CONNECT WITH US  

ನಸೀಬು ಪರಿವರ್ತಿಸುವುದೇ ಪರಿವರ್ತನಾ ಯಾತ್ರೆ?

ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತಗೊಳಿಸಿ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಆರಂಭಿಸಿದ್ದಾರೆ. ಪಕ್ಷದಲ್ಲಿ ಕಾರ್ಯಕರ್ತರಿಗೆ ಹೊಸ ಹುರುಪು ತುಂಬಲು ಇಂತಹ ಕಾರ್ಯಕ್ರಮ ಅತ್ಯವಶ್ಯಕ. ಪ್ರಸ್ತುತ ಸ್ಥಿತಿಯಲ್ಲಿ ಬಿಜೆಪಿಗೆ ಇಂತಹ ಯಾತ್ರೆ ಅನಿವಾರ್ಯ ಕೂಡ. ರಾಜ್ಯದಲ್ಲಿ ಆಡಳಿತದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಚುನಾವಣೆಯಲ್ಲಿ ಮನೆಗೆ ಕಳಿಸಿ ವಿಧಾನಸೌಧದಲ್ಲಿ ಬಿಜೆಪಿ ಧ್ವಜ ಹಾರಿಸುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಮಿಷನ್‌ 150 ಕಾರ್ಯಕ್ರಮದಡಿ ಹೆಚ್ಚು ಶಾಸಕ ಸ್ಥಾನಗಳನ್ನು ಗೆದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ವೇದಿಕೆ ಸಿದ್ದಪಡಿಸುವ ದೃಷ್ಟಿಯಿಂದ ಯಾತ್ರೆಯನ್ನು ಆಯೋಜಿಸಲಾಗಿದೆ.

ಬಿಜೆಪಿ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಬೇಕು. ಅದರ ಜತೆಗೆ ಬಿಜೆಪಿಗೆ ಪರವಾದ ವಾತಾವರಣವನ್ನು ನಿರ್ಮಿಸಬೇಕು ಎನ್ನುವ ರಾಜಕೀಯ ತಂತ್ರಗಾರಿಕೆ ಪರಿವರ್ತನಾ ಯಾತ್ರೆಯ ಹಿಂದೆ ಅಡಗಿದೆ. ರಾಜ್ಯದ 224 ಕ್ಷೇತ್ರಗಳಲ್ಲೂ ಯಾತ್ರೆಯು ಸಂಚರಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮತದಾರರಲ್ಲಿ ಅರಿವು ಮೂಡಿಸುವುದು ಹಾಗೂ ಕಾಂಗ್ರೆಸ್‌ ಪರವಾಗಿರುವ ಮತದಾರರನ್ನು ತನ್ನತ್ತ ಸೆಳೆಯುವ ಕಾರ್ಯಸೂಚಿಯನ್ನು ಯಾತ್ರೆ ಹೊಂದಿದೆ.

ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯ ಜತೆಗೆ ಬಿಜೆಪಿ ಅಲೆ ಸೃಷ್ಟಿಸಬೇಕೆಂಬ ಸದಾಶಯದಿಂದ ಹೊರಟ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಆರಂಭದಲ್ಲೇ ತೊಡಕು ಉಂಟಾಗಿರುವುದು ಸುಳ್ಳಲ್ಲ. ಪಕ್ಷದೊಳಗಿನ ಆಂತರಿಕ ಭಿನ್ನಮತ ದಿಂದಾಗಿ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲ. ಮೂರು ಲಕ್ಷ ಜನ ಕಾರ್ಯಕರ್ತರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಸೇರಿಸುವುದಾಗಿ ಯಾತ್ರೆಯ ಮುಂದಾಳತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಹಲವಾರು ಮುಖಂಡರು ಬಹಿರಂಗವಾಗಿಯೇ ಘೋಷಿಸಿದ್ದರು. ಆ ಮೂಲಕ ಕರ್ನಾಟಕದಲ್ಲಿ ಬಿಜೆಪಿ ರಾಜಕೀಯ ವಿರೋಧಿಗಳಿಗೆ ಖಡಕ್‌ ಸಂದೇಶ ನೀಡುವ ಯೋಚನೆ ಸಹ ಇತ್ತು. ಆದರೆ, ಉದ್ಘಾಟನೆ ಕಾರ್ಯಕ್ರಮಕ್ಕೆ ನಿರೀಕ್ಷೆಯಷ್ಟು ಜನ ಸೇರದೇ ಇರುವುದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕಳವಳಕ್ಕೀಡು ಮಾಡಿದೆ.

ಅಂದರೆ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗಲೂ ಪಕ್ಷದಲ್ಲಿ ಇನ್ನೂ ಎಲ್ಲವೂ ಸರಿಯಿಲ್ಲ ಎನ್ನುವುದು ಪರಿವರ್ತನಾ ಯಾತ್ರೆಯ ಉದ್ಘಾಟನೆಯಲ್ಲಿ ಮತ್ತೂಮ್ಮೆ ಅನಾವರಣಗೊಂಡಿದೆ. ಆಂತರಿಕ ಭಿನ್ನಮತ, ಪಕ್ಷದಲ್ಲಿ ಒಗ್ಗಟ್ಟು ಇಲ್ಲದಿ ರುವುದು, ಪರಸ್ಪರ ನಾಯಕರುಗಳ ನಡುವಿನ ಸಮನ್ವಯದ ಕೊರತೆ, ಎರಡನೇ ಹಂತದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅವರ ಸಮ್ಮುಖದಲ್ಲೇ ವ್ಯಕ್ತವಾಗಿತ್ತು. ಒಂದು ಹಂತದಲ್ಲಿ ಕಡಿಮೆ ಜನ ಆಗಮಿಸಿದ್ದು, ಪಕ್ಷದ ಮುಖಂಡರನ್ನೂ ಸಹ ಚಿಂತೆಗೀಡು ಮಾಡಿತ್ತು.

ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಪಕ್ಷದ ಮುಖಂಡರೆಲ್ಲರೂ ಕಾಣಿಸಿಕೊಂಡರು. ಅಲ್ಲಿ ನೆಪ ಮಾತ್ರಕ್ಕೆ ಒಗ್ಗಟ್ಟಿನ ಪ್ರದರ್ಶನ ನಡೆಯಿತು. ಆರ್‌ಎಸ್‌ಎಸ್‌ನ ಸಂತೋಷರಿಂದ ಹಿಡಿದು ಯಡಿಯೂರಪ್ಪನವರ ಧೋರಣೆಯನ್ನು ಪಕ್ಷದ ಆಂತರಿಕ ವಲಯದಲ್ಲಿ ಪ್ರಶ್ನಿಸುತ್ತಲೇ ಬಂದಿದ್ದ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌ ಈಶ್ವರಪ್ಪ ಸೇರಿದಂತೆ ಬಹುತೇಕ ಎಲ್ಲ ನಾಯಕರೂ ಉಪಸ್ಥಿತರಿದ್ದು ಯಾತ್ರೆಗೆ ಬೆಂಬಲ ಸೂಚಿಸಿದರು.

ಬೆಂಗಳೂರಿನ ಸಚಿವರು, ಸಂಸದರು, ಶಾಸಕರು, ಬಿಬಿಎಂಪಿ ಸದಸ್ಯರು ಸಹ ಹಾಜರಿದ್ದರು. ಆದರೆ ಅವರ ಪರವಾದ ಜನ ಮಾತ್ರ ಕಣ್ಣಿಗೆ ಎದ್ದು ಕಾಣುವಷ್ಟು ಇದ್ದಿಲ್ಲ. ಬಿಜೆಪಿ ಪರವಾಗಿ ಜನಾಭಿಪ್ರಾಯ ಮೂಡಿಸುವಂಥ ಯಾತ್ರೆಗೆ ಜನ ಸೇರಿಸುವಲ್ಲಿ ವೈಫ‌ಲ್ಯತೆ ಕಂಡುಬಂತು. ಬೆಂಗಳೂರಿನಲ್ಲೇ ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ,ಸಂಸದ ಪಿ.ಸಿ.ಮೋಹನ್‌ ಅವರು ಲೋಕಸಭಾ ಸದಸ್ಯರಾಗಿ ಇದ್ದಾರೆ. ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಸೇರಿದಂತೆ 12 ಮಂದಿ ಬಿಜೆಪಿ ಶಾಸಕರಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಿನ 100 ವಾರ್ಡ್‌ಗಳಲ್ಲಿ ಬಿಜೆಪಿಯದ್ದೇ ಕಾರ್ಪೊರೇಟರ್‌ಗಳು ಇದ್ದಾರೆ. ಇವರೆಲ್ಲರೂ ಮನಸ್ಸು ಮಾಡಿದ್ದರೆ, ಒಂದು ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 10 ಸಾವಿರ ಕಾರ್ಯಕರ್ತರು ಬಂದಿದ್ದರೆ ಒಂದು ಲಕ್ಷಕ್ಕೂ ಹೆಚ್ಚಿನ ಜನರು ಸೇರಿ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುತ್ತಿತ್ತು. ಬೆಂಗಳೂರು ಕಾರ್ಯಕ್ರಮದ ಹೊಣೆಗಾರಿಕೆಯನ್ನು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರಿಗೆ ವಹಿಸಲಾಗಿತ್ತು.

ಜನ ಸೇರಿಸುವುದು ಅವರ ಜವಾಬ್ದಾರಿಯೇ ಆಗಿತ್ತು ಎಂದು ಪಕ್ಷದಲ್ಲಿ ಚರ್ಚಿಸಲಾಗುತ್ತಿದೆ. ಆದರೆ, ಯಾತ್ರೆಯ ಸಂಚಾಲಕ ಜವಾಬ್ದಾರಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ನೀಡಿದ್ದಕ್ಕೆ ಬೇಸರಗೊಂಡು ಅಶೋಕ್‌ ಅವರು, ಜನಸೇರಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಒಗ್ಗಟ್ಟನ್ನು ಪ್ರದರ್ಶಿಸುತ್ತಿರುವ ಬಿಜೆಪಿಯಲ್ಲಿ ಇನ್ನೂ ಭಿನ್ನಮತ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. 

ಯಾತ್ರೆಯ ಆರಂಭಿಕ ತೊಡಕಿನಿಂದ ತಕ್ಷಣ ಎಚ್ಚೆತ್ತುಕೊಂಡು ಯಾತ್ರೆಯನ್ನ ಯಶಸ್ವಿಗೊಳಿಸಲು ಪಕ್ಷದವರೆಲ್ಲರೂ ಭಿನ್ನಾಭಿಪ್ರಾಯ ಮರೆತು ಶ್ರಮಿಸಬೇಕಾಗಿದೆ. ಯಾತ್ರೆ ಸಂಚರಿಸುವ ಜಿಲ್ಲೆಗಳಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನ ಮಾಡುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸಬೇಕಾಗಿದೆ. ಇದರ ಪರಿಣಾಮ ಬೆಂಗಳೂರು ಯಾತ್ರೆಯ ನಂತರ ತುಮಕೂರು ಜಿಲ್ಲೆಯಲ್ಲಿ ನಡೆದ ಯಾತ್ರೆಯ ಸಭೆಗಳಲ್ಲಿ ನಿರೀಕ್ಷೆಯಂತೆ ಜನ ಸೇರಿದ್ದು, ಮುಖಂಡರಲ್ಲಿ ಸಮಾಧಾನ ತರಿಸಿದೆ. ದಕ್ಷಿಣ ಕರ್ನಾಟಕ ಬಿಜೆಪಿಗೆ ಭದ್ರ ನೆಲೆ ಇರುವ ಪ್ರದೇಶವೇನಲ್ಲ, ಈ ಭಾಗದಲ್ಲಿ ಲಕ್ಷಾಂತರ ಜನರ ನಿರೀಕ್ಷೆ ಇಟ್ಟುಕೊಂಡಿದ್ದೂ ಸಹ ಒಂದು ರೀತಿಯಲ್ಲಿ ಸಮಂಜಸವಲ್ಲ.

ಯಾತ್ರೆಯ ಸಮಾವೇಶದಲ್ಲಿ ಹೆಚ್ಚಿನ ಜನಸ್ಪಂದನೆಯನ್ನು ನಿರೀಕ್ಷಿಸಿದ್ದೂ ಸಹ ತಪ್ಪೇ ಎಂದು ಹೇಳಬಹುದು. ಆದರೆ, ಯಾತ್ರೆಯ ಆ ರಂಭಿಕ ಕಹಿ ಮರೆತು ಪಕ್ಷದ ಮುಖಂಡರು ಕಮಲಕ್ಕೆ ಹೆಚ್ಚು ಬೆಂಬಲವಿರುವ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ನಡೆಸುವಾಗ ಹೆಚ್ಚಿನ ಜನರನ್ನು ಸೇರಿಸಿ, ಶಕ್ತಿಪ್ರದರ್ಶನ ತೋರಿಸುವತ್ತ ಬಿಜೆಪಿ ಗಮನಹರಿಸಬೇಕಾಗಿದೆ.

ನವಕರ್ನಾಟಕ ಪರಿವರ್ತನಾ ಯಾತ್ರೆಯು ಮೂಲತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅವರ ಚಿಂತನೆಯ ಕೂಸು. ವಿಸ್ತಾರಕ ಯೋಜನೆಯ ಯಶಸ್ಸಿನ ನಂತರ ರಾಜ್ಯಾದ್ಯಂತ ಯಾತ್ರೆ ನಡೆಸಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಬೇಕು. ಸರ್ಕಾರದ ಹಗರಣಗಳನ್ನು ಮತದಾರರಿಗೆ ತಿಳಿಯಪಡಿಸಬೇಕು ಎನ್ನುವ ಚೌಕಟ್ಟನ್ನು ಅಮಿತ್‌ಶಾ ರಾಜ್ಯ ಬಿಜೆಪಿ ಮುಖಂಡರಿಗೆ ನೀಡಿದ್ದಾರೆ. ಅದರಂತೆ ಯಾತ್ರೆಯ ಸ್ವರೂಪವನ್ನೂ ಸಹ ಹೆಣೆಯಲಾಗಿದೆ. ಯಾತ್ರೆಯ ಸಂದರ್ಭದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಜನರನ್ನು ಆಕರ್ಷಿಸಿ, ಹೆಚ್ಚು ಮತಗಳನ್ನು ಸೆಳೆಯುವ
ತಂತ್ರ ಬಿಜೆಪಿಯದ್ದು.

ಕೇಂದ್ರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸದೇ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪವೂ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ವೈಫ‌ಲ್ಯಗಳನ್ನು ಜನರಿಗೆ ಮನದಟ್ಟು ಮಾಡುವುದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಆಡಳಿತವನ್ನು ತಲುಪಿಸುವ ನಿಟ್ಟಿನಲ್ಲಿ ಯಾತ್ರೆಯನ್ನು ಸಮಗ್ರವಾಗಿ ಯಶಸ್ವಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಯಾತ್ರೆಯುದ್ದಕ್ಕೂ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆಗೆ ಒತ್ತಾಯ, ವಿದ್ಯುತ್‌ ಖರೀದಿಯಲ್ಲಿನ ಅವ್ಯವಹಾರ, ಎಸಿಬಿ ದುರ್ಬಳಕೆ, ಲೋಕಾಯುಕ್ತ ಸಂಸ್ಥೆ ಅಧಿಕಾರ ಮೊಟಕು, ಅರ್ಕಾವತಿ ಡಿನೋಟಿμಕೇಷನ್‌ ಪ್ರಕರಣ, ಟಿಪ್ಪು ಜಯಂತಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ಹಿಂದು ಕಾರ್ಯಕರ್ತರ ಕೊಲೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜನಸಾಮಾನ್ಯರಿಗೆ ನೀಡಿದ ಭಾಗ್ಯಲಕ್ಷ್ಮಿ, ವಿದ್ಯಾರ್ಥಿಗಳಿಗೆ ಸೈಕಲ್‌, ಕೃಷಿ ಪಂಪ್‌ ಸೆಟ್‌ಗೆ ಉಚಿತ ವಿದ್ಯುತ್‌, ರಾಜ್ಯ ಬಜೆಟ್‌ ಗಾತ್ರವನ್ನು ಒಂದು ಲಕ್ಷಕೋಟಿಗೆ ಏರಿಸಿದ್ದು, ಪ್ರತ್ಯೇಕ ಕೃಷಿ ಬಜೆಟ್‌ ನೀಡಿದ್ದನ್ನು ಪ್ರಸ್ತಾಪಿಸಿ ಮತ್ತೂಮ್ಮೆ ಬಿಜೆಪಿಯನ್ನು ಆಶೀರ್ವದಿಸುವಂತೆ ಮತದಾರರಲ್ಲಿ ಕೇಳಿಕೊಳ್ಳಲಾಗುತ್ತಿದೆ.

ಮಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಯಾತ್ರೆಯ ಸಮಾವೇಶವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಬೆಂಗಳೂರಿನಲ್ಲಿ ಆದ ವೈಫ‌ಲ್ಯವನ್ನು ಮರೆಮಾಚಲು ಯೋಜನೆಯನ್ನು ರೂಪಿಸ ಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಭಾಗದ 16 ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಪಕ್ಷದಲ್ಲಿ ಹೆಚ್ಚಿನ ಹುರುಪು ತುಂಬುವ ಜತೆಗೆ ಪಕ್ಷದ ವಿರುದ್ಧ ಕೀಳಾಗಿ ಮಾತನಾಡುವವರಿಗೆ ದಿಟ್ಟ ಉತ್ತರ ನೀಡಲು ಸಿದ್ಧತೆ ನಡೆದಿದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದಾಗ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭಾ ಚುನಾವಣೆ ಬಗ್ಗೆ ಪ್ರಸ್ತಾಪಿಸಿ ರಾಜ್ಯದ ಜನತೆ ಇನ್ನು ಬಹಳಷ್ಟು ದಿನ ಚುನಾವಣೆಗೆ ಕಾಯಲು ಸಿದ್ಧರಿಲ್ಲ.

ಬಿಜೆಪಿಯನ್ನು ಅಧಿಕಾರಕ್ಕೆ ತಂದು ದೇಶಾಭಿವೃದ್ಧಿಯಲ್ಲಿ ಕರ್ನಾಟಕವನ್ನೂ ಭಾಗಿ ಆಗಿಸಲು ಉತ್ಸುಕರಾಗಿದ್ದಾರೆ ಎಂದಿದ್ದರು. ಆ ಮೂಲಕ ಕಾರ್ಯಕರ್ತರಿಗೆ ಚುನಾವಣೆಗೆ ಸಿದ್ಧರಾಗಿ ಎಂಬ ಸಂದೇಶದೊಂದಿಗೆ ಹುರುಪು ತುಂಬುವ ಕೆಲಸ ಮಾಡಿದ್ದನ್ನ ಅರಿತುಕೊಂಡು ಪಕ್ಷದಲ್ಲಿ ಚುನಾವಣೆ ಸಂಬಂಧಿತ ಕಾರ್ಯಕ್ರಮ ಯೋಜಿಸಲಾಗುತ್ತಿದೆ.

ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ಭಾಷಣ ಮಾಡಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಆದರೆ, ಗುಜರಾತ್‌ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಪ್ರಧಾನಿಯವರು ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಬರುವುದು ಇನ್ನೂ ಖಚಿತವಾಗಿಲ್ಲ. ಆದರೆ ಬೆಂಗಳೂರಿನಲ್ಲಿ ಜನವರಿ ತಿಂಗಳು ನಡೆಯುವ ರ್ಯಾಲಿಯ ಸಮಾರೋಪ ಸಮಾರಂಭಕ್ಕೆ ಆಗಮಿಸುವ ಬಗ್ಗೆ ಮೋದಿ ಅವರು ಖಾತ್ರಿ ಪಡಿಸಿದ್ದಾರೆ. ಆ ವೇಳೆ ಸುಮಾರು 15ರಿಂದ 20 ಲಕ್ಷ ಜನರನ್ನು ಸೇರಿಸಿ ರಾಜ್ಯಾದ್ಯಂತ ವಿಧಾನಸಭೆ ಚುನಾವಣೆ ಕಹಳೆ ಮೊಳಗಿಸಲು ರಾಜಕೀಯ ತಂತ್ರಗಾರಿಕೆಯನ್ನು ಬಿಜೆಪಿ ಮಾಡುತ್ತಿದೆ. ಇದು ಅಂದುಕೊಂಡಂತೆ ನಡೆದರೆ ಬಿಜೆಪಿ ಅಧ್ಯಕ್ಷ
ಯಡಿಯೂರಪ್ಪ ಸಾರಥ್ಯದ ನವಕರ್ನಾಟಕ ನಿರ್ಮಾಣ ಯಾತ್ರೆ ಉದ್ದೇಶ ಸಾರ್ಥಕತೆ ಪಡೆದು ವಿಧಾನಸಭೆಯಲ್ಲಿ ಕಮಲ ಅರಳಲು ವೇದಿಕೆಯಾಗಬಹುದು. ಇಲ್ಲವಾದಲ್ಲಿ ಯಾತ್ರೆ ವೇದನೆಯಾಗಲಿದೆ.

 *ಸೋಮಶೇಖರ ಕವಚೂರು


Trending videos

Back to Top