CONNECT WITH US  

ಬಿಜೆಪಿಗೆ ರಾಣೆ ಎಂಟ್ರಿ, ಸಮರಕ್ಕೆ ಸಜ್ಜಾಯಿತು ಸೇನೆ

ಉದ್ಧವ್‌ ಠಾಕ್ರೆ - ರಾಜ್‌ ಠಾಕ್ರೆ ಒಂದಾಗುವ ಸಾಧ್ಯತೆ

ಈ ಬಾರಿಯ ದೀಪಾವಳಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮುರಿಯಲಿದೆ ಎಂಬ ಸೂಚನೆ ಉಂಟು. ಬಿಜೆಪಿ ಪ್ರತಿಕ್ರಿಯೆ ಕೊಡದಿದ್ದರೂ ಅದು ಮೈತ್ರಿ ಮುರಿದರೆ ಮುಂದೇನು ಎಂಬ ಚಿಂತೆ ಅದಕ್ಕಿದೆ. ಇತ್ತೀಚೆಗಂತೂ ವಿಪಕ್ಷ ಕಾಂಗ್ರೆಸ್‌ಗಿಂತ ಶಿವಸೇನೆಯೇ ಫ‌ಡ್ನವಿಸ್‌, ಮೋದಿ ಸರಕಾರದ ವಿರುದ್ಧ ಬಲವಾಗಿಯೇ ಟೀಕೆ ಮಾಡುತ್ತಿದೆ.

ಮಹಾರಾಷ್ಟ್ರದಲ್ಲಿ ನಿಜವಾದ ವಿಪಕ್ಷ ಯಾವುದು? 2014ರ ವಿಧಾನಸಭೆ ಚುನಾವಣೆ ನಡೆದ ದಿನದಿಂದಲೂ ಇಲ್ಲಿವರೆಗೆ ಗಮನಿಸಿಕೊಂಡು ಬಂದು ಹೇಳಬಹುದಾದ ಉತ್ತರ, ಶಿವಸೇನೆ! ಹೌದು, ಸದ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಯ ಸರಕಾರ ಇದ್ದರೂ, ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ಅವರ ಪ್ರತಿ ನಡೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಶಿವಸೇನೆಯೇ. ಇಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ಗಿಂತ ಹೆಚ್ಚು ಮಾತನಾಡಿರುವುದು ಶಿವಸೇನೆಯ ನಾಯಕರೇ. ಶಿವಾಜಿ ನಾಡಿನಲ್ಲಿ ಸದ್ಯಕ್ಕೆ ಕಾಂಗ್ರೆಸ್‌ ಧ್ವನಿ ಕಡಿಮೆಯಾಗಿದ್ದರೆ, ಶಿವಸೇನೆ ಮತ್ತು ನವನಿರ್ಮಾಣ ಸೇನೆಯ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. 

ಎಲ್ಲವೂ ಅಂದುಕೊಂಡಂತಾದರೆ ದೀಪಾವಳಿ ನಂತರ ಬಿಜೆಪಿ ಮತ್ತು ಶಿವಸೇನೆ ಬೇರೆಯಾಗುವುದು ಖಂಡಿತ ಎಂದೇ ಹೇಳಲಾಗುತ್ತಿದೆ. ಹೊಸದಾಗಿ ಬಿಜೆಪಿ-ಎನ್‌ಸಿಪಿ ಸ್ನೇಹ ಮಾಡಿಕೊಂಡರೆ, ಉದ್ಧವ್‌ ಠಾಕ್ರೆ ಅವರ ಶಿವಸೇನೆ ಮತ್ತು ರಾಜ್‌ ಠಾಕ್ರೆ ಅವರ ಎಂಎನ್‌ಎಸ್‌ ಕೂಡ ಒಂದಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. 

ಬಿಜೆಪಿ ಮತ್ತು ಶಿವಸೇನೆಯ ಜಗಳ ಇಂದಿನದ್ದಲ್ಲ. ಅದು ವಿಧಾನಸಭೆ ಚುನಾವಣೆಗೆ ಮೊದಲಿನಿಂದಲೂ ಇತ್ತು.  ಹಿಂದೆ ಕಾಂಗ್ರೆಸ್‌- ಎನ್‌ಸಿಪಿ ಮೈತ್ರಿ ಸರಕಾರವಿದ್ದರೂ, ಪ್ರಮುಖ ವಿಪಕ್ಷ ಸ್ಥಾನದಲ್ಲಿದ್ದುದು ಶಿವಸೇನೆ ನೇತೃತ್ವದ ಎನ್‌ಡಿಎ ಮೈತ್ರಿಕೂಟ. 2014ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಮತ್ತು ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟಗಳ ಸ್ನೇಹ ಒಡೆಯಿತು. ಸ್ಥಾನ ಹೊಂದಾಣಿಕೆಯ ಲೆಕ್ಕಾಚಾರದಲ್ಲಿ ಶಿವಸೇನೆಯ ದೊಡ್ಡಣ್ಣನ ಪಾತ್ರ ಒಪ್ಪಿಕೊಳ್ಳದ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಮಾಡಿತು. 

ಎರಡೂ ಮೈತ್ರಿಕೂಟಗಳ ಬಿರುಕು ಒಂದರ್ಥದಲ್ಲಿ ಲಾಭವಾಗಿದ್ದು ಬಿಜೆಪಿಗೇ. ಸರಿಸುಮಾರು 10 ವರ್ಷಗಳ ಆಡಳಿತ ಕಂಡಿದ್ದ ಕಾಂಗ್ರೆಸ್‌ ಮೂರನೇ ಸ್ಥಾನಕ್ಕಿಳಿದರೆ, ಬಿಜೆಪಿ ಅಗ್ರ ಸ್ಥಾನಿಯಾಯಿತು. ಜತೆಗೆ ಸ್ವತಂತ್ರವಾಗಿಯೇ ಸ್ಪರ್ಧೆಗಿಳಿಸಿದ್ದ ಶಿವಸೇನೆ  ಎರಡನೇ ಸ್ಥಾನಕ್ಕೆ ಬಂದರೆ, ಎನ್‌ಸಿಪಿ ನಾಲ್ಕನೇ ಸ್ಥಾನಕ್ಕೆ ಹೋಯಿತು. ಈ ಚುನಾವಣೆಯಲ್ಲಿ ನಿಜವಾಗಿಯೂ ಮುಖಭಂಗವಾಗಿದ್ದುದು ಶಿವಸೇನೆಗೆ. ಬಿಜೆಪಿಗಿಂತ ಒಂದು ಕೈ ಮೇಲೆ ಎಂದೇ ಭಾವಿಸಿದ್ದ ಉದ್ಧವ್‌ ಠಾಕ್ರೆ ನೇತೃತ್ವದ ಈ ಪಕ್ಷಕ್ಕೆ ಈ ಸೋಲನ್ನು ಸಹಿಸಲು ಆಗಲೇ ಇಲ್ಲ. ಜತೆಯಲ್ಲೇ ನಡೆದ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ ಭರ್ಜರಿಯಾಗಿಯೇ ಜಯ ಗಳಿಸಿತು.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿನ ಸೋಲು ಶಿವಸೇನೆಗೆ ದಂಗು ಬಡಿಸಿದ್ದಲ್ಲದೆ, ಮುಂದೇನು ಎಂಬ ಪೀಕಲಾಟವೂ ಶುರುವಾಯಿತು. ಇದಕ್ಕೆ ಕಾರಣವೂ ಇದೆ. ಬಿಜೆಪಿ ಮತ್ತು ಶಿವಸೇನೆ ಹಿಂದೂ ಧರ್ಮ ಸಿದ್ಧಾಂತವನ್ನು ಪ್ರಬಲವಾಗಿ ಮಂಡನೆ ಮಾಡಿಕೊಂಡು ಬಂದ ಪಕ್ಷಗಳೇ. ಇದೀಗ ಮಹಾರಾಷ್ಟ್ರದಲ್ಲಿ ಸರಕಾರ ಮುನ್ನಡೆಸುತ್ತಿರುವ ದೇವೇಂದ್ರ ಫ‌ಡ್ನವಿಸ್‌ ಸರಕಾರದ ಬಗ್ಗೆ ಒಳ್ಳೇ ಅಭಿಪ್ರಾಯ ಮೂಡುತ್ತಿದೆ ಎಂಬ ಆತಂಕ ಕೂಡ ಶಿವಸೇನೆಗೆ ಎದುರಾಗಿದೆ. 2014ರ ಚುನಾವಣೆಗಳ ನಂತರ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚು ಕಡಿಮೆ ಬಿಜೆಪಿಯದ್ದೇ ಸಂಪೂರ್ಣ ಮೇಲುಗೈ. ಮಹಾನಗರ ಪಾಲಿಕೆ ಚುನಾವಣೆಗಳಲ್ಲಂತೂ ಮುಂಬೈ ಮತ್ತು ಠಾಣೆ ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು. ಹೀಗಾಗಿ ಶಿವಸೇನೆಗೆ ವರ್ತಮಾನದ ಅಧಿಕಾರಕ್ಕಿಂತ ಭವಿಷ್ಯದ ಅಸ್ತಿತ್ವದ ಪ್ರಶ್ನೆ ಎದ್ದಿದೆ. ಹೀಗಾಗಿಯೇ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ಗಿಂತ ಕೇಂದ್ರ ಮತ್ತು ರಾಜ್ಯದಲ್ಲಿರುವ ನರೇಂದ್ರ ಮೋದಿ ಹಾಗೂ ದೇವೇಂದ್ರ ಫ‌ಡ್ನವಿಸ್‌ರನ್ನು ದೂರುವುದರಲ್ಲಿ ಶಿವಸೇನೆ ಹಿಂದೆ ಬಿದ್ದೇ ಇಲ್ಲ.

ಹೀಗಾಗಿಯೇ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರವನ್ನು ಪ್ರತಿದಿನವೂ ತರಾಟೆಗೆ ತೆಗೆದುಕೊಳ್ಳುತ್ತಿರುವ ಶಿವಸೇನೆ ನಾಯಕರು, ಹಿಂದಿನ ಯುಪಿಎ ಸರಕಾರವೇ ವಾಸಿ, ಈಗಿನದ್ದು ಬರೀ ಸುಳ್ಳುಗಳ ಸರಕಾರ ಎಂಬ ಹೇಳಿಕೆಗಳ ಮಟ್ಟಕ್ಕೆ ಬಂದಿದ್ದಾರೆ. ನೋಟು ಅಮಾನ್ಯ ಮತ್ತು ಜಿಎಸ್‌ಟಿ ವಿಚಾರದಲ್ಲೂ ಕಾಂಗ್ರೆಸ್‌ಗಿಂತಲೂ ಒಂದಷ್ಟು ಮುಂದೆ ಹೋಗಿರುವ ಶಿವಸೇನೆ, ಇದುವರೆಗಿನ ಎಲ್ಲ ಸರಕಾರಗಳಿಗಿಂತ ಮೋದಿ ಸರಕಾರವೇ ಅತ್ಯಂತ ಕೆಟ್ಟದ್ದು ಎಂಬ ಕಟು ಮಾತುಗಳಲ್ಲಿ ಟೀಕಿಸಿದೆ. ಶನಿವಾರ ಕೂಡ ಶಿವಸೇನೆ ತನ್ನ ಮಾತಿನ ಧಾಟಿ ಮುಂದುವರಿಸಿದ್ದು, ಜಿಎಸ್‌ಟಿ ಇಳಿಕೆ ಬಗ್ಗೆಯೂ ಲೇವಡಿ ಮಾಡಿದೆ. ಆಡಿದ ಮಾತು ಉಳಿಸಿಕೊಳ್ಳುವಲ್ಲಿ ಯುಪಿಎ ಸರಕಾರವೇ ಉತ್ತಮ. ಆದರೆ ಈ ಸರಕಾರವಂತೂ ಯೂಟರ್ನ್ ಪ್ರವೀಣವಾಗಿದೆ ಎಂದೂ ಹೇಳಿದೆ. 

ಈ ಟೀಕೆಗಳು ಕೇವಲ ಕೇಂದ್ರಕ್ಕೆ ನಿಲ್ಲುವುದಿಲ್ಲ. ಮಹಾರಾಷ್ಟ್ರದಲ್ಲಿನ ದೇವೇಂದ್ರ ಫ‌ಡ್ನವಿಸ್‌ ಮೇಲೂ ತಿರುಗಿವೆ. ರೈತರ ಆತ್ಮಹತ್ಯೆ ವಿಚಾರದಲ್ಲಿ ಸಾಲ ಮನ್ನಾಗೆ ಒತ್ತಾಯಿಸಿದ ಶಿವಸೇನೆ, ಸಾಲ ಮನ್ನಾ ಘೋಷಣೆ ಅನಂತರ ಅದರ ಲಾಭ ತೆಗೆದುಕೊಳ್ಳಲು ಮುಂದಾಯಿತು. ಆದರೆ ಇದೇ ಸಾಲ ಮನ್ನಾ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲ ಎಂಬ ಆರೋಪ ಮಾಡಿ, ಪ್ರತಿದಿನವೂ ರಾಜ್ಯ ಸರಕಾರವನ್ನು ಕುಟುಕುತ್ತಲೇ  ಬಂದಿದೆ. ಇದಷ್ಟೇ ಅಲ್ಲ, ಕಳೆದ ತಿಂಗಳು ಮುಂಬಯಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲು¤ಳಿತ ಘಟನೆ ವಿಚಾರದಲ್ಲಂತೂ ಬಿಜೆಪಿ ಸರಕಾರಕ್ಕೆ ಕೆಟ್ಟ ಕನಸಿನಂತೆಯೇ ಶಿವಸೇನೆ ಕಾಡಿತು. 

ಶಿವಸೇನೆಯ ಈ ಸರಣಿ ಆರೋಪಗಳು, ಟೀಕೆಗಳ ಬಗ್ಗೆ ಬಿಜೆಪಿ ಎಲ್ಲೂ ಮಾತನಾಡುತ್ತಿಲ್ಲ. ಆದರೆ, ಆಂತರಿಕವಾಗಿಯೇ ಶಿವಸೇನೆ ದೂರ ಸರಿದರೆ ಸರಕಾರ ಉಳಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಸ್ಥಾನಗಳಿದ್ದು ಬಹುಮತಕ್ಕೆ 145 ಶಾಸಕರ ಬೆಂಬಲ ಬೇಕು. ಆದರೆ ಬಿಜೆಪಿ ಬಳಿ ಇರುವುದು 122 ಮಾತ್ರ. ಇನ್ನೂ 23 ಶಾಸಕರ ಬೆಂಬಲ ಬೇಕು. ಸದ್ಯ 63ರಲ್ಲಿ ಗೆದ್ದಿರುವ ಶಿವಸೇನೆಯೇ ಬಿಜೆಪಿಗೆ ಬೆಂಬಲ ನೀಡಿದ್ದು ಸರಕಾರದಲ್ಲಿ ತನ್ನದೇ ಆದ ಸಚಿವರನ್ನೂ ಒಳಗೊಂಡಿದೆ. ಆದರೂ ಒಂದು ವೇಳೆ ಶಿವಸೇನೆ ಕೈಕೊಟ್ಟರೆ ಪ್ಲಾನ್‌ ಬಿ ಆಗಿ ಎನ್‌ಸಿಪಿಯ ಬೆಂಬಲ ಪಡೆವ ಚಿಂತನೆಯೂ ಬಿಜೆಪಿಗಿದೆ. ಅಲ್ಲದೆ ಬಿಜೆಪಿ ಮತ್ತು ಎನ್‌ಸಿಪಿ ಜತೆಯಾಗಬಹುದು ಎಂಬ ಅನುಮಾನವೂ ಶಿವಸೇನೆಗೆ ಇದೆ. ಇದಕ್ಕೆ ಕಾರಣ, 2014ರ ಚುನಾವಣಾ ಫ‌ಲಿತಾಂಶದ ನಂತರ, ಬಿಜೆಪಿ ಜತೆ ಕೈಜೋಡಿಸಲು ಶಿವಸೇನೆ ಮೀನಾ ಮೇಷ ಎಣಿಸುತ್ತಿತ್ತು. ಆಗ ಎನ್‌ಸಿಪಿ ನಾಯಕ ಪ್ರಫ‌ುಲ್‌ ಪಟೇಲ್‌, ಬಿಜೆಪಿ ಜತೆ ಕೈಜೋಡಿಸಲು ಸಿದ್ಧವೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಆಗ ಬಿಜೆಪಿ ಜತೆ ಚೌಕಾಸಿಯಲ್ಲಿ ತೊಡಗಿದ್ದ ಶಿವಸೇನೆಗೆ ಈ ವಿದ್ಯಮಾನ ಶಾಕ್‌ ನೀಡಿತ್ತು. ಆದರೆ, ಅಂದು ಬಿಜೆಪಿ ಮತ್ತು ಎನ್‌ಸಿಪಿ ಜತೆಯಾಗಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಬಿಟ್ಟಿರಲಿಲ್ಲ. ಎರಡು-ಮೂರು ದಶಕದಿಂದಲೂ ಒಟ್ಟಾಗಿರುವ ನಾವು, ಈಗ ಬೇರೆಯಾಗುವುದು ಬೇಡ. ಮೊದಲ ಪ್ರಾಶಸ್ತ್ಯವನ್ನು ಶಿವಸೇನೆಗೇ ನೀಡಬೇಕು. ಸೈದ್ಧಾಂತಿಕವಾಗಿಯೂ ಸರಕಾರ ನಡೆಸಲು ಸಮಸ್ಯೆಯಾಗುವುದಿಲ್ಲ ಎಂದಿದ್ದರು. ಕಡೆಗೆ ಬಿಜೆಪಿ ಮತ್ತು ಶಿವಸೇನೆ ಜತೆಯಾದವು. 

ಆದರೆ ಎನ್‌ಸಿಪಿ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳದೇ ಇದ್ದರೂ, ಮೋದಿ ಮತ್ತು ಶರದ್‌ ಪವಾರ್‌ ನಡುವಿನ ಸಂಬಂಧ ಚೆನ್ನಾಗಿಯೇ ಇದೆ ಎಂಬ ಮಾತುಗಳೂ ಇವೆ. ಅಲ್ಲದೆ ಶರದ್‌ ಪವಾರ್‌ ಅವರಿಗೆ ನಡೆದ ಬೃಹತ್‌ ಅಭಿನಂದನಾ ಸಮಾವೇಶದಲ್ಲಿ ಖುದ್ದು ಮೋದಿ ಅವರೇ ಭಾಗವಹಿಸಿದ್ದೂ ಇದಕ್ಕೆ ಪುಷ್ಟೀಕರಿಸುವಂತಿತ್ತು. ಇದಷ್ಟೇ ಅಲ್ಲ, ಕೇಂದ್ರ ಅಥವಾ ರಾಜ್ಯ ಸರಕಾರವನ್ನು ಟೀಕಿಸಿಸುವ ವಿಚಾರದಲ್ಲೂ ಎನ್‌ಸಿಪಿ ಕೊಂಚ ಆಯ್ಕೆ ಮಾಡಿಯೇ ಇದೆ. ಈ ಎಲ್ಲ ವಿದ್ಯಮಾನಗಳನ್ನು ಶಿವಸೇನೆ ಅನುಮಾನದಿಂದಲೇ ನೋಡುತ್ತಿದೆ ಎಂದು ಹೇಳಲಾಗುತ್ತಿದೆ. 

ಈ ಬೆಳವಣಿಗೆಗಳಷ್ಟೇ ಅಲ್ಲ, ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆ ಕೂಡ ಶಿವಸೇನೆಗೆ ಭಾರಿ ಶಾಕ್‌ ನೀಡಿದೆ. 2005ರಲ್ಲಿ ಶಿವಸೇನೆ ಬಿಟ್ಟು ಕಾಂಗ್ರೆಸ್‌ ತೆಕ್ಕೆಗೆ ಜಾರಿದ್ದ ನಾರಾಯಣ ರಾಣೆ, ಆ ಪಕ್ಷ ಬಿಟ್ಟು ಸ್ವಂತ ಪಕ್ಷ ಕಟ್ಟಿದ್ದಾರೆ. ಜತೆಗೆ ಬಿಜೆಪಿ ಜತೆ ಕೈಜೋಡಿಸುವ ಸುಳಿವನ್ನೂ ನೀಡಿದ್ದಾರೆ. ಅಲ್ಲದೆ ದೀಪಾವಳಿ ನಂತರ ರಾಣೆ, ಮಹಾರಾಷ್ಟ್ರ ಸಂಪುಟ ಸೇರುವ ಸಂಭವವಿದೆ ಎಂದೂ ಹೇಳಲಾಗುತ್ತಿದೆ. ಈ ಬೆಳವಣಿಗೆ ಶಿವಸೇನೆ ಪಾಲಿಗೆ ನುಂಗಲಾರದ ತುಪ್ಪ. 2005ಲ್ಲಿ ಉದ್ಧವ್‌ ಠಾಕ್ರೆ ಜತೆ ಮುನಿಸಿಕೊಂಡು ಪಕ್ಷ ಬಿಟ್ಟು ಹೋದ ರಾಣೆ, ಬಿಜೆಪಿ ಜತೆ ಸೇರುತ್ತಿರುವುದು ಶಿವಸೇನೆಗೆ ಮುಜುಗರದ ವಿಚಾರ. ಸದ್ಯಕ್ಕೆ ಶಿವಸೇನೆಯ ಯಾರೊಬ್ಬರೂ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡದಿದ್ದರೂ, ಒಳಗೊಳಗೇ ತೀವ್ರ ಅಸಮಾಧಾನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿಯೇ ಶಿವಸೇನೆ, ದೇವೇಂದ್ರ ಫ‌ಡ್ನವಿಸ್‌ ಸರಕಾರದಿಂದ ಹೊರ ನಡೆಯಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ಪಕ್ಷದ ನಾಯಕ ಸಂಜಯ್‌ ರಾವುತ್‌ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಅಲ್ಲದೆ ಶನಿವಾರವಷ್ಟೇ ಉದ್ಧವ್‌ ಠಾಕ್ರೆ ಕೂಡ, ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಶಿವಸೇನೆ ಮತ್ತು ಬಿಜೆಪಿ ಬೇರೆಯಾಗುವುದು ನಿಚ್ಚಳವಾಗಿದೆ ಎಂಬ ವಿಶ್ಲೇಷಣೆಯೂ ನಡೆದಿದೆ.

ಇನ್ನು ನಾರಾಯಣ ರಾಣೆ ಅವರನ್ನು ಪಕ್ಷದ ಸನಿಹಕ್ಕೆ ಬರಮಾಡಿಕೊಳ್ಳುತ್ತಿರುವ ಬಿಜೆಪಿ, ಕೊಂಕಣ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಇರಾದೆ ಹೊಂದಿದೆ. ಒಂದು ವೇಳೆ ಶಿವಸೇನೆ ದೂರ ಸರಿದರೆ, ಕೊಂಕಣ್‌ ಪ್ರದೇಶದಲ್ಲಿ ರಾಣೆ ಅವರಿಗಿರುವ ಪ್ರಭಾವವನ್ನು ಬಳಸಿಕೊಂಡು ಮುನ್ನಡೆ ಸಾಧಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದರದ್ದು. ಇದಷ್ಟೇ ಅಲ್ಲ ಕೊಂಕಣ್‌ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಇರುವ ಪ್ರಾಬಲ್ಯವನ್ನೂ ಒಡೆಯುವ ತಂತ್ರವೂ ಬಿಜೆಪಿಗೆ ಇದೆ. 

ಇದಷ್ಟೇ ಅಲ್ಲ, ಶಿವಸೇನೆ ಕೂಡ ಪ್ಲಾನ್‌ ಬಿ ಗೆ ಸಿದ್ಧವಾಗುತ್ತಿದ್ದು, ನವ ನಿರ್ಮಾಣ ಸೇನೆಯ ರಾಜ್‌ ಠಾಕ್ರೆ ಮತ್ತು ಉದ್ಧವ್‌ ಠಾಕ್ರೆ ಒಂದಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ, ಇವರಿಬ್ಬರೂ ಮೋದಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡುತ್ತಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಟಿವಿಯೊಂದಕ್ಕೆ ಸಂದರ್ಶನ ನೀಡಿದ ರಾಜ್‌ ಠಾಕ್ರೆ, ಮೋದಿ ಅವರನ್ನು ಸುಳ್ಳಿನ ಸರದಾರ ಎಂದೇ ಕರೆದರು. ಅಲ್ಲದೆ, ಮುಂಬೈ ರೈಲ್ವೆ ನಿಲ್ದಾಣದಲ್ಲಿನ ಕಾಲು¤ಳಿತ ದುರಂತವನ್ನೂ ಕಟು ಮಾತುಗಳಲ್ಲೇ ಟೀಕಿಸಿದ್ದ ರಾಜ್‌ ಠಾಕ್ರೆ, ಜನರನ್ನು ಕೊಲ್ಲಲು ಉಗ್ರರೇ ಬೇಕಾಗಿಲ್ಲ. ನಮ್ಮ ರೈಲ್ವೆಯೇ ಸಾಕು ಎಂಬ ಮಾತುಗಳನ್ನೂ ಆಡಿದ್ದರು. ಅಲ್ಲಿಗೆ ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಅವರು 2019ರ ಚುನಾವಣೆಗೆ ಈಗಿನಿಂದಲೇ ಸಿದ್ಧವಾಗುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಿಂದೂ ಧರ್ಮದ ಸಿದ್ಧಾಂತವನ್ನೂ ಕೊಂಚ ಬದಿಗಿರಿಸಿ, ಅಭಿವೃದ್ಧಿ ಮಾತುಗಳನ್ನೇ ಆಡುವ ಮೂಲಕ ಮೋದಿ ಮತ್ತು ಬಿಜೆಪಿಯನ್ನು ಪೇಚಿಗೆ ಸಿಲುಕಿಸುವುದು ಅವರ ತಂತ್ರಗಾರಿಕೆ.

ಇದಕ್ಕಿಂತಲೂ ವಿಶೇಷವೆಂದರೆ, ದಸರೆ ಸಮಯದಲ್ಲಿ ಶಿವಸೇನೆ ಆಯೋಜಿಸುವ ಕಾರ್ಯಕ್ರಮಕ್ಕೆ ರಾಜ್‌ ಠಾಕ್ರೆ ಮತ್ತು ಎಂಎನ್‌ಎಸ್‌ ಕಾರ್ಯಕರ್ತರು ದೂರ ಉಳಿಯುವುದು ಹಿಂದಿನಿಂದಲೂ ನಡೆದು ಬಂದಿದೆ. ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರೂ ಪರಸ್ಪರ ಮುಖಕೊಟ್ಟೂ ಮಾತನಾಡಲ್ಲ. ಇಂಥ ಸನ್ನಿವೇಶದಲ್ಲೇ ಈ ಬಾರಿಯ ದಸರೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಬಹಳಷ್ಟು ಮಂದಿ ನವನಿರ್ಮಾಣ ಸೇನೆಯ ಕಾರ್ಯಕರ್ತರು ರಾಜ್‌ ಠಾಕ್ರೆ ನಿವಾಸದ ಬಳಿ ಹೋಗಿ ಶುಭ ಕೋರಿ ತೆರಳಿದ್ದಾರೆ. ಇದೂ ಉದ್ಧವ್‌ ಮತ್ತು ರಾಜ್‌ ಠಾಕ್ರೆ ಒಂದಾಗುವ ಮುನ್ಸೂಚನೆ ಎನ್ನಲಾಗುತ್ತಿದೆ. 

ಸೋಮಶೇಖರ ಸಿ.ಜೆ.


Trending videos

Back to Top