CONNECT WITH US  

ಅತಿವೃಷ್ಟಿ ಬಳಿಕ ಮೂರನೇ ಮದುವೆ: ಹೊಸ ಜೀವನಕ್ಕೆ ವಾರಿಜಾ, ರುದ್ರೇಶ್‌

ಅರಂತೋಡು/ ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ಮುನಿಸಿಕೊಂಡ ಪರಿಣಾಮ ಶುಭ ಕಾರ್ಯಗಳಿಗೂ ವಿಘ್ನ ಎದುರಾಗಬಹುದೆನ್ನುವ ಆತಂಕದ ನಡುವೆಯೇ ಹೃದಯವಂತರ ಸಹಕಾರದಿಂದ ಸಂತ್ರಸ್ತ ಕುಟುಂಬಗಳ ಮಕ್ಕಳ ವಿವಾಹ ಮಹೋತ್ಸವಗಳು ನಿರ್ವಿಘ್ನವಾಗಿ ನಡೆಯುತ್ತಿವೆ. 

ಈಗಾಗಲೇ ನಿಗದಿಯಾಗಿದ್ದ ವಿವಾಹಗಳು ಗುಡ್ಡಗಳು ಕುಸಿದಷ್ಟೇ ವೇಗವಾಗಿ ಮುರಿದು ಬೀಳಬಹುದೆನ್ನುವ ಬೇಸರ ಹೆಣ್ಣು ಹೆತ್ತ ಕುಟುಂಬಗಳಲ್ಲಿತ್ತು. ಆದರೆ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ನಿಶ್ಚಿತಾರ್ಥವಾಗಿದ್ದ ಮದುವೆಯನ್ನು ನಿಗದಿತ ಮುಹೂರ್ತದಲ್ಲಿ ನೆರವೇರಿಸುವ ಮೂಲಕ ನೊಂದ ಮನಗಳಲ್ಲಿ ಮುಗುಳ್ನಗೆ ಬೀರುವಂತೆ ಮಾಡಿದ್ದಾರೆ.

ಮಹಾಮಳೆಯ ಅನಂತರ ಜಿಲ್ಲೆಯಲ್ಲಿ ಎರಡು ಜೋಡಿಯ ವಿವಾಹ ಸಾರ್ವಜನಿಕರ ಸಹಕಾರದಿಂದಲೇ ನಡೆದಿತ್ತು. ಗುರುವಾರ ಮೂರನೇ ಜೋಡಿಯ ವಿವಾಹ ಕೂಡ ವಿವಿಧ ಸಂಘ, ಸಂಸ್ಥೆಗಳ ಸಹಾಯ ಹಸ್ತದ ಮೂಲಕವೇ ನೆರವೇರಿತು. ಜೋಡುಪಾಲ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಿರಾಶ್ರಿತರಾಗಿ ಕಲ್ಲುಗುಂಡಿ ಸ. ಹಿ. ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯವಿದ್ದ ದಿ| ಕೃಷ್ಣಪ್ಪ ನಾೖಕ ಅವರ ಪುತ್ರಿ ವಾರಿಜಾ ಅವರ ವಿವಾಹವು ಪುಣೆ ಮೂಲದ ರುದ್ರೇಶ್‌ ಅವರೊಂದಿಗೆ ನಗರದ ಅಶ್ವಿ‌ನ ಆಸ್ಪತ್ರೆ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನೆರವೇರಿತು. 

ಪರಿಹಾರ ಕೇಂದ್ರದಲ್ಲೇ ಮದರಂಗಿ ಶಾಸ್ತ್ರ!
ಮದುರಂಗಿ ಕಾರ್ಯಕ್ರಮವನ್ನು ಕಲ್ಲುಗುಂಡಿ ಸ. ಹಿ. ಪ್ರಾಥಮಿಕ ಶಾಲೆಯ ನಿರಾಶ್ರಿತರ ಕೇಂದ್ರದಲ್ಲೇ ನಡೆಸ ಲಾಯಿತು. ವಧುವಿನ ತಾಯಿ ರೋಹಿಣಿ ಹಾಗೂ ಕುಟುಂಬಸ್ಥರು, ಕೇಂದ್ರದ ನಿವಾಸಿಗಳು ಉಪಸ್ಥಿತರಿದ್ದರು. ಸುಳ್ಯ ತಹಶೀಲಾಲ್ದರ್‌ ಕುಂಞಮ್ಮ, ಊರ ಪ್ರಮುಖರಾದ ಗ್ರಾ.ಪಂ. ಸದಸ್ಯರಾದ ಸೋಮಶೇಖರ ಕೊಯಿಂಗಾಜೆ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಪಿ. ಜಗದೀಶ್‌, ಮಾಜಿ ಅಧ್ಯಕ್ಷೆ ಬಿ.ಎಸ್‌. ಯಮುನಾ, ಸದಸ್ಯರಾದ ಜಿ.ಕೆ. ಹಮೀದ್‌ ಗೂನಡ್ಕ, ನಾಗೇಶ್‌ ಪಿ.ಆರ್‌, ಗಣ್ಯರಾದ ಬಾಲಚಂದ್ರ ಕಳಗಿ, ಪಿ.ಎಲ್‌. ಆನಂದ ಗೌಡ, ಎಸ್‌.ಕೆ. ಮಹಮ್ಮದ್‌ ಹನೀಫ್, ಹರೀಶ್‌, ಅವಿನ್‌ ರಂಗತ್‌ಮಲೆ, ಕಾರ್ತಿಕ್‌, ಸೋಮನಾಥ, ಭರತ್‌, ಉಮೇಶ್‌, ಪ್ರಶಾತ್‌ ವಿ.ವಿ., ಕಿಶೋರ್‌ ಕುಮಾರ್‌ ಪಿ.ಬಿ., ಯೂಸುಫ್ ಕಲ್ಲುಗುಂಡಿ, ವಿಜಯ ನಿಡಿಂಜಿ, ಪ್ರಕಾಶ್‌ ರೈ, ಮನೋಹರ, ಕಿಶೋರ್‌ ಬಿ.ಎಸ್‌., ಕಾಂತಿ ಬಿ.ಎಸ್‌. ಅವಿನಾಶ್‌, ಮೆಲ್ವಿನ್‌, ಪೊಲೀಸ್‌ ಇಲಾಖೆಯ ಸುನಿಲ್‌ ಹಾಗೂ ಸಿಬಂದಿ ಹಾಗೂ ಚೆಂಬು, ಸಂಪಾಜೆ ಗ್ರಾಮದ ಊರವರು ಭಾಗವಹಿಸಿದರು.

ಪಶುಪಾಲನಾ ಕೇಂದ್ರದಲ್ಲಿ 101 ಹಸುಗಳು 
ಮಡಿಕೇರಿ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಪ್ರಕೃತಿ ವಿಕೋಪ ಜಾನುವಾರು ಸಂರಕ್ಷಣಾ ಮತ್ತು ಪಾಲನಾ ಕೇಂದ್ರದಲ್ಲಿ ಈಗಾಗಲೇ 101 ಹಸುಗಳು ದಾಖಲಾಗಿವೆ. ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಾದ ಮುಕ್ಕೊಡ್ಲು, ಹಟ್ಟಿಹೊಳೆ, ಮಾದಾಪುರ, ಇಗ್ಗೊಡು, ತಂತಿಪಾಲ ಸಹಿತ ಕೆಲವು ಪ್ರದೇಶಗಳಿಂದ ರಕ್ಷಿಸಲಾದ ಹಸುಗಳಿಗೆ ಇಲ್ಲಿ ಆರೈಕೆ ಮಾಡಲಾಗುತ್ತಿವೆ.

Trending videos

Back to Top