CONNECT WITH US  

ಶಿರಾಡಿ ಇಳಿದ ವಾಹನಗಳಿಗೆ ಗುಂಡ್ಯದಲ್ಲಿ ತಡೆ: ಪ್ರಯಾಣಿಕರ ಪ್ರತಿಭಟನೆ

ಉಪ್ಪಿನಂಗಡಿ: ಶಿರಾಡಿ ಘಾಟಿಯಲ್ಲಿ ಸಂಚಾರಕ್ಕೆ ಸಂಬಂಧಿಸಿ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ವಿಭಿನ್ನ ಹೇಳಿಕೆಗಳಿಂದಾಗಿ ವಾಹನ ಸವಾರರು ಸಂಕಷ್ಟಕ್ಕೀಡಾದರು.

ಹಾಸನ ಜಿಲ್ಲಾಧಿಕಾರಿ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಬುಧವಾರ ಸಕಲೇಶಪುರದಿಂದ ನೂರಾರು ವಾಹನಗಳು ಘಾಟಿ ಇಳಿದು ಬಂದವು. ಆದರೆ ದ.ಕ. ಜಿಲ್ಲಾಧಿಕಾರಿ ನಿಷೇಧ ತೆರವು ಮಾಡದ ಕಾರಣ ಗುಂಡ್ಯದಲ್ಲಿ ಪೊಲೀಸರು ಎಲ್ಲ ವಾಹನಗಳನ್ನು ತಡೆದರು. ಕ್ರುದ್ಧರಾದ ವಾಹನ ಚಾಲಕರು ಪ್ರತಿಭಟನೆ ನಡೆಸಿದರು. ವಾಹನಗಳಲ್ಲಿದ್ದ  ವೃದ್ಧರು, ಮಹಿಳೆಯರು, ರೋಗಿಗಳು ತೊಂದರೆಗೆ ಒಳಗಾದರು. ಬಳಿಕ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ವಾಹನಗಳನ್ನು ಬಿಡಲಾಯಿತು. ಪುತ್ತೂರು ಸಹಾಯಕ ಆಯುಕ್ತ ಮತ್ತು ಹೆದ್ದಾರಿ ಇಲಾಖೆ ಎಂಜಿನಿಯರ್‌ ಶಿರಾಡಿ ಘಾಟಿ ರಸ್ತೆ ಪರಿಶೀಲನೆ ನಡೆಸಿದರು. ಅಪರಾಹ್ನ 1.30ರ ಹೊತ್ತಿಗೆ ಪೊಲೀಸರು ಗೇಟು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಸ್ತೆಯಲ್ಲಿ  ಧರಣಿ
ರಸ್ತೆ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಹಾಸನ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ. ಇದನ್ನು ನಂಬಿ ನೂರಾರು ವಾಹನಗಳವರು ಬಂದಿದ್ದಾರೆ. ಆದರೆ ಅವರನ್ನು ಬಿಡುತ್ತಿಲ್ಲ, ಇದು ಸರಿ ಅಲ್ಲ, ಬಂದ ವಾಹನಗಳನ್ನು ಬಿಡಬೇಕು ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಗ್ರಾಮಸ್ಥರು, ವಾಹನ ಚಾಲಕರು ರಸ್ತೆಯಲ್ಲೇ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ, ಶಿರಾಡಿ ಗ್ರಾಮ ಪಂಚಾಯತ್‌ ಸದಸ್ಯ ಪ್ರಕಾಶ್‌ ಗುಂಡ್ಯ, ವೇದಿಕೆ ಸದಸ್ಯರಾದ ರಾಮಚಂದ್ರ ಗೌಡ, ಸುಭಾಶ್‌ ಗುಂಡ್ಯ, ರಾಮಚಂದ್ರ ಗೌಡ, ಜಯಪ್ರಕಾಶ್‌ ಸುಬ್ರಹ್ಮಣ್ಯ ಮೊದಲಾದವರಿದ್ದರು.

Trending videos

Back to Top