CONNECT WITH US  

ಮೀನಿನ ಹೆಜ್ಜೆಯಂತಾದ ನಿತೀಶ್‌ ನಡೆ

ಪ್ರಧಾನಿ ಮೋದಿ ಅವರೊಂದಿಗೆ ಈಗೀಗ ಕಾಣಿಸಿಕೊಳ್ಳುತ್ತಿರುವುದು ನಿತೀಶ್‌ ಅವರ ಒಂದು ರಣತಂತ್ರದ ಭಾಗವೇ ಎಂಬ ಅನುಮಾನ ಮೂಡುತ್ತದೆ. ಏಕೆಂದರೆ, ಬಿಜೆಪಿಯ ದೌರ್ಬಲ್ಯವೇ ನಿತೀಶ್‌ರ ಶಕ್ತಿ. ನಿತೀಶ್‌ ಮೂರ್ಖರಲ್ಲ. ಹಾಗಾಗಿ, ಯಾವುದೇ ವಿಚಾರದಲ್ಲಿ ಒಮ್ಮೆಗೇ ಜಿಗಿದು ಗುಂಡಿಗೆ ಬೀಳಬಾರದು ಎಂಬ ಕಾರಣಕ್ಕಾಗಿ ಜಿಗಿಯುವ ಮುಂಚೆಯೇ ಯೋಚಿಸುತ್ತಾರೆ, ಮೋದಿ ವಿರೋಧಿ ಭಾವನೆ ಅಲೆಯಲ್ಲಿ ಕೊಚ್ಚಿಹೋಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ ಇದು ವಿನ್ನಿಂಗ್‌ ಸೈಡ್‌(ಗೆಲ್ಲುವ ಕಡೆ)ನಲ್ಲೇ ಇರಬೇಕು ಎನ್ನುವ ಅವರ ಭಾವನೆಗೆ ಸಾಕ್ಷಿ.

"ರಾಜಕೀಯದಲ್ಲಿ ಆಡಿದ ಮಾತುಗಳಿಗಿಂತ ಆಡದ ಮಾತುಗಳೇ ಹೆಚ್ಚು ನಿರ್ಣಾಯಕ' ಎಂಬ ಮಾತಿದೆ. ಜೆಡಿಯು ಅಧ್ಯಕ್ಷ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ಇತ್ತೀಚೆಗಿನ ನಡೆಗಳನ್ನು ಗಮನಿಸಿದಾಗ ಈ ಮಾತಿಗೆ ಹೆಚ್ಚಿನ ತೂಕ ಬರುತ್ತದೆ. 2014ರ ಲೋಕಸಭೆ ಚುನಾವಣೆಯ ಫ‌ಲಿತಾಂಶ ಪ್ರಕಟವಾದಾಗಿನಿಂದಲೂ ನಿತೀಶ್‌ರ ಪ್ರತಿ ಮಾತು, ನಡವಳಿಕೆಗಳೂ ಬಿಡಿಸಲಾಗದ ಒಗಟಾಗಿ ಕಾಣುತ್ತಿದೆ. ಕಳೆದ 2 ವಾರಗಳಲ್ಲಿ ನಡೆದ ವಿದ್ಯಮಾನಗಳಂತೂ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿವೆ.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದವರಲ್ಲಿ, ಪ್ರಣಬ್‌ ಮುಖರ್ಜಿ ಅವರನ್ನೇ 2ನೇ ಅವಧಿಗೂ ಮುಂದುವರಿಸಬೇಕು ಎಂಬ ಪ್ರಸ್ತಾಪ ಇಟ್ಟವರ ಪೈಕಿ ಇವರೇ ಮೊದಲಿಗರು. ಅಲ್ಲಿಯವರೆಗೆ ಪ್ರತಿಪಕ್ಷಗಳೂ ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ ಅಷ್ಟೇನೂ ತಲೆಕೆಡಿಸಿಕೊಂಡಂತೆ ಕಂಡಿರಲಿಲ್ಲ. ನಿತೀಶ್‌ ಬಾಯಿಂದ ಈ ಮಾತುಗಳು ಯಾವಾಗ ಹೊರಬಂತೋ, ಎಲ್ಲರೂ ಎಚ್ಚೆತ್ತುಕೊಂಡರು. ಇನ್ನೇನು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡೇ ಬಿಡೋಣ ಎಂಬಷ್ಟರ ಮಟ್ಟಿಗೆ ಚುರುಕುಗೊಂಡರು. ಇದಕ್ಕೆ ಪ್ರತಿಪಕ್ಷಗಳ ಅಷ್ಟೂ ನಾಯಕರ ಪೈಕಿ ನಿತೀಶ್‌ಗಿರುವ ಪ್ರಭಾವ ಮತ್ತು ವರ್ಚಸ್ಸೇ ಕಾರಣ. 
ಅದರಂತೆ, ಸೋನಿಯಾಗಾಂಧಿ ಅವರು ಎಲ್ಲ ಪ್ರತಿಪಕ್ಷÒಗಳ ನಾಯಕರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸುತ್ತಿದ್ದಂತೆ, ನಿತೀಶ್‌  ಪ್ಲೇಟ್‌ ಬದಲಿಸಿದರು. ಸೋನಿಯಾ ಏರ್ಪಡಿಸಿದ ಭೋಜನ ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದರು. ಪಕ್ಷದ ಪ್ರತಿನಿಧಿಗಳನ್ನಷ್ಟೇ ಕಳುಹಿಸಿದರು. ಆದರೆ, ಮಾರನೇ ದಿನವೇ ಪ್ರಧಾನಿ ಮೋದಿ ಕರೆದಿದ್ದ ಭೋಜನಕೂಟಕ್ಕೆ ಭಾಗವಹಿಸಲು ದೆಹಲಿಗೆ ಧಾವಿಸಿದರು. ಇದು ಕೇವಲ ಪ್ರತಿಪಕ್ಷಗಳಿಗಷ್ಟೇ ಅಲ್ಲ, ಸ್ವತಃ ಬಿಜೆಪಿ ನಾಯಕರಿಗೂ ಅಚ್ಚರಿ ಮೂಡಿಸಿದ್ದು ಸತ್ಯ.

ಬಿಹಾರದಲ್ಲಿ ಆಡಳಿತದಲ್ಲಿರುವ ಮೂರು ಪಕ್ಷಗಳ ಪೈಕಿ ಜೆಡಿಯುಗೆ ಎರಡನೇ ಸ್ಥಾನವಿದ್ದರೂ, ನಿತೀಶ್‌ರ ವರ್ಚಸ್ಸು ಮಾತ್ರ ಈ ಸಂಖ್ಯೆಗಿಂತಲೂ ಹಿರಿದು. ಪ್ರತಿಪಕ್ಷಗಳ ಪೈಕಿ ಪ್ರಧಾನಿ ಮೋದಿ ಅವರ ಜನಪ್ರಿಯತೆಗೆ ಸ್ಪರ್ಧೆ ನೀಡಲು ಶಕ್ತರಾದ ಏಕೈಕ ನಾಯಕನೂ ಇವರೇ. ಸೋನಿಯಾ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆಗಿಂತಲೂ ನಿತೀಶ್‌ರ ಗೈರುಹಾಜರಿಯೇ ಹೆಚ್ಚು ಸುದ್ದಿಯಾಗಿದ್ದು ಇದೇ ಕಾರಣಕ್ಕಾಗಿ. ಸೋನಿಯಾ ಔತಣಕೂಟಕ್ಕೆ ಚಕ್ಕರ್‌ ಹೊಡೆದು, ಮೋದಿ ಆಹ್ವಾನಕ್ಕೆ ನಿತೀಶ್‌ ತಲೆಬಾಗಿದ್ದು ಸಹಜವಾಗಿಯೇ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ನಿಜಕ್ಕೂ ನಿತೀಶ್‌ ಅವರ ಈ ನಡೆಗೆ ಕಾರಣವೇನು? ಅವರು ಮೋದಿಯವರಿಗೆ ಹತ್ತಿರವಾಗುತ್ತಿದ್ದಾರಾ? ಪ್ರಧಾನಿ ಹುದ್ದೆಯ ಆಕಾಂಕ್ಷೆಯನ್ನು ಕೈಚೆಲ್ಲಿದರಾ ಅಥವಾ ಇದು ಕೂಡ ಅವರ ರಾಜಕೀಯ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಹೆಣೆದಿರುವ ರಣತಂತ್ರವಾ ಎಂಬ ಹಲವು ಪ್ರಶ್ನೆಗಳು ಏಳತೊಡಗಿವೆ. 2010ರಲ್ಲೇ ಮೋದಿ ಹಾಗೂ ನಿತೀಶ್‌ ಸ್ನೇಹದಲ್ಲಿ ಬಿರುಕು ಕಾಣಿಸತೊಡಗಿತ್ತು. ಕೋಸಿ ನದಿ ಪ್ರವಾಹದ ಪರಿಹಾರಕ್ಕಾಗಿ ಮೋದಿ ಕೊಟ್ಟಿದ್ದ 5 ಕೋಟಿ ರೂ.ಗಳ ಚೆಕ್‌ ಅನ್ನು ಮುಲಾಜಿ ಲ್ಲದೇ ಹಿಂದಿರುಗಿಸಿದ್ದರು, ಎನ್‌ಡಿಎ ರ್ಯಾಲಿಗಳಲ್ಲಿ ಮೋದಿ ಜತೆ ವೇದಿಕೆ ಹಂಚಿಕೊಳ್ಳುತ್ತಿರಲಿಲ್ಲ, 2010ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿ ಮೋದಿ ಅವರ ಮೇಲಿರುವ ಗುಜರಾತ್‌ ಹತ್ಯಾಕಾಂಡದ ಕಳಂಕ ತಮ್ಮಿಂದ ಅಲ್ಪಸಂಖ್ಯಾತರ ಮತಗಳನ್ನು ಕಸಿದುಕೊಳ್ಳುತ್ತದೋ ಎಂಬ ಭಯದಿಂದ ಚುನಾವಣೆ ಪ್ರಚಾರಕ್ಕೂ ಮೋದಿ ಬರಕೂಡದು ಎಂಬ ಷರತ್ತು ಹಾಕಿದ್ದರು,  ಕೊನೆಗೆ 2014ರ ಚುನಾವಣೆಗೆ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೊಡನೆ, ಬಿಜೆಪಿಯೊಂದಿಗಿನ 17 ವರ್ಷಗಳ ಸ್ನೇಹಕ್ಕೆ ತಿಲಾಂಜಲಿ ಇಟ್ಟಿದ್ದರು ನಿತೀಶ್‌. ತಾನು ರಾಜಕೀಯದಲ್ಲಿ ಮೋದಿಯವರಿಗಿಂತ ಸೀನಿಯರ್‌ ಎಂಬ ಯೋಚನೆಯೂ ಇದಕ್ಕೆ ಸಾಥ್‌ ನೀಡಿರಬಹುದು. ಒಟ್ಟಿನಲ್ಲಿ ಮೋದಿ-ನಿತೀಶ್‌ ಎಂದರೆ ಹಾವು-ಮುಂಗುಸಿ ಎಂಬಂತಾಗಿದ್ದರು. ಇದು ಕಳೆದ ಬಿಹಾರ ವಿಧಾನಸಭೆ ಚುನಾವಣೆಯವರೆಗೂ ಮುಂದುವರಿದಿತ್ತು. ಲಾಲು ಪ್ರಸಾದ್‌ ಯಾದವ್‌ರಂಥ ಕಳಂಕಿತರು, ಭ್ರಷ್ಟಾಚಾರ ಆರೋಪ ಹೊತ್ತವರೊಂದಿಗೆ ಕೈಜೋಡಿಸಿದರೆ ತಮ್ಮ ಕ್ಲೀನ್‌ ಇಮೇಜ್‌ಗೆ ಧಕ್ಕೆಯಾಗಬಹುದು ಎಂಬುದು ಗೊತ್ತಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಕಾರಣಕ್ಕಾಗಿ ಆರ್‌ಜೆಡಿ ಜತೆ ನಿತೀಶ್‌ ಮೈತ್ರಿ ಮಾಡಿಕೊಂಡರು. ಅವರ ತಂತ್ರ ಫ‌ಲಿಸಿತು, ಬಿಹಾರದಲ್ಲಿ ಮತ್ತೆ ನಿತೀಶ್‌ ಅಧಿಕಾರದ ಚುಕ್ಕಾಣಿ ಹಿಡಿದರು.
ಇದೆಲ್ಲ ಫ‌ಸ್ಟ್‌ ಹಾಫ್ ಕಥೆ. ಸಿನಿಮಾವು ಸೆಕೆಂಡ್‌ ಹಾಫ್ನಲ್ಲಿ ರೋಚಕ ತಿರುವು ಪಡೆದುಕೊಳ್ಳುವಂತೆ, ನಿತೀಶ್‌ ಇದೀಗ ಮತ್ತೆ ಹಳೇ ಸ್ನೇಹಿತನಿಗೆ ಹತ್ತಿರವಾಗುತ್ತಿದ್ದಾರಾ ಎಂಬ ಶಂಕೆ ಮೂಡುತ್ತಿದೆ. ಅಷ್ಟೇ ಅಲ್ಲ, "ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ' ಎಂಬಂತೆ ಅಧಿಕಾರದ ಆಸೆಗಾಗಿ ಲಾಲು ಕೈಹಿಡಿದಿದ್ದ ನಿತೀಶ್‌ಗೆ ಈಗ ಬಿಹಾರದಲ್ಲಿ ಉಸಿರುಕಟ್ಟುವಂಥ ಸ್ಥಿತಿಯೂ ನಿರ್ಮಾಣವಾಗಿದೆ. ಬಿಹಾರದಲ್ಲಿ ಆರ್‌ಜೆಡಿ ಸಖ್ಯ ತೊರೆದು ಮತ್ತೆ ಕೇಸರಿ ಪಾಳಯವನ್ನು ಸೇರುವ ಮನಸ್ಸು ಮಾಡಿದಂತಿದೆ ನಿತೀಶ್‌.

ಮೋದಿ ಎಂದೊಡನೆ ಮಾರುದೂರ ಓಡುತ್ತಿದ್ದ ನಿತೀಶ್‌, ಪ್ರಧಾನಿ ಜತೆ ವೇದಿಕೆ ಹಂಚಿಕೊಂಡರು. ನೋಟುಗಳ ಅಮಾನ್ಯ ವಿಚಾರದಲ್ಲಿ ಜಾಣನಡೆ ಪ್ರದರ್ಶಿಸಿ, ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿ ಅಪನಗದೀಕರಣದ ವಿರುದ್ಧ ಬೀದಿಗಿಳಿದರೆ, ನಿತೀಶ್‌ ಮಾತ್ರ ನೋಟು ಅಮಾನ್ಯ ಕ್ರಮವನ್ನು ಶ್ಲಾ ಸುವುದರ ಜೊತೆಗೆ ರಚನಾತ್ಮಕ ಟೀಕೆಯ ಮೊರೆಹೋದರು. ಪಿಒಕೆಯಲ್ಲಿ ನಡೆದ ಸರ್ಜಿಕಲ್‌ ದಾಳಿಯನ್ನು ಶ್ಲಾ ಸಿದರು. ಕಾರ್ಯಕ್ರಮವೊಂದರಲ್ಲಿ ಕಮಲದ ಚಿತ್ರಕ್ಕೆ ಬಣ್ಣ ಬಳಿದರು. ಪ್ರಕಾಶ್‌ ಪರ್ವ್‌ ಸಮಾರಂಭದಲ್ಲಿ ಪರಸ್ಪರರನ್ನು ಹೊಗಳಿಕೊಂಡರು. ಮಕರ ಸಂಕ್ರಾಂತಿಯ ಕಾರ್ಯಕ್ರಮಕ್ಕೆ ಬಿಜೆಪಿಯನ್ನು ಆಹ್ವಾನಿಸಿದರು. ಲಾಲು ಹಾಗೂ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆ ಕೇಳಿಬಂದಾಗ, "ದಾಖಲೆಗಳಿದ್ದರೆ ಕ್ರಮ ಕೈಗೊಳ್ಳಿ' ಎನ್ನುವ ಮೂಲಕ ದಾಳಿ ನಡೆಸುವಂತೆ ಪರೋಕ್ಷ ಆಹ್ವಾನ ಕೊಟ್ಟರು. 

"ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ ಅಲ್ಲ, ಮೋದಿಯವರಿಗೆ ಆ ಸಾಮರ್ಥ್ಯವಿದ್ದ ಕಾರಣ ಅವರು ಆ ಹುದ್ದೆಗೇರಿದರು. ನಾನು ಸಣ್ಣ ಪಕ್ಷಕ್ಕೆ ಸೇರಿದವನು' ಎನ್ನುವ ಮೂಲಕ ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಹೊರಟರು. ಕೊನೆಯದಾಗಿ ಪ್ರಧಾನಿ ಮೋದಿ ಅವರ ಔತಣಕೂಟದಲ್ಲಿ ಪಾಲ್ಗೊಂಡು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದರು. ಒಟ್ಟಾರೆಯಾಗಿ ಈ ಎಲ್ಲ ವರ್ತನೆಗಳ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಜತೆಗೆ ಕೈಜೋಡಿಸುವ ಸುಳಿವು ನೀಡಿದ್ದಾರೆ ನಿತೀಶ್‌. ಏಕೆಂದರೆ, ರಾಜಕೀಯದಲ್ಲಿ ಕಾಯಂ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ ಅಲ್ಲವೇ? ಆದರೆ, ಇನ್ನೊಂದು ದಿಕ್ಕಿನಲ್ಲಿ ಯೋಚಿಸಿದಾಗ ಮೇಲಿನ ಎಲ್ಲಾ ನಡೆಗಳು ನಿತೀಶ್‌ರ ರಣತಂತ್ರದ ಭಾಗವೇ ಎಂಬ ಅನುಮಾ ನವೂ ಮೂಡುತ್ತದೆ. ಏಕೆಂದರೆ, ಬಿಜೆಪಿಯ ದೌರ್ಬಲ್ಯವೇ ನಿತೀಶ್‌ರ ಶಕ್ತಿ. ನಿತೀಶ್‌ ಮೂರ್ಖರಲ್ಲ. ಹಾಗಾಗಿ, ಯಾವುದೇ ವಿಚಾರದಲ್ಲೂ ಒಮ್ಮೆಗೇ ಜಿಗಿದು ಗುಂಡಿಗೆ ಬೀಳಬಾರದು ಎಂಬ ಕಾರಣಕ್ಕಾಗಿ ಜಿಗಿಯುವ ಮುಂಚೆಯೇ ಯೋಚಿಸುತ್ತಾರೆ, ಅಳೆದು ತೂಗಿ ಮಾತಾಡುತ್ತಾರೆ, ಮೋದಿ ವಿರೋಧಿ ಭಾವನೆಗಳ ಅಲೆಯಲ್ಲಿ ಕೊಚ್ಚಿಹೋಗದಂತೆ ಎಚ್ಚರಿಕೆಯ ಹೆಜ್ಜೆಯಿಡುತ್ತಿ ದ್ದಾರೆ. ಇದು ವಿನ್ನಿಂಗ್‌ ಸೈಡ್‌(ಗೆಲ್ಲುವ ಕಡೆ)ನಲ್ಲೇ ಇರಬೇಕು ಎನ್ನುವ ಅವರ ಭಾವನೆಗೆ ಸಾಕ್ಷಿ. ಅಷ್ಟೂ ಪ್ರತಿಪಕ್ಷಗಳಲ್ಲಿ ತಮಗೆ ಸರಿಸಾಟಿಯಾಗಬಲ್ಲ, ಯಾವುದೇ ಕಳಂಕವನ್ನು ಅಂಟಿಸಿಕೊಂಡಿರದ ಹಾಗೂ ಮೋದಿಗೆ ಸ್ಪರ್ಧೆ ನೀಡಬಲ್ಲ ನಾಯಕನಿಲ್ಲ ಎಂಬುದು ನಿತೀಶ್‌ಗೂ ಗೊತ್ತು. ತಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎನ್ನುತ್ತಲೇ ತನ್ನನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ ಎಂಬ ಪರೋಕ್ಷ ಸಂದೇಶವನ್ನು ಅವರು ಪ್ರತಿಪಕ್ಷಗಳಿಗೆ ರವಾನಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಏಕೆಂದರೆ, ನಿತೀಶ್‌ರನ್ನು ಒಮ್ಮತದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಕಾಂಗ್ರೆಸ್‌ ಸಿದ್ಧವಿಲ್ಲ. ರಾಹುಲ್‌ಗಾಂಧಿ ಪ್ರಧಾನಿಯಾಗಬೇಕು ಎನ್ನುವುದು ಸೋನಿಯಾರ ಮಹದಾಸೆ. 

ಹೀಗಾಗಿ, ರಾಷ್ಟ್ರಪತಿ ಅಭ್ಯರ್ಥಿಯ ಸಂಭಾವ್ಯರ ಪಟ್ಟಿಯಲ್ಲಿ ಜೆಡಿಯು ನಾಯಕ ಶರದ್‌ ಯಾದವ್‌ರ ಹೆಸರನ್ನೂ ಕಾಂಗ್ರೆಸ್‌ ಸೇರಿಸಿದೆ. ಇದು ನಿತೀಶ್‌ರನ್ನು ಪ್ರಧಾನಿ ಹುದ್ದೆಯಿಂದ ದೂರವಿಡಲು "ಕೈ' ನಡೆಸುತ್ತಿರುವ ತಂತ್ರ. ಅಪ್ಪಿತಪ್ಪಿ ಶರದ್‌ ಯಾದವ್‌ ಏನಾದರೂ ರಾಷ್ಟ್ರಪತಿಯಾದರೆ, 2019ರ ಲೋಕಸಭೆ ಚುನಾವಣೆ ವೇಳೆ ನಿತೀಶ್‌ರನ್ನು ಪ್ರಧಾನಿ ಅಭ್ಯರ್ಥಿ ಎಂದು ಪ್ರತಿಪಕ್ಷಗಳು ಘೋಷಿ ಸುವ ಸಾಧ್ಯತೆ ಕಡಿಮೆ. ಎರಡೂ ಉನ್ನತ ಹುದ್ದೆಗಳು (ರಾಷ್ಟ್ರಪತಿ- ಪ್ರಧಾನಮಂತ್ರಿ) ಒಂದೇ ಪಕ್ಷದ ಪಾಲಾಗಲು ಯಾರೊಬ್ಬರೂ ಒಪ್ಪಲಿಕ್ಕಿಲ್ಲ. ಇದು ಸ್ವತಃ ನಿತೀಶ್‌ಗೂ ಗೊತ್ತು. ಅದಕ್ಕಾಗಿಯೇ ಅವರು ಪ್ರಧಾನಿ ಮೋದಿಯವರೊಂದಿಗೆ ಕೈಜೋಡಿಸುತ್ತಿರುವಂತೆ, ಮತ್ತೆ ಬಿಜೆಪಿಯತ್ತ ಒಲವು ತೋರುತ್ತಿರುವಂತೆ ವರ್ತಿ ಸುತ್ತಾ, ತಮ್ಮನ್ನು ದೂರ ಮಾಡಿದರೆ ನಿಮಗೆ ಉಳಿಗಾಲವಿಲ್ಲ ಎಂಬ ಸೂಚ್ಯ ಸಂದೇಶವನ್ನು ಪ್ರತಿಪಕ್ಷಗಳಿಗೆ ರವಾನಿಸುತ್ತಿದ್ದಾರೆಯೇ ಎಂಬ ಅನುಮಾನವೂ ಮೂಡುತ್ತಿದೆ. ಒಟ್ಟಿನಲ್ಲಿ, ರಾಜಕೀಯದಲ್ಲಿ ಪಳಗಿರುವ ನಿತೀಶ್‌ರ ನಡೆ ಈಗ ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.

 ಹಲೀಮತ್‌ ಸಅದಿಯಾ


Trending videos

Back to Top