ಹಳೆನೇರೆಂಕಿ: ದೈವದ ಕಟ್ಟೆ ಒಡೆದು ನಿಧಿ ಶೋಧ

ಕಡಬ: ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆ ನೇರೆಂಕಿ ಗ್ರಾಮದ ಹೊಸಮಾ ರಡ್ಡ ಪಾತ್ರ ಮಾಡಿಯಲ್ಲಿ ದೈವದ ಕಟ್ಟೆಯನ್ನು ಒಡೆದು ಗುಂಡಿ ತೋಡಿ ನಿಧಿಗಾಗಿ ಹುಡುಕಾಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಪಾತ್ರಮಾಡಿ ಉಳ್ಳಾಕ್ಲು ದೈವದ ಕಟ್ಟೆಯನ್ನು ಕೆಲವು ದಿನಗಳ ಹಿಂದೆಯೇ ಒಡೆದು ಹಾಕಿ ಕಟ್ಟೆಯ ಸುತ್ತ ಗುಂಡಿ ತೋಡಿ ನಿಧಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.
ಕಟ್ಟೆಯ ಹತ್ತಿರದ ಜಮೀನಿನ ಮಾಲಕರು ತಮ್ಮ ತೋಟದಲ್ಲಿ ತೆಂಗಿನ ಕಾಯಿ ಕೀಳುವ ಸಂದರ್ಭದಲ್ಲಿ ಗುಂಡಿ ತೋಡಿರುವುದು ಕಂಡು ಬಂತು. ಸ್ಥಳೀಯರಾದ ಅಶೋಕ್ ಹಾಗೂ ಹರೀಶ್ ಆಚಾರ್ಯ ಅವರು ಗುಂಡಿ ತೋಡಿರುವುದನ್ನು ಖಚಿತಪಡಿಸಿ ಸಾಮಾಜಿಕ ಮುಂದಾಳು ಸಂಜೀವ ಗೌಡ ಮುಳಿಮಜಲು ಅವರ ಮೂಲಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕಡಬ ಎಸ್ಐ ಪ್ರಕಾಶ್ ದೇವಾಡಿಗ ಹಾಗೂ ಸಿಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಸ್ಥಳದಲ್ಲಿ ಕುಂಕುಮ ತುಂಬಿದ ಎರಡು ಬಾಟಲಿಗಳು ಪತ್ತೆಯಾಗಿವೆ.
ಜೈನರ ಕಾಲದ ಕಟ್ಟೆ
ಜೈನ ಅರಸರ ಕಾಲದಲ್ಲಿ ಇಲ್ಲಿ ದೈವದ ಕಟ್ಟೆ ನಿರ್ಮಿಸಲಾಗಿದ್ದು, ಹಳೆ ನೇರೆಂಕಿಯ ಚಕ್ರವರ್ತಿ ಕೊಡ ಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧ ಪಟ್ಟ ಕಟ್ಟೆ ಎಂದು ಹೇಳಲಾಗಿದೆ. ಸುಮಾರು 40 ವರ್ಷಗಳಿಂದ ಇಲ್ಲಿ ದೈವಗಳಿಗೆ ಪರ್ವ ಕೊಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟೆಯ ಸುತ್ತ ಗಿಡಗಂಟಿ ಬೆಳೆದು ಯಾರೂ ಹೋಗುವಂತಿರಲಿಲ್ಲ.
ಹಿಂದೆಯೂ ಅಗೆಯಲಾಗಿತ್ತು
ಕಟ್ಟೆಯ ಅಡಿಯಲ್ಲಿ ಬಂಗಾರದ ಕಣಜ ಇದೆ ಎನ್ನುವ ನಂಬಿಕೆ ಸ್ಥಳೀಯರಲ್ಲಿದೆ. ಸುಮಾರು 500 ಮೀ. ದೂರದಲ್ಲಿ ನಾಗದೇವರ ಬನವಿದೆ. ಅದರಲ್ಲಿ ಚಿನ್ನದ ಕೊಪ್ಪರಿಗೆ ಇದೆ ಎಂದು 12 ವರ್ಷಗಳ ಹಿಂದೆ ಅಲ್ಲಿಯೂ ಅಗೆಯಲಾಗಿತ್ತು.
ಶಿಕ್ಷೆಗಾಗಿ ದೈವಕ್ಕೆ ಮೊರೆ
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಊರಿನ ಆಸ್ತಿಕರು ಸೇರಿ ಕಟ್ಟೆ ಕೆಡವಿದವರಿಗೆ ವರ್ಷದೊಳಗೆ ತಕ್ಕ ಶಾಸ್ತಿಯಾಗಬೇಕು ಎಂದು ದೈವದಲ್ಲಿ ಪ್ರಾರ್ಥಿಸಿದರು.