ತೆಲಂ”ಗಾಣ’ದಲ್ಲಿ ರಸ ಯಾರಿಗೆ, ಸಿಪ್ಪೆ ಯಾರಿಗೆ?


Team Udayavani, Dec 6, 2018, 6:00 AM IST

d-37.jpg

ಡಿಸೆಂಬರ್‌ 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಈ ಮಟ್ಟಕ್ಕೆ ಜಟಿಲವಾಗುತ್ತದೆ, ರಾಜಕೀಯ ಚರ್ಚೆಯ ಭಾಗವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ತೆಲಂಗಾಣ ರಾಷ್ಟ್ರ ಸಮಿತಿಯ ಮುಖ್ಯಸ್ಥ, ಹಂಗಾಮಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಸೆಪ್ಟೆಂಬರ್‌ 6ರಂದು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಎದುರಿಸಲು ಸಿದ್ಧರಾದಾಗ ಅವರೂ ಕೂಡ ರಾಜ್ಯದ ರಾಜಕೀಯ ರೇಸ್‌ನಲ್ಲಿ ತಮಗೆ ಪ್ರತಿಸ್ಪರ್ಧಿಗಳೇ ಇಲ್ಲ, ತಾವೇ ಸುಲಭವಾಗಿ ಗೆಲ್ಲುತ್ತೇವೆ ಎಂದು ಭಾವಿಸಿದ್ದರು. ಕೆಸಿಆರ್‌ ನಡೆಯನ್ನು ಅಂದು ಮಾಸ್ಟರ್‌ ಸ್ಟ್ರೋಕ್‌ ಎಂದು ಬಣ್ಣಿಸಿದ್ದ ರಾಜಕೀಯ ಪಂಡಿತರೂ ಈಗ ತಲೆಕೆಡಿಸಿಕೊಂಡಿದ್ದಾರೆ. 

ಯಾವಾಗ ಆಂಧ್ರಪ್ರದೇಶ ಮುಖ್ಯಮಂತ್ರಿ, ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡರೋ ಆಗಿನಿಂದ ತೆಲಂಗಾಣದ ಚುನಾವಣೆ ಕಾವೇರುತ್ತಾ ಬಂದಿದೆ. ಬಹಳ ಕಾಲದಿಂದ ಕಾಂಗ್ರೆಸ್‌ನೊಂದಿಗೆ ದೋಸ್ತಿ ಹೊಂದಿರುವ ಕಮ್ಯುನಿಸ್ಟ್‌ ಪಾರ್ಟಿ ಆಫ್ ಇಂಡಿಯಾ(ಸಿಪಿಐ), ಮತ್ತು ಇದೇ ವರ್ಷದ ಏಪ್ರಿಲ್‌ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದ ತೆಲಂಗಾಣ ಜನ ಸಮಿತಿ(ಟಿಜೆಎಸ್‌) ಕೂಡ “ಮಹಾಕೂಟಮಿ’ ಎಂದು ಕರೆಸಿಕೊಳ್ಳುತ್ತಿರುವ ಈ ಮಹಾ ಮೈತ್ರಿಯ ಭಾಗವಾಗಿವೆ. ಈ ಮಹಾಕೂಟಮಿ ಮತದಾರರ ಮನಸ್ಸನ್ನು ಬದಲಿಸಿ ತೆಲಂಗಾಣವನ್ನು ತೆಕ್ಕೆಗೆ ತೆಗೆದುಕೊಳ್ಳಬಲ್ಲದೇ ಎನ್ನುವ ಪ್ರಶ್ನೆ ಉದ್ಭವವಾಗುವ ವೇಳೆಯಲ್ಲೇ ಮೂರನೇ ಆಟಗಾರನಾಗಿ ಬಿಜೆಪಿಯೂ ಭರ್ಜರಿ ಪ್ರವೇಶ ಕೊಟ್ಟಿತು. ಭಾರತೀಯ ಜನತಾ ಪಕ್ಷವು ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಸಮೇತ ತನ್ನ ಸ್ಟಾರ್‌ ಪ್ರಚಾರಕರನ್ನು ಕಳುಹಿಸಿ ಭಾರೀ ಸದ್ದು ಮಾಡುತ್ತಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಮಜಿÉಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ನಡುವಿನ ವಾಗ್ಬಾಣಗಳೂ ಸಿಡಿದು ಸುದ್ದಿಯಾಗುತ್ತಿವೆ. 

ಇಷ್ಟೆಲ್ಲ ಸ್ಪರ್ಧಿಗಳು ಅಖಾಡದಲ್ಲಿರುವಾಗ ಈ ಬಾರಿ ಯಾರು ಗೆಲ್ಲಬಹುದು, ಇವರಲ್ಲಿ ಯಾರು ಬಲಿಷ್ಠರು ಎನ್ನುವ ಪ್ರಶ್ನೆ ಎದುರಾಗುತ್ತದೆ. ರಾಜಕೀಯ ವಿಶ್ಲೇಷಕರು ಮತ್ತು ಚುನಾವಣಾ ಪೂರ್ವ ಸಮೀಕ್ಷೆಗಳನ್ನೇ ಆಧರಿಸಿ ಹೇಳುವುದಾದರೆ ಮತ್ತೆ ಕೆ. ಚಂದ್ರಶೇಖರ ರಾವ್‌ ಅವರೇ ಅಧಿಕಾರಕ್ಕೆ ಏರುವ ಸಾಧ್ಯತೆ ಅಧಿಕವಿದೆ. ಗೆದ್ದರೂ ಆ ಗೆಲುವು ಸುಲಭವಾಗಿರುವುದಿಲ್ಲ. 

 “ಪ್ರಾದೇಶಿಕ’ ಮತ್ತು “ರಾಷ್ಟ್ರೀಯ’ ಎನ್ನುವ ರೇಖೆಗಳು ಮಸುಕಾಗುತ್ತಿರುವ ಈ ಕಾಲದಲ್ಲಿ ನಿಖರವಾಗಿ ಇವರೇ ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟದ ಕೆಲಸ. ಇಂದು ರಾಜ್ಯವೊಂದರ ಚರ್ಚೆಯಲ್ಲಿ ರಾಷ್ಟ್ರೀಯ ಸಮಸ್ಯೆಗಳೂ ಭಾಗ ಪಡೆದಿರುತ್ತವೆ. ಹೀಗಾಗಿ ರಾಷ್ಟ್ರೀಯ ಮಟ್ಟದ ಬೆಳವಣಿಗೆಗಳಿಗೆ ಅನುಸಾರ ವಾಗಿಯೂ ಮತದಾರರು ಸ್ಪಂದಿಸುವ ಸಾಧ್ಯತೆ ಇರುತ್ತದೆ. 

ಆದರೆ ತೆಲಂಗಾಣ ವಿಷಯದಲ್ಲಿ ಈ ಮಾತನ್ನು ಅಷ್ಟಾಗಿ ಅನ್ವಯಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ದಶಕಗಳ ಹೋರಾಟದ ನಂತರ, ನಾಲ್ಕು ವರ್ಷಗಳ ಹಿಂದಷ್ಟೇ (2014ರ ಜೂನ್‌ 2) ಅಸ್ತಿತ್ವಕ್ಕೆ ಬಂದಿರುವ ರಾಜ್ಯವದು. ತೆಲಂಗಾಣ ಪರ ಮತ್ತು ಆಂಧ್ರ ವಿರೋಧಿ(ಅಖಂಡ ಆಂಧ್ರ ಪರವಿದ್ದ ಪಕ್ಷಗಳ ವಿರುದ್ಧ) ಭಾವನೆ ಇನ್ನೂ ಅಲ್ಲಿನ ಮತದಾರರಲ್ಲಿ ಹೊಗೆಯಾಡುತ್ತಲೇ ಇದೆ.

ಖಮ್ಮಂ, ರಂಗಾರೆಡ್ಡಿಯಂಥ ಜಿಲ್ಲೆಗಳನ್ನು ಹೊರತುಪಡಿಸಿ ತೆಲಂಗಾಣದ ಬಹುತೇಕ ಭಾಗಗಳಲ್ಲಿ ಜನರಿಗೆ ಚಂದ್ರಬಾಬು ನಾಯ್ಡು ಅವರ ಬಗ್ಗೆ ಅಸಮಾಧಾನವಿದ್ದೇ ಇದೆ. ಹೀಗಾಗಿ ಕಾಂಗ್ರೆಸ್‌ ಚಂದ್ರಬಾಬು ನಾಯ್ಡು ಪ್ರಚಾರಗಳನ್ನು ಈ ಜಿಲ್ಲೆಗಳಿಗೇ ಹೆಚ್ಚಾಗಿ ಸೀಮಿತಗೊಳಿಸಲು ಪ್ರಯತ್ನಿಸಿತು. 

ದಲಿತ-ಒಬಿಸಿ ಲೆಕ್ಕಾಚಾರ
ಚಂದ್ರಶೇಖರ ರಾವ್‌ ಅವರ ವಿಷಯಕ್ಕೆ ಬಂದರೆ, 2014ರಲ್ಲಿ ಅವರಿಗಿದ್ದ ವರ್ಚಸ್ಸು ಈಗ ತಗ್ಗಿರುವುದು ಸಹಜವೇ. ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಆರೋಪಗಳು ಅವರು ಮತ್ತವರ ಕ್ಯಾಬಿನೆಟ್‌ಗೆ ಸುತ್ತಿಕೊಂಡಿವೆ. ಚಂದ್ರಶೇಖರ ರಾವ್‌ ಕೂಡ ಪ್ರತ್ಯೇಕ ತೆಲಂಗಾಣ ಹೋರಾಟದ ಸಮಯದಲ್ಲಿ ನೀಡಿದ್ದ ಅನೇಕ ಭರವಸೆಗಳನ್ನು ಈಡೇರಿಸಲು ವಿಫ‌ಲರಾಗಿದ್ದಾರೆ. ಒಂದು ವೇಳೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ತಮ್ಮ ಪಕ್ಷ ಅಸ್ತಿತ್ವಕ್ಕೆ ಬಂದರೆ ದಲಿತ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆ ಎಂಬ ಅವರ ಭರವಸೆ ಹುಸಿಯಾಯಿತು. ಸಿಎಂ ಸ್ಥಾನದಲ್ಲಿ ತಾವೇ ಕುಳಿತುಬಿಟ್ಟರು. ಇದಷ್ಟೇ ಅಲ್ಲ, ಮಾದಿಗ‌ ಅಥವಾ ಮಾಲಾ ಉಪಜಾತಿಯ ನಾಯಕರಿಗೂ ಅವರು ಮನ್ನಣೆ ಕೊಡಲಿಲ್ಲ. ಪ್ರತಿ ಬಡ ದಲಿತ ಕುಟುಂಬಕ್ಕೂ ಮೂರು ಎಕರೆ ಜಾಗ ಕೊಡುತ್ತೇವೆ ಎಂದು ಅವರು ಭರವಸೆ ನೀಡಿದ್ದರು. ಆದರೆ ಈ ಭರವಸೆ ಇನ್ನೂ ಈಡೇರಿಲ್ಲ. ಕೆಲವೇ ಕೆಲವು ಕುಟುಂಬಗಳಿಗೆ ಮಾತ್ರ ಜಾಗ ದೊರೆತಿದೆ. ಪ್ರತಿ ಎಕರೆಗೆ ವಾರ್ಷಿಕ 8000 ರೂಪಾಯಿ ಹಣ ಸಹಾಯ ನೀಡುವ ಮಹತ್ವಾಕಾಂಕ್ಷಿ “ರೈತ ಬಂಧು’ ಯೋಜನೆಯಿಂದಲೂ ದಲಿತರಿಗೆ ಅಷ್ಟು ಸಹಾಯವಾಗುತ್ತಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಭೂರಹಿತರಾಗಿದ್ದಾರೆ. ಇನ್ನು ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣಕ್ಕಾಗಿ ಹೋರಾಟ ಮಾಡುತ್ತಿರುವ ಮಾದಿಗ ಮೀಸಲಾತಿ ಹೋರಾಟ ಸಮಿತಿ(ಎಂಆರ್‌ಪಿಎಸ್‌)ಯ ಬೇಡಿಕೆಗಳನ್ನೂ ಚಂದ್ರಶೇಖರ್‌ ರಾವ್‌ ಕಡೆಗಣಿಸಿದರು. ಹೀಗಾಗಿ ಎಂಆರ್‌ಪಿಎಸ್‌ನ ನಾಯಕ ಮಂಡ ಕೃಷ್ಣ ಮಾದಿಗ, ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತಿದ್ದಾರೆ. 

ಚಂದ್ರಶೇಖರ ರಾವ್‌ ಅವರ ಮೇಲೆ ದಲಿತ ವರ್ಗಕ್ಕೆ ಅಸಮಾಧಾನವಿದೆ ಎನ್ನುವುದು ಭಾರತೀಯ ಜನತಾ ಪಕ್ಷಕ್ಕೆ  ತಿಳಿದಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್‌ ಶಾ ಕೂಡ ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಗಮನದಲ್ಲಿಟ್ಟುಕೊಂಡೇ ಮಾತನಾಡಿದ್ದಾರೆ. “ಚಂದ್ರಶೇಖರ ರಾವ್‌ ಸರ್ಕಾರ ಮುಸಲ್ಮಾನರಿಗೆ 12 ಪ್ರತಿಶತ ರಿಸರ್ವೇಷನ್‌ ಕೊಡುತ್ತೇವೆ ಎನ್ನುವ ಭರವಸೆ ನೀಡುತ್ತಿದೆ. ಆದರೆ ಸುಪ್ರೀಂ ಕೋರ್ಟ್‌ ಮೀಸಲಾತಿಯಲ್ಲಿ 50 ಪ್ರತಿಶತ ಮಿತಿ ಹೇರಿದೆ. ಹೀಗಾಗಿ ಈಗ ಎಸ್‌ಸಿ, ಎಸ್‌ಟಿ ಅಥವಾ ಒಬಿಸಿಯಿಂದ ಕೋಟಾ ಕಸಿದುಕೊಂಡು ಅವರಿಗೆ ಕೊಡುತ್ತೀರಾ?’ ಎಂಬ ಧಾಟಿಯಲ್ಲಿ ಮಾತನಾಡಿ ಈ ಸಮುದಾಯಗಳನ್ನು ಓಲೈಸಲು ಪ್ರಯತ್ನಿಸಿದ್ದಾರೆ ಮೋದಿ ಮತ್ತು ಶಾ. ಅಲ್ಲದೇ ಕಾಂಗ್ರೆಸ್‌ಬಳಿ ಹೋಗಬಹುದಾದ ದಲಿತ ಮತಗಳನ್ನು ಬಿಜೆಪಿಯತ್ತ ಸೆಳೆದುಕೊಳ್ಳುವ ಪ್ರಯತ್ನವೂ ಅವರ ಮಾತುಗಳಲ್ಲಿ ಕಾಣಿಸುತ್ತಿದೆ. 

ಆದರೆ ಚಂದ್ರಶೇಖರ ರಾವ್‌ ಪರವಾಗಿ ಇತರೆ ಹಿಂದುಳಿದ ವರ್ಗದ ಮತದಾರರು ಇದ್ದಾರೆನ್ನುವುದು ಗಮನಿಸಬೇಕಾದ ಸಂಗತಿ. ತೆಲಂಗಾಣದ ಒಬಿಸಿಗಳಿಗಾಗಿ ಕೆಸಿಆರ್‌ ಸರ್ಕಾರ ಗಮನಾರ್ಹ ಕೆಲಸಗಳನ್ನು ಮಾಡಿದೆ. ಕುರಿ ಅಥವಾ ದನಗಾಹಿ ಕುಟುಂಬಗಳಿಗೆ  ಕುರಿ ಮತ್ತು ರಾಸುಗಳನ್ನು ಒದಗಿಸುವ ಯೋಜನೆ ಒಬಿಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯಾದವರನ್ನು ಸಂತುಷ್ಟಗೊಳಿಸಿದೆ. ಅದೇ ರೀತಿಯಲ್ಲೇ ಮೀನುಗಾರರು ಮತ್ತು ಕೈಮಗ್ಗ ನೇಕಾರರಿಗೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. 

ಮುಸ್ಲಿಂ ಮತಗಳ ಹಿಂದೆ..
3.52 ಕೋಟಿ ಜನಸಂಖ್ಯೆಯಿರುವ ತೆಲಂಗಾಣದಲ್ಲಿ ಮುಸಲ್ಮಾನರ ಸಂಖ್ಯೆ 12.5 ಪ್ರತಿಶತದಷ್ಟಿದೆ. ತೆಲಂಗಾಣದ 119 ವಿಧಾನಸಭಾ ಸ್ಥಾನಗಳಲ್ಲಿ 29 ಸ್ಥಾನಗಳಲ್ಲಿ ಮುಸಲ್ಮಾನ ಮತಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಇದಲ್ಲದೆ, ಇತರೆ 10-15 ಸ್ಥಾನಗಳಲ್ಲೂ ಅವರ ಮತಗಳಿಗೆ ಮಹತ್ವವಿದೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಈ ವರ್ಗದ ಮತದಾರರನ್ನು ಸೆಳೆದುಕೊಳ್ಳುವ ಪ್ರಯತ್ನ ಭರದಿಂದ ನಡೆದಿದೆ. ಬಿಜೆಪಿ ಮತು ಓವೈಸಿ ನಡುವಿನ ಟೀಕಾಪ್ರಹಾರಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಮುಸ್ಲಿಂ ಮತಗಳು ಹೆಚ್ಚಾಗಿ ಯಾವ ಪಕ್ಷದತ್ತ ಸಾಗುತ್ತವೋ, ಆ ಪಕ್ಷವು, ಅತಂತ್ರ ವಿಧಾನಸಭೆ ನಿರ್ಮಾಣವಾಯಿತೆಂದರೆ ಕಿಂಗ್‌ಮೇಕರ್‌ ಆಗಬಲ್ಲದು. ಅತ್ತ ಕಾಂಗ್ರೆಸ್‌ಗೂ ಮುಸಲ್ಮಾನ ಮತಗಳು ಅತ್ಯಗತ್ಯ. ಹೀಗಾಗಿ, ಅದು ಓವೈಸಿ-ಬಿಜೆಪಿ ಮತ್ತು ಟಿಆರ್‌ಎಸ್‌ಗೆ ನಂಟು ಕಲ್ಪಿಸುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ತಮ್ಮ ಭಾಷಣದಲ್ಲಿ “”ತೆಲಂಗಾಣ ರಾಷ್ಟ್ರ ಸಮಿತಿ(ಚಂದ್ರಶೇಖರ ರಾವ್‌ ಪಕ್ಷ), ಭಾರತೀಯ ಜನತಾ ಪಾರ್ಟಿ ಮತ್ತು ಎಂಐಎಂ(ಓವೈಸಿ ಪಕ್ಷ) ಅನಧಿಕೃತ ಮೈತ್ರಿ ಮಾಡಿಕೊಂಡಿವೆ” ಎಂದು ಹೇಳಿದ್ದಾರೆ. ಅವರ ಮಾತುಗಳಲ್ಲಿ ಪರೋಕ್ಷವಾಗಿ ಮುಸಲ್ಮಾನರಿಗೆ “ಚಂದ್ರಶೇಖರ ರಾವ್‌ ಮತ್ತು ಓವೈಸಿಯನ್ನು ನಂಬಬೇಡಿ, ಅವರಿಬ್ಬರೂ ಬಿಜೆಪಿಯೊಂದಿಗಿದ್ದಾರೆ’ ಎಂಬ ಕೋಮು ಕಾರ್ಡ್‌ ಬಳಕೆ ಕಾಣಿಸುತ್ತಿದೆ. ಅಲ್ಲದೆ, ಮುಸಲ್ಮಾನರ ಮತಗಳನ್ನು ಸೆಳೆಯಲು ಮಾಜಿ ಕ್ರಿಕೆಟಿಗ, ಮಾಜಿ ಸಂಸದ ಮೊಹಮ್ಮದ್‌ ಅಜರುದ್ದೀನ್‌ ಅವರನ್ನು ತೆಲಂಗಾಣದಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ರಾಹುಲ್‌ ಗಾಂಧಿ ನೇಮಿಸಿದ್ದಾರೆ.   

ಬಿಜೆಪಿಗೆ ತೆಲಂಗಾಣದಲ್ಲಿ ಬಹುಮತ ಪಡೆದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ. ಆದರೆ ಅತಂತ್ರ ವಿಧಾನಸಭೆಯಂಥ ಸನ್ನಿವೇಶದಲ್ಲಿ ಕಿಂಗ್‌ಮೇಕರ್‌ ಆಗುವಷ್ಟಾದರೂ ತನ್ನ ಬಲ ಹೆಚ್ಚಿಸಿಕೊಳ್ಳಬೇಕು ಎನ್ನುವ ಗುರಿ ಅದಕ್ಕೆ ಇದೆ.  

ಗಮನಿಸಬೇಕಾದ ಸಂಗತಿಯೆಂದರೆ ಓವೈಸಿಯ ಎಂಐಎಂ ಪಕ್ಷ ಕೆ. ಚಂದ್ರಶೇಖರ ರಾವ್‌ ಅವರ ಪರವಾಗಿಯೇ ಬ್ಯಾಟಿಂಗ್‌ ಮಾಡುತ್ತಾ ಬಂದಿದೆ. ಚಂದ್ರಶೇಖರ ರಾವ್‌ ವಿಧಾನಸಭೆಯನ್ನು ವಿಸರ್ಜಿಸಿದಾಗ ಎಂಐಎಂ ಪಕ್ಷವನ್ನು “ಫ್ರೆಂಡ್ಲಿ ಪಾರ್ಟಿ’ ಎಂದು ಹೊಗಳಿದ್ದರು. ಓವೈಸಿ ಕೂಡ “ಚಂದ್ರಶೇಖರ ರಾವ್‌ ಅವರ ಪಕ್ಷವೇ ಅಧಿಕಾರಕ್ಕೆ ಬರುವ ಸಾಧ್ಯತೆ ನನಗೆ ಗೋಚರಿಸುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ತೆಲಂಗಾಣದಲ್ಲಿ ಒಂದೇ ಒಂದು ಕೋಮು ಗಲಭೆಗಳೂ ನಡೆದಿಲ್ಲ. ಈ ರಾಜ್ಯದಲ್ಲಿ ಭಯದ ವಾತಾವರಣವೇ ಇಲ್ಲ. ಈ ಸಂಗತಿಯೇ ಚಂದ್ರಶೇಖರ ರಾವ್‌ಗೆ ಸಹಾಯ ಮಾಡಲಿದೆ’ ಎಂದಿದ್ದರು.

 ಒಂದರ್ಥದಲ್ಲಿ, ಮುಸಲ್ಮಾನ ಮತಗಳಿಗಾಗಿ ಚಂದ್ರಶೇಖರ ರಾವ್‌ ಓವೈಸಿ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಅದರ ಜೊತೆಗೇ ಈ ವರ್ಗವನ್ನು ಸೆಳೆಯಲು 12 ಪ್ರತಿಶತ ಕೋಟಾ ಭರವಸೆಯ ಜೊತೆ ಜೊತೆಗೇ, ಅಲ್ಪಸಂಖ್ಯಾತರ ವಸತಿ ಶಾಲೆಗಳ ಸ್ಥಾಪನೆ, ಶಾದಿ ಮುಬಾರಕ್‌(ಬಡ ಮುಸಲ್ಮಾನ ಹೆಣ್ಣುಮಕ್ಕಳ ಮದುವೆಗೆೆ 1 ಲಕ್ಷ ರೂಪಾಯಿ ಧನ ಸಹಾಯ), ರಮ್ಜಾನ್‌ ಸಮಯದಲ್ಲಿ ಮಸೀದಿಗಳಿಗೆ, ಇಮಾಮರಿಗೆ ಅನುದಾನದಂಥ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಆದರೆ ಈ ಕಾರ್ಯಕ್ರಮಗಳು ನಿಜಕ್ಕೂ ಅವರ ಸಹಾಯಕ್ಕೆ ಎಷ್ಟು ಬರಲಿವೆಯೋ ತಿಳಿಯದು. 

 ಈ ಎಲ್ಲಾ ಸಂಗತಿಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ತೆಲಂಗಾಣ ಫ‌ಲಿತಾಂಶವನ್ನು ಊಹಿಸುವ ಪ್ರಯತ್ನ ಮಾಡಬಹುದು. ಕೆ. ಚಂದ್ರಶೇಖರ ರಾವ್‌ ಹಾದಿ ಸುಗಮವಾಗಿಲ್ಲ, ಆದರೆ ಅವರಿಗೆ ಸಮನಾದ ವರ್ಚಸ್ಸು ಪ್ರತಿಪಕ್ಷಗಳ ಇತರೆ ನಾಯಕರ್ಯಾರಿಗೂ ಸದ್ಯಕ್ಕೆ ತೆಲಂಗಾಣದಲ್ಲಿ ಕಾಣಿಸುತ್ತಿಲ್ಲ. ಸದ್ಯಕ್ಕಂತೂ ತೆಲಂಗಾಣದ ರಾಜಕೀಯ ತಕ್ಕಡಿಯಲ್ಲಿ ಚಂದ್ರಶೇಖರ ರಾವ್‌ ಅವರ ತೂಕವೇ ಅಧಿಕವಿದ್ದಂತೆ ಗೋಚರಿಸುತ್ತಿದೆ. ಡಿಸೆಂಬರ್‌ 7ಕ್ಕೆ ಚುನಾವಣೆ ಇದೆ. ಅದಾದ ನಾಲ್ಕು ದಿನಕ್ಕೆ, ಅಂದರೆ 11ಕ್ಕೆ ಫ‌ಲಿತಾಂಶ. ಆ ದಿನವೇ ತೆಲಂ”ಗಾಣ’ದಲ್ಲಿ ನಿಜಕ್ಕೂ ಯಾರಿಗೆ ಸಿಹಿ ರಸ ಸಿಗಲಿದೆ, ಯಾರಿಗೆ ಸಿಪ್ಪೆ ಉಳಿಯಲಿದೆ ಎನ್ನುವುದು ಸ್ಪಷ್ಟವಾಗುತ್ತದೆ. 

 ರಾಘವೇಂದ್ರ ಆಚಾರ್ಯ

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.