CONNECT WITH US  

ಕಡಬ ಸರಕಾರಿ ಸಮುದಾಯ ಆಸ್ಪತ್ರೆಗೆ ಕಾಯಕಲ್ಪ 

 ಉದ್ಘಾಟನೆಗೆ ಸಿದ್ಧಗೊಂಡ 4.85 ಕೋ.ರೂ. ವೆಚ್ಚದ ಸುಸಜ್ಜಿತ ಕಟ್ಟಡ  

ಉದ್ಘಾಟನೆಗೆ ಸಿದ್ಧಗೊಂಡಿರುವ ಕಡಬ ಸಮುದಾಯ ಆಸ್ಪತ್ರೆಯ ಸುಸಜ್ಜಿತ ಕಟ್ಟಡ.

ಕಡಬ: ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಕಡಬದ ಸರಕಾರಿ ಆಸ್ಪತ್ರೆಗೆ 4.85 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡದ ನಿರ್ಮಾಣ ಕಾರ್ಯಪೂರ್ಣಗೊಂಡಿದ್ದು, ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ.

ಸುಸಜ್ಜಿತ ಆಸ್ಪತ್ರೆಯಾಗಲಿದೆ
6 ಹಾಸಿಗೆಗಳ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರವು 9 ವರ್ಷಗಳ ಹಿಂದೆ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದೆ. ಅದರಂತೆ ಕಡಬ ಆಸ್ಪತ್ರೆಗೆ ಪ್ರಸೂತಿ ತಜ್ಞರು, ಶಿಶು ತಜ್ಞರು ಸೇರಿದಂತೆ 4 ಮಂದಿ ವೈದ್ಯಾಧಿಕಾರಿಗಳು, ಓರ್ವ ದಂತ ವೈದ್ಯರು ಹೀಗೆ ಒಟ್ಟು 34 ಹುದ್ದೆಗಳು ಮಂಜೂರಾತಿಗೊಂಡಿದೆ.

8 ಗ್ರಾಮಗಳ ವ್ಯಾಪ್ತಿ
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಹೀಗ 8 ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ನೆರೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಪಂಜ, ಏನೆಕಲ್‌, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶದ ಜನರು ಕೂಡ ಇದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ವ್ಯಾಪ್ತಿ ದೊಡ್ಡದಾಗಿ ವಿಸ್ತರಿಸಿದೆ.

ಸಿಎಂಗೆ ಮನವಿ
ನೂತನ ಕಟ್ಟಡದ ಕೆಲಸ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಸಮುದಾಯ ಆಸ್ಪತ್ರೆಗೆ ಆಗತ್ಯವಿರುವ ವೈದ್ಯರು, ಸಿಬಂದಿ ಹಾಗೂ ಸಲಕರಣೆಗಳನ್ನು ಕೂಡಲೇ ಮಂಜೂರುಗೊಳಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.
- ಸಯ್ಯದ್‌ಮೀರಾ ಸಾಹೇಬ್‌, 
ಜಿಲ್ಲಾ ಪರಿಷತ್‌ ಮಾಜಿ ಸದಸ್ಯರು

100 ಹಾಸಿಗೆಗಳು
ಸಮುದಾಯ ಆಸ್ಪತ್ರೆಗೆ ಅಗತ್ಯ ಸವಲತ್ತುಗಳನ್ನು ನೀಡುವುದು ನಮ್ಮ ಮೊದಲ ಗುರಿ. ಆದಷ್ಟು ಶೀಘ್ರ ನೂತನ ಕಟ್ಟಡದ ಉದ್ಘಾಟನೆಗೆ ದಿನ ನಿಗದಿ ಮಾಡಲಾಗುವುದು. ಹಾಗೆಯೇ ಜಿಲ್ಲೆಯ ಹೊಸ ತಾ| ಗಳಾದ ಕಡಬ, ಮೂಡಬಿದರೆಯ ಸರಕಾರಿ ಆಸ್ಪತ್ರೆಗಳನ್ನು 100 ಹಾಸಿಗೆಗಳ ತಾ| ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
- ಡಾ| ರಾಮಕೃಷ್ಣ ರಾವ್‌
ಜಿಲ್ಲಾ ಆರೋಗ್ಯಾಧಿಕಾರಿ

 ವಿಶೇಷ ವರದಿ

Trending videos

Back to Top