CONNECT WITH US  

ಸಿಕ್ಕಿಂ ಗಡಿ ವಿವಾದದಿಂದಾಗಿ ಶುರುವಾಗಿದೆ ಹೊಸ ಸಮರ ಸನ್ನದ್ಧದ ಮಾತು

ಮತ್ತೆ ಮತ್ತೆ ಜಗಳ ಕೆದಕುವ ಚೀನ ಚೀನದ ಆತಂಕ ಇಷ್ಟೇ. ಯಾವುದೇ ಕ್ಷೇತ್ರದಲ್ಲಿ ಭಾರತದ ಸಾಧನೆ ಮಾಡಿದರೆ ದಕ್ಷಿಣ ಏಷ್ಯಾದಲ್ಲಿ ಅದಕ್ಕೆ ತಾನು ಸಣ್ಣವನಾಗುವ ಆತಂಕ. ಅದಕ್ಕಾಗಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಪ್ರತಿರೋಧ ಒಡ್ಡುತ್ತದೆ. ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್‌ ಅಜರ್‌ ಪರವಾಗಿ ಲಾಬಿ ಮಾಡುತ್ತದೆ. ಅರುಣಾಚಲ, ಲಡಾಖ್‌ನ ಪ್ರದೇಶಗಳು ತನ್ನದು ಎಂದು ಹೇಳುತ್ತದೆ. ಇಲ್ಲದಿದ್ದರೆ ಸೂಪರ್‌ ಪವರ್‌ ಆಗಲು ಸಾಧ್ಯವಿಲ್ಲವಲ್ಲ!

ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಲ್ಲ ರಾಜಕೀಯ ನಾಯಕರು ನೆನಪಿನಲ್ಲಿ ಇಟ್ಟುಕೊಳ್ಳುವಂಥ ಮಾತುಗಳನ್ನು ಹೇಳಿದ್ದರು. 'ನಾವು ಸ್ನೇಹಿತರನ್ನು ಬದಲಾಯಿಸಿಕೊಳ್ಳಬಹುದು. ಆದರೆ ನೆರೆಹೊರೆಯವರನ್ನಲ್ಲ'. ಸಾರ್ವಕಾಲಿಕವಾಗಿ ಎಲ್ಲರೂ ಆದ್ಯತೆಯಲ್ಲಿ ಕಾಪಿಟ್ಟುಕೊಳ್ಳಬೇಕಾದ ಮಾತುಗಳವು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಈಗ ಎರಡು ವರ್ಷ ಪೂರ್ತಿಯಾಗಿ, ಮೂರನೇ ವರ್ಷದಲ್ಲಿ ನಡೆಯುತ್ತಿದೆ. ಪಾಕಿಸ್ತಾನ ಮತ್ತು ಚೀನ ನಮ್ಮ ಎರಡು ದೊಡ್ಡ ನೆರೆಯ ರಾಷ್ಟ್ರಗಳು. ಪಾಕಿಸ್ತಾನದ ಜತೆಗೆ ಇರುವ ಸಂಬಂಧ ವಿವರವಂತೂ ಜಗತ್ತಿಗೇ ಗೊತ್ತಿರುವ ವಿಚಾರ. ಹಾಗಿದ್ದರೆ ಚೀನದ ಜತೆಗಿನ ಸಂಬಂಧವಂತೂ ಒಮ್ಮೊಮ್ಮೆ ಸುಧಾರಣೆ, ಮತ್ತೂಮ್ಮೆ ತೀರಾ ಹದಗೆಟ್ಟು ಹೋಗುವುದು, ಹೀಗೆ... ಏಳು ಬೀಳುಗಳನ್ನು ಕಾಣುತ್ತಾ ಇರುತ್ತಿದೆ. ಕೆಲ ದಿನಗಳ ಹಿಂದೆ ಭಾರತದಿಂದ ಸಿಕ್ಕಿಂನ ನಾಥುಲಾ ಪಾಸ್‌ ಮೂಲಕ ಮಾನಸ ಸರೋವರ ಯಾತ್ರೆಗೆ ಹೋದವರನ್ನು ಪ್ರಾಕೃತಿಕ ವಿಕೋಪದ ನೆಪದಲ್ಲಿ ಹಿಂದಕ್ಕೆ ಕಳುಹಿಸಲಾಯಿತು. ಅದಾದ ಬಳಿಕ ಸಿಕ್ಕಿಂ ಪ್ರದೇಶದಲ್ಲಿ ರಸ್ತೆ ನಿರ್ಮಾಣದ ವಿಚಾರ ಬೆಳಕಿಗೆ ಬಂದಿತು.

ಜೂನ್‌ ತಿಂಗಳ ಮೊದಲ ವಾರದಲ್ಲಿ ಭೂತಾನ್‌, ಭಾರತ ಮತ್ತು ಚೀನಕ್ಕೆ ಸೇರಿಕೊಂಡ ಸ್ಥಳದಲ್ಲಿರುವ ಭಾರತ ಸೇನೆಯ ಹಳೆಯ ಬಂಕರ್‌ ಅನ್ನು ಚೀನ ಸೇನೆ ನಾಶ ಮಾಡಿತು. ಭೂಸೇನಾ ಮುಖ್ಯಸ್ಥರು ಸಿಕ್ಕಿಂ ಪ್ರದೇಶಕ್ಕೆ ಹೋದರು. ಚೀನ ಜತೆಗೆ ಅಗತ್ಯ ಬಿದ್ದರೆ ಯುದ್ಧಕ್ಕೆ ಸಿದ್ಧ ಎಂದರು. ಅದಕ್ಕೆ ಪ್ರತ್ಯುತ್ತರವಾಗಿ 1962ರಲ್ಲಿ ನಡೆದ ಸೋಲನ್ನು ಆ ದೇಶದ ವಿದೇಶಾಂಗ ಇಲಾಖೆ ಕೇಂದ್ರಕ್ಕೆ ನೆನಪಿಸಿಕೊಟ್ಟಿತು. ಅದಕ್ಕೆ ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಆ ಪರಿಸ್ಥಿತಿ ಮತ್ತು ಹಾಲಿ ಸ್ಥಿತಿ ಬೇರೆಯೇ ಎಂದು ತಿರುಗೇಟು ಕೊಟ್ಟರು. ಸದ್ಯ ಗಡಿಯಲ್ಲಿ ಬಿಗುವಿನ ಸ್ಥಿತಿಯೇ ಇದೆ.

ಇದಿಷ್ಟು ಹಾಲಿ ಚಿತ್ರಣದ ಪಕ್ಷಿನೋಟ. ಹಾಗಿದ್ದರೆ ಸದ್ಯ ನಮ್ಮ ದೇಶದ ವಿರುದ್ಧ ಸೆಟೆದು ನಿಲ್ಲಲು ಚೀನಕ್ಕೆ ಕೋಪ ಬರಲು ಕಾರಣವಾದರೂ ಏನೆಂಬುದನ್ನು ನೋಡಬೇಕು. ಏಪ್ರಿಲ್‌ನಲ್ಲಿ ಟಿಬೆಟನ್ನರ ಧರ್ಮಗುರು ದಲೈಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿಯೇ ನಮ್ಮ ಎರಡನೇ ದೊಡ್ಡ ನೆರೆಯ ರಾಷ್ಟ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅರುಣಾಚಲಪ್ರದೇಶದ ಬಿಜೆಪಿ ಮುಖಂಡ, ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್‌ ರಿಜಿಜು ಚೀನ ಸರ್ಕಾರದ ವಿರೋಧ ಲೆಕ್ಕಿಸದೇ ಧರ್ಮ ಗುರುವಿನ ಭೇಟಿಗೆ ಅನುವುಮಾಡಿಕೊಟ್ಟರು. ಇದು ಪ್ರಮುಖವಾಗಿ ಅಲ್ಲಿನ ಸರ್ಕಾರ ನಮ್ಮ ದೇಶದ ವಿರುದ್ಧ ಏಕಾಏಕಿ ತಿರುಗಿ ಬೀಳಲು ಕಾರಣ. ಮತ್ತೂಂದು ಪ್ರಮುಖ ಅಂಶವೆಂದರೆ ಜೂನ್‌ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ಕೊಟ್ಟ ವೇಳೆ ಉಗ್ರರ ಸ್ವರ್ಗ ಎನಿಸಿರುವ ಪಾಕಿಸ್ತಾನಕ್ಕೆ ಬುದ್ಧಿ ಮಾತು ಹೇಳಿದ್ದು, ಪಾಕ್‌ನ ಹಿಜ್ಬುಲ್‌ ಉಗ್ರ ಸೈಯದ್‌ ಸಲಾವುದ್ದೀನ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದು, ಅದರ ಯಾವತ್ತೂ ಮಿತ್ರ ರಾಷ್ಟ್ರಕ್ಕೆ ಕಸಿವಿಸಿಯಾಗಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವಕ್ಕೆ (ಸಿಗುವುದು ದೂರದ ಮಾತು ಎನ್ನುವುದು ಕೇಂದ್ರಕ್ಕೂ ಗೊತ್ತಿದೆ) ಅಮೆರಿಕ ಮತ್ತೂಮ್ಮೆ ಬಹಿರಂಗ ಬೆಂಬಲ ನೀಡಿದ್ದು ಕಳವಳಕ್ಕೆ ಕಾರಣವಾಯಿತು. ಅದುವೇ ಈಗಿನ ಬಿಕ್ಕಟ್ಟಿಗೆ ಕಾರಣ.

ಏಷ್ಯಾದಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯನಾಗಿ ಭಾರತ ಪ್ರವೇಶ ಮಾಡಿದರೆ, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಚೀನಕ್ಕೆ ನಿಯಂತ್ರಣ ಕೈ ತಪ್ಪುತ್ತದೆ. ಜತೆಗೆ ನಿಯಂತ್ರಣಕ್ಕೆ ಸಿಗದ ಪಾಕಿಸ್ತಾನಕ್ಕೆ ಸ್ಪೀಡ್‌ ಬ್ರೇಕರ್‌ ಸಿಕ್ಕಿದಂತಾಗುತ್ತದೆ. ಈ ಅಂಶಗಳು ಚೀನಕ್ಕೆ ಯಾವತ್ತೂ ಕಹಿಯೇ. ಅದಕ್ಕಾಗಿಯೇ ಪಠಾಣ್‌ಕೋಟ್‌ ದಾಳಿಯ ಪ್ರಧಾನ ಸಂಚುಕೋರ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಲು ಪುಟಗಟ್ಟಲೆ ದಾಖಲೆ ನೀಡಿದರೂ ಯಾವುದೂ ಸರಿಯಿಲ್ಲ ಎಂದು ತಮಟೆ ಬಡಿಯುವುದು ತೊಂದರೆ ಕೊಡುವುದಕ್ಕಾಗಿಯೇ ಎನ್ನುವುದು ಶೃತವೇ. ಭಾರತ ಮತ್ತು ಚೀನ ನಡುವಿನ ಬಿಕ್ಕಟ್ಟಿಗೆ ಕಾರಣ ಏನು ಕಂಡುಕೊಳ್ಳಲು ಆಗದಷ್ಟು ಗೋಜಲಾಗಿ ಹೋಗಿರುವ ಪ್ರಕರಣವದು. ನಮ್ಮ ದೇಶಕ್ಕೆ ತೊಂದರೆ ಕೊಡಲೋ ಎಂಬಂತೆ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪಾಕಿಸ್ತಾನ - ಚೀನ ಆರ್ಥಿಕ ಕಾರಿಡಾರ್‌ ಅನ್ನು ಮಾಡಲು ಪಾಕಿಸ್ತಾನ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಅದರ ಒಂದು ಭಾಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿಯೇ ಹಾದುಹೋಗುತ್ತದೆ. ಇರಾನ್‌ನ ಗ್ವಾದಾರ್‌ನಲ್ಲಿ ಕೇಂದ್ರ ಸರ್ಕಾರ ಬಂದರು ಅಭಿವೃದ್ಧಿಪಡಿಸುವುದರ ಜತೆಗೆ ಚೀನವೂ ಮತ್ತೂಂದು ಬಂದರು ಅಭಿವೃದ್ಧಿಪಡಿಸುತ್ತಿದೆ. ಹೊಸ ಯೋಜನೆ ಪ್ರಕಾರ ಒನ್‌ ರೋಡ್‌ ಒನ್‌ ಬೆಲ್ಟ್ ಅಂದರೆ ಐತಿಹಾಸಿಕ ವರ್ಷಗಳಲ್ಲಿದ್ದ ಮಾರ್ಗವನ್ನು ಪುನರಪಿ ಅಭಿವೃದ್ಧಿಗೂ ಮುಂದಾಗಿದೆ. ಅಂದರೆ ಯುರೋಪ್‌ ಮತ್ತು ಏಷ್ಯಾ ನಡುವೆ ಇದ್ದ ಚಾರಿತ್ರಿಕ ಕಾಲದ ಮಾರ್ಗ ಅಭಿವೃದ್ಧಿಯ ಯೋಜನೆಯದು.

ಇನ್ನು ಮೂಲ ವಿಚಾರಕ್ಕೆ ಬರುವುದಾದರೆ, ಸಿಕ್ಕಿಂನ ಮತ್ತೂಂದು ಭಾಗದಲ್ಲಿ ಚೀನ ರಸ್ತೆ ನಿರ್ಮಿಸುತ್ತಿದೆ. ಈಗಾಗಲೇ ರಸ್ತೆ, ರೈಲು ಯೋಜನೆಗಳ ನಿರ್ಮಾಣದಿಂದ ಟಿಬೆಟ್‌ ಮೂಲಕ ನೇಪಾಳದ ಗಡಿಯ ವರೆಗೆ ಬಂದಿದೆ. ಸಿಕ್ಕಿಂ ಬಳಿಯಲ್ಲಿಯೇ ರಸ್ತೆ ಸಾಗಿ ಭೂತಾನ್‌ ಪ್ರವೇಶಿಸಿದರೆ ಕತೆ ಮುಗಿದಂತೆಯೇ. ವಿಶೇಷವಾಗಿ ದೇಶದ ಕೊರಳು ಎಂದು ಕರೆಯಿಸಿಕೊಂಡಿರುವ ಪ್ರದೇಶ ಪಶ್ಚಿಮ ಬಂಗಾಲದ ಸಿಲಿಗುರಿ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದ ಭೌಗೋಳಿಕ ವಿಸ್ತೀರ್ಣ ಕೇವಲ 17 ಕಿಮೀ ಅಗಲ. ಇಲ್ಲಿಂದ ಚುಂಬಿ ಕಣಿವೆ ಪ್ರದೇಶಕ್ಕೆ 50 ಕಿಮೀ. ಈ ಕಿರಿಯ ಭೂ ಪ್ರದೇಶದ ಬಳಿಗೆ ಚೀನ ಸಂಪರ್ಕವಾದರೆ ಈಶಾನ್ಯ ರಾಜ್ಯಕ್ಕೆ ಮತ್ತಷ್ಟು ಬೆದರಿಕೆ ಬಂದಂತೆಯೇ ಸರಿ. ಚೀನ ವ್ಯಾಪ್ತಿಯಲ್ಲಿರುವ ಚುಂಬಿ ಕಣಿವೆಯವರೆಗೆ ಇರುವ ರಸ್ತೆಯನ್ನು ಭೂತಾನ್‌ನ ಡೋಕಾಮ್‌ನವರೆಗೆ ವಿಸ್ತರಿಸಲು ಮುಂದಾಗಿದೆ. ಸಿಕ್ಕಿಂ ವ್ಯಾಪ್ತಿಯಲ್ಲಿ ಗಡಿ ತಂಟೆ ಇಲ್ಲದಿದ್ದರೂ ಪ್ರಸ್ತಾವಿತ ರಸ್ತೆ ಯೋಜನೆ ಪೂರ್ತಿಗೊಂಡರೆ ತಲೆನೋವು ಕಟ್ಟಿಟ್ಟ ಬುತ್ತಿ. ಸಮೀಪದಲ್ಲಿಯೇ ಇರುವಂಥದ್ದು ಡಾರ್ಜಿಲಿಂಗ್‌. ಕೆಲ ದಿನಗಳಿಂದ ಅಲ್ಲಿಯೂ ಸ್ಥಳೀಯ ಕಾರಣಗಳಿಗಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಇಂಥ ಸಂದರ್ಭಗಳಲ್ಲಿ ನೆರೆಯ ರಾಷ್ಟ್ರದ ರಸ್ತೆ ಕಾಮಗಾರಿ ಶರವೇಗದಿಂದ ಮುಂದುವರಿದೀತು ಎಂದಾದರೆ ಎಷ್ಟು ಯೋಚಿಸಿದರೂ, ಅದು ಕಡಿಮೆಯೇ ಆಗಿ ಹೋದೀತು.

ದೊಕ್ಲಾಮ್‌ ಪ್ರಸ್ತಭೂಮಿ 269 ಚದಕ ಕಿಮೀ ವ್ಯಾಪ್ತಿ ಇದ್ದು, ಅದನ್ನು ಚೀನ ತನ್ನದೆಂದು ಹೇಳಿಕೊಳ್ಳುತ್ತಿದೆ. ಏಕೆಂದರೆ ಈಶಾನ್ಯ ಭಾಗದ ಅರುಣಾಚಲ ಪ್ರದೇಶದ ಕೆಲವು ಭಾಗಗಳು ತನ್ನವು ಎಂದು ಹೇಳಿಕೊಳ್ಳುತ್ತಿದೆ. ದಲೈಲಾಮಾ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಂಟು ಪ್ರದೇಶಗಳು ತನ್ನವು ಎಂದು ಘೋಷಿಸಿಕೊಂಡು ಹೆಸರು ಇರಿಸಿಕೊಂಡಿತ್ತು. ಕೇಂದ್ರ ಸರ್ಕಾರ ತೀವ್ರವಾಗಿ ಪ್ರತಿಭಟಿಸಿದ ಬಳಿಕ ಆ ಪ್ರಸ್ತಾಪ ನೀರೊಲೆ ಸೇರಿತು. 

ಭೂತಾನ್‌ ಪಾಪ, ಸಣ್ಣ ರಾಷ್ಟ್ರವದು. ಚೀನಕ್ಕೂ ಅದಕ್ಕೂ ಯಾವುದೇ ರಾಜತಾಂತ್ರಿಕ ಸಂಬಂಧಗಳು ಇಲ್ಲ. ಏನಿದ್ದರೂ ನವದೆಹಲಿಯಲ್ಲಿರುವ ಚೀನ ರಾಯಭಾರ ಕಚೇರಿ ಮೂಲಕವೇ ವ್ಯವಹಾರ ನಡೆಯುತ್ತದೆ. ಹತ್ತಿರದ ನೇಪಾಳ, ಟಿಬೆಟ್‌ ಮತ್ತು ದೂರದ ಶ್ರೀಲಂಕಾದಲ್ಲಿಯೂ ಛಾಪು ತೋರಿದಂತೆ ಭಾರತದ ಸನಿಹವೇ ಇರುವ ಸಣ್ಣ ದೇಶ ಭೂತಾನ್‌ ಅನ್ನು ಏಕೆ ಬಿಡಬೇಕು ಎನ್ನುವುದು ಚೀನದ ಮನದಾಳದಲ್ಲಿರುವ ದೂರಾಲೋಚನೆ. 1950ರಲ್ಲಿ ಟಿಬೆಟ್‌ ಅನ್ನು ವಶಪಡಿಸಿಕೊಂಡ ನೆರೆಯ ರಾಷ್ಟ್ರ ನೇಪಾಳ, ಸಿಕ್ಕಿಂ ಮತ್ತು ಭೂತಾನ್‌ಗಳತ್ತ ದಾಳ ಹೂಡಲು ಪ್ರಯತ್ನ ಮಾಡುತ್ತಲೇ ಇದೆ. ಹಾಲಿ ನಡೆಯುತ್ತಿರುವ ಬೆಳವಣಿಗೆಗಳು ಅದರ ಮೂಲ ತಂತ್ರದ ಭಾಗವೇ ಆಗಿದೆ. ಅದಕ್ಕಾಗಿಯೇ ಜೂ.8ರಂದು ಭಾರತ, ಭೂತಾನ್‌ ಮತ್ತು ಚೀನದ ಮೂರು ಭಾಗಗಳು ಸೇರುವ ದೋಕ್ಲಾ ಪ್ರದೇಶದಲ್ಲಿ ಭಾರತೀಯ ಸೇನೆಗೆ ಸೇರಿದ ಹಳೆಯ ಬಂಕರ್‌ ಅನ್ನು ಧ್ವಂಸ ಮಾಡಿತು. ಇದಾದ ಬಳಿಕ ಅಲ್ಲಿ ಎರಡೂ ರಾಷ್ಟ್ರಗಳ ಸೇನೆಗಳ ಮುಖಾಮುಖೀಯಾದವು. ಜೂ.23ರಂದು ನಾಥುಲಾ ಪಾಸ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಐವತ್ತು ಮಂದಿಯ ತಂಡವನ್ನು ಹಿಂದಕ್ಕೆ ಕಳುಹಿಸಿ ಕೊಟ್ಟಿತ್ತು ಚೀನ. ಜೂ.28ರಂದು ಭೂತಾನ್‌ನ ಪ್ರದೇಶವಾಗಿರುವ ದೋಕಲಂ ಪ್ರಸ್ತಭೂಮಿ ಸಮೀಪ ಭಾರತೀಯ ಸೇನೆ ಗಡಿ ದಾಟಿ ಬಂದು ಅಲ್ಲಿ ನಿರ್ಮಾಣ ವಾಗುತ್ತಿರುವ ರಸ್ತೆ ಕಾಮಗಾರಿಗೆ ಆಕ್ಷೇಪ ಹೇಳಿತ್ತು ಎನ್ನುವುದು ಚೀನದ ವಾದ. ವಾಸ್ತವವಾಗಿ ಈಗಾಗಲೇ ಹೇಳಿದಂತೆ ಭೂತಾನ್‌ ಗಡಿ ಪ್ರದೇಶವನ್ನು ಕೈವಶ ಮಾಡಿಕೊಳ್ಳುವ ಇರಾದೆ ಚೀನದ್ದು.

ದಕ್ಷಿಣ ಏಷ್ಯಾದಲ್ಲಿ ಸೂಪರ್‌ ಪವರ್‌ ಆಗಬೇಕೆನ್ನುವುದು ಅದರ ಕನಸು. ಅದಕ್ಕಾಗಿಯೇ ಭಾರತ ಏನು ಮಾಡಿದರೂ, ಅದಕ್ಕೊಂದು ಪ್ರತಿ ಸವಾಲು ಇದ್ದೇ ಇರುತ್ತದೆ. ಮಂಗಳಯಾನ ಯಶಸ್ಸಾದ ಬಳಿಕ ಆ ದೇಶ ಅದನ್ನೂ ನಡೆಸುವುದಾಗಿ ಹೇಳಿತು. ಬಾಹ್ಯಾಕಾಶ ಸಂಶೋಧನೆಗಾಗಿ ಭಾನುವಾರ 25 ಟನ್‌ಗಳಷ್ಟು ಭಾರ ಇರುವ ರಾಕೆಟ್‌ ಅನ್ನು ಉಡಾಯಿಸಲಿದೆ. ಕಳೆದ ವರ್ಷ ಡೌಡಾಂಗ್‌ ಪ್ರದೇಶದಲ್ಲಿ ಅನ್ಯಗ್ರಹ ಜೀವಿಗಳ ಸಂಶೋಧನೆ ಮತ್ತು ರೇಡಿಯೋ ಫ್ರೀಕ್ವೆನ್ಸಿ ಬಗ್ಗೆ ಅಧ್ಯಯನ ನಡೆಸಲು ವಿಶ್ವದ ಅತ್ಯಂತ ದೊಡ್ಡ ಆ್ಯಂಟೆನಾ ಸ್ಥಾಪಿಸಿತ್ತು. ಅವರ ಸಾಧನೆ ಏನೇ ಇರಲಿ. ಜತೆಗೆ ಬಾಕಿದ್ದವರಿಗೂ ತೊಂದರೆ ಕೊಡುವ ಇರಾದೆ ಸಹ್ಯವಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೂ ಈ ಬೆಳವಣಿಗೆ ಒಂದು ಸವಾಲೇ ಹೌದು.

- ಸದಾಶಿವ ಖಂಡಿಗೆ


Trending videos

Back to Top