CONNECT WITH US  

ಕಮಲವ ಗುಡಿಸುವುದೇ ಕಸಬರಿಕೆ?

ಬಿಜೆಪಿ ಅಲೆ ದಿಲ್ಲಿಯನ್ನೂ ಹೊರತುಪಡಿಸಿಲ್ಲ. ಅದರಲ್ಲೂ 14 ವರ್ಷಗಳ ಕಾಲ ದಿಲ್ಲಿ ನಗರಪಾಲಿಕೆಯನ್ನು ಆಳಿರುವ ಪಕ್ಷವದು. ಇಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಆಪ್‌ ನಿರ್ನಾಮವೂ ಪಕ್ಷಕ್ಕೆ ಮುಖ್ಯವಾಗಿದೆ. ಇತ್ತೀಚೆಗಷ್ಟೇ ಪಂಚ ರಾಜ್ಯಗಳ ಫ‌ಲಿತಾಂಶದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು ತನ್ನ ಶಕ್ತಿ-ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

"ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಗ್ಗೆ ಶುಂಗು ಸಮಿತಿ ವರದಿ ಓದಿ ನನಗೆ ತುಂಬಾ ನೋವುಂಟಾಯಿತು. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಕೇಜ್ರಿವಾಲ್‌ ನನ್ನ ಜತೆಗಿದ್ದರು. ಈತ ಹೊಸ ಪೀಳಿಗೆಯ ವಿದ್ಯಾವಂತ. ಜನರಿಗೆ ಒಳ್ಳೆಯದು ಮಾಡುತ್ತಾನೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾನೆ ಎಂಬ ಭಾವನೆಯೂ ಇತ್ತು¤. ಆದರೆ, ಆ ನನ್ನ ಕನಸನ್ನು ಕೇಜ್ರಿವಾಲ್‌ ನುಚ್ಚು ನೂರು ಮಾಡಿದರು' ಎಂದು ಕೇಜ್ರಿವಾಲ್‌ ಬಗ್ಗೆ ಅಣ್ಣಾ ಹಜಾರೆ ಇತ್ತೀಚೆಗೊಂದು ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದನ್ನು ನೋಡಿದರೆ ಮುಂದೆ ಆಪ್‌, ಕೇಜ್ರಿವಾಲ್‌ ಭವಿಷ್ಯ ಏನಾಗಬಹುದು ಎಂಬುದರ ಸುಳಿವು ಸಿಗುತ್ತದೆ. 

ಆದರೆ ಒಂದು ಮಾತಂತೂ ಸತ್ಯ. ಕೇಜ್ರಿವಾಲ್‌ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ರಾಜಕೀಯ ಶಕ್ತಿಯನ್ನಾಗಿ ಮಾಡಿಕೊಂಡು ಅಧಿಕಾರಕ್ಕೆ ಬಂದು ದೆಹಲಿಯಂತಹ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿರುವುದು ಸಣ್ಣ ಸಾಧನೆಯೇನೂ ಅಲ್ಲ. ಅದರಲ್ಲೂ ದೆಹಲಿಯ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಪಟ್ಟ ಗಿಟ್ಟಿಸಿಕೊಂಡಿರುವುದು ಒಂದು ಕಡೆಯಾದರೆ, ದೆಹಲಿಯನ್ನು ದೀರ್ಘ‌ಕಾಲ ಆಳಿದ ಶೀಲಾ ದೀಕ್ಷಿತ್‌ ಅವರನ್ನು ಆಮ್‌ ಆದ್ಮಿ ಪಾರ್ಟಿ ಎಂಬ ಚಿಕ್ಕ ಪಕ್ಷದಿಂದ 25 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿ ತಮ್ಮ ಜನಪ್ರಿಯತೆಗೆ ಗರಿ ತೊಡಿಸಿಕೊಂಡಿದ್ದನ್ನು ಯಾರೊಬ್ಬರೂ ಮರೆಯುವಂತಿಲ್ಲ, ಅಲ್ಲಗಳೆಯಲೂ ಸಾಧ್ಯವಿಲ್ಲ. 

ಆದರೆ ಅವರ ಪಕ್ಷಕ್ಕೆ ದೆಹಲಿಯಲ್ಲಿ ಸರಕಾರ ರಚಿಸಿದಷ್ಟು ಸುಲಭವಾಗಿ ಈಗ ದೆಹಲಿ ನಗರಪಾಲಿಕೆ ಮೇಲೆ ತನ್ನ ಧ್ವಜವನ್ನು ಹಾರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಆಪ್‌ ಬಹಳ ಪ್ರಯಾಸಪಡಬೇಕಾಗಿದೆ. ಈಗ ದೇಶದಲ್ಲಿ ಪರೋಕ್ಷವಾಗಿ ಮೋದಿ ಅಲೆ ಕಾಣಿಸಿಕೊಂಡಿದೆ. ಕಾಂಗ್ರೆಸ್‌ ನೆಲಕಚ್ಚಿದೆ. ಇಂತಹ ಬದಲಾದ ಸನ್ನಿವೇಶದಲ್ಲಿ ಕೇಜ್ರಿವಾಲ್‌ ಹಳೆಯ ಜನಪ್ರಿಯತೆಯನ್ನು ಉಳಿಸಿಕೊಂಡು ಏಪ್ರಿಲ್‌ 23ಕ್ಕೆ  ಎದುರಾಗಲಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎನ್ನುವುದು ಕುತೂಹಲದ ವಿಷಯ. ಒಂದು ವೇಳೆ ಈ ಚುನಾವಣೆಯಲ್ಲಿ ಆಪ್‌ ನೆಲ ಕಚ್ಚಿದರೆ ಮುಂಬರುವ ದಿನ ಗಳಲ್ಲಿ ಕೇಜ್ರಿವಾಲ್‌ರ ಜನಪ್ರಿಯತೆ ಮತ್ತಷ್ಟು ಕುಸಿದು ಯಾವ ಶರವೇಗದಲ್ಲಿ ಯಶಸ್ಸು ಕಂಡರೋ ಅದೇ ಶರವೇಗದಲ್ಲಿ ಮರೆ ಯಾಗಿಬಿಡುವ ಆತಂಕದ ಸನ್ನಿವೇಶವೂ ನಿರ್ಮಾಣವಾಗಲಿದೆ. ಹೀಗಾಗಿ ಕಾರ್ಪೊರೇಷನ್‌ ಚುನಾವಣೆ ದೆಹಲಿಗೆ ಸೀಮಿತ ವಾಗಿದ್ದರೂ ಅದು ಕೇಜ್ರಿವಾಲ್‌ ಮತ್ತು ಅವರೇ ಕಟ್ಟಿ ಬೆಳೆಸಿದ ಆಪ್‌ನ ಭವಿಷ್ಯ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದಕ್ಕೆ ದಿಕ್ಸೂಚಿಯಾಗಲಿದೆ. 

ದೆಹಲಿ ನಗರಪಾಲಿಕೆ 14 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದೆ. ಈಗಲೂ ನಗರಪಾಲಿಕೆಯನ್ನು ಉಳಿಸಿಕೊಳ್ಳುವ ತವಕದಲ್ಲಿ ಬಿಜೆಪಿ ತೀವ್ರ ಕಸರತ್ತು ನಡೆಸುತ್ತಿದೆ. ಆದರೆ, ಬಿಜೆಪಿಯಿಂದ ಹೇಗಾದರೂ ಮಾಡಿ ನಗರಪಾಲಿಕೆ ಅಧಿಕಾರವನ್ನು ಕಸಿದುಕೊಳ್ಳಲು ಆಮ್‌ ಆದ್ಮಿ ಪಕ್ಷವೂ ತೀವ್ರ ಪೈಪೋಟಿ ನಡೆಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಧೂಳೀಪಟ ಮಾಡಿ ಪ್ರಚಂಡ ಗೆಲುವು ಸಾಧಿಸಿದ ಆಪ್‌ನ ಅರವಿಂದ್‌ ಕೇಜ್ರಿವಾಲ್‌ ಮುಖ್ಯಮಂತ್ರಿ ಗದ್ದುಗೆಯೇರಿ ದೇಶದ ಗಮನ ಸೆಳೆದವರು. 

ಆದರೆ, ಕಾಂಗ್ರೆಸ್‌ ಏನು ಸುಮ್ಮನೆ ಕುಳಿತಿರುತ್ತೆಯೇ? ನಗರಪಾಲಿಕೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಪಾಲಿಕೆ ಪಾರುಪತ್ಯ ಗಿಟ್ಟಿಸಿಕೊಳ್ಳಬೇಕೆಂಬ ಛಲದೊಂದಿಗೆ ಮೈ ಕೊಡವಿಕೊಂಡು ಎದ್ದು ನಿಲ್ಲಬೇಕೆಂಬ ಹಠದಲ್ಲಿ ಚುನಾವಣೆ ಎದುರಿಸುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಲ್ಲಿಗೆ ದೆಹಲಿ ನಗರಪಾಲಿಕೆ ಚುನಾವಣೆ "ಬಿಜೆಪಿ ವರ್ಸಸ್‌ ಆಪ್‌' ಆದರೂ ಕಾಂಗ್ರೆಸ್‌ನ್ನು ಕಡೆಗಣಿಸುವಂತಿಲ್ಲ. ಒಂದು ರೀತಿ "ತ್ರಿಕೋನ' ಸ್ಪರ್ಧೆ ಏರ್ಪಟ್ಟಿದೆ ಎಂದೂ ಹೇಳಬಹುದು.

"ಆಪ್‌ ವರ್ಸಸ್‌ ಬಿಜೆಪಿ' 
ಹೇಳಿಕೇಳಿ ದೆಹಲಿ ಪ್ರಧಾನಿ ಮೋದಿ ನೆಲೆಸಿರುವ ನಗರ. ಬಿಜೆಪಿ ದೇಶದ ಆಡಳಿತ ಚುಕ್ಕಾಣಿಯನ್ನೇ ಪ್ರಚಂಡ ಬಹುಮತದೊಂದಿಗೆ ಒಲಿಸಿಕೊಂಡಿದೆ. ಅಲ್ಲದೆ ದೆಹಲಿ ನಗರವನ್ನು ಕಳೆದ 14 ವರ್ಷಗಳಿಂದಲೂ ತನ್ನ ಹಿಡಿತದಲ್ಲೇ ಇಟ್ಟುಕೊಂಡಿದೆ. ಆದರೂ, ಈ ಬಾರಿಯ ನಗರಪಾಲಿಕೆ ಚುನಾವಣೆ ಮತ್ತಷ್ಟು ಪ್ರತಿಷ್ಠೆಯಾಗಿದೆ. ಆಪ್‌ನ ಹುಟ್ಟಡಗಿಸಬೇಕೆಂಬ ಬಿಜೆಪಿಯ ಲೆಕ್ಕಾಚಾರವೂ ಇಲ್ಲದಿಲ್ಲ. ಆದಾಗ್ಯೂ ಶತಾಯಗತಾಯ ತಮ್ಮ ತಮ್ಮ ಲೆಕ್ಕಾಚಾರಗಳನ್ನು ಹಾಕುತ್ತಲೇ ದೆಹಲಿಯ 272 ವಾರ್ಡ್‌ ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೂ ಬಿಜೆಪಿಗೆ ದೆಹಲಿ ರಾಜಕಾರಣದ ಮಟ್ಟಿಗೆ ಕಾಂಗ್ರೆಸ್‌ಗಿಂತ ಆಪ್‌ ಪಕ್ಷವೇ ದೊಡ್ಡ ಎದುರಾಳಿಯಾಗಿ ಪರಿಣಮಿಸಿದೆ.

ಆಪ್‌ಗಿರುವ ತೊಡಕೇನು? 
ಸಾಮಾನ್ಯ ಜನರಿಂದ ಹುಟ್ಟಿಕೊಂಡ ಜನನಾಯಕ ಜನಸಾಮಾನ್ಯರಿಗಾಗಿಯೇ ಬದುಕುವ ಆಶೋತ್ತರವನ್ನು ಜನರಲ್ಲಿ ಬೆಳೆಸಿದರು. ಆದರೆ, ಬರಬರುತ್ತಾ ಜನರ ನಿರೀಕ್ಷೆಗಳು, ಕೇಜ್ರಿವಾಲ್‌ ಕೊಟ್ಟ ಭರವಸೆಗಳು ಹುಸಿಯಾಗಿವೆ. ದಿನದಿನಕ್ಕೆ ಜನರಿಗೆ ಕೇಜ್ರಿವಾಲ್‌ರ ಮೇಲಿದ್ದ ಕ್ರೇಜು ಕುಸಿಯುತ್ತಿದೆ.  ಕೇಜ್ರಿವಾಲ್‌ ಅವರು ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದಾರೆ, ದೆಹಲಿಯತ್ತ ಗಮನ ಹರಿಸುತ್ತಿಲ್ಲ, ವೈಯಕ್ತಿಕ ಪ್ರಚಾರಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ. ಇಂತಹ ಸಣ್ಣ ಆರೋಪಗಳೂ ನಗರಪಾಲಿಕೆ ಚುನಾವಣೆಯಲ್ಲಿ ದೊಡ್ಡ ಪೆಟ್ಟಾಗಲಿವೆ ಎಂಬಲ್ಲಿ ಸಂಶಯವಿಲ್ಲ. ಆರಂಭದಲ್ಲಿ ರಾಷ್ಟ್ರೀಯ ಪಕ್ಷಗಳ ತತ್ವ ಸಿದ್ಧಾಂತಕ್ಕೂ ಆಪ್‌ ಸಿದ್ಧಾಂತಕ್ಕೂ ವ್ಯತ್ಯಾಸವಿತ್ತು. ಭ್ರಷ್ಟಾಚಾರವನ್ನು ಕಿತ್ತೂಗೆಯುವುದೇ ಆಪ್‌ ಆಡಳಿತದ ಗುರಿ, ಬಡವರ ಉದ್ಧಾರವೇ ನಮ್ಮ ಧ್ಯೇಯ ಎಂಬ ಆದರ್ಶದಡಿ ಅಧಿಕಾರಕ್ಕೆ ಬಂದ ಪಕ್ಷ ಆಪ್‌. 

ಎರಡು ವರ್ಷ ಮುಗಿದರೂ ಜನರ ಆಶೋತ್ತರಗಳು,  ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಂತಹ ಭರವಸೆಗಳನ್ನು ಪೂರೈಸದೆ ಜನರ ಅಸಮಾಧಾನಕ್ಕೆ ಗುರಿಯಾಗಿದೆ.  ಆಪ್‌ ಜನರ ನಿರೀಕ್ಷೆಗೆ ತಕ್ಕ ಪ್ರತಿಫ‌ಲ ಆಗಲಿ, ಜನರು ಬಯಸಿದ ಸರ್ಕಾರವನ್ನಾಗಲಿ  ಪುಲ್‌ಫಿಲ್‌ ಮಾಡಲಿಲ್ಲ. 

ತತ್ವ ಸಿದ್ಧಾಂತ ಉಲ್ಲಂಘನೆ
ಶುಂಗು ಸಮಿತಿಯಲ್ಲಿ "ಆಪ್‌ನಲ್ಲಿ ಪಕ್ಷದ ತತ್ವ ಸಿದ್ಧಾಂತಗಳನ್ನು ಉಲ್ಲಂ ಸಿ ಸ್ವಜನ ಪಕ್ಷಪಾತ ಹೆಚ್ಚಿದೆ. ವೈಯಕ್ತಿಕ ಪ್ರಚಾರಕ್ಕಾಗಿ ಸರ್ಕಾರಿ ಹಣದಲ್ಲಿ ದುಂದು ವೆಚ್ಚ ನಡೆಸುತ್ತಿದ್ದಾರೆಂಬ' ಆರೋಪಗಳು ಕೇಳಿಬಂದವು. ಅಂದಿನಿಂದಲೂ ಕೇಜ್ರಿವಾಲ್‌ ಜತೆಗಿದ್ದವರೇ ಒಬ್ಬೊಬ್ಬರಾಗಿ ದೂರಾಗುತ್ತ ಬಂದಿದ್ದಾರೆ. ಜನಸಾಮಾನ್ಯರಿಗೂ "ಹೇಳುವುದೊಂದು ಮಾಡುವುದು ಮತ್ತೂಂದು ಆಗಿದೆ' ಎಂಬ ಬೇಸರ ಮೂಡಿದೆ. ಒಂದು ಕಾಲದಲ್ಲಿ ಅರವಿಂದ ಕೇಜ್ರಿವಾಲ್‌ಗೆ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಬಲಗೈ ಬಂಟರಾಗಿದ್ದವರು. ಅವರಿಗೆ ಶಕ್ತಿ ತುಂಬಿದವರು. ಆಪ್‌ ಬೆಳವಣಿಗೆಗೆ ಜತೆಯಾದವರು. ಆದರೆ, ಕೇಜ್ರಿವಾಲ್‌ರ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಆಪ್‌ನಿಂದ ಹೊರಬಂದು "ಸ್ವರಾಜ್‌ ಪಕ್ಷ' ಕಟ್ಟಿಕೊಂಡಿರುವ ಅವರು 60ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ. 

ಇನ್ನು ಕಾಂಗ್ರೆಸ್‌ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದು ಮರೆತಿಲ್ಲ. ಆ ಪಕ್ಷವೂ ಆಪ್‌ನ್ನು ಹಿಂದಿಕ್ಕಿ ನಗರಪಾಲಿಕೆ ಅಧಿಕಾರ ಹಿಡಿಯಬೇಕೆಂದು ಗೆಲ್ಲುವ ಕುದುರೆಗಳನ್ನು ಚುನಾವಣೆ ಕಣಕ್ಕಿಳಿಸುತ್ತಿದೆ.  ಬಿಜೆಪಿಗೆ ಪ್ರತಿಷ್ಠೆ ದೆಹಲಿ ನಗರಪಾಲಿಕೆ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಪ್ರಸ್ತುತ ಬಿಜೆಪಿ ದೇಶದ ಪ್ರಧಾನ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ಯುವಜನತೆಯಲ್ಲಿ ಮೋದಿ ಹವಾ ಬೀಸಿದ್ದರೆ, ದೇಶಾದ್ಯಂತ ಆವರಿಸಿರುವ ಬಿಜೆಪಿ ಅಲೆ ದೆಹಲಿಯನ್ನೂ ಹೊರತುಪಡಿಸಿಲ್ಲ. ಅದರಲ್ಲೂ 14 ವರ್ಷಗಳ ಕಾಲ ದೆಹಲಿ ನಗರಪಾಲಿಕೆಯನ್ನು ಆಳಿರುವ ಪಕ್ಷವದು. ಇಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಆಪ್‌ ನಿರ್ನಾಮವೂ ಪಕ್ಷಕ್ಕೆ ಮುಖ್ಯವಾಗಿದೆ. ಇತ್ತೀಚೆಗಷ್ಟೇ ಪಂಚ ರಾಜ್ಯಗಳ ಫ‌ಲಿತಾಂಶದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ಈ ಶಕ್ತಿ ಬಿಜೆಪಿಗೆ ಮತ್ತಷ್ಟು ಪುಷ್ಠಿ ನೀಡಲಿದೆ ಎಂದೂ ಹೇಳಬಹುದು. ಆದರೆ, 4 ವರ್ಷಗಳ ಹಿಂದೆ, ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಜನ್ಮತಾಳಿ ದೆಹಲಿಯಲ್ಲಿ ಸರ್ಕಾರ ರಚಿಸಿದ ಆಮ್‌ ಆದ್ಮಿ ಪಕ್ಷ ಈಗ ಪಂಜಾಬ್‌ ವಿಧಾನ ಸಭೆಯಲ್ಲಿ 2ನೇ ಅತಿದೊಡ್ಡ ಪಕ್ಷವಾಗಿ ವಿರೋಧ ಪಕ್ಷದ ಸ್ಥಾನ ಗಳಿಸಿಕೊಳ್ಳಲು ಸಜ್ಜಾಗುತ್ತಿದೆ ಎಂಬ ಮಹತ್ವದ ಸಂಗತಿಯನ್ನೂ ಬಿಜೆಪಿ ತಳ್ಳಿ ಹಾಕುವಂತಿಲ್ಲ. ಆಪ್‌ಗೆ ಯುವಕರ ಪಡೆ ಇದೆ ಎನ್ನುವುದನ್ನು ಬಿಜೆಪಿ ಗಮನಿಸದೆ ಇಲ್ಲ. ಆದರೆ ಕೇಜ್ರಿವಾಲ್‌ ಇದೀಗ ದುರಹಂಕಾರದಿಂದ ವರ್ತಿಸುತ್ತಿದ್ದಾರೆ ಎಂಬೆಲ್ಲಾ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ. ಅಂದು ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನಕ್ಕೆ ಬದಲಾವಣೆ ಬೇಕಿತ್ತು. ಆದರೆ, ಇಂದು ಭ್ರಷ್ಟಾಚಾರವನ್ನೇ ಬಂಡವಾಳವಾಗಿಟ್ಟುಕೊಂಡು ಅಧಿಕಾರ ಹಿಡಿದಿರುವ ಮುಖ್ಯಮಂತ್ರಿಯೂ ಜನರ ಹಣವನ್ನು ವೃಥಾ ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೆ ಎದುರಾಳಿ ಬಿಜೆಪಿಯ ಬೃಹತ್‌ ಯುವಪಡೆ ಬೂತ್‌ಮಟ್ಟದಲ್ಲಿ ಚುನಾವಣಾ ಪ್ರಚಾರಕ್ಕಿಳಿದಿದೆ. ಹಾಗಿದ್ದರೆ ಮೋದಿಯವರ ವರ್ಚಸ್ಸು, ಕೇಂದ್ರದ ಜನಪ್ರಿಯ ಯೋಜನೆಗಳು ಬಿಜೆಪಿಗೆ ವರವಾಗಬಹುದಾ? ಅಥವಾ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಬಗ್ಗು ಬಡಿದು ಆಪ್‌ ಬಾವುಟ ಹಾರಿಸುವ ಶಕ್ತಿ ಕೇಜ್ರಿವಾಲ್‌ರಲ್ಲಿ ಉಳಿದಿದೆಯೇ? ಈ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಬಿ.ವಿ.ಅನುರಾಧಾ


Trending videos

Back to Top