CONNECT WITH US  

ದ್ರಾವಿಡ ನಾಯಕತ್ವದ ಯುಗಾಂತ್ಯವಾಯ್ತೆ ?

ದಿಲ್ಲಿಯ ಬದಲಾವಣೆಗಳು ತಮಿಳುನಾಡಿನ ರಾಜಕೀಯದ ಮೇಲೆ ಪ್ರಭಾವ ಬೀರಲಿವೆ

ತಮಿಳುನಾಡಿನ ರಾಜಕೀಯದಲ್ಲಿ ಚಲನಚಿತ್ರ ಕ್ಷೇತ್ರದಿಂದ ಬಂದವರಿಗೆ ಮಣೆ ಹಾಕಲಾಗುತ್ತಿದ್ದರೂ, ಅದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇರಲಿದೆ ಎಂದು ಹೇಳುವುದು ಕಷ್ಟ. ಸಿನಿಮಾ ಕ್ಷೇತ್ರಕ್ಕೆ ಹೆಚ್ಚಾ ಕಡಿಮೆ ವಿದಾಯ ಹೇಳಿರುವ ಕಮಲ್‌ಹಾಸನ್‌ ಮತ್ತು ರಜನಿಕಾಂತ್‌ರನ್ನು ಗಮನಿಸಿದರೆ ಯಾವ ರೀತಿಯಲ್ಲಿ ಪ್ರಭಾವ ಬೀರಲಿದ್ದಾರೆ ಎಂದು ಹೇಳುವುದು ಕಷ್ಟವಾದೀತು. 

ದಕ್ಷಿಣ ಭಾರತದ ರಾಜಕೀಯದಲ್ಲಿ ಮೇರು ವ್ಯಕ್ತಿತ್ವ ಎಂದು ಪರಿಗಣಿತವಾಗುವವರು ಜಯಲಲಿತಾ ಜಯರಾಂ ಮತ್ತು ಮುತ್ತು ವೇಲು ಕರುಣಾನಿಧಿ. ಈ ನಾಯಕರ ವಿರುದ್ಧ ಇರುವ ಅಭಿಪ್ರಾಯಗಳು ಏನೇ ಇರಲಿ, ಕರ್ನಾಟಕದ ನೆರೆಯ ರಾಜ್ಯದ ಜನಮಾನಸದಲ್ಲಿ ಅವರು ಪಡೆದುಕೊಂಡ ಸ್ಥಾನ ಮತ್ತು ಸಾಮಾಜಿಕವಾಗಿ ಅವರು ನಡೆಸಿದ ಚಳವಳಿ ಮತ್ತು ತಂದ ಬದಲಾವಣೆಯ ಬಗ್ಗೆ ಯಾರೂ ಬೆರಳೆತ್ತಿ ತೋರಿಸುವಂತೆಯೇ ಇಲ್ಲ.

ಅಣ್ಣಾದೊರೈ ನಿಧನದ ಬಳಿಕ ದ್ರಾವಿಡ ಚಳವಳಿಯ ನೇತೃತ್ವ ವಹಿಸಿಕೊಂಡದ್ದು ಕರುಣಾನಿಧಿ. ತೀರಾ ಮೊನ್ನೆ ಮೊನ್ನೆಯ
ವರೆಗೆ ಅವರು ಅದರ ನೇತೃತ್ವ ವಹಿಸಿಕೊಂಡೂ ಇದ್ದರು. ಆದರೆ ಈಗ ಈ ಚಳವಳಿಯನ್ನು ಮುನ್ನಡೆಸಲು ನಾಯಕ ಇಲ್ಲದ ಸ್ಥಿತಿ ಉಂಟಾಗಿದೆ. ಬಹಳ ಸೂಕ್ಷ್ಮವಾಗಿ ವಿವರಿಸಬೇಕೆಂದರೆ ಹಳೆಯ ದಿನಗಳಂತೆ ಇದ್ದ ಪರಿಸ್ಥಿತಿ ಈಗ ಇಲ್ಲದೇ ಇದ್ದರೂ, ಆ ಹೋರಾಟಕ್ಕೆ ಸೂಕ್ತ ರೀತಿಯ ಪ್ರಾತಿನಿಧ್ಯ ನೀಡುವುದಕ್ಕೆ ಸರಿಯಾದ ಸಮರ್ಥರು ಇಲ್ಲವೆನ್ನುವುದು ನಿಜವೇ.

ತಮಿಳುನಾಡಿನ ರಾಜಕೀಯದಲ್ಲಿ ಚಲನಚಿತ್ರ ಕ್ಷೇತ್ರದಿಂದ ಬಂದವರಿಗೆ ಆದ್ಯತೆಯ ಮಣೆ ಹಾಕಲಾಗುತ್ತಿದ್ದರೂ, ಅದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇರಲಿದೆ ಎಂದು ಹೇಳುವುದು ಕಷ್ಟ. ಅದಕ್ಕೆ ಎರಡು ಉದಾಹರಣೆಗಳನ್ನು ಗಮನಿಸುವುದಿದ್ದರೆ ಸಿನಿಮಾ ಕ್ಷೇತ್ರಕ್ಕೆ ಹೆಚ್ಚಾ ಕಡಿಮೆ ವಿದಾಯ ಹೇಳಿ ರಾಜಕೀಯ ಪ್ರವೇಶ ಘೋಷಣೆ ಮಾಡಿರುವ ಕಮಲ್‌ಹಾಸನ್‌ ಮತ್ತು ರಜನಿಕಾಂತ್‌ರನ್ನು ಗಮನಿಸಿದರೆ ಯಾವ ರೀತಿಯಲ್ಲಿ ಪ್ರಭಾವ ಬೀರಲಿದ್ದಾರೆ ಎಂದು ಹೇಳುವುದು ಕಷ್ಟವಾದೀತು. 

ಕಮಲ್‌ಹಾಸನ್‌ನರ ಮಕ್ಕಳ್‌ ನೀತಿ ಮಯ್ಯಂ ಪಕ್ಷ ಡಿಎಂಕೆ, ಎಐಎಡಿಎಂಕೆಯನ್ನು ಮಣಿಸಲಿದೆಯೋ ಇಲ್ಲವೋ ಎಂದು ತೀರ್ಮಾನವಾಗುವಂಥ ಚುನಾವಣಾ ಪರೀಕ್ಷೆಗಳೇ ನಡೆದಿಲ್ಲ. 2019ರಲ್ಲಿ ಲೋಕಸಭೆ ಚುನಾವಣೆ ಇದ್ದರೂ, ಅದು ಎಷ್ಟರ ಮಟ್ಟಿಗೆ ಪ್ರಭಾವ ಬೀರೀತು ಎಂದು ಹೇಳುವುದು ಕಷ್ಟ. ರಜನಿ ಅವರದ್ದು ರಾಜಕೀಯ ಪ್ರವೇಶ ಘೋಷಣೆ ಮಾತ್ರ ಆಗಿದೆ. ಪಕ್ಷದ ಹೆಸರು ಪ್ರಕಟವಾಗಿಲ್ಲ.

ಇನ್ನು ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯ ಮೂಲಕ ರಾಜಕೀಯ ಎಂಬ ಸಾಗರದಲ್ಲಿ ಮೇಲೇಳಲು ಪ್ರಯತ್ನ ಮಾಡುತ್ತಿ ರುವವರು ಅನೇಕರಿದ್ದಾರೆ. ಪಟ್ಟಾಳಿ ಮಕ್ಕಳ್‌ ಕಚ್ಚಿ ಪಕ್ಷದ ನಾಯಕ ಎಸ್‌.ರಾಮದಾಸ್‌ ಯುಪಿಎ ಮತ್ತು ಎನ್‌ಡಿಎ ಅವಧಿಯಲ್ಲಿ ಸರ್ಕಾರದಲ್ಲಿ ಸಚಿವರಾಗಿದ್ದವರು. ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ನಾಯಕ ವೈ.ಗೋಪಾಲಸ್ವಾಮಿ (ವೈಕೋ), ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷದ ಸಂಸ್ಥಾಪಕ, ತಮಿಳು ನಟ ವಿಜಯಕಾಂತ್‌ 2006ರಲ್ಲಿ ಪಕ್ಷ ಸ್ಥಾಪನೆ ಮಾಡಿದರು.

2011ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ  41 ಕ್ಷೇತ್ರಗಳ ಪೈಕಿ 29 ಸ್ಥಾನಗಳನ್ನು ಗೆದ್ದುಕೊಂಡಿದ್ದರು. ನಂತರದ ಚುನಾವಣೆಗಳಲ್ಲಿ ಹೇಳುವಂಥ ಸಾಧನೆ ಮಾಡಿಲ್ಲ.ಹೀಗಾಗಿ, ಕರುಣಾನಿಧಿ ಪ್ರಭಾವಳಿ ಇದ್ದಾಗಲೇ ದ್ರಾವಿಡ ಚಳವಳಿಯನ್ನು ಮುಂದೆ ಮಾಡಿ ರಾಜಕೀಯ ಕ್ಷೇತ್ರದಲ್ಲಿ ಜನಪ್ರಿಯರಾಗಲು ಪ್ರಯತ್ನ ಪಟ್ಟಿದ್ದಾರೆ ಈ ನಾಯಕರು. ಆದರೆ ಅವರಿಗೆ ಹೇಳುವಂಥ ಯಶಸ್ಸು ಏನೂ ದೊರೆತಿಲ್ಲ. 

ಅಣ್ಣಾದೊರೈ, ಕರುಣಾನಿಧಿ, ಎಂ.ಜಿ.ರಾಮಚಂದ್ರನ್‌, ಕೆ.ಎಂ.ಅನºಳಗನ್‌ ಮತ್ತು ಅವರ ಸಮಕಾಲೀನರು ಇದ್ದಾಗ ಅಸ್ತಿತ್ವದಲ್ಲಿದ್ದ ಸಾಮಾಜಿಕ ಸ್ಥಿತಿಯಾಗಲಿ ಅಥವಾ ರಾಜಕೀಯ ಸ್ಥಿತಿ ಯಾಗಲಿ ಈಗ ಇಲ್ಲ. ಕಾಲಸ್ಥಿತಿಗೆ ತಕ್ಕಂತೆ ಸಾಮಾಜಿಕ ಚಿಂತನೆ, ವಾದ ಸರಣಿಗಳು ಬದಲಾಗಿವೆ. ಹಾಗೆಂದುಕೊಂಡು ಜನರನ್ನು ಕಾಡುವ ಸಮಸ್ಯೆ, ವಿಚಾರಗಳಿಗೆ ಚಳವಳಿ, ಹೋರಾಟ ಅಗತ್ಯವಿಲ್ಲ ಎಂಬ ಅರ್ಥವಲ್ಲ. 

ಕರುಣಾನಿಧಿ ಸಿನಿಮಾ ಮತ್ತು ರಾಜಕೀಯ ಪ್ರವೇಶಿಸಿದ ಸಂದರ್ಭದಲ್ಲಿ ಜನರಲ್ಲಿ ಪರಿವರ್ತನೆ, ಚಿಂತನೆಯಲ್ಲಿ ಬದಲಾ
ವಣೆ ತರಬೇಕಾಗಿದ್ದಿದ್ದರೆ, ಸಿನಿಮಾ ಏಕಮಾತ್ರ ಎಲ್ಲಾ ರೀತಿಯ ಜನರನ್ನು ತಲುಪಬಲ್ಲ ಆಕರ್ಷಣೀಯವಾದ ಮಾಧ್ಯಮವಾಗಿತ್ತು. ಹೀಗಾಗಿಯೇ ಶಿವಾಜಿ ಗಣೇಶನ್‌ ಮೊದಲ ಬಾರಿಗೆ ಅಭಿನಯಿಸಿದ "ಪರಾಶಕ್ತಿ' ಸಿನಿಮಾದಲ್ಲಿ ಹಿಂದೂ ಸಮುದಾಯದಲ್ಲಿ ಪಾಲನೆ ಮಾಡಿಕೊಂಡು ಬರುತ್ತಿದ್ದ ಸಂಪ್ರದಾಯಗಳನ್ನು ವ್ಯಂಗ್ಯವಾಗಿ ತೋರಿಸಲಾಗಿದೆ ಎಂಬ ಆಕ್ಷೇಪ ಪ್ರಬಲವಾಗಿಯೇ ವ್ಯಕ್ತವಾಗಿತ್ತು. ಇದರ ಹೊರತಾಗಿಯೂ ಅದು ಸಿನಿ ವಿಮರ್ಶಕರ ನಡುವೆ ಮತ್ತು ಬಾಕ್ಸ್‌ ಆಫೀಸ್‌ನಲ್ಲಿಯೂ ಗೆದ್ದಿತ್ತು. 

ಅಂದರೆ 1950 ಮತ್ತು 1980ರವರೆಗೆ ಸಿನಿಮಾ, ಪುಸ್ತಕ, ಲೇಖನಗಳ ಮೂಲಕವೇ ಆಯಾ ಕಾಲದ ಸಾಮಾಜಿಕ ಕಟ್ಟು ಪಾಡುಗಳಲ್ಲಿ ಬದಲಾವಣೆ ತರುವಲ್ಲಿ ದ್ರಾವಿಡ ನಾಯಕ ಕರುಣಾ ನಿಧಿ ಪ್ರಯತ್ನಿಸಿ ಯಶಸ್ವಿಯೂ ಆಗಿದ್ದರು. ನಂತರ ಬಂದ ದ್ರಾವಿಡ ಹೋರಾಟಗಾರರಿಗೆ ಅಂಥ ಅವಕಾಶ ಸಿಕ್ಕಿಲ್ಲ ಎನ್ನುವುದು ಸ್ಪಷ್ಟ.

ಇನ್ನು ಕರುಣಾನಿಧಿ ಅವರಿಗೆ ಪ್ರಮುಖ ಚಿತ್ರ ಸಾಹಿತಿ, ಲೇಖಕ, ಭಾಷಣಕಾರ, ನೇತಾರನಾಗಿ ತಮ್ಮನ್ನು ರೂಪಿಸಿಕೊಳ್ಳಲು ತಮಿಳು ಭಾಷೆಯ ಮೇಲಿದ್ದ ಹಿಡಿತ ಮತ್ತು ಅದನ್ನು ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯ ಕಾರಣವಾಗಿತ್ತು. ಜತೆಗೆ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವ ನಾಯಕನಾಗಿ ಹಲವು ವಿಚಾರಗಳನ್ನು ಓದಿ ತಿಳಿದುಕೊಳ್ಳುತ್ತಿದ್ದರು. ಹೀಗಾಗಿಯೇ ಜನರನ್ನು ತಟ್ಟುವಂಥ, ಹಿಡಿದಿಟ್ಟುಕೊಳ್ಳುವಂಥ ಚಲನಚಿತ್ರ ಸಾಹಿತ್ಯ ಬರೆಯಲು ನೆರವಾಯಿತು. ಇಂಥ ಸಾಮರ್ಥ್ಯ ಇತ್ತೀಚಿನ ದ್ರಾವಿಡ ಚಳವಳಿ ನಾಯಕರಲ್ಲಿ ಕಂಡುಬರುತ್ತಿಲ್ಲ.

ಅಣ್ಣಾದೊರೆ ನಿಧನ ಬಳಿಕ 1969ರಿಂದ 2016ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವವರೆಗೆ ಡಿಎಂಕೆಯಲ್ಲಿ ಅವರದ್ದೇ ಮಾತು. ಕರುಣಾನಿಧಿ ಅಧಿಕಾರದಲ್ಲಿದ್ದ ವೇಳೆ ಎಂ.ಕೆ.ಸ್ಟಾಲಿನ್‌ರನ್ನು ಪಕ್ಷ ಸಂಘಟನೆ, ಉಸ್ತುವಾರಿಗೆ ನಿಯೋಜಿಸಲಾಗಿತ್ತು. ಸ್ಟಾಲಿನ್‌ 1984 ಮತ್ತು 1991ರ ವಿಧಾನಸಭೆ ಚುನಾವಣೆಗಳನ್ನು ಹೊರತು ಪಡಿಸಿ ಉಳಿದ ಆರು ಚುನಾವಣೆಗಳಲ್ಲಿ ಗೆದ್ದಿದ್ದಾರೆ. ಆದರೆ ಇಷ್ಟೇ ಸಾಕಾಗುವುದಿಲ್ಲ, ತಂದೆಯಂತೆ ರಾಜಕೀಯ ವ್ಯೂಹ ರಚನೆಯ ಛಾಪು ಮೂಡಿಸಿಕೊಳ್ಳಬೇಕು. 

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕರುಣಾನಿಧಿ ನೇತೃತ್ವದ ಸರ್ಕಾರ ವಜಾಗೊಂಡಿತ್ತು.ಆ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳ ನ್ನೆಲ್ಲ ರದ್ದು ಮಾಡಲಾಗುತ್ತದೆ. ಹೀಗಾಗಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಎಂಬ ಪಕ್ಷದ ಹೆಸರಿನಿಂದ "ದ್ರಾವಿಡ' ವನ್ನು ತೆಗೆದು ಹಾಕಬೇಕು ಎಂದು ವಿ.ಆರ್‌.ನೆಡುಂಚೆಳಿಯನ್‌ ಸಲಹೆ ಮಾಡಿದ್ದರು. ಆದರೆ ಅದನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದರು ಕರುಣಾನಿಧಿ.

ರಾಷ್ಟ್ರೀಯ ಪಕ್ಷಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿದ ಹೆಗ್ಗಳಿಕೆ ಕರುಣಾನಿಧಿ ಮತ್ತು ಜಯಲಲಿತಾ ಅವರ ಪಕ್ಷಗಳದ್ದು. 1967ರ ಬಳಿಕ ತಮಿಳುನಾಡಿನಲ್ಲಿ ಕಾಂಗ್ರೆಸ್‌ ಅಧಿಕಾರ ಸವಿ ಉಂಡದ್ದೇ ಇಲ್ಲ. ಅಂದರೆ ಬರೋಬ್ಬರಿ 51 ವರ್ಷಗಳ ಕಾಲ (1967-2018) ಒಂದು ರಾಜಕೀಯ ಪಕ್ಷವನ್ನು ಪ್ರಾದೇಶಿಕ ಪಕ್ಷಗಳು ನಿಯಂತ್ರಿಸಿದ್ದು ಭಾರತದ ಮಟ್ಟಿಗೆ ಐತಿಹಾಸಿಕ ದಾಖಲೆಯೇ ಸರಿ.
 
ಭಾಷಾ ಅಸ್ಮಿತೆಯನ್ನು ಹೇಗೆ ಬೆಳೆಸಿಕೊಳ್ಳಬೇಕು ಎನ್ನುವುದಕ್ಕೆ ಕರುಣಾನಿಧಿ ಸಾಕ್ಷಿ ಎಂದರೆ ತಪ್ಪಾಗಲಾರದು. ಪ್ರಾಚೀನ ತಮಿಳು ಭಾಷೆಯ ಮೇಲೆ ಅವರಿಗಿದ್ದ ಅಧ್ಯಯನ, ಪಾಂಡಿತ್ಯವೇ ಅವರಿಗೆ ನೆರವಾಗಿತ್ತು.

ರಾಜಕೀಯವಾಗಿ ಅವರ ದೊಡ್ಡ ಸಾಧನೆಯೇನೆಂದರೆ ಸ್ವಾತಂತ್ರ್ಯ ದಿನ ಆಯಾ ರಾಜ್ಯಗಳ ರಾಜಧಾನಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಮತ್ತು ರಾಜ್ಯ ಸರ್ಕಾರಗಳಿಗೆ ಆದ್ಯತೆಯ ಸ್ಥಾನ ಸಿಗಬೇಕು ಎಂದು ವಾದಿಸುತ್ತಿದ್ದರು. 

ಹಾಗಿದ್ದರೆ ಕರುಣಾನಿಧಿಯವರ ನಂತರ ದ್ರಾವಿಡ ಚಳವಳಿಯ ಸೂತ್ರ ಹಿಡಿಯುವವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಏಕೆಂದರೆ ಈಗಾಗಲೇ ಉಲ್ಲೇಖೀಸಿರುವಂತೆ ದ್ರಾವಿಡ ಚಳವಳಿ ಯನ್ನು ಮತ್ತೆ ರೂಪಿಸುವಂಥ ವಾತಾವರಣ ಇಲ್ಲ. ಹೀಗಾಗಿ, ನವದೆಹಲಿಯ ಮಟ್ಟದಲ್ಲಿ ಯಾವ ರಾಜಕೀಯ ಪಕ್ಷ ಅಥವಾ ಮೈತ್ರಿ ಕೂಟ ಪ್ರಬಲವಾಗಿ ಇರಲಿದೆ, ಆ ಲೆಕ್ಕಾಚಾರಕ್ಕೆ ತಕ್ಕಂತೆ ತಮಿಳುನಾಡಿನಲ್ಲಿಯೂ ಕೂಡ ರಾಜಕೀಯ ದಾಳ ಉರುಳಲಿವೆ. ಕಮಲ್‌ಹಾಸನ್‌ ರಾಜಕೀಯ ಪಕ್ಷ ಘೋಷಣೆ ಮಾಡಿದ್ದರೂ, ಅದು ಎಷ್ಟು ಪ್ರಬಲ ಎಂದು ಒರೆಗೆ ಹಚ್ಚಿಲ್ಲ. ರಜನಿಕಾಂತ್‌ ರಾಜಕೀಯ ಪ್ರವೇಶದ ಘೋಷಣೆ ಮಾಡಿದ್ದಾರೆ. 2021ರ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳು ಇವೆ. ಹೇಗೆ ನೋಡಿದರೂ, ಜಯಲಲಿತಾ ನಿಧನದ ಬಳಿಕ ಎರಡು ಗುಂಪುಗಳಿದ್ದರೂ ಒಂದೇ ಎಂದು ಬಿಂಬಿಸುವ ಎಐಎಡಿಎಂಕೆ ಸರ್ಕಾರ ಅವಧಿ ಪೂರೈಸುವುದಂತೂ ಸದ್ಯಕ್ಕೆ ನಿಚ್ಚಳ. ಹೀಗಾಗಿ, ದ್ರಾವಿಡ ಚಳವಳಿಯ ಹೊಸ ನೇತಾರರು ಉದಯಿಸಲಿದ್ದಾರಾ? ಎನ್ನುವ ಪ್ರಶ್ನೆಗೆ ಸಮಯವೇ ಉತ್ತರಿಸಬೇಕಷ್ಟೆ.

- ಸದಾಶಿವ ಖಂಡಿಗೆ


Trending videos

Back to Top