CONNECT WITH US  

ಸೆ. 16: ಬೆನ್ನು ಮೂಳೆ ರೋಗಿಗಳ ಸೇವಾಧಾಮ ಉದ್ಘಾಟನೆ

ಸೇವಾಧಾಮ ಕಾರ್ಯಾಚರಿಸಲಿರುವ ಕಟ್ಟಡ.

ಬೆಳ್ತಂಗಡಿ: ಕನ್ಯಾಡಿಯ ಸೇವಾ ಭಾರತಿಯು ಬೆಂಗಳೂರಿನ ಎಪಿಡಿ ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಿರುವ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಸಾಮಾಜಿಕ ಪುನಃಶ್ಚೇತನ ಕೇಂದ್ರ ಸೇವಾಧಾಮದ ಉದ್ಘಾಟನ ಸಮಾರಂಭ ಸೆ. 16ರಂದು ಬೆಳಗ್ಗೆ 10.30ಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ. ವಿನಾಯಕ ರಾವ್‌ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕವಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸೇವಾ ಭಾರತಿ ಸಂಸ್ಥೆ ಈ ವರ್ಷ ಬಾಲಭಾರತಿ, ಪುನಶ್ಚೇತನ ಕೇಂದ್ರ ಉದ್ಘಾಟನೆಯ ಯೋಜನೆ ಹಾಕಿಕೊಂಡಿತ್ತು. ಪ್ರಸ್ತುತ ಅದರ ಉದ್ಘಾಟನೆ ನಡೆಯಲಿದ್ದು, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನವರು ಉಚಿತವಾಗಿ ನೀಡಿದ ಕಟ್ಟಡದಲ್ಲಿ ಕೇಂದ್ರ ಕಾರ್ಯಾಚರಿಸಲಿದೆ ಎಂದರು. 

ಕೇಂದ್ರದಲ್ಲಿ ಪ್ರಸ್ತುತ 5 ಮಂದಿ ಬೆನ್ನುಮೂಳೆ ಮುರಿತಕ್ಕೊಳಗಾದವರನ್ನು ಮಾನಸಿಕ, ದೈಹಿಕವಾಗಿ ಸದೃಢಗೊಳಿಸುವ ಕೆಲಸ ಮಾಡಲಾಗುತ್ತದೆ. ಇವರು ಸುಮಾರು 2 ತಿಂಗಳ ಕಾಲ ಇಲ್ಲಿ ನಿಲ್ಲಬೇಕಾಗಿದ್ದು, ಫಿಸಿಯೋಥೆರಪಿ, ಭಜನೆ, ಆರೈಕೆ ಮೊದಲಾದ ಕೆಲಸ ಮಾಡಲಾಗುತ್ತದೆ. ತಾಲೂಕಿನಲ್ಲಿ ಸದ್ಯ 60 ಮಂದಿ ಬೆನ್ನುಮೂಳೆ ಮುರಿತಕ್ಕೊಳಗಾದವರಿದ್ದು, ಜಿಲ್ಲೆಯಲ್ಲಿ 500 ಮಂದಿಯಿರಬಹುದು ಎಂದರು.

ಪ್ರಸ್ತುತ ಒಮ್ಮೆ ಭೇಟಿ ನೀಡಿದವರಿಗೆ 10,500 ರೂ. ಚಾರ್ಜ್‌ ಮಾಡಲಾಗುತ್ತಿದ್ದು, ರೋಗಿಗಳ ಜತೆಗೆ ಒಬ್ಬರು ಆರೈಕೆ ಮಾಡುವವರೂ ಇರುತ್ತಾರೆ. ಸದ್ಯಕ್ಕೆ 16 ಲಕ್ಷ ರೂ. ಅನುದಾನದ ಅಗತ್ಯವಿದ್ದು, ದಾನಿಗಳ ಮೂಲಕ ಅದನ್ನು ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರಕ್ಕೆ ಈಗಾಗಲೇ 7 ಮಂದಿ ಸಿಬಂದಿಯನ್ನೂ ನೇಮಕ ಮಾಡಲಾಗಿದೆ ಎಂದರು.

ಸೇವಾಧಾಮವನ್ನು ದಂತವೈದ್ಯೆ ಡಾ| ರಾಜಲಕ್ಷ್ಮೀ ಎಸ್‌.ಜೆ. ಉದ್ಘಾಟಿಸಲಿದ್ದು, ಶಾಸಕ ಹರೀಶ್‌ ಪೂಂಜ ಕಾರ್ಯಾಲಯ, ಸಂಸದ ನಳಿನ್‌ಕುಮಾರ್‌ ಕಟೀಲು ವಸತಿ ವಿಭಾಗ, ವಿ.ಪ. ಸದಸ್ಯ ಕೆ. ಹರೀಶ್‌ ಕುಮಾರ್‌ ಫಿಸಿಯೋಥೆರಪಿ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಎಂದರು. ಸಂಸ್ಥೆಯ ಅಧ್ಯಕ್ಷ ಬಿ. ಕೃಷ್ಣಪ್ಪ ಗುಡಿಗಾರ್‌, ಉಪಾಧ್ಯಕ್ಷ ಕೆ. ರಾಘವೇಂದ್ರ ಬೈಪಡಿತ್ತಾಯ, ಕೇಂದ್ರದ ವ್ಯವಸ್ಥಾಪಕ ಬಾಲಕೃಷ್ಣ ಉಪಸ್ಥಿತರಿದ್ದರು.

Trending videos

Back to Top