CONNECT WITH US  

ಸೆ. 11: ಕಾಳುಮೆಣಸು ಖರೀದಿಯ ಉದ್ಘಾಟನೆ, ಮಹಾಸಭೆ 

ಉಜಿರೆ: ತಾ| ರಬ್ಬರ್‌ ಬೆಳೆಗಾರರ ಸಂಘ

ಬೆಳ್ತಂಗಡಿ: ಉಜಿರೆಯಲ್ಲಿರುವ ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ವತಿಯಿಂದ ಕಾಳು ಮೆಣಸು ಖರೀದಿಯ ಉದ್ಘಾಟನ ಸಮಾರಂಭ ಸೆ. 11ರಂದು ಬೆಳಗ್ಗೆ 10ಕ್ಕೆ ಉಜಿರೆ ಶಾರದಾ ಮಂಟಪದಲ್ಲಿ ಜರಗಲಿದ್ದು, ಬಳಿಕ ಸಂಘದ ಮಹಾಸಭೆ ನಡೆಯಲಿದೆ ಎಂದು ಸಹಕಾರಿಯ ಅಧ್ಯಕ್ಷ ಶ್ರೀಧರ ಜಿ. ಭಿಡೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಬ್ಬರ್‌ ಖರೀದಿಯಲ್ಲಿ ಏಷ್ಯಾದಲ್ಲೇ ನಂ. 1 ಸಹಕಾರಿಯಾಗಿ ಗುರುತಿಸಲ್ಪಟ್ಟಿರುವ ಸಂಘವು 16,010 ಟನ್‌ ಖರೀದಿಯ ಮೂಲಕ ರಾಜ್ಯದ ಶೇ. 65 ಮಾರಾಟ ವ್ಯವಹಾರ ಸಾಧಿಸಿದೆ. ರಬ್ಬರ್‌ ಮಾರಾಟ ಮಾಡಿದ ಸದಸ್ಯರಿಗೆ ಈ ಬಾರಿ ಕೆ.ಜಿ. ಒಂದಕ್ಕೆ 50 ಪೈಸೆಯಂತೆ ಗರಿಷ್ಠ 5,000 ರೂ. ಬೋನಸ್‌ ನೀಡಲು ತೀರ್ಮಾನಿಸಲಾಗಿದೆ ಎಂದರು.

ಬೆಳಗ್ಗೆ 10ಕ್ಕೆ ಕಾಳು ಮೆಣಸು ಖರೀದಿಯನ್ನು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರಕುಮಾರ್‌ ಉದ್ಘಾಟಿಸಲಿದ್ದು, ಶಾಸಕ ಹರೀಶ್‌ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಎಸ್‌. ಆರ್‌. ಸತೀಶ್ಚಂದ್ರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಂಘವು ಈ ಸಾಲಿನಲ್ಲಿ ಒಟ್ಟು 26 ಖರೀದಿ ಶಾಖೆಗಳನ್ನು ಹೊಂದಿದ್ದು, ಈ ಸಾಲಿನಲ್ಲಿ 14.12 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ರಬ್ಬರ್‌ ಮಾರಾಟ ವ್ಯವಹಾರವನ್ನು ಮೆಚ್ಚಿ ಎಂಆರ್‌ಎಫ್‌ ಸಂಸ್ಥೆಯ ಚೇರ್‌ವೆುನ್‌ ಭೇಟಿ ನೀಡಿ, ಬೆಳೆಗಾರರ ಜತೆ ಸಂವಾದ ನಡೆಸಿದ್ದಾರೆ ಎಂದರು.

ಕಡಿಮೆ ಬೆಲೆಗೆ ಲಭ್ಯ
ದೇಶಕ್ಕೆ ಪ್ರಸ್ತುತ 11 ಲಕ್ಷ ಟನ್‌ ರಬ್ಬರ್‌ನ ಅವಶ್ಯಕತೆ ಇದ್ದು, ಇಲ್ಲಿನ ಉತ್ಪಾದನೆ ಸುಮಾರು 6 ಲಕ್ಷ ಟನ್‌ನಷ್ಟಿದೆ. ಇಂಡೋನೇಶ್ಯಾ, ಥೈಲ್ಯಾಂಡ್‌, ವಿಯೇಟ್ನಾ ದೇಶಗಳಿಂದ ಭಾರತಕ್ಕೆ ರಬ್ಬರನ್ನು ಆಮದು ಮಾಡಲಾಗುತ್ತಿದ್ದು, ಶೇ. 27.5 ತೆರಿಗೆಯ ಬಳಿಕವೂ ಅದು ದೇಶದ ರಬ್ಬರ್‌ಗಿಂತ ಕಡಿಮೆ ವೆಚ್ಚದಲ್ಲಿ ಸಿಗುತ್ತದೆ. ಹೀಗಾಗಿ ದೇಶದ ರಬ್ಬರ್‌ ಧಾರಣೆ ಇಳಿಕೆಯಾಗುತ್ತಿದೆ ಎಂದು ಸಹಕಾರಿಯ ಸಿಇಒ ರಾಜು ಶೆಟ್ಟಿ ತಿಳಿಸಿದರು. ಸಹಕಾರಿಯ ನಿರ್ದೇಶಕರಾದ ಚಿನ್ನಮ್ಮ, ಅಬ್ರಾಹಂ ಬಿ.ಎಸ್‌., ಅನಂತ ಭಟ್‌ ಎಂ., ವಿ.ವಿ. ಅಬ್ರಹಾಂ, ಪದ್ಮ ಗೌಡ ಎಚ್‌. ಉಪಸ್ಥಿತರಿದ್ದರು.


Trending videos

Back to Top