CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಎತ್ತಿನಹೊಳೆ ಪೈಪಿನಲ್ಲಿ ಸಮುದ್ರದ ನೀರು!

ಬೆಳ್ತಂಗಡಿ: ಎತ್ತಿನಹೊಳೆ ಪೈಪಿನಲ್ಲಿ ಸಮುದ್ರದ ನೀರು ಕೊಂಡೊಯ್ಯಲು ಸಿದ್ಧತೆ ನಡೆದಿದೆ. ಇದೊಂದು ರೀತಿಯಲ್ಲಿ ಯುದ್ಧಕ್ಕೆ ಮುನ್ನವೇ ಶಸ್ತ್ರ ಸನ್ಯಾಸ ಮಾಡಿದಂತೆ! ಸ್ಟೀಲ್‌ ಬ್ರಿಜ್‌ ಕಿಕ್‌ಬ್ಯಾಕ್‌ ಆರೋಪದಿಂದ ಕಂಗೆಟ್ಟ ಸರಕಾರ ಸೇತುವೆಗೆ ತಳಪಾಯ ಹಾಕಲೇ ಇಲ್ಲ. ಎತ್ತಿನಹೊಳೆ ಯೋಜನೆಯಲ್ಲೂ ಕಿಕ್‌ಬ್ಯಾಕ್‌ನ ಆಪಾದನೆ ಬಂತು. ಇದು ರಾದ್ಧಾಂತ ಆದರೆ ಮುಖಕ್ಷೌರ ಆಗುತ್ತದೆ ಎಂದು ತಿಳಿದ ಸರಕಾರ ಈಗ ಎತ್ತಿನಹೊಳೆ ಯೋಜನೆಗೆ ಅಳವಡಿಸುವ ಪೈಪಿನಲ್ಲಿಯೇ ಮಂಗಳೂರು ಭಾಗದಿಂದ ಬೆಂಗಳೂರು ಕಡೆಗೆ ಸಮುದ್ರದ ಸಂಸ್ಕರಿಸಿದ ನೀರು ಕೊಂಡೊಯ್ಯುವ ಯೋಚನೆ ಮಾಡಿದೆ.

ಈ ಮೂಲಕ ಎತ್ತಿನಹೊಳೆಯಲ್ಲಿ ನೀರು ದಕ್ಕದು ಎಂಬುದನ್ನು ಪರೋಕ್ಷವಾಗಿ ಒಪ್ಪಿದಂತಾಗಿದೆ. ಯೋಜನೆಗಾಗಿ ಮಾಡುತ್ತಿರುವ 13 ಸಾವಿರ ಕೋ.ರೂ. ವ್ಯರ್ಥವಾಗುವುದನ್ನು ತಪ್ಪಿಸಲು ದಾರಿ ಕಂಡುಕೊಂಡಿದೆ. ಅಷ್ಟೇ ಅಲ್ಲ ಈಗಾಗಲೇ 1,800 ಕೋ.ರೂ. ಮುಗಿಸಿದ್ದು, ತಡೆಗೋಡೆಗಳ ನಿರ್ಮಾಣ ಮುಗಿಸಿದೆ. ಈ ತಡೆಗಳು ಹೇಗೂ ಉಪಯೋಗ ರಹಿತವಾಗುತ್ತವೆ. ಹಾಗಂತ ಮುಂದುವರಿಕಾ ಅನುದಾನ ಬಿಡುಗಡೆ ಮಾಡಲೊಂದು ದಾರಿಯೂ ಬೇಕಿದೆ.

ಆದ್ದರಿಂದ ಈ ಎಲ್ಲ ಸಾಧ್ಯತೆಗಳನ್ನು ಮನಗಂಡೇ ಇಂತಹ ಯೋಚನೆಗೆ ತಲೆಕೆರೆದುಕೊಳ್ಳಲಾಗುತ್ತಿದೆ. ಸಮುದ್ರದ ನೀರು ಕುಡಿಯಲು ಯೋಗ್ಯವಾಗಿಸುವ ತಂತ್ರಜ್ಞಾನ ಯಶಸ್ವಿಯಾದರೆ ಉಡುಪಿ, ಮಂಗಳೂರಿನಲ್ಲಿ ನೀರು ಸಂಸ್ಕರಿಸಿ ಎತ್ತಿನಹೊಳೆ ಪೈಪ್‌ಲೈನ್‌ ಮೂಲಕ ಕೋಲಾರದ ಕೆಜಿಎಫ್ಗೆ ಒದಗಿಸುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ತಿಳಿಸಿದ್ದಾರೆ.

'ನವನಗರ'ಕ್ಕೆ ಕರಾವಳಿಯ ನೀರು
ಬೆಂಗಳೂರಿನ ಒತ್ತಡ ತಗ್ಗಿಸಲು ಆಂಧ್ರದ ಅಮರಾವತಿ ಮಾದರಿಯಲ್ಲೇ ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ 11,000 ಎಕ್ರೆ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 20 ಲಕ್ಷ ಜನವಸತಿಗೆ ಅವಕಾಶವುಳ್ಳ 'ನವನಗರ' ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಈ ಕಾಮಗಾರಿಯ ಗುತ್ತಿಗೆ ಸ್ಟೀಲ್‌ ಬ್ರಿಜ್‌ ಗುತ್ತಿಗೆದಾರನಿಗೆ ಹೋಗಬಹುದೇ ಎಂದು ಹೋರಾಟಗಾರರು ಪ್ರಶ್ನಿಸಿ ಹಣ ಸಂದಾಯ ವಿಚಾರವನ್ನು ಜೀವಂತವಾಗಿಟ್ಟಿದ್ದಾರೆ.

ವ್ಯರ್ಥ ಕಾಮಗಾರಿಯೇ
ನೀರಿಲ್ಲ ಎಂದು ಸರಕಾರ ಪರೋಕ್ಷವಾಗಿ ಒಪ್ಪಿಕೊಂಡಿದ್ದರೂ ಇನ್ನೊಂದೆಡೆ ಎತ್ತಿನಹೊಳೆಯ ಕಾಮಗಾರಿ ಮಾತ್ರ ನಡೆಯುತ್ತಲೇ ಇದೆ. ಎತ್ತಿನಹೊಳೆ ಯೋಜನೆಯ ಪ್ಯಾಕೇಜ್‌ 1ರ ವಿಯರ್‌ ನಿರ್ಮಾಣ, ರೈಸಿಂಗ್‌ ಮೈನ್‌ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಪ್ಯಾಕೇಜ್‌ 2ರ ಪಂಪ್‌ಹೌಸ್‌ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಎಂಟು ನೀರು ಕೊಯ್ಲು ನಿರ್ಮಾಣಗಳ ಪೈಕಿ 6 ಪೂರ್ಣಗೊಂಡಿವೆ. ಬರುವ ಮುಂಗಾರಿನಲ್ಲಿ ನೀರು ಶೇಖರಿಸಿ ಮುಖ್ಯ ಕಾಲುವೆಯ ಇಕ್ಕೆಲಗಳಲ್ಲಿ ಬರುವ ಒಣಗಿದ ಕೆರೆಗಳಿಗೆ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ್‌ ಸೂಚಿಸಿದ್ದು, ಎತ್ತಿನಹೊಳೆ ಕಾಮಗಾರಿ ಕುಡಿಯುವ ನೀರಿಗೋ ಕೃಷಿಗೋ ಕೈಗಾರಿಕೆಗೋ ಎಂಬ ಅನುಮಾನ ಇನ್ನೂ ಉಳಿದಿದೆ.

ಭೂಸ್ವಾಧೀನ
ಕಾಮಗಾರಿಗೆ ಸಕಲೇಶಪುರದ 23 ಗ್ರಾಮಗಳ 629 ಎಕರೆ ಮತ್ತು 38.5 ಗುಂಟೆ ಜಮೀನಿನ ಆವಶ್ಯಕತೆಯಿದೆ. ಇದಕ್ಕೂ ಮುನ್ನ ಸಾಮಾಜಿಕ ಪರಿಣಾಮಗಳ ಅಧ್ಯಯನ ನಡೆಸಬೇಕಿದೆ. ಇದಕ್ಕಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಎಂಜಿನಿಯರ್‌ ಅಧ್ಯಕ್ಷತೆಯ ಸಮಿತಿ ರಚನೆಯಾಗಿದೆ. ಸಮಾಜಶಾಸ್ತ್ರಜ್ಞರು, ಸ್ವಯಂಸೇವಾ ಸಂಸ್ಥೆ ಪ್ರತಿನಿಧಿ, ಗ್ರಾ.ಪಂ. ಅಧ್ಯಕ್ಷ, ಸದಸ್ಯರು, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಸಮಿತಿಯಲ್ಲಿದ್ದಾರೆ. ಈ ಪೈಕಿ 20 ಗ್ರಾಮಗಳಲ್ಲಿ ಸಮಿತಿ ತಿರುಗಾಟ ನಡೆಸಿ ವರದಿ ಸಂಗ್ರಹಿಸಿದೆ. ಸಂತ್ರಸ್ತ ಕುಟುಂಬಗಳ ಭೂದಾಖಲೆಗಳ ಪರಿಶೀಲನೆ ನಡೆಸಿದೆ. ಸಾಮಾಜಿಕ ಪರಿಣಾಮ ನಿರ್ಧಾರ ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕಿದೆ. ವರದಿ ಅನಂತರ ವಿಶೇಷ ಗ್ರಾಮಸಭೆ ನಡೆಯಬೇಕಿದೆ. ಒಂದೆಡೆ ಈ ಪ್ರಕ್ರಿಯೆ ಜಾರಿಯಲ್ಲಿದ್ದರೆ ಇನ್ನೊಂದೆಡೆ ಕಾಮಗಾರಿ ಮುಂದುವರಿಯುತ್ತಲೇ ಇದೆ.

ಕಾಮಗಾರಿ ಆಗಿರುವುದೆಷ್ಟು ?
ಪ್ಯಾಕೇಜ್‌ 1ರಲ್ಲಿ ಬೆಂಗಳೂರಿನ ಅಮೃತಾ ಕನ್‌ಸ್ಟ್ರಕ್ಷನ್‌ ಪ್ರೈ.ಲಿ. ಅವರಿಗೆ 448 ಕೋ. ರೂ.ಗೆ ಟೆಂಡರ್‌ ಆಗಿದ್ದು, ಕುಂಬರಡಿ ಎಸ್ಟೇಟ್‌ನಲ್ಲಿ ಮೊದಲ ತಡೆಗೋಡೆ ಹಾಗೂ ದೇವಿಹಳ್ಳಿ, ಕುಂಬರಡಿ ಎಸ್ಟೇಟ್‌ನಲ್ಲಿ ಪೈಪು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಪ್ಯಾಕೇಜ್‌ 2ರಲ್ಲಿ ಜಿ. ಶಂಕರ್‌ 685.79 ಕೋ. ರೂ.ಗೆ ಟೆಂಡರ್‌ ವಹಿಸಿಕೊಂಡಿದ್ದು, ದೇವಿಹಳ್ಳಿ, ಹೆಬ್ಸಾಲೆ, ಕುಂಬರಡಿ ಎಸ್ಟೇಟ್‌ನಲ್ಲಿ ಪೈಪು ಅಳವಡಿಕೆ, ಕುಂಬರಡಿ ಎಸ್ಟೇಟ್‌ನಲ್ಲಿ ಜ್ಯಾಕ್‌ವೆಲ್‌ ಮತ್ತು ಪಂಪ್‌ಹೌಸ್‌ ನಿರ್ಮಾಣ ನಡೆಯುತ್ತಿದೆ.

ಪ್ಯಾಕೇಜ್‌ 3ರಲ್ಲಿ ಹೈದರಾಬಾದ್‌ನ ಮೇಘಾ ಎಂಜಿನಿಯರಿಂಗ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ. ಅವರಿಗೆ 1,135 ಕೋ. ರೂ.ಗೆ ಟೆಂಡರ್‌ ವಹಿಸಲಾಗಿದ್ದು, ಹೆಬ್ಬನಹಳ್ಳಿ ಹಾಗೂ ಮಾಸವಳ್ಳಿ ಗ್ರಾಮದಲ್ಲಿ ಪೈಪು ಅಳವಡಿಕೆ, 4 ವಿತರಣಾ ತೊಟ್ಟಿ ನಿರ್ಮಾಣ ಕಾರ್ಯ ನಡೆದಿದೆ.

ಪ್ಯಾಕೇಜ್‌ 4ರಲ್ಲಿ ಜಿವಿಪಿಆರ್‌ ಎಂಜಿನಿಯರ್ಸ್‌ ಲಿ. 903 ಕೋ. ರೂ.ಗೆ ಟೆಂಡರ್‌ ವಹಿಸಿಕೊಂಡಿದ್ದು, ಹಿರಿದನಹಳ್ಳಿ, ಕಡಗರಹಳ್ಳಿ, ಆಲುವಳ್ಳಿ ಗ್ರಾಮದಲ್ಲಿ 6, 7, 8ನೇ ತಡೆಗೋಡೆ ಹಾಗೂ ಪಂಪ್‌ಹೌಸ್‌ ನಿರ್ಮಾಣ, ಪೈಪು ಅಳವಡಿಕೆ ಕಾರ್ಯ ನಡೆಯುತ್ತಿದೆ.

ಪ್ಯಾಕೇಜ್‌ 5ರಲ್ಲಿ ಹೈದರಾಬಾದ್‌ನ ಐವಿಆರ್‌ಸಿಎಲ್‌ನವರು 543 ಕೋ.ರೂ.ಗೆ ಟೆಂಡರ್‌ ವಹಿಸಿಕೊಂಡಿದ್ದು, ಹೆಬ್ಸಾಲೆ, ಕುಂಬರಡಿ, ನಡಹಳ್ಳಿ ಗ್ರಾಮಗಳಲ್ಲಿ ಪೈಪು ಅಳವಡಿಕೆ ಹಾಗೂ ಕಾಡುಮನೆ ಎಸ್ಟೇಟ್‌ನಲ್ಲಿ 4ನೇ ತಡೆಗೋಡೆ ಮತ್ತು ಪಂಪ್‌ಹೌಸ್‌ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ.

- ಲಕ್ಷ್ಮೀ ಮಚ್ಚಿನ

Back to Top