CONNECT WITH US  

ಸಂಭ್ರಮದ ಸ್ವಾತಂತ್ರ್ಯೋತ್ಸವ, ನಾಗರಪಂಚಮಿ

ನಾಗ ಸನ್ನಿಧಿಯಲ್ಲಿ ಹಾಲಿನ ಅಭಿಷೇಕ.

ಪುತ್ತೂರು: ತಾಲೂಕಿನೆಲ್ಲೆಡೆ ಬುಧವಾರ 72ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ನಾಗರಪಂಚಮಿ ಹಬ್ಬದ ಸಂಭ್ರಮ ಏಕಕಾಲದಲ್ಲಿ ಮನೆ ಮಾಡಿತು. ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಗೌರವಾರ್ಪಣೆಯ ಸಂಭ್ರಮ ಕಂಡುಬಂದರೆ, ದೇವಾಲಯ, ನಾಗನಕಟ್ಟೆ, ತರವಾಡುಗಳ ನಾಗನಕಟ್ಟೆ, ಗ್ರಾಮಗಳ ನಾಗ ಸನ್ನಿಧಿಗಳಲ್ಲಿ ಭಕ್ತಿಯ ಪೂಜೆ, ಪುರಸ್ಕಾರಗಳಲ್ಲಿ ಜನರು ತೊಡಗಿದ್ದು ಕಂಡುಬಂತು.

ನಾಗರಪಂಚಮಿ ಸಂಭ್ರಮ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಾಗ ಸನ್ನಿಧಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಉರ್ಲಾಂಡಿ ರಕ್ತೇಶ್ವರಿ ನಾಗನಕಟ್ಟೆ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಉಪ್ಪಿನಂಗಡಿ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬಾಯಂಬಾಡಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ನಳೀಲು ಸುಬ್ರಹ್ಮಣ್ಯ ದೇವಸ್ಥಾನ, ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನಾಗನಕಟ್ಟೆ ಸೇರಿದಂತೆ ವಿವಿಧ ನಾಗದೇವರ ಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ತಂಬಿಲಗಳು ನಡೆದವು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ಸಾವಿರಾರು ಮಂದಿ ಭಕ್ತರ ಸಾಲು ಕಂಡುಬಂತು.

ಭಕ್ತಿ ಸಮರ್ಪಣೆ
ನಾಗಸನ್ನಿಧಿಗಳಲ್ಲಿ ದೇವರಿಗೆ ಹಾಲು, ಸೀಯಾಳಾಭಿಷೇಕಗಳು ನಡೆದವು. ಭಕ್ತರು ಹಾಲು, ಸೀಯಾಳವನ್ನು ಸಮರ್ಪಿಸಿ ಪ್ರಸಾದ ರೂಪದ ತೀರ್ಥವನ್ನು ಕೊಂಡೊಯ್ದರು. ಜತೆಗೆ ಕೇದಗೆ, ಹಿಂಗಾರವನ್ನೂ ದೇವರಿಗೆ ಸಮರ್ಪಿಸಿ, ತಮ್ಮ ಇಷ್ಟಾರ್ಥ ನೆರವೇರಿಸಲು ಪ್ರಾರ್ಥನೆ ಸಲ್ಲಿಸಿದರು. ನಾಗಪಂಚಮಿಯ ವಿಶೇಷವಾಗಿ ಭಕ್ತರ ಮನೆಗಳಲ್ಲಿ ಅರಶಿನ ಎಲೆಯ ತಿಂಡಿಯನ್ನು ತಯಾರಿಸಿ ಸಂಭ್ರಮಾಚರಣೆ ನಡೆಸಿದರು.

Trending videos

Back to Top