂಶ ರಾಜ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಗೆ ಹೇಳುತ್ತೀರಿ?
ನೋಡಿ, ಯಾವುದೇ ಸರ್ಕಾರಕ್ಕೂ ಆಡಳಿತ ವಿರೋಧಿ ಅಲೆ ಎಂಬುದಿರುತ್ತದೆ. ಆದರೆ, ಸತತವಾಗಿ ಆರು ಬಾರಿ ಅಧಿಕಾರ ಹಿಡಿಯುವುದು ಸಾಮಾನ್ಯ ವಿಷಯವಲ್ಲ. ಏನೆಲ್ಲಾ ಅಪಪ್ರಚಾರ, ಕುತಂತ್ರಗಳ ನಡುವೆಯೂ ಅಧಿಕಾರ ಮುಂದುವರೆದಿರುವುದು ಇತಿಹಾಸ. ದೇಶದ 19 ರಾಜ್ಯಗಳಲ್ಲಿ ಇಂದು ಬಿಜೆಪಿ ಅಧಿಕಾರ ಹಿಡಿದಿದ್ದು, ಕಾಂಗ್ರೆಸ್‌ ಮುಕ್ತ ಭಾರತದತ್ತ ದಾಪುಗಾಲಿಡುತ್ತಿದೆ. ಕರ್ನಾಟಕದಲ್ಲೂ ಇದು ಮುಂದುವರೆಯಲಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ನಡೆದ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿತ್ತು. ಆದರೆ, ರಾಹುಲ್‌ ಗಾಂಧಿ ಅಧ್ಯಕ್ಷರಾಗುತ್ತಾರೆ ಎನ್ನುತ್ತಿದ್ದಂತೆ ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋತರೂ ಬಿಜೆಪಿಗೆ ಸಾಕಷ್ಟು ಹಾನಿ ಮಾಡಿದೆ. ರಾಹುಲ್‌ ಗಾಂಧಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್‌ ಶಕ್ತಿಯುತವಾಗುತ್ತಿದೆಯೇ?
ಎಲ್ಲಿಯ ಶಕ್ತಿ? ಹಿಮಾಚಲ ಪ್ರದೇಶದಲ್ಲಿ ಇದ್ದ ಅಧಿಕಾರವನ್ನು ಕಾಂಗ್ರೆಸ್‌ ಕಳೆದುಕೊಂಡಿಲ್ಲವೇ? ಹೋಗಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಗೆದ್ದ ರಾಜ್ಯಗಳೆಷ್ಟು ಹೇಳಿ? ಗುಜರಾತ್‌ನಲ್ಲಿ ಸುಮಾರು 20 ಕ್ಷೇತ್ರಗಳಲ್ಲಿ ಕೇವಲ 250ರಿಂದ 1000 ಮತಗಳ ಅಂತರದಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಒಟ್ಟಾರೆ ಫ‌ಲಿತಾಂಶ ಸಮಾಧಾನ ತಂದಿದೆ.

ಗುಜರಾತ್‌ನಲ್ಲಿ ಸ್ಥಳೀಯ ನಾಯಕರು ಇಲ್ಲದೆ ಕಾಂಗ್ರೆಸ್‌ ಸೋಲು ಅನುಭವಿಸಿತು. ಆದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್‌, ಡಿಕೆಶಿ ಅವರಂತಹ ಪ್ರಭಾವಿ ನಾಯಕರ ಶಕ್ತಿ ಕಾಂಗ್ರೆಸ್‌ಗೆ ಇದೆಯಲ್ಲಾ?
ಮಲ್ಲಿಕಾರ್ಜುನ ಖರ್ಗೆ ಹಿರಿಯ ಹಾಗೂ ಅನುಭವಿ ನಾಯಕ. ಅವರ ಬಗ್ಗೆ ಗೌರವ ಇದೆ. ಆದರೆ, ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಬಿಜೆಪಿ ಗುಜರಾತ್‌, ಉತ್ತರ ಪ್ರದೇಶ ಮಾದರಿಯಲ್ಲಿ ಪ್ರತಿ ಬೂತ್‌ ಮಟ್ಟದಲ್ಲಿ ಸಮಿತಿಗಳನ್ನು ಮಾಡಿದೆ, ಪಕ್ಷ ಸಂಘಟನೆಗೆ ತನ್ನದೇಶ್ರಮ ಹಾಕಿದೆ. ಎಲ್ಲ ಮೋರ್ಚಾಗಳು ಸಕ್ರಿಯವಾಗಿ ಶ್ರಮಿಸುತ್ತಿವೆ. ಕಾಂಗ್ರೆಸ್ಸಿಗರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಜನವಿರೋಧಿ ಆಡಳಿತ ನೀಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರ್ನಾಟಕ ಸೇರಿದಂತೆ ಮೂರು ದೊಡ್ಡ ರಾಜ್ಯಗಳಲ್ಲಿ ಪಕ್ಷದ ಬಾವುಟ ಹಾರಿಸಲು ಸನ್ನದ್ಧರಾಗಿದ್ದಾರೆ. ಕರ್ನಾಟಕದಲ್ಲಂತೂ ಇದು ಖಂಡಿತವಾಗಿ ಫ‌ಲ ನೀಡುತ್ತದೆ. ಭ್ರಷ್ಟ ಸರ್ಕಾರದ ಆಡಳಿತದಿಂದ ರೋಸಿ ಹೋಗಿರುವ ಜನತೆ ಬದಲಾವಣೆಗೆ ಕಾಯುತ್ತಿದ್ದಾರೆ.

ಗುಜರಾತ್‌ನಲ್ಲಿ ಪಾಟೀದಾರ್‌ ಸಮಾಜದ ಮೀಸಲಾತಿ ವಿಚಾರವನ್ನು ಎತ್ತಿ ಕಾಂಗ್ರೆಸ್‌ ಬಿಜೆಪಿಗೆ ಸೆಡ್ಡು ಹೊಡೆದಂತೆ ಕರ್ನಾಟಕದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮೂಲಕ ಹೋರಾಟಕ್ಕಿಳಿದಿದೆಯಲ್ಲ?
ನೋಡಿ ಇವೆ, ಇಲ್ಲ ಸಲ್ಲದ ಭ್ರಮೆಗಳನ್ನು ಸೃಷ್ಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ. ಲಿಂಗಾಯತ-ವೀರಶೈವ ವಿಚಾರ ಹಾಗೂ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಹಾಗೂ ನಡೆದಾಡುವ ದೇವರು ಎಂದೇ ಖ್ಯಾತರಾದ ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ನಿಲುವಿಗೆ ನಮ್ಮ ಬೆಂಬಲ ಇದೆ.

ಬಿಜೆಪಿ ಜತೆಗಿರುವ ವೀರಶೈವ-ಲಿಂಗಾಯತ ಮತ ಗಳು ವಿಭಜನೆಯಾಗಿ ಬಿಜೆಪಿಗೆ ನಷ್ಟವಾದರೆ?
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ರಾಜಕೀಯವಾಗಿ ಯಾವುದೇ ಪರಿಣಾಮ ಬೀರದು. ಇದರ ಬಗ್ಗೆ ಹೆಚ್ಚಿಗೆ ಏನನ್ನು ಹೇಳಲು ಬಯಸುವುದಿಲ್ಲ.

ಮಣಿಶಂಕರ ಅಯ್ಯರ್‌, ಕಪಿಲ್‌ ಸಿಬಲ್‌ ಹೇಳಿಕೆ ಗಳು ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಮುಳುವಾದಂತೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಸಂಸದ ಪ್ರತಾಪ್‌ ಸಿಂಹ ಹೇಳಿಕೆಗಳು ಬಿಜೆಪಿಗೆ ಸಮಸ್ಯೆಯಾಗಲಿದೆಯೇ?
ಅನಂತಕುಮಾರ್‌ ಹೆಗಡೆ ಹಾಗೂ ಪ್ರತಾಪ ಸಿಂಹ ಅವರ ಕೆಲ ಹೇಳಿಕೆಗಳ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಇಬ್ಬರಿಗೂ ತಿಳಿಹೇಳಿದ್ದು, ಮುಂದೆ ವಿವಾದಕ್ಕೀಡುಮಾಡುವ ಹೇಳಿಕೆಗಳನ್ನು ನೀಡದಂತೆಯೂ ಎಚ್ಚರಿಕೆ ನೀಡಿದ್ದೇನೆ.

ಸ್ಪರ್ಧೆ ಏನಿದ್ದರೂ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ಎನ್ನಲಾಗುತ್ತಿದೆ. ಜೆಡಿಎಸ್‌ ಲೆಕ್ಕಕ್ಕಿಲ್ಲವೇ?
ಚುನಾವಣೆಯಲ್ಲಿ ಜೆಡಿಎಸ್‌ ಲೆಕ್ಕಕ್ಕಿಲ್ಲ ಎಂದು ಖಂಡಿತವಾಗಿಯೂ ನಾನು ಹೇಳುವುದಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ ಕೆಲವೊಂದು ಭಾಗದಲ್ಲಿ ತನ್ನದೇ ಆದ ಪ್ರಭಾವ, ಹಿಡಿತ ಹೊಂದಿದೆ. ನಾವು ಅವರನ್ನು ಲಘುವಾಗಿ ಪರಿಗಣಿಸಿಲ್ಲ.

ಬಿಜೆಪಿ ಪರಿವರ್ತನಾ ಯಾತ್ರೆಗೆ ಪರ್ಯಾಯವಾಗಿ ಕಾಂಗ್ರೆಸ್‌ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಯಾತ್ರೆಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಬಿಜೆಪಿಯಿಂದ ಪರ್ಯಾಯವೇನು?
ನಾವಲ್ಲ, ಇವರಿಗೆ ಜನರೇ ಪರ್ಯಾಯ ಸೂಚಿಸುತ್ತಾರೆ. ಯಡಿಯೂರಪ್ಪ ಯಾತ್ರೆ ಆರಂಭಿಸಿದಕ್ಕೆ ಭಾರೀ ಜನಬೆಂಬಲ ಸಿಗುತ್ತಿರುವುದು ಕಂಡು ಕಂಗಾಲಾಗಿರುವ ಕಾಂಗ್ರೆಸ್‌ ನಾಯಕರು ಯಾತ್ರೆ ಆರಂಭಿಸಿದ್ದಾರೆ. ನಮ್ಮ ಯಾತ್ರೆಗೆ ಸ್ವಯಂ ಪ್ರೇರಿತರಾಗಿ ಜನಸ್ತೋಮ ಸೇರುತ್ತಿದೆ. ಇದರಿಂದ ಕಾಂಗ್ರೆಸ್‌ಗೆ ನಿಜವಾಗಿಯೂ ನಡುಕ ಶುರವಾಗಿದೆ.

ಬಿಜೆಪಿಯಲ್ಲಿದ್ದ ಭಿನ್ನಾಭಿಪ್ರಾಯ ನಿವಾರಣೆ ಆಗಿದೆ. ಎಲ್ಲರೂ ಒಟ್ಟಾಗಿದ್ದೇವೆ ಎನ್ನುತ್ತೀರಿ. ನಿಜವಾಗಿಯೂ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿದೆಯೇ?
ಪಕ್ಷದಲ್ಲಿ ಯಾವ ಗೊಂದಲವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಕೇಂದ್ರ ಸರ್ಕಾರದ ಹಾಗೂ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀಡಿದ ಅಭಿವೃದ್ಧಿ ಯೋಜನೆಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆ. ಖಂಡಿತವಾಗಿಯೂ 150 ಸ್ಥಾನಗಳಗೊಂದಿಗೆ ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತೇವೆ. ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ.

ದಿವಾಳಿ ಸರ್ಕಾರದಿಂದ ಸಾವಿರಾರು ಕೋಟಿ ರೂ.ಗಳ ಯೋಜನೆ ಘೋಷಣೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ದಿವಾಳಿ ಆಗಿದೆ. ಆದರೂ ಜನರನ್ನು ನಂಬಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರಾರು ಕೋಟಿ ರೂ.ಗಳ ಯೋಜನೆ ಘೋಷಣೆ, ಶಂಕು ಸ್ಥಾಪನೆಗೆ ಮುಂದಾಗಿದ್ದಾರೆ. ಇವೆಲ್ಲವುದಕ್ಕೆ ಹಣ ಎಲ್ಲಿಂದ ತರುತ್ತಾರೆ? ಬಿಬಿಎಂಪಿ 975 ಕೋಟಿ ರೂ. ಸಾಲ ಮಾಡಿದ್ದರೆ, ರೈತರ ಸಾಲ ಮನ್ನಾ ಹಣ ಹೊಂದಾಣಿಕೆಗೆ ಮೈಸೂರು ಮಿನರ್ನ ಸುಮಾರು 1,400 ಕೋಟಿ ರೂ. ಠೇವಣಿ ಹಣ ಬಳಕೆಗೆ ಮುಂದಾಗಿದೆ. ಅಂಗವಿಕಲರಿಗೆ ಸಹಾಯಧನ ನೀಡುತ್ತಿಲ್ಲ. ಕೇಂದ್ರದಿಂದ ಬಂದ ಅಕ್ಕಿ-ಗೋಧಿಗೆ ತನ್ನ ಅನ್ನಭಾಗ್ಯ ಬ್ರ್ಯಾಂಡ್‌ ಹಾಕಿಕೊಳ್ಳಲಾಗಿದೆ. ಗೋಧಿ ವಿತರಣೆ ಆಗುತ್ತಿಲ್ಲ. ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಬೆಂಗಳೂರು ರೇಪ್‌ ಸಿಟಿ ಎಂಬುದನ್ನು ಎನ್‌ಸಿಆರ್‌ಬಿ ತಿಳಿಸಿದೆ. ಸರ್ಕಾರದ ಆವಾಂತರ ಹೇಳಲು ಇನ್ನೇನು ಬೇಕು ಹೇಳಿ?

ಸಂದರ್ಶನ: ಅಮರೇಗೌಡ ಗೋನವಾರ


Trending videos

Back to Top