CONNECT WITH US  

ಪುತ್ತೂರು: ಪಾರ್ಕಿಂಗ್‌ ಅವ್ಯವಸ್ಥೆ ; ಸುಗಮ ಸಂಚಾರಕ್ಕೆ ಅಡ್ಡಿ

ಪುತ್ತೂರು: ಜಿಲ್ಲಾ ಕೇಂದ್ರದ ಸನಿಹಕ್ಕೆ ಬೆಳೆಯುತ್ತಿರುವ ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ವಾರದ ಏಳು ದಿನಗಳ ಟ್ರಾಫಿಕ್‌ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಮಿತಿ ಮೀರಿದ ಆಟೋ ರಿಕ್ಷಾ ಮತ್ತು ಇತರ ವಾಹನಗಳ ಓಡಾಟ ಒಂದು ಕಾರಣವಾದರೆ ಪಾರ್ಕಿಂಗ್‌ ಅವ್ಯವಸ್ಥೆ ಇನ್ನೊಂದು ಪ್ರಮುಖ ಕಾರಣ.

ವಾಹನವನ್ನು ನಿಲ್ಲಿಸಲು ಸೂಕ್ತ ಪಾರ್ಕಿಂಗ್‌ ಸೌಲಭ್ಯ ಇಲ್ಲದ ನಗರ ಪುತ್ತೂರು. ಆದಕಾರಣ ಸಿಕ್ಕ ಸಿಕ್ಕ ಕಡೆ ವಾಹನಗಳನ್ನು ನಿಲುಗಡೆಗೊಳಿಸುವ ಅಭ್ಯಾಸ ಇಲ್ಲಿದೆ. ಪುತ್ತೂರು ನಗರದ ಬೊಳುವಾರಿನಿಂದ ದರ್ಬೆ ಬೈಪಾಸ್‌ ಜಂಕ್ಷನ್‌ ತನಕ 3 ಕಿ. ಮೀ. ಉದ್ದಕ್ಕೆ ಮುಖ್ಯ ರಸ್ತೆಯಿದೆ. ಮುಖ್ಯ ರಸ್ತೆಯಲ್ಲಿ ಬೊಳುವಾರು, ಪೊಲೀಸ್‌ ಸ್ಟೇಶನ್‌, ಬಸ್‌ ನಿಲ್ದಾಣ, ಕಲ್ಲಾರೆ, ಎಪಿಎಂಸಿ ರಸ್ತೆ, ದರ್ಬೆ ಜಂಕ್ಷನ್‌ನಲ್ಲಿ ರಿಕ್ಷಾ ಪಾರ್ಕ್‌ಗಳಿವೆ. ಮುಖ್ಯ ರಸ್ತೆಯಲ್ಲಿ ಇರುವ ಮೂರು ವಾಣಿಜ್ಯ ಕಟ್ಟಡಗಳು ಬಿಟ್ಟರೆ ಬೇರೆ ಯಾವ ಕಟ್ಟಡಲ್ಲಿಯೂ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ.

ವಾಣಿಜ್ಯ ಕಟ್ಟಡದಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ನಕ್ಷೆಯಲ್ಲಿ ಮಾತ್ರ ಜಾಗ ಇದೆ, ವಾಸ್ತವವಾಗಿ ಇಲ್ಲ. ಯಾವುದೇ ಕಟ್ಟಡದಲ್ಲಿ ಬಾಡಿಗೆ ಪಡೆದುಕೊಂಡವರು ಮತ್ತು ಅಲ್ಲಿನ ಸಿಬಂದಿ ತಮ್ಮ ವಾಹನವನ್ನು ನಿಲುಗಡೆಗೊಳಿಸಲು ಪರದಾಡಬೇಕಾದ ಪರಿಸ್ಥಿತಿ ಇದೆ. ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ ಸೌಲಭ್ಯ
ಕಲ್ಪಿಸಿರುವ ಕುರಿತು ಖಚಿತ ಪಡಿಸದೆ ಅಂಗಡಿಗಳಿಗೆ ಪರವಾನಿಗೆ ನೀಡಲಾಗಿದೆ. ರಸ್ತೆಯ ಸೆಟ್‌ಬ್ಯಾಕ್‌ ನಿಯಮವನ್ನು ಪಾಲಿಸದೆ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿವೆ. ಈ ಕಾರಣದಿಂದ ಅಂಗಡಿಗಳ ಮುಂದೆ, ಕಚೇರಿಗಳ ಮುಂದೆ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ.

ಪುತ್ತೂರು ನಗರದ ದರ್ಬೆಯಿಂದ ಬೊಳುವಾರು ತನಕ ಬೈಪಾಸ್‌ ರಸ್ತೆಯಿದೆ. ಅಗತ್ಯ ಇದ್ದವರು, ಇಲ್ಲದವರೂ ಪುತ್ತೂರು ನಗರದ ಮೂಲಕವೇ ಮಂಗಳೂರು ಕಡೆಗೆ ಮತ್ತು ಸುಳ್ಯ ಕಡೆಗೆ ವಾಹನಗಳಲ್ಲಿ ಸಂಚರಿಸುವುದರಿಂದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆಗೆ ಕಾರಣವಾಗಿದೆ. ಹೊರ ವರ್ತುಲ
ರಸ್ತೆಗಳೂ ಬಳಕೆಯಾಗುತ್ತಿಲ್ಲ.

ಹಿಂದೆ ಕಟ್ಟಡ ಪರವಾನಿಗೆ ನೀಡುವ ಸಂದರ್ಭದಲ್ಲಿ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರುವ ಕುರಿತು ಖಚಿತಪಡಿಸದೆ ಪುರಸಭೆ ಪರವಾನಿಗೆ ನೀಡಿತ್ತು. ಆಗ ವಾಹನಗಳ ದಟ್ಟಣೆ ಇಷ್ಟೊಂದು ಪ್ರಮಾಣದಲ್ಲಿ ಇದ್ದಿರಲಾರದು. ಆದರೆ ಈಗ ಸಮಸ್ಯೆ ಕೊರಳಿಗೆ ಬಂದಿದೆ. ಪರ್ಯಾಯ ಮಾರ್ಗೋಪಾಯಗಳ ಅನುಸರಣೆಯೂ ಇಲ್ಲಿ ನಡೆಯುತ್ತಿಲ್ಲ.
- ಸುಖೇಶ್‌ ಕುಮಾರ್‌, ಪುತ್ತೂರು 


Trending videos

Back to Top