CONNECT WITH US  

ಪ್ರವಾಸಿ ತಾಣ 'ಮಾಂದಲಪಟ್ಟಿ' ಬೆಟ್ಟದ ಹಾದಿ ಸುಗಮವಾಗಿಲ್ಲ 

ಕಡಿತಗೊಂಡ ಸಂಪರ್ಕ ರಸ್ತೆ: ಪ್ರವಾಸ ಪ್ರಿಯರು ಚಾರಣಕ್ಕೆ 3 ತಿಂಗಳಾದರೂ ಕಾಯಬೇಕು..!

ದೇವಸ್ತೂರು-ಕಾಲೂರು ರಸ್ತೆ 

ಸುಳ್ಯ : ಕೊಡಗಿನ ಪ್ರವಾಸಿ ತಾಣ ಮಾಂದಲಪಟ್ಟಿ ಬೆಟ್ಟಕ್ಕೆ ತೆರಳುವ ಸಂಪರ್ಕ ರಸ್ತೆ ಪ್ರವಾಸಿಗರಿಗೆ ಮುಕ್ತವಾಗಬೇಕಾದರೆ ಇನ್ನೂ 3 ತಿಂಗಳು ಕಾಯಬೇಕು..! ಗಾಳಿಬೀಡು, ಮುಕ್ಕೋಡ್ಲು, ಕೋಟೆಬೆಟ್ಟ ಗ್ರಾಮದಲ್ಲಿನ 13 ಜಿ.ಪಂ.ರಸ್ತೆ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದೆ. ಮಾಂದಲಪಟ್ಟಿ ಬೆಟ್ಟ ಸಂಪರ್ಕದ 4 ರಸ್ತೆಗಳು ಸೇರಿವೆ. 2 ರಸ್ತೆ ಸುಧಾರಣೆ ಹಾದಿಯಲ್ಲಿವೆ. ಮೂರು ಗ್ರಾಮದ ಗ್ರಾಮಸ್ಥರ ಸಂಚಾರಕ್ಕೆ ತಾತ್ಕಾಲಿಕ ದುರಸ್ತಿ ಪ್ರಯತ್ನ ನಡೆದಿದೆ. ಪ್ರವಾಸಿಗರ ಪ್ರವೇಶಕ್ಕೆ ಕನಿಷ್ಠ 3 ತಿಂಗಳು ಬೇಕಿದೆ ಅನ್ನುವುದು ರಸ್ತೆ ದುರಸ್ತಿ ಹೊಣೆ ಹೊತ್ತಿರುವ ಜಿ.ಪಂ. ಎಂಜಿನಿಯರ್‌ ವಿಭಾಗ.

ಹೇಗಿದೆ ರಸ್ತೆ?
ಮಡಿಕೇರಿ ವೃತ್ತದಿಂದ ಮಾಂದಲಪಟ್ಟಿಗೆ ಈಗಿರುವ ಸಂಪರ್ಕಕ್ಕೆ ಮಡಿಕೇರಿ - ಅಬ್ಬಿಫಾಲ್ಸ್‌ - ದೇವಸ್ತೂರು- ಮಾಂದಲ ಪಟ್ಟಿ ಹಳೆ ರಸ್ತೆ ಸಾಧರಣ ಅನ್ನುವ ಸ್ಥಿತಿಯಲ್ಲಿದೆ. ಉಳಿದೆಲ್ಲ ಸಂಪರ್ಕ ರಸ್ತೆಗಳು ಕಡಿದು ಕೊಂಡಿವೆ. ಹಳೆ ರಸ್ತೆಯಲ್ಲಿ ಹಲವು ಕಡೆಗಳಲ್ಲಿ ಗುಡ್ಡ ಜರಿತ, ಬಿರುಕು ಉಂಟಾಗಿದೆ. ಈಗ ತಾತ್ಕಾಲಿಕ ದುರಸ್ತಿ ನಡೆಸಿ ಗ್ರಾಮದೊಳಗೆ ಜೀಪು, ಲಘು ವಾಹನ ಸಂಚರಿಸಲು ಅನುವು ಮಾಡಿಕೊಡಲಾಗಿದೆ. 

ಮಾಂದಲಪಟ್ಟಿ ಪ್ರವಾಸಿ ತಾಣ ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟಿದೆ. ಮಾಂದಲಪಟ್ಟಿ ಸನಿಹದ ಮುಕ್ಲೋಡು, ದೇವಸ್ತೂರು, ಸೂರ್ಲಬ್ಬಿ, ಹೆಬ್ಬೆಟ್ಟಗೇರಿ ಗ್ರಾಮ ಹಸಿರು ತುಂಬಿತ್ತು. ಬೆಟ್ಟಕ್ಕೆ ತೆರಳುವ 20 ಕ್ಕೂ ಅಧಿಕ ಕಿ.ಮೀ.ದೂರದಲ್ಲಿ ಗದ್ದೆ, ಕಾಫಿ ತೋಟ, ತೊರೆಗಳು ಪ್ರವಾಸಿಗರ ಪಾಲಿಗೆ ಬೆಟ್ಟ ಹತ್ತುವ ಮೊದಲಿನ ಮನ ಸೆಳೆಯುವ ದೃಶ್ಯಗಳಾಗಿತ್ತು. ಈಗ ಅವೆಲ್ಲವೂ ಕಣ್ಮರೆಯಾಗಿವೆ. ಚಹರೆಯೇ ಬದಲಾಗಿದೆ. ಹಿಂದೆ ಹೋದವರು ಈಗ ನೋಡಿ ಹೋದರೆ ಇದ್ಯಾವ ಹೊಸ ಪ್ರದೇಶ ಎಂದು ಅನಿಸಬಹುದು. ಇದು ಬೆಟ್ಟಕ್ಕಿಂತ ಹಲವು ಕಿ.ಮೀ.ದೂರದ ಹಿಂದಿನ ಕಥೆ. ಬೆಟ್ಟಕ್ಕೇನೂ ಸಮಸ್ಯೆ ಆಗಿಲ್ಲ ಅನ್ನುತ್ತಿದೆ ಜಿಲ್ಲಾಡಳಿತ.

ಕಂದಕ ಸೃಷ್ಟಿ
ಮಾಂದಲಪಟ್ಟಿ ಸಂಪರ್ಕದ ಕಾಲೂರು- ಹಚ್ಚಿನಾಡು-ಮುಟ್ಲು ರಸ್ತೆ ಬಿರುಕು ಬಿಟ್ಟಿದೆ. ನಿಡುದಾಣೆ ಗ್ರಾಮದಿಂದ ಹೆಬ್ಬೆಟ್ಟಗೇರಿ- ದೇವಸ್ತೂರು ರಸ್ತೆಯ ಕಾಲೂರು- ಮಾಂದಲ ಪಟ್ಟಿ ನಡುವೆ 2.9 ಕಿ.ಮೀ.ಸಂಪೂರ್ಣ ಹಾನಿಯಾಗಿದೆ. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ದೇವಸ್ತೂರು-ಕಾಳೂರು ರಸ್ತೆಯ 900 ಮೀ. ಕಂದಕ ಸೃಷ್ಟಿಯಾಗಿದೆ. ಹಚ್ಚಿನಾಡು, ಹಮ್ಮಿಯಾಲ, ಮುಟ್ಲೂರು ಭಾಗದ ರಸ್ತೆಯಲ್ಲಿಯು ಹಾನಿ ಇದೆ. ಗ್ರಾಮಸ್ಥರ ಓಡಾಟಕ್ಕೆ ದೇವತ್ತೂರು-ಚಂದಕನಾಡು-ಮಾಂದಲಪಟ್ಟಿಗೆ ಹಾಗೂ ಇನ್ನು ಕೆಲ ರಸ್ತೆ ದುರಸ್ತಿ ಮಾಡಲಾಗಿದೆ.

ಮುಗಿಲುಪೇಟೆ ಎಂಬ ವರ್ಣನೆ
ಪ್ರತಿನಿತ್ಯ ನೂರು, ಸಾವಿರಕ್ಕಿಂತಲೂ ಹೆಚ್ಚು ಮಂದಿ ಇಲ್ಲಿಗೆ ಭೇಟಿ ನೀಡುವ ತಾಣ. ಚಾರಣಿಗರಿಗಂತೂ ಇದು ಸ್ವರ್ಗ ಸಮಾನ. ಪರ್ವತಶ್ರೇಣಿ, ಆಳವಾದ ಕಂದರ ಕೈ ಬೀಸಿ ಕರೆಯುತ್ತದೆ. ಗಾಳಿಪಟ ಸಿನಿಮಾದಲ್ಲಿ ಮುಗಿಲುಪೇಟೆ ಎಂದು ಬಣ್ಣಿಸಲಾಗಿದೆ. ಚೆಕ್‌ಪೋಸ್ಟಲ್ಲಿ ಶುಲ್ಕ ಪಾವತಿಸಿ ಮುಂದಕ್ಕೆ ಸಾಗಬೇಕು. ಕಡಿದಾದ ರಸ್ತೆಯಲ್ಲಿ ಜೀಪು ಸಂಚಾರವೇ ಆಸರೆ. ಶುಲ್ಕ ಪಾವತಿಸದೆಯು ವಿಹಾರ ನಡೆಸಬಹುದು. ಆದರೆ ಬೆಟ್ಟದ ತುದಿ ಮಂಟಪ ವೀಕ್ಷಿಸಲು ಅಸಾಧ್ಯ. ಮಂಟಪ ಏರಿ ಮುಗಿಲ ಸಂಭ್ರಮ ಸವಿಯದಿದ್ದರೆ ಪ್ರವಾಸ ಅಪೂರ್ಣವಾದಿತ್ತು.

ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಈ ಪ್ರವಾಸಿ ತಾಣವನ್ನು ಒಂದು ವರ್ಷಕ್ಕೆ ಗುತ್ತಿಗೆ ನೀಡಲಾಗುತ್ತದೆ. ಈ ವರ್ಷ 11.50 ಲಕ್ಷ ರೂ.ಗೆ ಟೆಂಡರ್‌ ವಹಿಸಲಾಗಿತ್ತು. ಇಲ್ಲಿ ವಾಹನ ಪಾರ್ಕಿಂಗ್‌ಗೆ  ನಿರ್ಧಿಷ್ಟ ಶುಲ್ಕ ವಿಧಿಸಲಾಗುತ್ತದೆ. ಗುತ್ತಿಗೆ ಪಡೆದುಕೊಂಡವರಿಗೆ ಸಿಗುವ ಆದಾಯ ಇದು. ಪ್ರಾಕೃತಿಕ ವಿಕೋಪಕ್ಕೆ ಈಡಾದ ಬಳಿಕ ಆ.14 ರಿಂದ ಇಲ್ಲಿ ಪ್ರವಾಸಿಗರು ಪ್ರವೇಶಿಸಿಲ್ಲ ಅನ್ನುತ್ತಾರೆ ಟೆಂಡರ್‌ ಪಡೆದ ತಿಮ್ಮಯ್ಯ (ಗಾಂಧಿ).

ಮಾಂದಲಪಟ್ಟಿ ಸಮುದ್ರಮಟ್ಟದಿಂದ 4,000 ಮೀಟರ್‌ ಎತ್ತರದಲ್ಲಿದೆ. ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಈ ಪ್ರದೇಶ 8 ಸಾವಿರ ಹೆಕ್ಟೇರುಗಳಿವೆ ಎಂದು ಪಹಣಿ ಪತ್ರದಲ್ಲಿ ನಮೂದಾಗಿವೆ ಎನ್ನುತ್ತಾರೆ ಮಾಂದಲಪಟ್ಟಿ ಗ್ರಾಮಕರಣಿಕ ಶಿವಕುಮಾರ್‌. 

ಟೂರಿಸ್ಟೇ ಜನರಿಗೆ ದಿಕ್ಕು ..!
ಮಾಂದಲಪಟ್ಟಿ ತಪ್ಪಲಿನ ಕಾಫಿ ತೋಟ, ಗದ್ದೆ ನೆಲ ಸಮಗೊಂಡಿವೆ. ಇಲ್ಲಿನ ನಿವಾಸಿಗಳಿಗೆ ಜೀವನ ನಿರ್ವಹಣೆಗೆ ಈಗ ಉಳಿದಿರುವ ದಾರಿ ಪ್ರವಾಸಿಗರ ಸಾಗಾಟ. ಜಿಲ್ಲಾಡಳಿತದ ನಿಷೇಧದ ನಡುವೆಯೂ ಅಳಿದುಳಿದಿರುವ ರಸ್ತೆಯಲ್ಲಿ 10-20 ಜೀಪುಗಳು ಸಂಚರಿಸುತ್ತವೆ. ಮಾಂದಲಪಟ್ಟಿ ಬೆಟ್ಟ ಹತ್ತುವುದಿಲ್ಲ. ಬೆಟ್ಟದ ಕೆಳಭಾಗದ ಗ್ರಾಮದಲ್ಲಿನ ಹಾನಿ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಚಿತ್ರಣ ತೋರಿಸಲಾಗುತ್ತಿದೆ. ಆ ಪ್ರದೇಶಗಳು ಪ್ರವಾಸಿ ತಾಣವಾಗಿ ಬದಲಾಗಿದೆ.

 ಕಿರಣ್‌ ಪ್ರಸಾದ್‌ ಕುಂಡಡ್ಕ 

Trending videos

Back to Top