CONNECT WITH US  

ಹಬ್ಬಗಳು ಧನಾತ್ಮಕ ಚಿಂತನೆಯ ತೈಲಾಗಾರ; ದೀವಿಗೆಗೆ ತುಂಬಿಕೊಳ್ಳೋಣ

ಬದುಕೆಂಬುದು ನಂದಾದೀವಿಗೆ. ಅದು ನಿತ್ಯವೂ ಉರಿಯುತ್ತಿರಬೇಕಾದರೆ ತೈಲ ಇರಲೇಬೇಕು. ಅದು ಖಾಲಿಯಾದ ಕ್ಷಣ ದೀವಿಗೆ ಆರಬಲ್ಲದು. ಇಲ್ಲಿ ಆರುವುದೆಂದರೆ ಯಾಂತ್ರಿಕತೆಯೆಂಬುದು ವ್ಯಾಪಿಸುವ ಕ್ಷಣವೆಂದರ್ಥ. ಅದೆಲ್ಲವೂ ಆಗಬಾರದೆಂದರೆ ಮನೆಯೊಳಗೆ ದೀವಿಗೆಗೆ ತೈಲವಾಗಿರುವ ಹಬ್ಬಗಳನ್ನು ಆಚರಿಸಬೇಕು.

ಬದುಕಿಗೆ ಏಕೆ ಹಬ್ಬಬೇಕು ಎಂದು ಹಿರಿಯರೊಬ್ಬರನ್ನು ಕೇಳಿದ್ದೆ. ಇದು ಇಪ್ಪತ್ತು ವರ್ಷಗಳ ಹಿಂದಿನದ್ದು. 
ಸುಮಾರು 65 ರ ವಯಸ್ಸು. ಖುಷಿಖುಷಿಯಾಗಿ ಬದುಕಿದ ಜೀವ. ನಗುನಗುತ್ತಲೇ, "ನೋಡಪ್ಪಾ, ಇವುಗಳು ಬರುವುದೇ ನಮಗೆ ಖುಷಿ ತರಲಿಕ್ಕೆ. ನಿತ್ಯದ ಕಷ್ಟ ಇದ್ದದ್ದೇ. ಅವುಗಳನ್ನ ಈ ಹಬ್ಬದ ಸಂಭ್ರಮದಲ್ಲಿ ಮರೆಯಬೇಕು. ಅದೇ ತಾನೇ ಬದುಕೋದು. ಇಲ್ಲವಾದರೆ ಜೀವನವೇ ಬೇಸರ ಎನಿಸುವುದಿಲ್ಲವಾ?' ಎಂದರು. ಎಂಥಾ ಧನಾತ್ಮಕ ಆಲೋಚನೆ.

ದೀಪಾವಳಿ ಹಬ್ಬ ಬಂದಿದೆ. ನರಕ ಚತುರ್ದಶಿಯ ದಿನ ಶ್ರೀಕೃಷ್ಣ ನರಕಾಸುರನನ್ನು ಕೊಂದ. ಕ್ರೂರ ರಾಜ ಸತ್ತದ್ದಕ್ಕೆ ಜನರೆಲ್ಲಾ ಸಂಭ್ರಮಿಸಿದರು. ಆ ನರಕಾಸುರನಿಂದ ಇಡೀ ರಾಜ್ಯದ ಜನರ ಬದುಕಿಗೇ ಕತ್ತಲೆ ವ್ಯಾಪಿಸಿತ್ತು. ದೀಪಾವಳಿಯ ದಿನ ನರಕಾ ಸುರನ ವಧೆ ಮೂಲಕ ಶ್ರೀಕೃಷ್ಣ ಎಲ್ಲರ ಬಾಳಿನಲ್ಲೂ ಬೆಳಕು ಬಿತ್ತಿದ. ಪುರಾಣದ ಕಥೆಯ ಎಳೆಯನ್ನೇ ತೆಗೆದುಕೊಂಡು ನಮ್ಮ ಬದುಕಿಗೆ ಹೋಲಿಸಿಕೊಳ್ಳೋಣ. ದೀಪಾವಳಿಯ ದಿನ ನಮ್ಮೊಳಗಿನ ಕತ್ತಲೆಯನ್ನು ಕಳೆದುಕೊಳ್ಳಲು ಇರುವ ಅವಕಾಶ.

ಒಟ್ಟಿಗೆ ಸೇರಿ ಆಚರಿಸಿ
ಹಿಂದೆಲ್ಲಾ ಹಬ್ಬದ ದಿನದ ಇಡೀ ಕುಟುಂಬ ಕೂಡಿ ಕೊಳ್ಳುತ್ತಿದ್ದುದಕ್ಕೆ ಇದ್ದ ಒಂದೇ ಕಾರಣ ಸಂಭ್ರಮ. ಎಲ್ಲರೂ ಕೂಡಿ, ಒಂದಿಷ್ಟು ಸಿಹಿ ತಿನಿಸು ಮಾಡಿ ಖುಷಿ ಪಟ್ಟು ತಮ್ಮ ತಮ್ಮ ಖುಷಿಯ ದೀವಿಗೆಗೆ ಶಕ್ತಿ ತುಂಬಿಸಿ ಕೊಳ್ಳುತ್ತಿದ್ದರು. ಮತ್ತಷ್ಟು ದಿನ ಬದುಕಿ, ಮತ್ತೂಂದು ಹಬ್ಬಕ್ಕೆ ಸೇರುತ್ತಿದ್ದರು. ಸುಮಾರು ಮೂರು ತಿಂಗಳಿಗೊಮ್ಮೆ ದೊಡ್ಡ ಹಬ್ಬಗಳಿರುವುದೇ ನಮ್ಮ ನಮ್ಮ ದೀವಿಗೆಯನ್ನು ತುಂಬಿಕೊಳ್ಳಲಿಕ್ಕೆ. ಹಬ್ಬಗಳೆಂದರೆ ತೈಲವಿದ್ದಂತೆ. 
ನಿಮ್ಮದು ಸಣ್ಣ ಕುಟುಂಬ ಎಂದುಕೊಳ್ಳಿ. ಪರವಾಗಿಲ್ಲ, ಎಲ್ಲರೂ ಒಟ್ಟಿಗೇ ಸೇರಿ, ಒಳ್ಳೆ ಉಡುಗೆ ತೊಟ್ಟು, ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ, ಸಂಜೆ ಹೊತ್ತು ಅಂಗಳದಲ್ಲಿ ದೀಪ ಹಚ್ಚಿ ಸಂಭ್ರಮಿಸಿ. ಒಂದುವೇಳೆ, ಮನೆ ಯಲ್ಲೇ ಒಂದಿಬ್ಬರು ಇದ್ದರೆ, ನೆರೆಹೊರೆ ಯವರೊಂದಿಗೆ ಕೂಡಿಕೊಳ್ಳಿ. ಒಟ್ಟೂ ಹಬ್ಬವನ್ನು ಆಚರಿಸದೇ ಇರಬೇಡಿ.


ಧನಾತ್ಮಕ ಶಕ್ತಿ
ನಮ್ಮ ಬದುಕಿನಲ್ಲೂ ಇರುವ ಋಣಾತ್ಮಕ ಚಿಂತನೆಯೇ ಕತ್ತಲೆ. ಅದನ್ನು ಕಳೆದುಕೊಳ್ಳಲು ಧನಾತ್ಮಕ ಚಿಂತನೆಯ ಬೆಳಕನ್ನು ಹೊತ್ತಿಸಿಕೊಳ್ಳಲೇಬೇಕು. ಆ ವಯಸ್ಸಾದ ಹಿರಿಯರ ಮಾತಿನಲ್ಲಿ ಇದೇ ಅರ್ಥ ಇರುವುದು ತಾನೇ. ನಿತ್ಯದ ಜಂಜಾಟ ಇದ್ದೇ ಇದೆ. ಅದೇನೂ ತಪ್ಪುವುದಿಲ್ಲ. ಅದರ ಮಧ್ಯೆ ಈ ಹಬ್ಬದ ಹೆಸರಿನಲ್ಲಾದರೂ ಒಂದು ದಿನ ಖುಷಿ ಯಾಗಿರೋಣ ಎಂದರ್ಥವಲ್ಲವೇ ಅವರ ಮಾತಿನದ್ದು. 

ನಾವು ತಪ್ಪುತ್ತಿರುವುದು ಎಲ್ಲಿ ಎಂದು ಈಗ ಹುಡುಕಿಕೊಳ್ಳೋಣ. ನಿಜ, ನಮ್ಮ ಬದುಕು ನಮ್ಮ ಹಿರಿಯರ ಬದುಕಿಗಿಂತ ಒಂದರ್ಥದ ಬ್ಯುಸಿ ಯಲ್ಲಿ ಸಿಲುಕಿಕೊಂಡಿದೆ. ಬೆಳಗ್ಗೆ ಬೇಗ ಕಚೇರಿಗೆ ಹೊರಟು, ರಾತ್ರಿ ಎಷ್ಟೋ ಹೊತ್ತಿಗೆ ವಾಪಸು ಬಂದು ಮಲಗಿದವರಿಗೆ ಎಲ್ಲ ಬೆಳಗ್ಗೆಗಳೂ ಒಂದೇ. ಹಬ್ಬವೂ ಸಹ. ರಜೆ ದಿನ ಸಿಕ್ಕರೆ ರಿಲ್ಯಾಕ್ಸ್‌ ಮಾಡಿಕೊಳ್ಳೋದಕ್ಕೆ ಎಂದುಕೊಂಡಿದ್ದೇವೆ. ಹಾಗಾಗಿ  ಅಂದು ಹಬ್ಬ ಹರಿದಿನ ಎಂದುಕೊಂಡು ಮತ್ತಷ್ಟು ಕೆಲಸಗಳನ್ನು ಸೃಷ್ಟಿಸಿಕೊಳ್ಳುವುದಕ್ಕಿಂತ ಆರಾಮಾಗಿ ಇರುವುದು ಎಂದು ನಿರ್ಧರಿಸುತ್ತೇವೆ. ಅದರಂತೆಯೇ ಆಚರಿಸುತ್ತಿದ್ದೇವೆ. ಇದರಿಂದ ಆಗುತ್ತಿರುವ ತಪ್ಪು ಏನು ಗೊತ್ತೇ?

ಬಹಳ ಸರಳ. ನಮ್ಮ ದೀವಿಗೆಯ ಬತ್ತಿ ಧನಾತ್ಮಕ ಶಕ್ತಿಯ ತೈಲವಿಲ್ಲದೇ ಒಣಗುತ್ತಿದೆ. ಹೀಗೇ ಮುಂದುವರಿದು ಒಂದು ದಿನ ದೀವಿಗೆಯ ಬೆಳಕು ಆರುತ್ತದೆ. ಆಗ, ನಮಗೆ ಬದುಕು ಬೇಸರವೆನಿಸತೊಡಗುತ್ತದೆ. ನಮ್ಮ ಬದುಕಿಗೆ ಅರ್ಥವೇ ಇಲ್ಲ ಎನಿಸುತ್ತದೆ. ಯಾಂತ್ರಿಕತೆ ಕಿತ್ತು ತಿನ್ನುತ್ತಿದೆ ಎನ್ನಿಸದೇ ಇರದು. ಕ್ರಮೇಣ ಖನ್ನತೆ, ಕೀಳರಿಮೆ ಇತ್ಯಾದಿ ಸಮಸ್ಯೆಗಳು ಆರಂಭವಾಗುತ್ತವೆ. ಅಲ್ಲಿಗೆ ಲೆಕ್ಕ ಹಾಕಿ, ನಾವು ಬೆಳಕಿನಿಂದ ಕತ್ತಲೆಗೆ ಬಂದಂತಲ್ಲವೇ?
ಅದನ್ನೇ ಆ ಹಿರಿಯರು ಹೇಳಿದ್ದು. ನಮ್ಮ ನಿತ್ಯದ ಜಂಜಾಟಗಳನ್ನು ಮರೆಯಲಿಕ್ಕೆಂದೇ ಹಬ್ಬಗಳಿವೆ. ಬನ್ನಿ ಸಡಗರದಿಂದ ಆಚರಿಸೋಣ.

*ಹಬ್ಬಗಳಿರುವುದೇ, ನಿತ್ಯವೂ ಬದುಕಿನಲ್ಲಿ ನೀವು ಗಂಭೀರವಾಗಿದ್ದೀರಿ, ಒಂದು ದಿನ ವಾದರೂ ಲಘುವಾಗಿರಿ (ಖುಷಿ ಖುಷಿ ಯಿಂದ) ಹೇಳಿಕೊಳ್ಳಲಿಕ್ಕೆ. ಅಂದೂ ಯಾಕೆ ಗಂಭೀರವಾಗಿಸಿಕೊಳ್ಳಬೇಕು, ಅಲ್ಲವೇ? ಹತಾಶೆ, ಖನ್ನತೆ ಹಾಗೂ ನಿರಾಶೆ ನಮ್ಮೊಳಗಿನ ಕತ್ತಲೆಯ ರೂಪಗಳು. ಅದನ್ನು ಹೋಗಲಾಡಿಸಲಿಕ್ಕೆ ಧನಾತ್ಮಕತೆಯ ಬೆಳಕು ಬೇಕು. ಹಬ್ಬಗಳು ಅದನ್ನು ನೀಡಬಲ್ಲವು.
*ಕುಟುಂಬದೊಂದಿಗೆ ಬೆರೆತು, ಒಂದಿಷ್ಟು ಹರಟೆ ಹೊಡೆದು, ಖುಷಿ ಖುಷಿಯಾಗಿ ಪರಸ್ಪರ ಭಾವನೆಗಳನ್ನು ಹಂಚಿಕೊಂಡು ಹಗುರವಾದರೆ ಬದುಕು ಬಂಗಾರವಾಗುವುದಿಲ್ಲವೇ? ನಿಜಕ್ಕೂ ಬಂಗಾರವಾಗುವುದು ಹಾಗೆಯೇ.
* ನಂಬುವುದು ಕಷ್ಟ ಎನಿಸಬಹುದು. ಆದರೆ ನಮ್ಮ ಹಿರಿಯರೂ ವರ್ಷಪೂರ್ತಿ ಹಬ್ಬ ಆಚರಿಸುತ್ತಿದ್ದರು. ಒಂದೊಂದು ದಿನಕ್ಕೆ ಒಂದೊಂದು ಮಹತ್ವ ಕೊಡುತ್ತಿದ್ದರು. ಕಾರಣವಿಷ್ಟೇ, ನಿರಾಶೆ, ಹತಾಶೆಯ ಕತ್ತಲೆ ಹತ್ತಿರ ಬಾರದಿರಲೆಂದು.
* ನಾವೀಗ ಟಿವಿ ಮತ್ತು ಮೊಬೈಲ್‌ ಎದುರು ಕುಳಿತು ಹಬ್ಬ ಆಚರಿಸಿ ಬಿಡುತ್ತೇವೆ. ಸಂಜೆ ಲೆಕ್ಕ ಭರ್ತಿಗೆ ಒಂದಿಷ್ಟು ದೀಪ ಹಚ್ಚಿ ಮೂಲೆ ಹಿಡಿಯುತ್ತೇವೆ. ಈ ಬಾರಿಯ ದೀಪಾವಳಿಯನ್ನು ಹಾಗೆ ಮಾಡದಿರೋಣ. ಮತ್ತೆ ಎಂದಿನಂತೆ ಸಡಗರದಿಂದ ದೀಪ ಹಚ್ಚಿ ಸಂಭ್ರಮಿಸೋಣ.
* ಇನ್ನೊಂದು ಮಾತು ಹೇಳ ಬೇಕು. ನಮ್ಮ ಮಕ್ಕಳಲ್ಲೂ ಧನಾತ್ಮಕ ಚಿಂತನೆಯ ಪರಂಪರೆ ಮುಂದುವರಿ ಯಬೇಕಾದರೆ ನಾವು ಹಬ್ಬಗಳನ್ನು ಆಚರಿಸ ಬೇಕು. ಇಲ್ಲವಾದರೆ ಅವರು, ಬರೀ ಊಟ ಮಾಡಿ, ಟಿವಿ ನೋಡಿ ಮಲಗುವುದೇ ಮುಖ್ಯ ಎಂದು ಕೊಂಡುಬಿಡುವ ಅಪಾಯವಿದೆ.  ಮತ್ತೆ ಹಬ್ಬಗಳನ್ನು ನಮ್ಮ ಮನೆಯೊಳಗೆ ಕರೆದು ತಂದರೆ ನಮ್ಮ ಒಂಟಿತನ, ಬೇಸರ ಎಲ್ಲವೂ ಕರಗಿ ಹೋಗುತ್ತದೆ. ಹಬ್ಬಗಳಿಗೆ ಅವುಗಳನ್ನು ಕರಗಿಸುವ ಶಕ್ತಿಯಿದೆ.

ನಿಮ್ಮ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಖನ್ನತೆ, ಆತಂಕ, ಉದ್ವಿಗ್ನತೆಯ ಲಕ್ಷಣ  ಕಂಡುಬಂದರೆ ಈ ನಂಬರ್‌ಗೆ ವಾಟ್ಸ್‌ ಆ್ಯಪ್‌ ಮಾಡಿ ಸಮಸ್ಯೆ ಹೇಳಿಕೊಳ್ಳಿ. ಪರಿಣತರೊಂದಿಗೆ ಚರ್ಚಿಸಿ ಪರಿಹಾರಕ್ಕೆ  ಪ್ರಯತ್ನಿಸುತ್ತೇವೆ. 9964169554

 ಕಡುಶ್ಯಾಮ

Trending videos

Back to Top