ಕರ್ನಾಟಕ ಬಿಜೆಪಿಗೆ ಇನ್ನು ಶಾ-ಬಾಸ್‌!


Team Udayavani, Aug 16, 2017, 9:31 AM IST

16-PTI-10.jpg

ಅತ್ತ ಅಮಿತ್‌ ಶಾ ಅವರು ವಿಮಾನ ಏರುತ್ತಿದ್ದಂತೆ ರಾಜ್ಯದ ಮುಖಂಡರು ಕುಳಿತು ಒಂದು ಸುತ್ತಿನ ಸಭೆ ಮಾಡಿದ್ದಾರೆ. ಮುಂದಿನ ತಿಂಗಳು ಅಮಿತ್‌ ಶಾ ಅವರು ಬರುವುದರೊಳಗೆ ಅವರು ನೀಡಿರುವ ಕೆಲಸಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಚರ್ಚೆ ಶುರುಹಚ್ಚಿಕೊಂಡಿದ್ದಾರೆ. 

ಭಾರೀ ಮಳೆ ಬಂದು ನಿಂತರೂ ಅದರಿಂದ ಉಂಟಾದ ಪ್ರವಾಹ ನಿಲ್ಲಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಆದರೆ, ಅದರಿಂದ ಉಂಟಾಗುವ ಪರಿಣಾಮಗಳು ಸಾಕಷ್ಟು ದಿನ ಕಾಡುತ್ತವೆ. ಪ್ರಸ್ತುತ ಬಿಜೆಪಿ ಪಾಲಿನ ಚಾಣಕ್ಯ ಎಂದೇ ಹೇಳಲಾಗುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಮೂರು ದಿನಗಳ ರಾಜ್ಯ ಭೇಟಿಯ ಪರಿಸ್ಥಿತಿಯೂ ಇದೇ ಆಗಿದೆ. ಅವರ ಕಾರ್ಯವೈಖರಿಗೆ ರಾಜ್ಯ ಬಿಜೆಪಿಗೆ ಮಾತ್ರವಲ್ಲ, ಆಡಳಿತಾರೂಢ ಕಾಂಗ್ರೆಸ್‌ ಕೂಡ ಕೊಂಚ ಮಟ್ಟಿಗೆ ಬೆಚ್ಚಿ ಬಿದ್ದಿದೆ. ಅದು ಬಿಜೆಪಿ ನಾಯಕರ ಮುಖದಲ್ಲಿ ವ್ಯಕ್ತವಾದರೆ, ಕಾಂಗ್ರೆಸ್‌ ನಾಯಕರ ಮಾತುಗಳಲ್ಲಿ ಹೊರಬೀಳುತ್ತಿದೆ. ಇನ್ನೊಂದೆಡೆ ಬಿಜೆಪಿ ಮುಖಂಡರ ಹಾವಭಾವ, ಮೌನ, ಕಳೆಗುಂದಿದ ಮುಖಗಳೇ ಮುಂದಿನ ದಿನಗಳಲ್ಲಿ ಅವರು ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆಯನ್ನು ನೀಡಿದೆ.

ಸಾಮಾನ್ಯವಾಗಿ ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯಕ್ಕೆ ಬರುತ್ತಾರೆ ಎಂದಾದರೆ ಅವರ ಮುಂದೆ ದೂರು, ಆರೋಪಗಳ ಪಟ್ಟಿಗಳನ್ನಿಡುತ್ತಿದ್ದರು. ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರು ಬಂದು ಹೋದ ಬಳಿಕ ಒಂದು ವರ್ಗದ ಮುಖಂಡರಲ್ಲಿ ಹರ್ಷ ಕಂಡು ಬಂದರೆ ಇನ್ನೊಂದು ವರ್ಗದಲ್ಲಿ ಬೇಸರ, ಅಸಮಾಧಾನ ಕಾಣಿಸಿಕೊಳ್ಳುತ್ತಿತ್ತು. ಆದರೆ, ಪ್ರವಾಸದ ವೇಳೆ ದೂರು, ಆರೋಪ, ಅಸಮಾಧಾನಗಳಿಗೆ ಅವಕಾಶವೇ ಇರಲಿಲ್ಲ. ಯಾರನ್ನೋ ಓಲೈಸುವ, ಇನ್ಯಾರನ್ನೋ ಕಡೆಗಣಿಸುವ ಕೆಲಸವೇ ಆಗಲಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಅದಕ್ಕೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಇಲ್ಲವೇ ಜಾಗ ಖಾಲಿ ಮಾಡಬೇಕು ಎಂಬ ವಿಚಾರವಷ್ಟೇ ಪ್ರಮುಖವಾಗಿತ್ತು. ಹೀಗಾಗಿ ಎಲ್ಲಾ ನಾಯಕರ ಮುಖಗಳೂ ಬಾಡಿಹೋಗಿತ್ತು.

ಇದಕ್ಕೆ ಕಾರಣ ಅಮಿತ್‌ ಶಾ ಅವರ ಕಾರ್ಯವೈಖರಿ. ಯಾವುದೇ ರಾಜ್ಯಕ್ಕೆ ಭೇಟಿ ನೀಡಲಿ, ಅದಕ್ಕೆ ಮುನ್ನವೇ ಪಕ್ಷದ ರಾಜ್ಯ ಘಟಕದಲ್ಲಿ ಏನೆಲ್ಲಾ ನಡೆಯುತ್ತಿದೆ? ಮುಖಂಡರು ಯಾವ ರೀತಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ? ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಅದಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡೇ ನಂತರ ಬರುತ್ತಾರೆ. ಅದೇ ರೀತಿ ರಾಜ್ಯದ ಬಗ್ಗೆಯೂ ಮಾಹಿತಿ ಪಡೆದುಕೊಂಡೇ ಬೆಂಗಳೂರಿಗೆ ಕಾಲಿಟ್ಟಿದ್ದರು. ಹೀಗಾಗಿ ಯಾರೇ ನಾಯಕರು ಅವರ ಮುಂದೆ ಕಾಗಕ್ಕ-ಗುಬ್ಬಕ್ಕ ಕಥೆಗಳನ್ನು ಹೇಳುವಂತಿರಲಿಲ್ಲ. ಅವರ ಸಭೆಗಳಿಗೆ ಸಂಪೂರ್ಣ ತಯಾರಿ ನಡೆಸಿಯೇ ಹೋಗಬೇಕು. ಇಲ್ಲದೇ ಇದ್ದಲ್ಲಿ ಅವರು ಕೇಳುವ ಪ್ರಶ್ನೆ, ಅಡ್ಡ ಪ್ರಶ್ನೆಗಳಿಂದ ತಬ್ಬಿಬ್ಬಿಗೊಳಗಾಗುವುದು ಖಂಡಿತ. ಈ ಅನುಭವ ಸಭೆಯಲ್ಲಿ ಕೆಲವರಿಗೆ ಆಗಿ, ಶಾ ಅವರಿಂದ ತೀಕ್ಷ್ಣ ಮಾತುಗಳನ್ನೂ ಕೇಳಬೇಕಾಗಿ ಬಂದಿತ್ತು.

ಅಷ್ಟಕ್ಕೂ ಮೂರು ದಿನಗಳ ಕಾಲ ಅಮಿತ್‌ ಶಾ ಅವರ ಮಾತು, ಸಭೆ, ಸಂವಾದಗಳಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಿದ್ದು ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ, ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲ, ರಾಜ್ಯದ ಭ್ರಷ್ಟ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟ ನಡೆಸಬೇಕು, ಪಕ್ಷದ ನಾಯಕರು ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂಬುದು. ಈ ನಾಲ್ಕು ಅಂಶಗಳನ್ನು ಇಟ್ಟುಕೊಂಡೇ ಅವರು ರಾಜ್ಯ ಬಿಜೆಪಿ ನಾಯಕರ ಚಳಿ ಬಿಡಿಸಿದ್ದಾರೆ. 

ಆದರೆ, ಅದರ ಬಿಸಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದರೆ ಆಡಳಿತಾರೂಢ ಕಾಂಗ್ರೆಸ್‌ ಮುಖಂಡರು ಕೂಡ ಮೂರು ದಿನ ಅಮಿತ್‌ ಶಾ ಎಂಬ ಮಂತ್ರವನ್ನೇ ಹೇಳುವಂತಾಗಿತ್ತು. ನಮಗೆ ಅಮಿತ್‌ ಶಾ ಭಯವಿಲ್ಲ, ಅವರ ಕಾರ್ಯತಂತ್ರಗಳು ಇಲ್ಲಿ ಫ‌ಲಿಸುವುದಿಲ್ಲ, ಅಮಿತ್‌ ಶಾ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರಾಗಿ ಎಲ್ಲರೂ ಬಡಬಡಿಸುತ್ತಿದ್ದರು. ವೇಣುಗೋಪಾಲ್‌ ಅವರು ಎಐಸಿಸಿ ರಾಜ್ಯ ಉಸ್ತುವಾರಿಯಾಗಿ ರಾಜ್ಯಕ್ಕೆ ಬಂದು ಹೋಗಲಾರಂಭಿಸಿದ ಬಳಿಕ ಚೇತರಿಸಿಕೊಂಡಿದ್ದ ಕಾಂಗ್ರೆಸ್‌ ನಾಯಕರು ಏಕಾಏಕಿ ಬದಲಾಗುವಷ್ಟು ಶಾ ಪ್ರವಾಸದ ಕಾವು ಆ ಪಕ್ಷವನ್ನು ತಟ್ಟಿತ್ತು. 

 “ಎಷ್ಟೇ ಸಣ್ಣ ಕೆಲಸವಿದ್ದರೂ ಸಿಂಹ ತನ್ನ ಕೆಲಸ ಮುಗಿಯುವ ತನಕ ತನ್ನ ಶಕ್ತಿ ಮರೆತು ವಿಶ್ರಮಿಸುವುದಿಲ್ಲ. ಅಂದರೆ, ಅದು ಯಾವುದೇ ಪ್ರಾಣಿಯನ್ನು ಹಿಡಿಯಲು ಯೋಚಿಸಿದರೆ ಅದಕ್ಕೆ ಸರಿಯಾದ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತದೆ ಮಾತ್ರವಲ್ಲ ಸಾಯಿಸುವ ತನಕ ತನ್ನ ಕೆಲಸವನ್ನು ಬಿಟ್ಟು ಬಿಡುವುದಿಲ್ಲ. ನಮ್ಮಲ್ಲಿ ಕೆಲವು ಜನರಿದ್ದಾರೆ, ಅವರಿಗೆ ಕೆಲಸ ಆರಂಭಿಸಿ ಮಾತ್ರ ಅಭ್ಯಾಸ. ಮುಗಿಸುವ ತನಕ ಆರಂಭಿಸಿದ ಹುಮ್ಮಸ್ಸು ಇರುವುದಿಲ್ಲ. ಸಿಂಹದಂತೆಯೆ ನಾವು ಕೂಡ ಏನೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಯೋಜನೆಗಳನ್ನು ರೂಪಿಸಿ ತದೇಕ ಚಿತ್ತದಿಂದ ಕೆಲಸ ಮಾಡಿದರೆ ಆ ಕೆಲಸವು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಕೌಟಿಲ್ಯ ಅರ್ಥಾತ್‌ ಚಾಣಕ್ಯ ಬೋಧಿಸಿದ ತಂತ್ರ. ಈ ಸಿಂಹದ ತಂತ್ರವನ್ನು ಪಕ್ಷದಲ್ಲಿರುವವರು ಅನುಸರಿಸಬೇಕು’ ಎಂಬ ನಿರ್ದೇಶನ ಕೊಟ್ಟುಹೋಗಿದ್ದಾರೆ ಅಮಿತ್‌ ಶಾ.

ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ, ಕೋರ್‌ ಕಮಿಟಿ ಸಭೆಗಳನ್ನು ಸರಿಯಾಗಿ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗುತ್ತಿಲ್ಲ, ಏಕಪಕ್ಷೀಯ ಧೋರಣೆ ಅನುಸರಿಸಲಾಗುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ಮಾಡುತ್ತಾ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ. ಇನ್ನೇನಿದ್ದರೂ ಮುಖಂಡರ ಕಾರ್ಯನಿರ್ವಹಣೆಯಷ್ಟೇ ಪ್ರಮುಖವಾಗುತ್ತದೆ. ಅದರಲ್ಲಿ ಎಡವಟ್ಟು ಮಾಡಿಕೊಂಡರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ತಲುಪಿಸಿರುವುದು ಗೊತ್ತಾಗುತ್ತದೆ. ಅಲ್ಲದೆ, ಕೇವಲ ಪ್ರವಾಸ, ಭಾಷಣ, ಸಭೆಗಳ ಮೂಲಕವಲ್ಲ, ಜನರನ್ನು ತಲುಪಿ ಅವರನ್ನು ತಮ್ಮತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ಷಮತೆ ತೋರಬೇಕು ಎಂಬುದನ್ನು ಅಮಿತ್‌ ಶಾ ರಾಜ್ಯ ನಾಯಕರಿಗೆ ತಿಳಿಹೇಳಿರುವುದು ಸ್ಪಷ್ಟವಾಗುತ್ತದೆ.

ಅಮಿತ್‌ ಶಾ ಅವರ ಕಾರ್ಯವೈಖರಿಯಲ್ಲಿ ನಿಜವಾಗಿಯೂ ಅಚ್ಚರಿ ಹುಟ್ಟಿಸಿದ್ದು ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರಮಾಡಿ ಇಡೀ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ರೀತಿ. ಸಾಕಷ್ಟು ರಾಜ್ಯಗಳಲ್ಲಿ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದ ಶಾ ಅವರಿಗೆ ಪಕ್ಷದ ರಾಜ್ಯ ಘಟಕದಲ್ಲಿರುವ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವುದು ಕಷ್ಟದ ಕೆಲಸ ಆಗಲೇ ಇಲ್ಲ. ಇನ್ನೊಂದೆಡೆ, ರಾಜ್ಯದ ನಾಯಕರು ತಮ್ಮ ವೇಗಕ್ಕೆ ಹೊಂದಿಕೊಳ್ಳುವಂತಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಅವರಿಗೆ ಕೆಲವು ಕಾರ್ಯಭಾರವನ್ನು ವಹಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಷರತ್ತು ವಿಧಿಸಿ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದಕ್ಕೆ ಉದಾಹರಣೆ ಕಳೆದ ನಾಲ್ಕೈದು ತಿಂಗಳಿನಿಂದ ಹೋರಾಟವನ್ನೇ ಮರೆತವರಂತಿದ್ದ ಬಿಜೆಪಿ ನಾಯಕರು ಅಮಿತ್‌ ಶಾ ನೀಡಿದ ಟಾಸ್ಕ್ ನಂತರ ಸಚಿವ ಡಿ.ಕೆ.ಶಿವಕುಮಾರ್‌ ಮೇಲೆ ನಡೆದ ಐಟಿ ದಾಳಿ ಸೇರಿದಂತೆ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಲು ನಿರ್ಧರಿಸುವುದು. ಇನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಅಮಿತ್‌ ಶಾ ಆ ಕುರಿತು ಬಿಜೆಪಿಯ ರಾಜ್ಯ ಘಟಕದೊಂದಿಗೆ ಸಮಾಲೋಚಿಸಲೇ ಇಲ್ಲ. 

ಅದರ ಬದಲು ಸಂಘ ಪರಿವಾರದವರೊಂದಿಗಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುವ ಮೂಲಕ ಸಂಘ ಪರಿವಾರ ಮತ್ತು ಮೂಲ ಕಾರ್ಯಕರ್ತರಿಗೆ ಅದರಲ್ಲೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳನ್ನು ಹುಟ್ಟುಹಾಕಿದ್ದಾರೆ. ಆ ಮೂಲಕ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಮತ್ತೆ ನಾಯಕರ ಮಧ್ಯೆ ಅಸಮಾಧಾನ ಉಂಟಾಗದಂತೆ ಈಗಲೇ ವೇದಿಕೆ ಸಿದ್ಧಪಡಿಸಿದ್ದಾರೆ. ಅಮಿತ್‌ ಶಾ ಅವರು ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದಂತೆ ಅವರ ಕಠಿಣ ನಿಲುವುಗಳ ಪರಿಣಾಮ ಬಿಜೆಪಿಯಲ್ಲಿ ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಅತ್ತ ಅಮಿತ್‌ ಶಾ ವಿಮಾನ ಏರುತ್ತಿದ್ದಂತೆ ಮುಖಂಡರು ಕುಳಿತು ಒಂದು ಸುತ್ತಿನ ಸಭೆ ಮಾಡಿದ್ದಾರೆ. ಮುಂದಿನ ತಿಂಗಳು ಅಮಿತ್‌ ಶಾ ಅವರು ಬರುವುದರೊಳಗೆ ಅವರು ನೀಡಿರುವ ಕೆಲಸಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಚರ್ಚೆ ಶುರುಹಚ್ಚಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟು ಮೂಡಿಸುವ ಅಮಿತ್‌ ಶಾ ಅವರ ಪ್ರಯತ್ನ ಸಫ‌ಲವಾಗಿದೆ.

ಪ್ರದೀಪ್‌ ಕುಮಾರ್‌ ಎಂ.

ಟಾಪ್ ನ್ಯೂಸ್

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.