CONNECT WITH US  

ಹದಿಹರೆಯಕ್ಕಿರಲಿ ಒಂದು ಬೊಗಸೆ ಹೆಚ್ಚು ಪ್ರೀತಿ

ಮಂಗಳೂರು: ಮಗನಿಗೆ ವಿಪರೀತ ಕೋಪ. ಬುದ್ಧಿಮಾತು ಹೇಳಿದರೆ ಹೌಹಾರುತ್ತಾನೆ. ಏನು ಮಾಡುವುದೆಂದು ತೋಚುತ್ತಿಲ್ಲ ಎಂದು ಗೋಗರೆಯುತ್ತ ವೈದ್ಯರ ಬಳಿ ಬಂದಿದ್ದಳು ಅಮ್ಮ. ಸ್ವಲ್ಪ ಸಮಯ ಕಳೆದು ಮತ್ತೆ ಬಂದ ಆಕೆ ಮಗ ಮೊದಲಿನಂತಾಗಿದ್ದಾನೆ, ತನ್ನ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಾನೆ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಅಷ್ಟಕ್ಕೂ ಇಲ್ಲಿ ಬದಲಾದದ್ದು ಮಗನಲ್ಲ; ಅಮ್ಮ. ಸಿಡುಕುತ್ತಿದ್ದ ಮಗನನ್ನು ಸರಿ ದಾರಿಗೆ ತರುವ ಮದ್ದು  ಅಮ್ಮನ ಮನಃ ಪರಿವರ್ತನೆ ಯಲ್ಲಿತ್ತು. ಅದೇನೆಂದರೆ: ಪ್ರೀತಿ ಮತ್ತು ಶಾಂತಿಯಿಂದ ಮಗ ನೊಂದಿಗೆ ವ್ಯವಹರಿಸುವುದು.

ಹರೆಯದಲ್ಲಿ ಹಾಗೇ. ಏನೇ ಹೇಳಿದರೂ ವಿರುದ್ಧವಾಗಿ ನಡೆದುಕೊಳ್ಳುವುದು ಮಾಮೂಲು. ಕೇಳಿದ್ದನ್ನು ಕೊಡಿಸದಿದ್ದರೆ ಸಿಟ್ಟು, ರೇಗಾಡು ವುದು ಈ ವಯಸ್ಸಿನಲ್ಲಿ ಸಾಮಾನ್ಯ. ಮಕ್ಕಳಲ್ಲಿ ಉಂಟಾಗುವ ಇಂತಹ ಬದಲಾವಣೆಗಳು ಪೋಷಕರಲ್ಲಿ ಆತಂಕ ತರಿಸುತ್ತವೆ. ಹೀಗಾಗಿ ಪೋಷಕರು ಮಕ್ಕಳನ್ನು ತಮ್ಮ ಸ್ವಾಧೀನದಲ್ಲಿ ಇರಿಸಿಕೊಳ್ಳಲು ಬಯಸುತ್ತಾರೆ. ಹದಿಹರಯದಲ್ಲಿ ಹೆದರಿಸಿ, ಬೆದರಿಸಿ ಬುದ್ಧಿ ಹೇಳುವುದರಿಂದ ಮಕ್ಕಳ ಮನೋಭಾವ ಪೋಷಕರ ವಿರುದ್ಧ ತಿರುಗುವುದೇ ಹೆಚ್ಚು. ಹೊಸತನಕ್ಕೆ ಹಾತೊರೆಯುವ ಮನಸ್ಸಿಗೆ ಅಮ್ಮನ ಲಗಾಮು ಬೀಳುತ್ತಿದೆ ಎಂದು ಭಾವಿಸಿದವನು ಕೋಪವನ್ನೇ ಅಸ್ತ್ರವಾಗಿಸಿಕೊಂಡು ಅಮ್ಮನ ವಿರುದ್ಧ ನಡೆಯತೊಡಗಿದ. ಮುಂದಾದದ್ದೆಲ್ಲ ಇದಕ್ಕೆ ವ್ಯತಿರಿಕ್ತ.

ಪ್ರೀತಿಗೆ ಸೋತ ಮಗ
ಮಗನ ವಿಪರೀತ ಸಿಟ್ಟಿನ ಪ್ರವೃತ್ತಿಯಿಂದ ದಿಗಿಲುಗೊಂಡ ಅಮ್ಮ ಮನೋವೈದ್ಯರ ಸಹಾಯ ಯಾಚಿಸಿದರು. ಸಮಸ್ಯೆ ಅರ್ಥ ಮಾಡಿಕೊಂಡ ವೈದ್ಯರು ಮಗ ಮತ್ತು ಅಮ್ಮನನ್ನು ಪ್ರತ್ಯೇಕವಾಗಿ ಕೂರಿಸಿಕೊಂಡು ಆಪ್ತ ಸಮಾಲೋಚನೆ ನಡೆಸಿದರು. ಮಗನನ್ನು ಬೆದರಿಸುವ ಬದಲು ಪ್ರೀತಿ ನೀಡಲು ಅಮ್ಮನಿಗೆ ಸಲಹೆ ನೀಡಿದರು. ಇದು ಹದಿವಯಸ್ಸು, ಇಲ್ಲಿ ಆಕಾಶವೇ ತನ್ನದಾಗಬೇಕೆಂಬ ಹಠ ಸಾಮಾನ್ಯ. ಪ್ರೀತಿಯಿಂದಲೇ ಅವನನ್ನು ಮಾತನಾಡಿಸಿ, ಬೇಕು ಬೇಡಗಳನ್ನು ನಿಧಾನವಾಗಿ ಮನವರಿಕೆ ಮಾಡಲೆತ್ನಿಸಿ. ಆಗುವುದಿಲ್ಲ ಎಂದಾದರೆ ಸರಿಯಾದ ದಾರಿಯಲ್ಲಿ ತಿಳಿಹೇಳಿ. ಈ ಎಲ್ಲ ಸಲಹೆಗಳನ್ನು ಅಮ್ಮ ಪಾಲಿಸಿದಳು. ತನಗೆ ಅಮ್ಮ ಸ್ಪಂದಿಸುತ್ತಿದ್ದಾಳೆ ಎಂಬುದನ್ನು ಅರ್ಥ ಮಾಡಿಕೊಂಡ ಮಗನ ಸಿಟ್ಟು ಕಡಿಮೆಯಾಯಿತು. ಕ್ರಮೇಣ ಅಮ್ಮನ ಪ್ರೀತಿಯ ಮಗನಾದ.

ಪೋಷಕರ ಜವಾಬ್ದಾರಿ
ಮಕ್ಕಳಿಗೆ ಗದರಿಸಿ ಬುದ್ಧಿ ಹೇಳಿದರೆ ಕೋಪ ಹೆಚ್ಚಾಗುತ್ತೆಯೇ ವಿನಾ ಮತ್ತೇನೂ ಪ್ರಯೋಜನವಿಲ್ಲ. ಮಕ್ಕಳು ಖುಷಿಯಾಗಿರುವ ಸಂದರ್ಭದಲ್ಲಿ ಆತ್ಮೀಯವಾಗಿ ಮಾತನಾಡಿ. ಆತ ಕೋಪಿಸಿಕೊಂಡರೆ ತಾಳ್ಮೆ ಕೆಡದಿರಿ. ಮಕ್ಕಳನ್ನು ಪೋಷಕರು ಮುಕ್ತವಾಗಿರಲು ಬಿಡಬೇಕು. ಆತ/ಅವಳು ತಪ್ಪು ದಾರಿ ಹಿಡಿಯುತ್ತಾನೆ ಎಂದು ಗೊತ್ತಾದಾಗ ಗದರಿಸುವ ಬದಲು ಪ್ರೀತಿಯಿಂದ ಮಾತನಾಡಿಸಿ ಮನಸ್ಸು ಪರಿವರ್ತನೆಗೆ ಪ್ರಯತ್ನಿಸಬೇಕು ಎನ್ನುತ್ತಾರೆ ಮನಃಶಾಸ್ತ್ರಜ್ಞ ಡಾ| ರವೀಶ್‌ ತುಂಗಾ.

ಹರೆಯದ ಮಕ್ಕಳ ಮನಸ್ಸು ತುಂಬ ಸೂಕ್ಷ್ಮ. ಅದನ್ನು ತಿಳಿದೇ ವ್ಯವಹರಿಸುವುದು ಹೆತ್ತವರಿಗಿಬೇಕಾದ ಜಾಣತನ. ಇದೇ  ಮಕ್ಕಳನ್ನು ಸರಿದಾರಿಗೆ ತರುವ ಗುಟ್ಟು.

ಮಕ್ಕಳ ವಿಷಯದಲ್ಲಿ ಪೋಷಕರು ಎಂದೂ ದುಡುಕಬಾರದು. ಹರೆಯದಲ್ಲಂತೂ ಈ ತಪ್ಪು ಮಾಡಲೇಬಾರದು. ಮಕ್ಕಳು ದಾರಿ ತಪ್ಪಿದ್ದಾರೆಂದು ತಿಳಿದಾಕ್ಷಣ ಬೈಯುವುದರಿಂದ ಮತ್ತೆ ಅದೇ ದಾರಿಯತ್ತ ಸಾಗುವುದೇ ಹೆಚ್ಚು. ಬದಲಾಗಿ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ನಿಧಾನವಾಗಿ ಬದಲಾಯಿಸ‌ಬೇಕು.
-ಡಾ| ರಮೀಳಾ ಶೇಖರ್‌, ಮನಃಶಾಸ್ತ್ರಜ್ಞರು

ಮನೋ ಕೌಶಲ
ಪ್ರಶ್ನೆ - 1: ನನ್ನ ಸಂಬಂಧಿ 8 ನೇ ತರಗತಿ ಓದುತ್ತಿದ್ದು, ಆತನಿಗೆ ಓದಿನಲ್ಲಿ ಅತೀವ ನಿರಾಸಕ್ತಿ ಕಂಡು ಬರುತ್ತಿದೆ. ಇದಕ್ಕೆ ಏನಾದರೂ ಪರಿಹಾರ ಸೂಚಿಸಿ. 
ಉತ್ತರ: ಇದಕ್ಕೆ ಆತ ಬೆಳೆಯುತ್ತಿರುವ ವಾತಾವರಣ ಅಥವಾ ಹೆತ್ತವರು ಕೂಡ ಕಾರಣ ಇರಬಹುದು. ಕೌನ್ಸಿಲಿಂಗ್‌ ಪಡೆಯುವುದು ಉತ್ತಮ. 
ಪ್ರಶ್ನೆ - 2 : ನಾನು ಬದುಕು ಬದಲಿಸೋಣ ಅಂಕಣ ಓದಿದೆ. ನನಗೆ ಚೆನ್ನಾಗಿ ಓದಿದರೂ ಉತ್ತಮ ಅಂಕಗಳನ್ನು ಪಡೆಯಲು ಆಗುತ್ತಿಲ್ಲ. ಇದಕ್ಕೆ ಏನು ಮಾಡಬೇಕು?
ಉತ್ತರ: ನೀವು ಚೆನ್ನಾಗಿಯೇ ಓದುತ್ತಿದ್ದರೂ, ಬಹುಶಃ ತಪ್ಪಾದ ವಿಧಾನವನ್ನು ಅನುಸರಿಸುತ್ತಿದ್ದೀರಿ.  ತಜ್ಞರ, ಬಳಿ ವಿಚಾರಿಸಿ ಉತ್ತಮ ಕಲಿಕಾ ವಿಧಾನ ಅಳವಡಿಸಿಕೊಳ್ಳುವುದು ಉತ್ತಮ. 
ಉತ್ತರಿಸಿದವರು: ಸೌಜನ್ಯಾ ಶೆಟ್ಟಿ 
ಆಪ್ತ ಸಮಾಲೋಚಕಿ, ಡಾ| ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ

ಪ್ರಶ್ನೆಗಳನ್ನು  ಈ ವಾಟ್ಸ್‌ ಆ್ಯಪ್‌ ನಂಬರ್‌ಗೆ ಕಳುಹಿಸಿ. ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇವೆ. 9964169554

ಧನ್ಯಾ ಬಾಳೆಕಜೆ


Trending videos

Back to Top