ಆರೆಸ್ಸೆಸ್‌, ತೃತೀಯರಂಗ, ದೀದಿ ಮತ್ತು ದಾದಾ


Team Udayavani, May 31, 2018, 6:00 AM IST

b-12.jpg

ಜೀವನ ಪರ್ಯಂತ ಜಾತ್ಯತೀತ ನಂಬುಗೆಗಳನ್ನು ಉಳಿಸಿ ಕೊಂಡು ಬಂದಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಆರ್‌ಎಸ್‌ಎಸ್‌ ಮುಖ್ಯ ಕಚೇರಿಗೆ ತೆರಳಿ ಭಾಷಣ ಮಾಡಬಹುದೇ? ಇಂಥದೊಂದು ವಿಚಾರ ಕಾಂಗ್ರೆಸ್‌ನ ವಲಯ ದಲ್ಲಿ ಬಿಸಿಬಿಸಿ ಯಾಗಿಯೇ ಚರ್ಚೆಯಾಗು ತ್ತಿದೆ. ಅದರಲ್ಲೂ ಆರ್‌ಎಸ್‌ಎಸ್‌ ಅನ್ನು ನಖಶಿಖಾಂತ ವಿರೋಧಿಸಿ ಕೊಂಡು ಬರುತ್ತಿರುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗಂತೂ ಈ ವಿಷಯ ನುಂಗಲಾರದ ತುತ್ತಾಗಿಬಿಟ್ಟಿದೆ. ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿಗೆ ಹೋಗಲು ಪ್ರಣಬ್‌ ಏಕೆ ಒಪ್ಪಿ ಕೊಂಡರು? ಅವರ ಈ ಉದ್ದೇಶದ ಹಿಂದಿರುವ ಸತ್ಯವಾದರೂ ಏನು ಎಂಬುದು ಬಿಜೆಪಿಯ ವರಿಗಿಂತ ಕಾಂಗ್ರೆಸ್‌ನವರಿಗೇ ಹೆಚ್ಚು ತಲೆನೋವಿನ ವಿಚಾರವಾಗಿದೆ. 

ಆದರೆ, ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಬಲ ಪಂಥೀಯ ವಿಚಾರಧಾರೆಗಳ ಪ್ರತಿಪಾದಕರು ಹೇಳುತ್ತಿ ರುವುದೇ ಬೇರೆ. ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ದೇಶ ಪ್ರೇಮ ಮತ್ತು ರಾಷ್ಟ್ರೀಯತೆ ಬಗ್ಗೆ ಪಾಠ ಮಾಡಲು ಬರುತ್ತಿದ್ದಾರಷ್ಟೇ. ಅವರೇನೂ ಆರ್‌ಎಸ್‌ಎಸ್‌ ಸೇರಲು ಬರುತ್ತಿಲ್ಲ ವಲ್ಲ. ಕಾಂಗ್ರೆಸ್‌ ಏಕೆ ಈ ಪರಿಯಾಗಿ ಇರಿಸುಮುರುಸು ಮಾಡಿ ಕೊಳ್ಳುತ್ತಿದೆ ಎಂದೇ ಪ್ರಶ್ನಿಸು ತ್ತಿದ್ದಾರೆ. ಜೂ.7ಕ್ಕೆ ಆಯೋಜಿಸಿರುವ ಸಂಘ… ಶಿಕ್ಷಾ ವರ್ಗವನ್ನು ಉದ್ದೇಶಿಸಿ ಭಾಷಣ ಮಾಡಲು ಬಂದಿರುವವರು ರಾಜಕೀಯ ಹಿನ್ನೆಲೆಯವರಿಗಿಂತ ಬೇರೆ ಬೇರೆ ಕ್ಷೇತ್ರಗಳ ಪ್ರಮುಖರು. ಕಳೆದ ಬಾರಿ ನೇಪಾಳದ ಸೇನೆಯ ನಿವೃತ್ತ ಮುಖ್ಯಸ್ಥರು ಬಂದಿದ್ದರು. ಈಗ ಪ್ರಣಬ್‌ ಬರುತ್ತಿದ್ದಾರೆ. ಅವರು ನಮ್ಮ ಆಹ್ವಾನ ಒಪ್ಪಿಕೊಂಡದ್ದೇ ನಮ್ಮ ಭಾಗ್ಯ ಎನ್ನುವುದು ಆರ್‌ಎಸ್‌ಎಸ್‌ನವರ ಮಾತು. 

ಹೌದು, “ಸಿಟಿಜನ್‌ ರಾಷ್ಟ್ರಪತಿ’ ಪ್ರಣಬ್‌ ಮುಖರ್ಜಿ ಅವರು ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಹೋಗುತ್ತಿರುವ ಬಗ್ಗೆ ಈಗಾಗಲೇ ಲಾಭ ನಷ್ಟಗಳ ಲೆಕ್ಕಾಚಾರ ಶುರುವಾಗಿದೆ. ಜತೆಯಲ್ಲೇ ಪ್ರಣಬ್‌ ಮುಖರ್ಜಿ ಸಕ್ರಿಯ ರಾಜಕಾರಣಕ್ಕೆ ಬರುತ್ತಿದ್ದಾರೆಯೇ ಎಂಬ ಶಂಕೆಯೂ ಮೂಡಲು ಕಾರಣವಾಗಿದೆ. ಈಗಾಗಲೇ ಫೆಡರಲ್‌ ಫ್ರಂಟ್‌ ಹೆಸರಿನಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರತಿಯಾಗಿ ಮುನ್ನುಗ್ಗುತ್ತಿರುವ ರಾಜಕೀಯ ಪಕ್ಷಗಳಿಗೆ ಇಡೀ ದೇಶವೇ ಒಪ್ಪುವಂಥ ಒಂದು “ಫೇಸ್‌’ ಇಲ್ಲ. ಅದು ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಕೆ.ಸಿ. ಚಂದ್ರಶೇಖರರಾವ್‌, ಮುಲಾಯಂ ಸಿಂಗ್‌ ಯಾದವ್‌, ಶರದ್‌ ಪವಾರ್‌, ನವೀನ್‌ ಪಟ್ನಾಯಕ್‌ ಸೇರಿದಂತೆ ಯಾರೊಬ್ಬರೂ ಇಡೀ ದೇಶವೇ ಒಪ್ಪಿಕೊಳ್ಳುವಂಥ ಇಮೇಜ್‌ ಬೆಳೆಸಿಕೊಂಡಿಲ್ಲ. ಇವರೆಲ್ಲರೂ ಅವರವರ ರಾಜ್ಯಗಳಲ್ಲಿ ಕಿಂಗ್‌ಗಳು ಮಾತ್ರ. ಚುನಾವಣೋತ್ತರದಲ್ಲಿ ಮೈತ್ರಿ ಮಾಡಿಕೊಂಡು ಪ್ರಧಾನಿಯಾಗುವುದು ಬೇರೆ. 

ಆದರೆ, ಚುನಾವಣಾಪೂರ್ವದಲ್ಲಿಯೇ ಬಿಜೆಪಿ ಮತ್ತು ಕಾಂಗ್ರೆಸ್ಸೇ ತರವಾಗಿ ಒಂದು ಒಕ್ಕೂಟ ಮಾಡಿಕೊಳ್ಳಲೇಬೇಕು ಎಂದಾದಲ್ಲಿ ಇದಕ್ಕೊಂದು ಫೇಸ್‌ ಬೇಕೇಬೇಕು. ಬಿಜೆಪಿಗೆ ವಿರೋಧಿಯಾಗಿ ಕಾಂಗ್ರೆಸ್‌ ಮುಂದಿಟ್ಟುಕೊಂಡು ಹೋದರೆ ಅನಿವಾರ್ಯವಾಗಿ ರಾಹುಲ್‌ ನೇತೃತ್ವದಲ್ಲೇ ಚುನಾವಣೆ ಎದುರಿಸಬೇಕು. ಆದರೆ, ಇದಕ್ಕೆ ಈ ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕರು ಒಪ್ಪುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ 2019ರಲ್ಲಿ ಮೋದಿಯವರನ್ನು ಸಮರ್ಥವಾಗಿ ಎದುರಿಸಬೇಕಾದಲ್ಲಿ ಅವರಿಗೇ ಸರಿಸಮ ನಾದಂಥ ವ್ಯಕ್ತಿತ್ವ ಇರುವಂಥವರೇ ಬೇಕು. ಇದು ಪ್ರಣಬ್‌ ಮುಖರ್ಜಿಯವರೇ ಏಕಾಗಬಾರದು ಎಂಬ ಚರ್ಚೆಗಳು ಕಳೆದ ಜನವರಿಯಿಂದಲೇ ಶುರುವಾಗಿಬಿಟ್ಟಿವೆ. 

ಇನ್ನು ಇಂದಿರಾ ಗಾಂಧಿಯವರ ಕಾಲದಿಂದಲೂ ಪ್ರಣಬ್‌ ಅವರು ಕಾಂಗ್ರೆಸ್‌ನ ವಲಯದಲ್ಲಿ ಭಾರಿ ಪ್ರಭಾವ ಉಳಿಸಿಕೊಂಡ ವರು. ಇಂದಿರಾ ಗಾಂಧಿಯವರ ಹತ್ಯೆಯಾಗುತ್ತಿದ್ದಂತೆ ನಡೆದ ಕಾಂಗ್ರೆಸ್‌ ಸಭೆಯಲ್ಲಿ, ಪಕ್ಷದಲ್ಲಿ ಹಿರಿಯ ನಾಯಕರು ಯಾರಿದ್ದಾರೆ ಎಂಬ ಪ್ರಶ್ನೆಗೆ ಮೊದಲು ಕೈ ಎತ್ತಿದ್ದವರು ಪ್ರಣಬ್‌. ಅಂದಿನ ಅವರ ಈ ಮಹತ್ವಾಕಾಂಕ್ಷೆ ರಾಜೀವ್‌ ಗಾಂಧಿ ಕಣ್ಣಿಗೆ ಬಿದ್ದು ನಂತರ ಸೈಡ್‌ಲೈನ್‌ ಆಗಿದ್ದರು. ಆದರೆ, 2004ರಲ್ಲಿ ಮತ್ತೆ ಕಾಂಗ್ರೆಸ್‌ ಗೆದ್ದಾಗ ಪ್ರಧಾನಿಯಾಗುವಾಸೆ ಪ್ರಣಬ್‌ ಮನದಲ್ಲಿ ಇದ್ದೇ ಇತ್ತು. ಆದರೆ ಮನಮೋಹನ್‌ ಸಿಂಗ್‌ ಅವರು ಮುನ್ನೆಲೆಗೆ ಬರುತ್ತಿದ್ದಂತೆ, ಸಂಪುಟದಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸಿ ಸುಮ್ಮನಾಗಿದ್ದರು. ಅದೇ 2012ರ ರಾಷ್ಟ್ರಪತಿ ಚುನಾವಣೆ ವೇಳೆ ಮತ್ತೆ ಪ್ರಧಾನಿಯಾಗುವಾಸೆ ಪ್ರಣಬ್‌ ಮನದಲ್ಲಿ ಮೂಡಿತ್ತು. ಆಗ ಕಾಂಗ್ರೆಸ್‌ ವಲಯದಲ್ಲೂ ಇಂಥದ್ದೇ ಚರ್ಚೆಗಳಿದ್ದವು. ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿ ಪ್ರಣಬ್‌ರನ್ನು ರಾಷ್ಟ್ರಪತಿ ಮಾಡಲಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಸೋನಿಯಾ ಗಾಂಧಿ ಅವರು ಇಡೀ ವಿದ್ಯಮಾನವನ್ನೇ ಸಂಪೂರ್ಣವಾಗಿ ಉಲ್ಟಾ ಮಾಡಿ ರಾಷ್ಟ್ರಪತಿ ಭವನಕ್ಕೆ ಪ್ರಣಬ್‌ ಮುಖರ್ಜಿ ಅವರನ್ನೇ ಕಳುಹಿಸುವ ಮೂಲಕ ಅವರ ಪ್ರಧಾನಿಯಾಗುವಾಸೆಯನ್ನು ಸಂಪೂರ್ಣವಾಗಿ ತೊಳೆದುಬಿಟ್ಟಿದ್ದರು. 

ಇದೀಗ ಮತ್ತೆ ಪ್ರಣಬ್‌ ಅವರನ್ನು ಪ್ರಧಾನಿ ಹುದ್ದೆಗೆ ಕುಳ್ಳಿರಿಸುವ ಪ್ರಯತ್ನಗಳು ಶುರುವಾಗಿವೆ ಎಂಬ ಮಾತುಗಳು ದೆಹಲಿ ಪಡಸಾಲೆಯಿಂದ ಕೇಳಿಬರುತ್ತಿವೆ. ಇದು ಇಂದು ನಿನ್ನೆಯದಲ್ಲ, ಕಳೆದ ಜನವರಿಯಲ್ಲೇ ಶುರುವಾಗಿವೆ ಎಂಬ ಮಾತುಗಳಿವೆ. ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಅವರ ಆಹ್ವಾನದ ಮೇರೆಗೆ ಭುವನೇಶ್ವರಕ್ಕೆ ಹೋಗಿದ್ದ ಪ್ರಣಬ್‌ ಮುಖರ್ಜಿ, ಎಚ್‌.ಡಿ. ದೇವೇಗೌಡ, ಸೀತಾರಾಂ ಯೆಚೂರಿ ಅವರು ಒಟ್ಟಾಗಿ ಕುಳಿತು ಊಟ ಮಾಡಿದ್ದಲ್ಲದೇ 2019ರ ಪರ್ಯಾಯ ರಂಗದ ಬಗ್ಗೆ ಮಾತುಕತೆ ನಡೆಸಿದ್ದರಂತೆ. ಈ ಬಗ್ಗೆ ಪ್ರಣಬ್‌ ಅವರ ಆಪ್ತ ವಲಯದ ಮೂಲಗಳೇ ಹೇಳಿವೆ. ಆದರೆ, ಅಂದು ಏನಾಯ್ತು ಎಂಬುದು ಇದುವರೆಗೆ ಬಹಿರಂಗವಾಗದೇ, ಕೇವಲ ಪಟ್ನಾ ಯಕ್‌ ಅವರ ಆಹ್ವಾನದ ಮೇರೆಗೆ ಎಲ್ಲರೂ ಊಟ ಮಾಡಿಬಂದಿ ದ್ದರು ಎಂಬುದಷ್ಟೇ ಗೊತ್ತಾಗಿತ್ತು. ಇದೀಗ ಅಂದಿನ ಭೋಜನ ಕೂಟ ಮತ್ತೆ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣವೂ ಇದೆ. 

ಸದ್ಯ ಇಡೀ ದೇಶ ಒಪ್ಪಿಕೊಳ್ಳುವಂಥ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ಪ್ರಧಾನಿ ಮೋದಿ ಮಾತ್ರ. ಇವರ ನಂತರದಲ್ಲಿ ಇರುವಂಥವರು ರಾಹುಲ್‌ ಗಾಂಧಿ. ಆದರೆ, ರಾಹುಲ್‌ ಬಗ್ಗೆ ಸದ್ಯ ಯಾವುದೇ ಪ್ರಾದೇಶಿಕ ಪಕ್ಷಗಳು ಗಂಭೀರ ವಾಗಿ ಪರಿಗಣನೆ ಮಾಡಿಲ್ಲ. ಇದು ಈಗಾಗಲೇ ಬಹಿರಂಗವಾಗಿದೆ ಕೂಡ. ಹೀಗಾಗಿ 2019ರಲ್ಲಿ ಮೋದಿಯವರನ್ನು ಎದುರಿಸಲು ಪ್ರಣಬ್‌ ದಾದಾ ಅವರೇ ಸೈ ಎಂಬ ಲೆಕ್ಕಾಚಾರದಲ್ಲಿ ಪ್ರಾದೇಶಿಕ ಪಕ್ಷಗಳು ತಂತ್ರಗಾರಿಕೆ ರೂಪಿಸುತ್ತಿವೆ. 2012ರಲ್ಲಿ ಪ್ರಣಬ್‌ ಮುಖರ್ಜಿ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಕೇಳಿಬರುತ್ತಿದ್ದಂತೆ ದೇಶದ ಬಹುತೇಕ ಪಕ್ಷಗಳು ಅವರ ಬೆನ್ನಿಗೆ ನಿಂತವು. ಅದರಲ್ಲೂ ಮೊದಲಿಗರಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರೇ ಮುಂದೆ ನಿಂತುಬಿಟ್ಟರು. ಅಲ್ಲದೆ ಬಿಜೆಪಿ ಹೊರತು ಪಡಿಸಿ ಬಹುತೇಕ ಪಕ್ಷಗಳು ಪ್ರಣಬ್‌ ಅಭ್ಯರ್ಥಿತನವನ್ನು ಕಣ್ಣು ಮುಚ್ಚಿ ಒಪ್ಪಿಕೊಂಡಿದ್ದವು. ಇದಕ್ಕೆ ಕಾರಣ ಅವರ ವ್ಯಕ್ತಿತ್ವ. 

ಇಂದಿಗೂ ಪ್ರಣಬ್‌ ಮುಖರ್ಜಿ ಅವರು ಬಿಜೆಪಿಯಾದಿಯಾಗಿ ಎಲ್ಲ ಪಕ್ಷಗಳ ಜತೆಗೆ ಉತ್ತಮ ಬಾಂಧವ್ಯ ಮತ್ತು ಗಂಭೀರ ನಾಯಕತ್ವದ ಪ್ರಭಾವ ಉಳಿಸಿಕೊಂಡಿದ್ದಾರೆ. ಜತೆಗೆ ಜನವರಿಯಲ್ಲಿ ಆರಂಭವಾಗಿರುವ ಫೆಡರಲ್‌ ಫ್ರಂಟ್‌ನ ಐಡಿಯಾ ಕೂಡ ಪ್ರಣಬ್‌ರದ್ದೇ ಎಂದು ಹೇಳುತ್ತಿವೆ ಇನ್ನೊಂದು ಮೂಲಗಳು. ಪಶ್ಚಿಮ ಬಂಗಾಳದಲ್ಲಿ ಹಿಂದಿನಿಂದಲೂ ಶಿಷ್ಯೆ ರೀತಿಯಲ್ಲೇ ಇದ್ದ ಮಮತಾ ಬ್ಯಾನರ್ಜಿಯವರ ಜತೆ ಚರ್ಚಿಸಿ, ದಕ್ಷಿಣ ಭಾರತದಲ್ಲಿನ ತೆಲಂಗಾಣ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಗೂ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ ರಾವ್‌ ಬಳಿಗೆ ಕಳುಹಿಸಿದ್ದೇ ಪ್ರಣಬ್‌ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಹೊರತಾಗಿ ಒಕ್ಕೂಟ ಮಾಡಬೇಕಾದಲ್ಲಿ ಇವರಿಂದ ಸಮಾನವಾಗಿ ಅಂತರ ಕಾಯ್ದುಕೊಂಡಿರುವ ಪಕ್ಷಗಳಿಗೇ ಮೊದಲ ಬಲೆ ಹಾಕಬೇಕು ಎಂಬ ನಿಟ್ಟಿನಲ್ಲಿ ಮಮತಾ ತಂತ್ರಗಾರಿಕೆ ಯಶಸ್ವಿಯಾಗಿ ಚಂದ್ರಶೇಖರ್‌ ರಾವ್‌ ಫೆಡರಲ್‌ ಫ್ರಂಟ್‌ಗೆ ಸೇರಿಕೊಂಡು ಬಿಟ್ಟರು. ಉಳಿದಂತೆ ಇಡೀ ದೇಶದಲ್ಲೇ ಪ್ರತಿಯೊಂದು ಪ್ರಾದೇಶಿಕ ಪಕ್ಷಗಳನ್ನೂ ಒಗ್ಗೂಡಿಸಲಾಗುತ್ತಿದೆ. ಒಂದು ವೇಳೆ ಪ್ರಣಬ್‌ ಅವರೇ ಪ್ರಧಾನಿ ಅಭ್ಯರ್ಥಿಯಾಗಿಬಿಟ್ಟರೆ, ಇಡೀ ದೇಶದಲ್ಲಿರುವ ಪ್ರಾದೇಶಿಕ ಪಕ್ಷಗಳನ್ನು ಒಪ್ಪಿಸುವುದು ಅಷ್ಟು ಕಷ್ಟವಾಗಲಿಕ್ಕಿಲ್ಲ. 

ಇಲ್ಲಿ ಇನ್ನೊಂದು ಸಂಗತಿ ಇದೆ. ಪ್ರಣಬ್‌ ಮುಖರ್ಜಿ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಳ್ಳುತ್ತಾರೆಯೇ? ಇದುವರೆಗೆ ದೇಶದ ರಾಷ್ಟ್ರಪತಿಯಾದವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿಲ್ಲ. ಅಲ್ಲದೆ ರಾಜ್ಯಪಾಲರಾಗಿ ಸಕ್ರಿಯ ರಾಜಕಾರಣಕ್ಕೆ ಬಂದವರಲ್ಲಿ ಕಾಂಗ್ರೆಸ್‌ನ ಎಸ್‌.ಎಂ.ಕೃಷ್ಣ ಮತ್ತು ಸುಶೀಲ್‌ಕುಮಾರ್‌ ಶಿಂಧೆ ಇದ್ದಾರೆ. ಇವರಿಬ್ಬರ ಈ ನಡೆಗೆ ದೇಶದಲ್ಲಿ ತುಂಬಾ ಆಕ್ಷೇಪಣೆಯೂ ಇದೆ. ಹೀಗಾಗಿ ಇಲ್ಲಿವರೆಗೆ ಹೆಸರು ಕೆಡಿಸಿಕೊಳ್ಳದೇ ರಾಜಕಾರಣ ಮಾಡಿಕೊಂಡು ಬಂದಿರುವ ಪ್ರಣಬ್‌ ಮುಖರ್ಜಿ ಒಪ್ಪುತ್ತಾರೆಯೇ ಎಂಬುದನ್ನು ಕಾದು ನೋಡಬೇಕಷ್ಟೇ ಅಥವಾ ಫೆಡರಲ್‌ ಫ್ರಂಟ್‌ಗೆ ಸರಕಾರ ರಚಿಸಲು ಅಗತ್ಯ ಸ್ಥಾನ ಬಂದರೆ, ತಮ್ಮ ಬದಲಿಗೆ ಬೇರೊಬ್ಬರನ್ನು ಕುಳ್ಳಿರಿಸಿ ಮೆಂಟರ್‌ ಆಗಬಹುದೇನೋ? 

ಇನ್ನು ಪ್ರಣಬ್‌ ಮುಖರ್ಜಿ ಅವರ ಆರ್‌ಎಸ್‌ಎಸ್‌ ಕಚೇರಿ ಭೇಟಿಯನ್ನು ಇನ್ನೊಂದು ರೀತಿಯಲ್ಲೂ ವಿಶ್ಲೇಷಿಸಲಾಗುತ್ತಿದೆ. ಪ್ರಣಬ್‌ ಮುಖರ್ಜಿ ಮತ್ತು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಬೆಳಗಿನ ವಾಕಿಂಗ್‌ ಬಗ್ಗೆ ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ. ಇವರಿಬ್ಬರದ್ದು ಗಾಢ ಸ್ನೇಹ. ಅಲ್ಲದೆ ಹಾಲಿ ಪ್ರಧಾನಿ ಮೋದಿ ಅವರ ಜತೆಯಲ್ಲೂ ಪ್ರಣಬ್‌ ಮುಖರ್ಜಿ ಅವರಿಗೆ ಉತ್ತಮ ಒಡನಾಟವಿದೆ. ಅದೆಷ್ಟೋ ಬಾರಿ ಮೋದಿ ಅವರು 
ಸಲಹೆ ಸೂಚನೆಗಾಗಿ ತಮ್ಮ ಸಚಿವರನ್ನು ಪ್ರಣಬ್‌ ಅವರಲ್ಲಿಗೆ ಕಳುಹಿಸಿದ್ದೂ ಇದೆ. ಇವೆಲ್ಲವುಗಳ ನಡುವೆ ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್‌ ಶಾಖೆಗಳು ಹೆಚ್ಚಾಗುತ್ತಿದ್ದು, ಪ್ರಣಬ್‌ ಭಾಷಣದ ಪ್ರಭಾವವನ್ನು ಇಲ್ಲೂ ಬಳಸಿಕೊಳ್ಳುವ ಚಿಂತನೆ ಬಿಜೆಪಿಯದ್ದು. ಪಶ್ಚಿಮ ಬಂಗಾಳದಲ್ಲಿನ ಮುಂದಿನ ಚುನಾವಣೆ ಟಿಎಂಸಿ ಮತ್ತು ಬಿಜೆಪಿ ನಡುವೆಯೇ ನಡೆಯುತ್ತದೆ ಎಂಬುದು ಈಗಾಗಲೇ ಸಾಬೀತಾಗಿರುವ ವಿದ್ಯಮಾನ. ಇಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ತಮ್ಮ ಬೇಸ್‌ ಕಳೆದುಕೊಳ್ಳುತ್ತಿದ್ದು, ಈ ಜಾಗವನ್ನು ಬಿಜೆಪಿ ಆಕ್ರಮಿಸಿಕೊಳ್ಳುತ್ತಿದೆ. ಹೀಗಾಗಿ ಪ್ರಣಬ್‌ರಿಂದ ಭಾಷಣ ಮಾಡಿಸಿ, ಆರ್‌ಎಸ್‌ಎಸ್‌ ಶಾಖೆಗಳನ್ನು ಬಲಪಡಿಸಬೇಕು ಎಂಬ ಆಲೋಚನೆಯಲ್ಲಿದೆ ಬಿಜೆಪಿ. 

ಈ ಎಲ್ಲಾ ಬೆಳವಣಿಗೆಗಳು ಏನೇ ಹೇಳಲಿ, ಪ್ರಣಬ್‌ ಅವರ ಈ ನಡೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಎಷ್ಟು ಲಾಭವಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್‌ಗಂತೂ ತೀರಾ ಮುಜುಗರಕ್ಕೀಡಾಗುವ ಪ್ರಸಂಗ ಎದುರಾಗಿದೆ. ಕಾಂಗ್ರೆಸ್‌ನವರು ಆರ್‌ಎಸ್‌ಎಸ್‌ ಅನ್ನು ವಿರೋಧಿಸುತ್ತಿರುವುದು ಇಂದು ನಿನ್ನೆಯಿಂದಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ನೆಹರೂರಿಂದ ಹಿಡಿದು ಇಲ್ಲಿಯವರೆಗೆ ಎಲ್ಲರೂ ವಿರೋಧಿಸಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲೇ ಅತ್ಯಂತ ಪ್ರಭಾವಿ ಎನ್ನಿಸಿಕೊಂಡು, ರಾಷ್ಟ್ರಪತಿ ಹುದ್ದೆಯವರೆಗೆ ಹೋಗಿ ಬಂದಿರುವ ಪ್ರಣಬ್‌ ಮುಖರ್ಜಿ ಆರ್‌ಎಸ್‌ಎಸ್‌ ಕಚೇರಿಗೆ ತೆರಳಿ ಏನಾದರೂ ಧನಾತ್ಮಕವಾಗಿ ಮಾತನಾಡಿ ಬಂದರೆ ಎಂಬ ಆತಂಕ ಈ ಪಕ್ಷದ ನಾಯಕರಲ್ಲಿದೆ. ಸದ್ಯ ಪ್ರಣಬ್‌ ಮುಖರ್ಜಿಯವರಿಗೇ ನೇರವಾಗಿ ನೀವು ಅಲ್ಲಿಗೆ ಹೋಗಬೇಡಿ ಎಂದು ಹೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ಸಿಗರು ಇಲ್ಲ. ಹೀಗಾಗಿಯೇ ಅವರು ಜೂ.7ಕ್ಕೆ ಏನು ಮಾತನಾಡುತ್ತಾರೆ‌ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.