CONNECT WITH US  

ಒಂಟಿತನದೆಡೆಗೆ ತಳ್ಳದಿರಲಿ ಅತಿ ಆತ್ಮವಿಶ್ವಾಸ

ಕುಂದಾಪುರ: ಮಹೇಶ ಎಲ್ಲದರಲ್ಲೂ ಮುಂದು. ಸದಾ ಚುರುಕು. ಅಷ್ಟೇ ಅಲ್ಲ, ತನಗೇ ಎಲ್ಲ ಗೊತ್ತು, ಇತರರಿಗೆ ಏನೂ ಗೊತ್ತಿಲ್ಲ ಎಂಬ ಸ್ವಭಾವ. ತಾನು ಮಾಡಿದ್ದೇ ಸರಿ, ಪರಿಶೀಲಿಸುವ ಅಗತ್ಯ ಇಲ್ಲ ಎಂಬ ಹಠ. ಈ ಅತಿ ಆತ್ಮವಿಶ್ವಾಸದಿಂದ ಮಾಡದ ತಪ್ಪಿಗಾಗಿ ಮೇಲಧಿಕಾರಿಗಳಿಂದ ದಂಡನೆಗೆ ಒಳಗಾಗಿ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬಂತು. ಕಾಡುವ ಒಂಟಿತನ ಬದುಕನ್ನು ಮೂರಾಬಟ್ಟೆ ಮಾಡಿತು. ಅತಿಯಾದ ವಿಶ್ವಾಸ ಜೀವನದ ಡೋಲಾಯಮಾನ ಸ್ಥಿತಿಗೆ ಕಾರಣವಾಯಿತು.

ಆತ್ಮವಿಶ್ವಾಸ ಬೇಕು. ಆದರೆ ಅತಿ ಒಳ್ಳೆಯದಲ್ಲ. ಅದು ಒಂದಲ್ಲ ಒಂದು ದಿನ ಕೆಡುಕನ್ನು ತರ ಬಲ್ಲುದು. ಅತಿಯಾದ ಆತ್ಮವಿಶ್ವಾಸ ದಿಂದ ವ್ಯಕ್ತಿ ವಿವೇಕರಹಿತ, ವಿವೇಚನಾ ರಹಿತನಾಗುತ್ತಾನೆ. ಕಾರ್ಯ ಕ್ಷಮತೆ ಕುಂಠಿತವಾಗಿ ಅತಿ  ಬೇಗ ಖನ್ನತೆಗೆ ಒಳಗಾಗುತ್ತಾನೆ. ಜೀವನದಲ್ಲಿ ಸೋಲುತ್ತಾನೆ. 

ಲಕ್ಷಣಗಳು
ಅತಿಯಾದ ಆತ್ಮವಿಶ್ವಾಸ ಇರು ವವರು ತಾವು ಸರ್ವಜ್ಞರೆಂದು ಭಾವಿಸಿ ಹಾಗೆ ಬಿಂಬಿಸಿಕೊಳ್ಳುತ್ತಾರೆ. ತನ್ನ ಕೆಲಸವೇ ಶ್ರೇಷ್ಠ, ಇತರರದ್ದೆಲ್ಲ ಕನಿಷ್ಠ ದರ್ಜೆಯವು ಎಂಬ ಭ್ರಮೆಯಲ್ಲಿರುತ್ತಾರೆ. 
ಸೋಲಿಗೊಂದು ಸಮರ್ಥನೆ ಕೊಡುವುದು, ಸೋಲಿನ ಭಾರವನ್ನು ಇತರರ ಹೆಗಲಿಗೆ ಹೊರಿಸುತ್ತಾರೆ. 
ಸಣ್ಣ ಯಶಸ್ಸಿಗೆ ಸಿಕ್ಕ ಪ್ರೋತ್ಸಾಹವನ್ನು ವಿವೇಚನಾ ರಹಿತವಾಗಿ ಬಳಸಿಕೊಂಡು ದೊಡ್ಡ ಕಾರ್ಯದಲ್ಲಿ ಸೋಲುತ್ತಾರೆ. 

ಪಟ್ಟಣದಲ್ಲಿ ಬೇರೆಯವರ ಕೈ ಕೆಳಗೆ ಕೆಲಸ ಮಾಡಿದರೂ ಚಿಂತಿಲ್ಲ, ಹಳ್ಳಿಯಲ್ಲಿ ಸ್ವಂತ ಉದ್ಯಮಿಯಾಗಿರುವುದು ಸರಿಯಲ್ಲ ಎಂಬಂತಹ ಮನೋಸ್ಥಿತಿಯವ ರಾಗಿರುತ್ತಾರೆ. ಸಾಮರ್ಥ್ಯ ಇಲ್ಲದೆ ಪೈಪೋಟಿಗೆ ಇಳಿಯುತ್ತಾರೆ.
ತನಗಿಂತ ಸಾಮರ್ಥ್ಯವಂತರು ಯಾರೂ ಇಲ್ಲ ಎಂಬ ಆಕಾಶಬುಟ್ಟಿಯಲ್ಲಿ ತೇಲುತ್ತಿರುತ್ತಾರೆ. 

ಪರಿಣಾಮಗಳು
ಆತ್ಮವಿಶ್ವಾಸದ ಕೊರತೆ ಉಂಟಾದಾಗ ಮನಸ್ಸು ದುರ್ಬಲವಾಗಿ ವ್ಯಕ್ತಿ ಖನ್ನತೆಗೆ ಒಳಗಾಗುತ್ತಾನೆ. ಆರ್ಥಿಕ ಅಪರಾಧ, ಕ್ರಿಮಿನಲ್‌ ಅಪರಾಧ, ಸಾಂಸಾರಿಕ ಅಪರಾಧ, ಸಾಮಾಜಿಕ ಅಪರಾಧಗಳಿಗೆ ಕಾರಣನಾಗುತ್ತಾನೆ.

ಸೋಲು ಹೇಗಾಗುತ್ತದೆ?
ಮಕ್ಕಳ ಉದಾಹರಣೆ:
ದಿನದಿನ ಅಭ್ಯಾಸ ಮಾಡದೇ ಕೊನೆಯ ಓದಿಗಾಗಿ ಕಾಯುವುದು. ಏನಿದೆ, ಎಷ್ಟಿದೆ ಎಂಬ ತಾತ್ಸಾರ, ತನಗೆಲ್ಲ ಗೊತ್ತಿದೆ ಎಂಬ ಅತಿವಿಶ್ವಾಸ. ಒಮ್ಮೆಲೆ ಅಷ್ಟನ್ನೂ ಕಲಿಯಲು ಅಸಾಧ್ಯವಾದಾಗ ಭಯ ಕಾಡುತ್ತದೆ, ಪ್ರಶ್ನೆ ಪತ್ರಿಕೆ ನೋಡಿದಾಗ ತಲೆ ತಿರುಗುತ್ತದೆ, ಕಾಯಿಲೆ ಬಂದಂತಾಗುತ್ತದೆ. ದೊಡ್ಡವರ ಉದಾಹರಣೆಯಾದರೆ; ತನಗೆಲ್ಲ ತಿಳಿದಿದೆ ಎಂಬ ಅತಿವಿಶ್ವಾಸದಿಂದ ಹೋದಾಗ ಎದುರಿನವನ ಬೌದ್ಧಿಕ ಬಂಡವಾಳ ಕಂಡಾಗ ಅಕ್ಷರಶಃ ಮೂಕನಾಗುತ್ತಾನೆ. ತನಗಿಂತ ಇತರರ ಸಾಮರ್ಥ್ಯ ಹೆಚ್ಚಿದೆ ಎಂದು ತಿಳಿದಾಗ ತನ್ನಿಂದ ಆಗುವುದಿಲ್ಲ ಎಂದು ಖನ್ನತೆಗೆ ಒಳಗಾಗುತ್ತಾನೆ, ಅವಮಾನಕ್ಕೀಡಾಗುತ್ತಾನೆ. 

ಹೇಗೆ ಉಂಟಾಗುತ್ತದೆ?
ಮನಶಾÏಸ್ತ್ರಜ್ಞ ಡಾ| ಕಾರಂತರ ಪ್ರಕಾರ ಹೆತ್ತವರು ಮಕ್ಕಳಲ್ಲಿ ಇಲ್ಲದ ಸಾಮರ್ಥ್ಯವನ್ನು ಬಿಂಬಿಸುತ್ತಾರೆ. ಈ ವಿಶ್ವಾಸದ ಗುಳ್ಳೆ ಒತ್ತಡ ಬಂದಾಗ ಒಡೆದು ಮನೋವ್ಯಾಧಿಗೆ ಕಾರಣವಾಗಬಹುದು. ಮನಶಾÏಸ್ತ್ರಜ್ಞೆ ಡಾ| ಮಹಿಮಾ ಅವರ ಪ್ರಕಾರ, ಅತಿವಿಶ್ವಾಸ ತುಂಬುವ ಕಾರ್ಯ  ತುಲನೆ ಮೂಲಕ ಎಳವೆಯಲ್ಲೇ ನಡೆಯುತ್ತದೆ. ಆ ಮಕ್ಕಳು ಸಮಾಜದಲ್ಲಿ ಬೆರೆಯದೇ, ಮುಂದೆ ಹೆಚ್ಚು ಸಾಮರ್ಥ್ಯದವರನ್ನು ಕಂಡು ಅಪಯಶಸ್ಸು ತಂದುಕೊಳ್ಳುತ್ತಾರೆ.

ಏನು ಮಾಡಬಹುದು?
"ಕನಿಷ್ಠ ಆತಂಕ' ಇದ್ದಾಗ ನಾವು ಜವಾಬ್ದಾರಿ ಯುತವಾಗಿ ನಡೆಯುತ್ತೇವೆ. ನಿರೀಕ್ಷೆಗೂ ಮೀರಿದ ಆತಂಕ ಯಶಸ್ಸಿಗೆ ತೊಡಕುಂಟುಮಾಡುತ್ತದೆ. ವ್ಯಕ್ತಿತ್ವ  ದೋಷ, ಸಣ್ಣ ಯಶಸ್ಸಿಗೆ ಸಿಕ್ಕ ಅತಿ ಪ್ರೋತ್ಸಾಹ ವಿವೇಚನಾರಹಿತವಾಗಿ ದೊಡ್ಡ ಸಾಹಸಕ್ಕೆ ಕೈ ಹಾಕಿ ಸೋಲಲು ಕಾರಣವಾಗುತ್ತದೆ. ಅದಕ್ಕಾಗಿ ನಮ್ಮ ಕಾರ್ಯಕ್ಷಮತೆಯನ್ನು ವಿವೇಚನೆಗೆ ಒಳಪಡಿಸಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಆಕಾಂಕ್ಷೆ ಬೇಕು, ಮಹತ್ವಾಕಾಂಕ್ಷೆ ಸಲ್ಲದು. 

ನನಗೆ ಸಾಧ್ಯವಿದೆ ಎನ್ನುವುದು ವಿಶ್ವಾಸ. ನನಗೆ ಎಲ್ಲವೂ ಸಾಧ್ಯವಿದೆ. ನಾನೇ ಮಾಡುತ್ತೇನೆ ಎನ್ನುವುದು ಅತಿ ವಿಶ್ವಾಸ. ಇದು ಕೆಟ್ಟದ್ದು. ಇದನ್ನು  ಕಿತ್ತು ಹಾ ಕಿದಾಗಲೇ ಯಶಸ್ಸು.

ಮಕ್ಕಳಲ್ಲಿ ಸಂಸ್ಕಾರ, ಜೀವನ ಮೌಲ್ಯಗಳನ್ನು ತುಂಬಿಸಿದರೆ ಅವರು ಬದುಕಿನಲ್ಲಿ ಸಾಮರ್ಥ್ಯ ವಂತರಾಗುತ್ತಾರೆ. ಬದಲಾಗಿ ಸುಳ್ಳು ನೆಲೆಗಟ್ಟಿನ ಪ್ರೋತ್ಸಾಹ ಕೊಡಬಾರದು. ಇವತ್ತಿನ ಬದುಕು ನಾಳೆಗೆ ದಾರಿದೀಪ ವಾಗಬೇಕು. ತನ್ನ ಗುಣದೋಷಗಳನ್ನು ಪ್ರಾಮಾಣಿಕವಾಗಿ ಅರ್ಥ ಮಾಡಿಕೊಳ್ಳುವ ಒಳನೋಟ ಹೊಂದಿರಬೇಕು.
- ಡಾ| ಕೆ.ಎಸ್‌. ಕಾರಂತ, ಕುಂದಾಪುರ

 

ಮಕ್ಕಳು ಮಾಡಿದ್ದು ಪ್ರತಿಯೊಂದೂ ಸರಿ ಎನ್ನಬೇಡಿ. ತಪ್ಪನ್ನು ತಿಳಿಹೇಳಿ. ಇತರ ಮಕ್ಕಳ ಜತೆ ಬೆರೆಯಲು ಕಲಿಸಿ. ಹಂಸಕ್ಷೀರ ನ್ಯಾಯದಂತೆ ಸಮಾಜದಲ್ಲಿನ ಒಳಿತನ್ನು ಮಾತ್ರ ಸ್ವೀಕರಿಸಿ, ಕೆಡುಕನ್ನು ಬಿಡಿ. ನಿನಗೊಬ್ಬನಿಗೇ ಎಲ್ಲವೂ ತಿಳಿದದ್ದು ಎಂಬ ಭ್ರಮೆಯ ಕೋಟೆಯಲ್ಲಿ ಮಕ್ಕಳನ್ನು ಬೆಳೆಸಬೇಡಿ. ವಾಸ್ತವ ಜಗತ್ತಿನಲ್ಲಿ ಬದುಕಲು ಬಿಡಿ.
- ಡಾ| ಮಹಿಮಾ, ಕೋಟೇಶ್ವರ

-  ಲಕ್ಷ್ಮೀ ಮಚ್ಚಿನ

Trending videos

Back to Top