CONNECT WITH US  

ರೈತರ ಸಾಲಮನ್ನಾಕ್ಕೆ 36ನೇ ನೆಕ್ಕಿಲಾಡಿ ಗ್ರಾ.ಪಂ. ಆಗ್ರಹ

ಉಪ್ಪಿನಂಗಡಿ : ರೈತರ ಸಾಲಮನ್ನಾ ಮಾಡುವಂತೆ ಸರಕಾರವನ್ನು ಆಗ್ರಹಿಸಿ 36ನೇ ನೆಕ್ಕಿಲಾಡಿ ಗ್ರಾ.ಪಂ. ಗ್ರಾಮಸಭೆ ನಿರ್ಣಯ ಅಂಗೀಕರಿಸಿದೆ.

ಗ್ರಾ.ಪಂ. ಅಧ್ಯಕ್ಷೆ ರತಿ ಎಸ್‌. ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಂಚಾಲಕ ರೂಪೇಶ್‌ ರೈ ಅಲಿಮಾರ್‌ ಮಾತನಾಡಿ, ನಾಡಿನ ರೈತರು ತೀವ್ರ ಸಂಕಷ್ಟದಲ್ಲಿದ್ದು, ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ತೀರಿಸದಂತಹ ಸ್ಥಿತಿಯಿದೆ. ಆದರೆ ರೈತರ ಬೆಂಬಲಕ್ಕೆ ಸರಕಾರಗಳು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಕೋರಿ ನಿರ್ಣಯ ಅಂಗೀಕರಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ
ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್‌ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಅಬ್ದುರ್ರಹ್ಮಾನ್‌ ಯುನಿಕ್‌ ಒತ್ತಾಯಿಸಿದರು. ಕುಮಾರಧಾರಾ ನದಿಯ ಹಳೆಯ ಸೇತುವೆಯ ಬಳಿ ನದಿಗೆ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ. ಹೊಟೇಲ್‌, ಅಂಗಡಿಯವರು ಇಲ್ಲಿಗೆ ತಂದು ಕಸ ಸುರಿಯುತ್ತಾರೆ. ಆದ್ದರಿಂದ ಅಲ್ಲಿ ಸಿಸಿ ಕೆಮರಾ ಅಳವಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಠದಲ್ಲೇ ವಿದ್ಯುತ್‌ 
ಸಬ್‌ಸ್ಟೇಷನ್‌: ಆಗ್ರಹ

ಮಠದಲ್ಲಿರುವ ಸರಕಾರಿ ಜಾಗದಲ್ಲಿ ವಿದ್ಯುತ್‌ ಸಬ್‌ಸ್ಟೇಶನ್‌ ನಿರ್ಮಿಸಲು ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ಗೋಮಾಳ ಜಾಗ ಎಂದು ಮುದ್ಯದಲ್ಲಿ ವಿದ್ಯುತ್‌ ಸಬ್‌ಸ್ಟೇಶನ್‌ ನಿರ್ಮಿಸುವ ಪ್ರಸ್ತಾಪ ಮಾಡಲಾಗುತ್ತಿದೆ. ಈ ಪ್ರದೇಶವು ತೋಟ ಹಾಗೂ ಕಾಡುಗಳಿಂದ ಆವೃತವಾಗಿದ್ದು, ಇಲ್ಲಿ ಸಬ್‌ಸ್ಟೇಶನ್‌ ನಿರ್ಮಿಸಿದರೆ ವಿದ್ಯುತ್‌ ಸಮಸ್ಯೆ ಈಗಿನಂತೆ ಇರಲಿದೆ. ಆದ್ದರಿಂದ ಮಠದಲ್ಲೇ ಸಬ್‌ಸ್ಟೇಶನ್‌ ನಿರ್ಮಿಸಬೇಕೆಂದು ಅಬ್ದುರ್ರಹ್ಮಾನ್‌ ಯುನಿಕ್‌ ಒತ್ತಾಯಿಸಿದರು. ಮಠದಲ್ಲಿರುವ ಗೋಮಾಳ ಜಾಗವನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಅವರನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.

ಎಲ್‌ಪಿಜಿ; ನೆಕ್ಕಿಲಾಡಿಯಲ್ಲ ವಿತಿರಿಸಿ
ಮಹಾಲಿಂಗೇಶ್ವರ ಅನಿಲ ಸರಬರಾಜು ಏಜೆನ್ಸಿಯವರು ಗ್ರಾಮದ ಬಳಕೆದಾರರಿಗೆ 34ನೇ ನೆಕ್ಕಿಲಾಡಿ ಪೇಟೆಯಲ್ಲಿಯೇ ಅಡುಗೆ ಅನಿಲ ಸಿಲಿಂಡರ್‌ ವಿತರಿಸಬೇಕೆಂದು ಹಲವು ಗ್ರಾಮ ಸಭೆಗಳಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಈ ಬೇಡಿಕೆ ಈಡೇರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. 

ಗ್ರಾ.ಪಂ. ಉಪಾಧ್ಯಕ್ಷ ಅಸ್ಕರ್‌ ಅಲಿ ಮಾತನಾಡಿ, ಈ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಗ್ರಾ.ಪಂ.ನಿಂದ ಪ್ರಸ್ತಾವ ಕಳುಹಿಸಲಾಗಿದೆ. ಆದರೆ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ ಎಂದರು. 

ಮತ್ತೂಮ್ಮೆ ಈ ಬಗ್ಗೆ ನಿರ್ಣಯ ಕೈಗೊಂಡು ನಿರ್ಣಯ ಅನುಷ್ಠಾನವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪಶು ಸಂಗೋಪನೆ ಇಲಾಖೆಯ ಡಾ| ರಾಮ್‌ಪ್ರಕಾಶ್‌ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು. ಆರೋಗ್ಯ ಇಲಾಖೆಯ ಡಾ| ನೈನಾ ಫಾತಿಮಾ, ಕಂದಾಯ ಇಲಾಖೆಯ ರಮಾನಂದ ಚಕ್ಕಡಿ, ಎಎಸ್‌ಐ ಶ್ರೀಧರ್‌ ರೈ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಹರಿಣಾಕ್ಷಿ, ಕೃಷಿ ಅಧಿಕಾರಿ ತಿರುಪತಿ ಎನ್‌. ಭರಮಣ್ಣನವರ್‌, ತೋಟಗಾರಿಕಾ ಇಲಾಖೆಯ ರವಿರಾಜ ರೈ ಎಂ., ಜಿ.ಪಂ.ನ ಕಿರಿಯ ಎಂಜಿನಿಯರ್‌ ಸಂದೀಪ್‌, ಆರೋಗ್ಯ ಮಿತ್ರ ಸಿಬಂದಿ ಸೌಮ್ಯಾ ಕುಮಾರಿ ಡಿ. ಇಲಾಖಾ ಮಾಹಿತಿ ನೀಡಿದರು. ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ, ಗ್ರಾ.ಪಂ. ಸದಸ್ಯರಾದ ಮೈಕಲ್‌ ವೇಗಸ್‌, ಎನ್‌. ಶೇಖಬ್ಬ, ಯಮುನಾ, ದೇವಕಿ, ಬಾಬು ನಾಯ್ಕ, ಪ್ರಶಾಂತ ಎನ್‌., ಕೃಷ್ಣವೇಣಿ, ಜ್ಯೋತಿ ಉಪಸ್ಥಿತರಿದ್ದರು.

ಗ್ರಾಮಸ್ಥರಾದ ಸದಾನಂದ ಕಾರ್‌ಕ್ಲಬ್‌, ಅಬ್ದುಲ್‌ ಖಾದರ್‌, ಖಲಂದರ್‌ ಶಾಫಿ, ಗಣೇಶ್‌, ಹೊನ್ನಮ್ಮ, ಸುದರ್ಶನ್‌, ಅಮಿತಾ ಹರೀಶ್‌ ಮತ್ತಿತರರು ಮಾತನಾಡಿದರು. ಪ್ರಭಾರ ಪಿಡಿಒ ಅಬ್ದುಲ್ಲಾ ಅಸಾಫ್ ಸ್ವಾಗತಿಸಿದರು. ಕಾರ್ಯದರ್ಶಿ ರಾಮಣ್ಣ ಎಸ್‌. ವಂದಿಸಿದರು.

ಮೆಸ್ಕಾಂ ತೊಂದರೆ
ತಾಳೆಹಿತ್ಲುವಿನ ಮನೆಯೊಂದರ ಬಳಿ ವಿದ್ಯುತ್‌ ಟ್ರಾನ್ಸಫಾರ್ಮರ್‌ನಿಂದ ಬೆಂಕಿ ಕಿಡಿಗಳು ಬಿದ್ದು ರಬ್ಬರ್‌ ತೋಟ, ಸುತ್ತಲಿನ ಪರಿಸರ ಸುಟ್ಟು ಹೋಗಿವೆ. ಈ ಸಮಸ್ಯೆ ಪರಿಹರಿಸಲು ಮೆಸ್ಕಾಂಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ಅನಿ ಮಿನೇಜಸ್‌ ದೂರಿದರು.  

ಮನೆಗಳ ಮೇಲೆ 
ವಿದ್ಯುತ್‌ ತಂತಿ

ನೆಕ್ಕಿಲಾಡಿಯ ನೆರೆ ಸಂತ್ರಸ್ತರ ಕಾಲನಿಯಲ್ಲಿ ಮನೆಗಳ ಮೇಲಿಂದ ವಿದ್ಯುತ್‌ ತಂತಿ ಗಳು ಹಾದು ಹೋಗಿದ್ದು, ಅಪಾಯಕಾರಿ ಯಾಗಿವೆ. ಅದರ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಪ್ರಸಾದ್‌ ಒತ್ತಾಯಿಸಿದರು. 

ನಿಗದಿತ ದಿನ ಪಾವತಿ ಮಾಡಿ
ಮೆಸ್ಕಾಂ ಅಧಿಕಾರಿ ಮಿಲಿ ಮಾಹಿತಿ ನೀಡಿ, ಪ್ರತಿಯೋರ್ವರು ವಿದ್ಯುತ್‌ ಬಿಲ್‌ ನಿಗದಿತ ದಿನದೊಳಗೆ ಕಟ್ಟಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು ಪೈಪ್‌ ಕಾಂಪೋಸ್ಟ್‌ ಸಮರ್ಪಕವಾಗಿ ಅನುಷ್ಠಾನ ವಾಗಿಲ್ಲ. ಕೆಲವರ ಮನೆಯಲ್ಲಿ ಎಲ್ಲೆಂದರಲ್ಲಿ ಪೈಪ್‌ಗ್ಳು ಬಿದ್ದುಕೊಂಡಿದ್ದರೆ, ಕೆಲವು ಕಡೆ ದುರ್ಬಳಕೆಯಾಗುತ್ತಿರುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಪರಿಶೀಲಿಸುವ ಭರವಸೆಯನ್ನು ಪಂಚಾಯತ್‌ ಉಪಾಧ್ಯಕ್ಷ ಅಸ್ಕರ್‌ ಅಲಿ ನೀಡಿದರು.

Trending videos

Back to Top