CONNECT WITH US  

ಕೋಮುವಾದಿಗಳಲ್ಲ , ರಾಮವಾದಿಗಳು: ಕರಿಂಜೆ ಶ್ರೀ

ಬೆಳ್ತಂಗಡಿ: ಮಂಗಳವಾರ ನಡೆದ ನಮ್ಮ ನಡೆ ಪಿಲಿಚಾಮುಂಡಿಕಲ್ಲಿನೆಡೆ ಪಾದಯಾತ್ರೆ ಸಮಾರೋಪದಲ್ಲಿ  ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಗಳು ಮಾತನಾಡಿದರು.

ಬೆಳ್ತಂಗಡಿ: ಶಾಂತಿ, ಸಾಮರಸ್ಯದ ಮೂಲಕ ಸರ್ವಧರ್ಮೀಯರಿಗೆ ಬದುಕುವ ಅವಕಾಶ ಕಲ್ಪಿಸಿದ್ದು ಹಿಂದೂ ಧರ್ಮ. ಇದರ ಮೇಲೆ ದಬ್ಟಾಳಿಕೆ, ದಾಳಿ ನಡೆದರೆ ವಿಹಿಂಪ, ಬಜರಂಗ ದಳ ಸೂಕ್ತ ಉತ್ತರ ನೀಡಲಿವೆ. ನಾವು ಕೋಮುವಾದಿಗಳಲ್ಲ, ರಾಮವಾದಿಗಳು ಎಂದು ಮೂಡಬಿದಿರೆ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.

ಮಂಗಳವಾರ ಗುರುವಾಯನಕೆರೆಯ ಪಿಲಿ ಚಾಮುಂಡಿಕಲ್ಲಿನಲ್ಲಿ ಬೆಳ್ತಂಗಡಿಯಿಂದ ಆಗಮಿಸಿದ ಪಾದಯಾತ್ರೆಯ ಸಮಾರೋಪ, ಸಾಮೂಹಿಕ ಪ್ರಾರ್ಥನೆ ಬಳಿಕ ಅವರು ಮಾತನಾಡಿದರು. ಮತೀಯ ಭಾವನೆಯನ್ನು ಕೆರಳಿಸುವುದು ಅಲ್ಪ ಸಂಖ್ಯಾಕರೇ ವಿನಾ ಹಿಂದೂಗಳಲ್ಲ. ಲವ್‌ ಜೆಹಾದ್‌, ಮತಾಂತರ, ಗೋಹತ್ಯೆ ಮಾಡುವ ಮಹಿಷಾ ಸುರನ ಸಂತತಿ ನಾಶವಾಗಲೇ ಬೇಕು. ಅದಕ್ಕೆ ಮಾತೆಯರು ದುರ್ಗೆಯರಾಗಬೇಕು ಎಂದು ಅವರು ಕರೆ ನೀಡಿದರು.

ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ ಮಾತ ನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ.85 ಇರುವ ಹಿಂದೂಗಳು ಶೇ.14ರಷ್ಟಿರುವ ಇತರರ ವಿರುದ್ಧ ಹೋರಾಡಬೇಕಾಗಿ ಬಂದುದೇ ದುರ್ದೈವ. ನಾವು ಕೋಮುವಾದಿಗಳಲ್ಲ, ಸರ್ವಧರ್ಮ ಸಹಿಷ್ಣುಗಳು. ಆದರೆ ನಮ್ಮನ್ನು ಕೆಣಕಿದರೆ ಉತ್ತರ ಕೊಡಲೇಬೇಕಾಗುತ್ತದೆ ಎಂದರು.

ಬಜರಂಗ ದಳ ದಕ್ಷಿಣ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌ ಮಾತನಾಡಿ, ಜೆಹಾದಿಗಳಿಗೆ ತಕ್ಕ ಉತ್ತರ ನೀಡಬೇಕು. ಹಿಂದೂ ಸಮಾಜ ಕೈಕಟ್ಟಿ ಕೂರಬಾರದು. ದೌರ್ಜನ್ಯದ ಮೂಲಕ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಬೇಡ ಎಂದರು. ಕ್ಷೇತ್ರ ಸಂರಕ್ಷಣ ಸಮಿತಿ ಕೋಶಾಧಿಕಾರಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ ವಿಷಯ ಪ್ರಸ್ತಾವನೆ ನಡೆಸಿ, ಇದೇ ರೀತಿ ಗಡಾಯಿಕಲ್ಲಿನ ನರಸಿಂಹ ಗಢದ ರಕ್ಷಣೆಗೂ ನಾವು ಸಿದ್ಧರಿದ್ದೇವೆ ಎಂದರು.

ಕಾಪಿನಡ್ಕ ವಸಂತ ಸಾಲಿಯಾನ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ಗೋರಕ್ಷಾ ಪ್ರಮುಖ್‌ ಮುರಳಿಕೃಷ್ಣ ಹಸಂತ್ತಡ್ಕ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯವಾಹೆ ವೇದಾವತಿ, ದೊಂಪದಬಲಿ ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ್‌, ಪಾಡ್ಯಾರುಬೀಡಿನ ಪ್ರವೀಣ್‌ ಕುಮಾರ್‌, ಅರಮಲೆಬೆಟ್ಟದ ಸುಕೇಶ್‌ ಕುಮಾರ್‌ ಜೈನ್‌ ಉಪಸ್ಥಿತರಿದ್ದರು. ಬಜರಂಗ ದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಸ್ವಾಗತಿಸಿದರು. ಸಮಿತಿಯ ಕಾರ್ಯ ದರ್ಶಿ, ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್‌ ವಂದಿಸಿದರು. ಉಮೇಶ್‌ ನಡ್ತಿಕಲ್ಲು ನಿರ್ವಹಿಸಿದರು.

ಬೇಲಿ ತೆರವು
ಪಿಲಿಚಾಮುಂಡಿಕಲ್ಲು ಎಂಬಲ್ಲಿ ದೊಂಪದಬಲಿ ನಡೆದ ಬಳಿಕ ಕಲ್ಲಿನ ಮೇಲೆ ತ್ಯಾಜ್ಯ ಇರಿಸಿ ಅಪವಿತ್ರ ಗೊಳಿಸಲಾಗಿತ್ತು. ರಕ್ಷಣೆಗೆ ಹಾಕಿದ ಬೇಲಿಯನ್ನು ಸ್ಥಳೀಯ ಸಮುದಾಯದವರ ಮನವಿಯ ಮೇರೆಗೆ ತಾಲೂಕು ಆಡಳಿತ ತೆರವು ಮಾಡಿತ್ತು. ಇದನ್ನು ಪ್ರತಿಭಟಿಸಿ ತಾಲೂಕು ಕಚೇರಿ ಬಳಿ 8 ದಿನ ಸರಣಿ ಧರಣಿ ನಡೆಸಲಾಗಿತ್ತು. 

ಪೊಲೀಸ್‌ ಭದ್ರತೆ
ವಿಶೇಷ ಬಂದೋಬಸ್ತ್ ಮಾಡಲಾಗಿತ್ತು. ಎಎಸ್‌ಪಿ 1, ಡಿವೈಎಸ್‌ಪಿ 1, ಸಿಪಿಐ 2, ಪಿಎಸ್‌ಐ 8, ಎ.ಎಸ್‌.ಐ 12, ಎಚ್‌ಸಿ/ಪಿಸಿ 112, ಹೋಂಗಾರ್ಡ್‌ 43 ಹಾಗೂ ಕೆ.ಎಸ್‌.ಆರ್‌.ಪಿ. 3 ತುಕಡಿ ನಿಯೋಜಿಸಲಾಗಿತ್ತು.

ಪಿಲಿಚಾಮುಂಡಿಕಲ್ಲಿಗೆ ಪಾದಯಾತ್ರೆ
ವಿ.ಹಿಂ.ಪ., ಬಜರಂಗ ದಳ, ಕ್ಷೇತ್ರ ಸಂರಕ್ಷಣಾ ಸಮಿತಿಯ ಮೂಲಕ ನಡೆದ ಪಾದಯಾತ್ರೆಗೆ ಹಿರಿಯ ನ್ಯಾಯವಾದಿ ಪ್ರತಾಪಸಿಂಹ ನಾಯಕ್‌ ಅವರು ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಅವರಿಗೆ ಭಗವಾಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು. ಬಿಜೆಪಿ ತಾ| ಅಧ್ಯಕ್ಷ ರಂಜನ್‌ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿಯ ವಿವಿಧ ಜನಪ್ರತಿನಿಧಿಗಳು, ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಚೆಂಡೆ, ನಾಸಿಕ್‌ ಬ್ಯಾಂಡ್‌ ಮೆರವಣಿಗೆಗೆ ಕಳೆ ನೀಡಿತು.


Trending videos

Back to Top