CONNECT WITH US  

ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಗೆದ್ದ

ನಮ್ಮಲ್ಲಿ ಅಗತ್ಯವಾಗಿ ಇರಬೇಕಾದುದು ಕಲಿಯಬೇಕು ಎನ್ನುವ ಛಲ, ಗೆಲ್ಲಲೇ ಬೇಕು ಎನ್ನುವ ಹಠ. ಅದನ್ನು ರಕ್ತಗತವಾಗಿಸಿಕೊಂಡಾಗ ಸತತ ಪರಿಶ್ರಮ, ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ. 

ಸುಮಿತ್‌ (ಹೆಸರು ಬದಲಿಸಲಾಗಿದೆ) 9ನೇ ತರಗತಿ ವಿದ್ಯಾರ್ಥಿ. ಎಷ್ಟು ಓದಿದರೂ ನಿರೀಕ್ಷಿಸಿದಷ್ಟು ಅಂಕ ಬರುತ್ತಿರ ಲಿಲ್ಲ. ಹಾಗಂತ ಸುಮಿತ್‌ ಒಳ್ಳೆಯ ಹುಡುಗ, ಕೆಟ್ಟ ಚಟಗಳಿಲ್ಲ. ಟಿವಿ, ಮೊಬೈಲ್‌ ಗೀಳು ಕೂಡ ಇಲ್ಲ. ಆದರೆ ಓದಿದ್ದು ತಲೆಗೆ ಹತ್ತುವುದಿಲ್ಲ.  ಚಿಂತೆಗೀಡಾದ ಹೆತ್ತವರು ಅವನನ್ನು ಆಪ್ತ ಸಮಾ ಲೋಚಕರ ಬಳಿ ಕರೆದು ಕೊಂಡು ಹೋಗುವ ಒಳ್ಳೆಯ ಕೆಲಸ ಮಾಡಿದರು. ಆಪ್ತ ಸಮಾಲೋಚಕಿ ಡಾ| ಸೌಜನ್ಯಾ ಬಾಲಕನನ್ನು ಸಾವಧಾನವಾಗಿ ಮಾತನಾಡಿಸಿದರು. ಅವನ ಓದಿನ ಕ್ರಮದ ಬಗ್ಗೆ ವಿಚಾರಿಸಿದರು. ಅವನು ತಪ್ಪು ವಿಧಾನ ಅಳವಡಿಸಿಕೊಂಡಿರುವುದು ತಿಳಿಯಿತು. ಬಳಿಕ ಅವನಿಗೆ ಸರಿಯಾದ ಓದುವ ಕ್ರಮ, ವೇಳಾಪಟ್ಟಿ, ಓದಿದ್ದನ್ನು ಗಟ್ಟಿ ಮಾಡಿಕೊಳ್ಳುವುದು ಇತ್ಯಾದಿ ತಿಳಿಸಿಕೊಟ್ಟರು. ಈ ಸಲಹೆ ಮತ್ತು ಪೋಷಕರ ಬೆಂಬಲ ದಿಂದ ಅಂತಿಮ ಪರೀಕ್ಷೆ ಯಲ್ಲಿ ಸುಮಿತ್‌ ಶೇ. 65 ಅಂಕ ಗಳಿಸಲು ಸಾಧ್ಯವಾಯಿತು. ಅವನೀಗ ಎಸೆಸೆಲ್ಸಿಯಲ್ಲಿದ್ದು, ಒಳ್ಳೆಯ ಅಂಕ ಗಳಿಸುವ ಆತ್ಮವಿಶ್ವಾಸ ಹೊಂದಿದ್ದಾನೆ.

ನೆನಪಿನ ಶಕ್ತಿ ಹೆಚ್ಚಿಸಲು ಏನು ಮಾಡಬೇಕು?
ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಆಪ್ತ ಸಮಾಲೋಚಕರ ಸಲಹೆ ಇಲ್ಲಿದೆ: 
ಸ್ಮರಣ ಶಕ್ತಿ ಹೆಚ್ಚಿಸಲು ಯಾವುದೇ ಔಷಧ, ಟಾನಿಕ್‌ ಇಲ್ಲ. ಇದನ್ನು ಮೊದಲು ಅರಿಯಿರಿ. 
ಪ್ರಯತ್ನ ನಿರಂತರವಾಗಿರಲಿ
ಓದಿದ್ದನ್ನು ಟಿಪ್ಪಣಿ ಮಾಡಿಕೊಳ್ಳಿ
ಅರ್ಥ ಮಾಡಿಕೊಳ್ಳುತ್ತಾ ಕಲಿಯಿರಿ..
ದಿನಕ್ಕೆ ಕನಿಷ್ಠ 6-7 ಗಂಟೆಗಳ ನಿದ್ದೆ ಅಗತ್ಯ. ಸರಿಯಾದ ಆಹಾರ, ವ್ಯಾಯಾಮವೂ ಬೇಕು. 
ನಿಧಾನ ಕಲಿಕೆಯ ಮಕ್ಕಳನ್ನು ಒಮ್ಮೆ ಶ್ರವಣ ಹಾಗೂ ದೃಷ್ಟಿ ಪರೀಕ್ಷೆಗೆ ಒಳಪಡಿಸುವುದು ಉತ್ತಮ.

ಮರೆವಿಗೆ ಕಾರಣಗಳೇನು?
ಗಮನವಿಲ್ಲದ ಓದು
ವಿಷಯದಲ್ಲಿ ಆಸಕ್ತಿ ಇಲ್ಲದಿರುವುದು
ಭಾವನಾತ್ಮಕ ಸಮಸ್ಯೆ: ಮದ್ಯವ್ಯಸನಿ ತಂದೆ, ತಂದೆ-ತಾಯಿ ಜಗಳ, ದೌರ್ಜನ್ಯಕ್ಕೆ ಒಳಗಾಗಿರುವುದು, ಚಿಕ್ಕ ಮಗುವಿಗೆ  ತಾಯಿ ಹೆಚ್ಚು ಗಮನ ಕೊಡುವುದು...
ಆಸಕ್ತಿಯಿಲ್ಲದ ಸಮಯದಲ್ಲಿ ಓದು.
ದೈಹಿಕವಾಗಿ ದಣಿದಿದ್ದಾಗ ಕಲಿಕೆ.
ಒತ್ತಡ, ಸ್ಪರ್ಧೆಗಳಿಂದ ಭಯ.

ಹೆತ್ತವರು ಏನು ಮಾಡಬೇಕು?
ಮಕ್ಕಳ ಬಗ್ಗೆ ಪ್ರೀತಿಯಿರಲಿ. ಆದರೆ ಅತಿಯಾಗದಿರಲಿ. 
ಮಗುವಿನ ವೇಳಾಪಟ್ಟಿಯನ್ನು ಹೆತ್ತವರೇ ಸಿದ್ಧಪಡಿಸಲಿ.
ಮಕ್ಕಳು ಓದುವಾಗ ಟಿವಿ, ಮೊಬೈಲ್‌ನಿಂದ ದೂರವಿರಿ.
ಅಣ್ಣ, ತಮ್ಮ ಅಥವಾ ಪಕ್ಕದ ಮನೆಯವರೊಂದಿಗೆ ಹೋಲಿಕೆ ಮಾಡಬೇಡಿ. ಬದಲಾಗಿ ಹೀಗೆ ಹೇಳಿ: ಹಿಂದೆ ಉತ್ತಮವಾಗಿ ಕಲಿಯುತ್ತಿದ್ದೆ. ಈಗ ಸ್ವಲ್ಪ ಅಂಕ ಕಡಿಮೆಯಾಗಿದೆ ಅಷ್ಟೆ...
ಮಕ್ಕಳ ಮೇಲಿರುವ ಒತ್ತಡ ಅರ್ಥೈಸಿಕೊಂಡು ಅದನ್ನು ನಿಭಾಯಿಸಲು ಸಣ್ಣ ವಯಸ್ಸಿನಿಂದಲೇ ಹೇಳಿಕೊಡಿ. 

ಮಕ್ಕಳಲ್ಲಿ ವಿಭಿನ್ನ ಪ್ರತಿಭೆ, ಸಾಮರ್ಥ್ಯ ಇರುತ್ತದೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದು. ಒಬ್ಬೊಬ್ಬರು ಒಂದೊಂದು ವಿಚಾರದಲ್ಲಿ ಬುದ್ಧಿವಂತರಾಗಿರುತ್ತಾರೆ. ಅದನ್ನು ನಾವು ಅರಿತುಕೊಂಡು, ಆ ಮಾರ್ಗದಲ್ಲಿ ಮುನ್ನಡೆಯಲು ದಾರಿ ತೋರಿಸಬೇಕು. 
-ಸೌಜನ್ಯಾ ಶೆಟ್ಟಿ , ಆಪ್ತ ಸಮಾಲೋಚಕಿ,  ಡಾ| ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ

ಪಾಸಿಟಿವ್‌ ಕಿರುಕಥೆ
ಪಾಸಿಟಿವ್‌ ಪಟ್ಟು
ಹುಡುಗನೊಬ್ಬ ಜುಡೋ ಕಲಿಯಲು ಹೊರಟ. ಅವನಿಗೆ ಎಡಗೈ ಇರಲಿಲ್ಲ. ಆದರೂ ಅವನನ್ನು ಮಾಸ್ಟರ್‌ ತರಬೇತಿಗೆ ಸೇರಿಸಿಕೊಂಡ.
4 ತಿಂಗಳಲ್ಲಿ ಮಾಸ್ಟರ್‌ ಅವನಿಗೆ ಒಂದು ಪಟ್ಟನ್ನು ಮಾತ್ರ ಕಲಿಸಿದ್ದ. ಹುಡುಗ ಪ್ರಶ್ನಿಸಿದಾಗ "ನೀನು ಕಲಿಯಬೇಕಾದ್ದು ಇದೊಂದೇ ಪಟ್ಟನ್ನು' ಎಂದ ಗುರು. ವರ್ಷದ ಅನಂತರ ಮಾಸ್ಟರ್‌ ಹುಡುಗ ನನ್ನು ಪಂದ್ಯಕ್ಕೆ ಕರೆದೊಯ್ದ. ಎಲ್ಲರನ್ನೂ ಅಚ್ಚರಿಗೊಳಿಸುವಂತೆ ಹುಡುಗ ಫೈನಲ್‌ಗೆ ಬಂದ. ಅಲ್ಲೂ ಗೆದ್ದೇಬಿಟ್ಟ! ಮನೆಗೆ ಬರುವಾಗ ಹುಡುಗ ಕೇಳಿದ, "ಗುರುವೇ, ನೀವು ಕಲಿಸಿದ ಒಂದೇ ಒಂದು ಪಟ್ಟಿನಿಂದ ನಾನು ಗೆದ್ದದ್ದು ಹೇಗೆ?' ಗುರು ಹೇಳಿದ, "ಎರಡು ಕಾರಣ. 1. ನಾನು ಕಲಿಸಿದ್ದು ಅತ್ಯಂತ ಕಷ್ಟದ ಪಟ್ಟು. 2. ಈ ಪಟ್ಟು ಎದುರಿಸಲು ಎದುರಾಳಿಗೆ ಇರುವ ಏಕೈಕ ಮಾರ್ಗ ನಿನ್ನ ಎಡಗೈ ಮಡಚಿ ಬೀಳಿಸುವುದು.' ಹುಡುಗನ ಅತಿದೊಡ್ಡ ಕೊರತೆಯೇ ಅವನ ಅತಿದೊಡ್ಡ ಸಾಮರ್ಥ್ಯವಾಗಿತ್ತು!

ನಿಮ್ಮ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಖನ್ನತೆ, ಆತಂಕ, ಉದ್ವಿಗ್ನತೆಯ ಲಕ್ಷಣ  ಕಂಡುಬಂದರೆ ಈ ನಂಬರ್‌ಗೆ ವಾಟ್ಸ್‌ ಆ್ಯಪ್‌ ಮಾಡಿ ಸಮಸ್ಯೆ ಹೇಳಿಕೊಳ್ಳಿ. ಪರಿಹಾರಕ್ಕೆ  ಪ್ರಯತ್ನಿಸುತ್ತೇವೆ.9964169554

ಪ್ರಶಾಂತ್‌ ಪಾದೆ


Trending videos

Back to Top