CONNECT WITH US  

ಮನಸ್ಸಿನ ಭಾವನೆಗಳು ಸರಿಯಾದ ದಾರಿಯಲ್ಲಿರಲಿ

ಕಾಯಿಲೆ, ಖನ್ನತೆ, ದುಃಖದಿಂದ ಏನೂ ಲಾಭವಿಲ್ಲ. ಸಂತೋಷದಿಂದ ಮಾತ್ರ ಲಾಭ ಎಂಬುದನ್ನು ನಮ್ಮ ಮನಸ್ಸಿಗೆ ನಾವು ತಿಳಿಸಬೇಕು. ಆಗ ಬದುಕಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ತಮ್ಮ 25ನೇ ವಯಸ್ಸಿನಲ್ಲೇ ಯೋಗದ ಮೂಲಕ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟವರು, ಭಾರತೀಯ ಯೋಗಿ ಎಂದೇ ಕರೆಯಲ್ಪಡುವ ಸದ್ಗುರು ಜಗ್ಗಿ ವಾಸುದೇವ್‌.

 ಆಧುನಿಕತೆ ಎಂದರೆ ಗಡಿಬಿಡಿ, ಕಿರಿಕಿರಿ, ಒತ್ತಡದಲ್ಲಿ ಇರುವುದು ಎಂದುಕೊಂಡಿದ್ದೇವೆ. ಹೀಗಾಗಿ ಪ್ರಪಂಚದಲ್ಲಿ ಇಂದು ಶೇ. 70ರಷ್ಟು ಮಂದಿ ಒಂದಲ್ಲ ಒಂದು ರೀತಿಯ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಖನ್ನತೆ (ಡಿಪ್ರಶನ್‌)ಗೆ ಮುಖ್ಯ ಕಾರಣ ನಾವು ನಮ್ಮ ಭಾವನೆಗಳನ್ನು ಸರಿಯಾದ ಹಾದಿಯಲ್ಲಿ ಹಾಯಿಸದಿರುವುದು. ಹೀಗಾ ಗಿಯೇ ನಮ್ಮ ಮನಸ್ಸು ಅಶಾಂತವಾಗಿದೆ, ಪ್ರಶಾಂತತೆಯನ್ನು ಬಯಸುತ್ತಿದೆ. ಮನಸ್ಸು ಸದಾಕಾಲ ಪ್ರಸನ್ನತೆಯನ್ನೇ ಕೊಡುತ್ತಿದ್ದರೆ ಅದನ್ನು ಹಿಡಿದು ನಿಲ್ಲಿಸುವ ಪ್ರಯತ್ನವನ್ನು ಯಾರೂ ಮಾಡುತ್ತಿರಲಿಲ್ಲ. 

ನಮ್ಮ ಮನಸ್ಸು ನಾವು ಹೇಳಿದ ಮಾತನ್ನು ಕೇಳುತ್ತಿಲ್ಲ ಎಂದಾದರೆ ಅದಕ್ಕೆ ಮುಖ್ಯ ಕಾರಣ ನಮಗೆ ಸಲ್ಲದ ವಿಷಯವನ್ನು ಅದರಲ್ಲಿ ತುಂಬಿಕೊಂಡಿದ್ದೇವೆಂದರ್ಥ. ನಮ್ಮನ್ನು ನಾವು ಖನ್ನತೆಗೆ ಒಳಪಡಿಸಿಕೊಳ್ಳುತ್ತಿದ್ದೇವೆ ಎಂದಾದರೆ ನಾವು ತೀವ್ರವಾದ ರೀತಿಯಲ್ಲಿ ಭಾವನೆಗಳನ್ನು ತಪ್ಪು ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಬಹುದು.

ಮನೆಯಲ್ಲಿ ಮಗುವಿನ ಆರೋಗ್ಯ ಕೆಟ್ಟಾಗ ನಾವು ಅದರ ತೀವ್ರ ಕಾಳಜಿ ವಹಿಸುತ್ತೇವೆ. ಆಗ ಮಗು ತನಗೆ ಹುಷಾರಿಲ್ಲದಿದ್ದರೆ ಎಲ್ಲರ ಪ್ರೀತಿ, ಅಕ್ಕರೆ ಸಿಗುತ್ತದೆ ಎಂದು ಅಂದುಕೊಳ್ಳುವುದುಂಟು. ಅದೇ ಮದುವೆಯಾದ ಬಳಿಕ ಯಾವುದೋ ಕಾರಣಕ್ಕೆ ಬೇಸರದಿಂದ ಒಂದು ಮೂಲೆಯಲ್ಲಿ ಹೋಗಿ ಕುಳಿತು ಕೊಳ್ಳುತ್ತೇವೆ. ಆಗ ಪತಿ ಅಥವಾ ಪತ್ನಿ ಯಾರಾದರೊಬ್ಬರು ನಮ್ಮ ಬಳಿ ಬಂದು ನಮ್ಮ ಮನಸ್ಸು ಒಲಿಸಲು ಪ್ರಯತ್ನಿಸುತ್ತಾರೆ. ಆರಂಭದಲ್ಲಿ ಇದು ಸಹಜ ಎನಿಸಬಹುದಾದರೂ, ಕ್ರಮೇಣ ಇದೊಂದು ರೀತಿಯ ಅಭ್ಯಾಸವಾಗಿ ಬಿಡುತ್ತದೆ. 

ಅಲೋಚನೆ ಮತ್ತು ಭಾವನೆಗಳನ್ನು ಪ್ರಬಲಗೊಳಿಸುವ ಹೊರಗಿನ ಸನ್ನಿವೇಶಗಳು ಒತ್ತಡವನ್ನು ಹೇರಿದರೆ ಎಂಥ ಸ್ವಸ್ಥ ವ್ಯಕ್ತಿಯ ಮನಸ್ಥಿತಿಯನ್ನಾದರೂ ಏರು ಪೇರು ಮಾಡಬಹುದು. ಸ್ವಸ್ಥ ಮತ್ತು ಅಸ್ವಸ್ಥ ಮನಸ್ಸಿನ ಅಂತರ ಬಹು ತೆಳು. ಸಿಟ್ಟು ಎಂಬುದು ಮಾನಸಿಕ ಸ್ವಸ್ಥತೆಯಿಂದ ಅಸ್ವಸ್ಥತೆಯತ್ತ ಕರೆದೊಯ್ಯುತ್ತದೆ. ನಿತ್ಯವೂ ನಾವು 10 ನಿಮಿಷ ಸಿಟ್ಟು ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಕೊನೆಗೊಂದು ದಿನ ನಾವು ಮನಸ್ಸಿನ ಮೇಲಿನ ಸ್ಥಿಮಿತವನ್ನು ಕಳೆದುಕೊಳ್ಳುತ್ತೇವೆ. ಒಂದು ಕ್ಷಣದ ಸಿಟ್ಟು ಕೂಡ ಒಳ್ಳೆಯದಲ್ಲ.

ನಮ್ಮ ಮನಸ್ಸು ನಮಗಿಷ್ಟವಾದ ವಿಷಯವನ್ನು ಹೇಳಬೇಕು. ಬೇರೆ ಯಾವುದನ್ನೂ ಹೇಳಬಾರದು. ಒಂದು ವೇಳೆ ಅದು ಬೇರೆ ಏನನ್ನಾದರೂ ಹೇಳುತ್ತಿದೆ ಎಂದಾದರೆ ಲಕ್ಷ್ಯ ವಹಿಸಬೇಕು. ಅದ್ದರಿಂದ ಮನಸ್ಸಿನ ಮೇಲೆ ನಿಯಂತ್ರಣ ಹೊಂದುವುದು ಅತ್ಯಗತ್ಯ.

ಇದಕ್ಕೆ ಮದ್ದೇನು?
* ದೇಹ, ಮನ ಸ್ಸಿನ ಪ್ರತಿಯೊಂದು ಕಾಯಿಲೆಗೂ ನಾವೇ ಕಾರಣರಾಗಿರುತ್ತೇವೆ. ಹೀಗಾಗಿ ಅದಕ್ಕೆ ಚಿಕಿತ್ಸೆಯನ್ನು ನಾವೇ ಮಾಡಿಕೊಳ್ಳಬೇಕು. ಅದಕ್ಕೆ ಬೇಕಿರುವುದು ದೃಢ ನಿಶ್ಚಯ.
*  ಪರಿಸ್ಥಿತಿ ಏನೇ ಇರಲಿ ಮಾಡ ಬೇಕಿರುವ ಕೆಲಸಗಳನ್ನು ಮಾಡಲೇಬೇಕು. ಆಗ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಅದರಿಂದ ಬೇಗ ಮುಕ್ತಿ ಪಡೆಯಲು ಸಾಧ್ಯವಿದೆ.
* ಮಕ್ಕಳು ಕಾಯಿಲೆ ಬಿದ್ದಾಗ ಅವರ ಹತ್ತಿರವಿದ್ದು ಕಾಳಜಿ ವಹಿಸುವ ಬದಲು ಅವರು ಖುಷಿಯಿಂದ ಇರುವಾಗ ಅವರ ಜತೆಗಿದ್ದು ಸಂಭ್ರಮಿಸಿ. ಆಗ ಮಕ್ಕಳಿಗೆ ತಾವು ಕಾಯಿಲೆ ಬೀಳಬಾರದು ಎಂಬ ದೃಢ ಭಾವನೆ ಮನಸ್ಸಿನಲ್ಲಿ ಬೇರೂರುತ್ತದೆ. ಜತೆಗೆ ಯಾವಾಗಲೂ ಹೆಚ್ಚು ಖುಷಿಯಿಂದ ಇರಲು ಅವರು ಪ್ರಯತ್ನಿಸುತ್ತಾರೆ.
* ನಮ್ಮ ದೇಹದೊಳಗೆ ಏನಾಗುತ್ತಿದೆ ಎನ್ನುವುದನ್ನು ನಾವು ಗುರುತಿಸಬೇಕು. ಅದನ್ನು ಇನ್ನೊಬ್ಬರು ಹೇಳುವಂತಿರಬಾರದು. ಆಗ ಪ್ರತಿಯೊಂದು ಸಮಸ್ಯೆಗೂ ಪರಿಹಾರ ನಮ್ಮಲ್ಲೇ ಹುಡುಕಲು ಸಾಧ್ಯವಿದೆ.
* ಸಂತೋಷ ಎಂಬುದು ನಿಮ್ಮ ಸುತ್ತಮುತ್ತಲಿನವರನ್ನು ಅವಲಂಬಿಸಿರಬಾರದು. ಒಂದು ವೇಳೆ ಹಾಗಾದರೆ ಅದು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. 
* ವಿಶ್ರಾಂತಿ ಎಂದರೆ ನಿದ್ದೆಯಲ್ಲ. ದೇಹದ ಶಕ್ತಿಯ ಖರ್ಚನ್ನು ಕಡಿಮೆ ಮಾಡಿ ಉತ್ಪಾದನೆಯ ಮಟ್ಟವನ್ನು ಹೆಚ್ಚಿಸುವುದಾಗಿದೆ. ಅಂದರೆ ದೇಹವನ್ನು ಪ್ರಜಾಪೂರ್ವಕವಾಗಿ ಆರಾಮವಾಗಿರುವಂತೆ ನೋಡಿ ಕೊಳ್ಳುವುದು.
* ನಂಬಿಕೆ ಮತ್ತು ಅಪನಂಬಿಕೆ ನಡುವಿನ ನೈಜತೆಯನ್ನು ಹುಡುಕಬೇಕು.
* ಇನ್ನೊಬ್ಬರ ಅನುಭವಗಳನ್ನು ಕೇಳಬೇಡಿ. ನೀವು ನಿಮ್ಮ ಬದುಕಿನ ದಾರಿಯ ಅನುಭವವನ್ನು ತಿಳಿಸಿ. ಆಗ ನಿಮ್ಮನ್ನು ನೀವು ಗುರುತಿಸಲು, ನೀವು ನಡೆದು ಬಂದ ದಾರಿಯ ಬಗ್ಗೆ ಅವಲೋಕಿಸಲು ಸಾಧ್ಯವಾಗುತ್ತದೆ. 
* ನಿಮ್ಮ ಅನುಭವಗಳಿಂದ ಪಾಠ ಕಲಿತುಕೊಳ್ಳಿ. ನಿಮ್ಮ ಮುಂದಿನ ಪಯಣಕ್ಕೆ ಅವೇ ದಾರಿದೀಪ.

ವಿದ್ಯಾ ಇರ್ವತ್ತೂರು

ಬದುಕು ಬದಲಿಸೋಣ ಹಬ್ಬದ ಸಂಭ್ರಮ ತುಂಬಿಕೊಳ್ಳಲು ಅಲ್ಪವಿರಾಮ
ದೀಪಾವಳಿ ಹಬ್ಬಕ್ಕೆ ಇನ್ನೆರಡೇ ದಿನ. ನಮ್ಮೊಳಗಿನ ಧೀ ಶಕ್ತಿ ಮೂಲಕ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ನಮ್ಮ ಹಿರಿಯರು ಕಂಡುಕೊಂಡದ್ದು ಈ ಹಬ್ಬಗಳನ್ನು. ಇಡೀ ಕುಟುಂಬ ಒಟ್ಟಿಗೆ ಸಂಭ್ರಮದಿಂದ ಹಬ್ಬ ಆಚರಿಸಿ, ಖುಷಿ ಪಡುವುದೇ ಅದ್ಭುತ ಅನುಭವ. ಬದುಕಿನ ಬಗೆಗಿನ ಪ್ರೀತಿ ಬೆಳೆಸುವುದೂ ಅದೇ. ಹಬ್ಬಗಳೆಂದರೆ ಬರೀ ಆಚರಣೆಗಳಲ್ಲ; ಅವುಗಳ ಹಿಂದೆ ಸವಿ ನೆನಪುಗಳೇ ಇರುತ್ತವೆ. ಅಂಥ ದೀಪಾವಳಿ ಮತ್ತೆ ಬಂದಿದೆ. ದೀವಿಗೆಯ ಬೆಳಕಿನಿಂದ ನಮ್ಮ ಅಂತರಂಗದೊಳಗೆ ಅರಿವಿನ ದೀಪ ಬೆಳಗಿ ಧನಾತ್ಮಕ ಭಾವನೆಗಳನ್ನು ತೈಲವಾಗಿಸಿಕೊಳ್ಳೋಣ. ಹೊರಗೂ, ಒಳಗೂ ಬೆಳಕು ತುಂಬಿ ಹರಿಯಲಿ. 

ಹಬ್ಬದ ಹಿನ್ನೆಲೆಯಲ್ಲಿ ನ. 5ರಿಂದ 7ರ ವರೆಗೆ ಬದುಕು ಬದಲಿಸೋಣ ಅಂಕಣಕ್ಕೆ ಅಲ್ಪವಿರಾಮ ಕೊಡುತ್ತಿ ದ್ದೇವೆ. ಮನೋವ್ಯಾಪಾರ ಕುರಿತು ಮತ್ತಷ್ಟು ಹೊಸ ಸಂಗತಿಗಳು, ಪರಿಣಿತರ ಅನುಭವ ವಾಕ್ಯಗಳೊಡನೆ ನ. 8ರ ಸಂಚಿಕೆಯಿಂದ ಮತ್ತೆ ಅಂಕಣ ಆರಂಭವಾಗಲಿದೆ.
-ಸಂ

Trending videos

Back to Top