ಕಾಡು ಪ್ರಾಣಿಗಳ ಹಾವಳಿ: ಬೆಳೆಗಳು ನಾಶ

ಕಾಡುಕೋಣಗಳ ದಾಳಿಯಿಂದ ಅಡಿಕೆ ಸಸಿಗಳು ನಾಶವಾಗಿವೆ.
ಈಶ್ವರಮಂಗಲ: ಈ ವರ್ಷ ಕೊಳೆರೋಗದಿಂದ ಅಡಿಕೆ ಬೆಳೆ ನಷ್ಟ ಒಂದೆಡೆಯಾದರೆ, ಇನ್ನೊಂದೆಡೆ ಮಿಶ್ರ ಬೆಳೆಗಳಾದ ಬಾಳೆ, ಕಾಳುಮೆಣಸು, ತೆಂಗು, ತರಕಾರಿಗಳು ಕಾಡು ಪ್ರಾಣಿಗಳ ದಾಳಿಯಿಂದಾಗಿ ನಾಶವಾಗುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. ಭಾರೀ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಬಂದಿರುವುದರಿಂದ ಶೇ. 50ಕ್ಕೂ ಹೆಚ್ಚು ಪ್ರಮಾಣದ ಬೆಳೆ ನಾಶವಾಗಿದೆ. ಇಷ್ಟೊಂದು ಮಳೆ ಬಂದಿದ್ದರೂ ಬಳಿಕ ಬಿಸಿಲು ಬಿದ್ದ ಕಾರಣ ಹಳ್ಳ, ಕೆರೆ, ಬಾವಿ ಮುಂತಾದ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮಳೆ ಅವಲಂಬಿತ ತರಕಾರಿಗಳಿಗೆ ಈಗ ಜಲಮೂಲಗಳಿಂದ ನೀರು ಪೂರೈಕೆ ಮಾಡಬೇಕಾಗಿದೆ.
ಕೋತಿ, ಕಾಡುಕೋಣ ದಾಳಿ
ಮಳೆ ತುಸು ಕಡಿಮೆಯಾಗುತ್ತಿದ್ದಂತೆ ತೋಟಗಳಿಗೆ ಕಾಡುಪ್ರಾಣಿಗಳು ದಾಳಿ ನಡೆಸಲಾರಂಭಿಸಿದೆ. ಬಿಸಿಲಿನ ವಾತಾವರಣದಲ್ಲಿ ಕೋತಿಗಳು ತೆಂಗು ಕೃಷಿಯ ಕಡೆಗೆ ಲಗ್ಗೆಯಿಟ್ಟರೆ, ಕಾಡು ಕೋಣಗಳು ತೋಟಕ್ಕೆ ನುಗ್ಗಿ ಅಡಿಕೆ ಗಿಡಗಳನ್ನು ನಾಶಪಡಿಸುತ್ತಿವೆ. ಕೋತಿಗಳು ಒಮ್ಮೆ ತೋಟಕ್ಕೆ ದಾಳಿ ಮಾಡಿದರೆ ಎಳನೀರು ಹಾಗೂ ತೆಂಗಿನಕಾಯಿಗಳನ್ನು ಎಳೆದು ಕೆಡವುತ್ತವೆ ಅಥವಾ ತಿಂದು ಎಸೆಯುತ್ತವೆ. ಬಾಳೆಕಾಯಿ, ಪಪ್ಪಾಯಿ, ಕೊಕ್ಕೋ - ಯಾವುದನ್ನೂ ಬಿಡುವುದಿಲ್ಲ. ಮಳೆಗಾಲದಲ್ಲಿ ನೆಟ್ಟು ಬೆಳೆಸಿದ ಅಡಿಕೆ, ಬಾಳೆ ಗಿಡಗಳು ಹಾಗೂ ಕಾಳು ಮೆಣಸಿನ ಬಳ್ಳಿಗಳು ಕಾಡುಕೋಣ, ಕಾಡು ಹಂದಿಗಳ ಪಾಲಾಗುತ್ತಿವೆ.
ನಷ್ಟಕ್ಕೆ ಪರಿಹಾರವೇ ಇಲ್ಲ!
ಕಾಡುಪ್ರಾಣಿಗಳು ಯಾವಾಗ ಬೇಕಾದರೂ ದಾಳಿ ಮಾಡಿ ರೈತನ ಬೆಳೆಗಳನ್ನು ನಾಶ ಮಾಡಬಹುದು. ಈ ನಷ್ಟಕ್ಕೆ ಯಾವುದೇ ರೀತಿಯ ಪರಿಹಾರ ಇಲಾಖೆಗಳಿಂದ ಸಿಗುತ್ತಿಲ್ಲ. ರೈತರು ಕೃಷಿಗೆ ಬಳಸುವ ಉಪಕರಣಗಳು, ಗೊಬ್ಬರ, ಔಷಧಗಳನ್ನು ಖರೀದಿಸಿದಾಗ ರಾಜ್ಯ, ಕೇಂದ್ರ ಸರಕಾರಗಳು ತೆರಿಗೆ ವಿಧಿಸುತ್ತಿವೆ. ಇಷ್ಟಿದ್ದರೂ ನಷ್ಟ ಪರಿಹಾರದ ವಿಷಯದಲ್ಲಿ ಮಾತ್ರ ಸರಕಾರಗಳು ವಂಚಿಸುತ್ತಿದೆ.
ಕೌಟುಂಬಿಕ ಆಸ್ತಿಗೂ ಪರಿಹಾರವಿಲ್ಲ!
ಸರಕಾರದ ಪರಿಹಾರ ಕೌಟುಂಬಿಕ ಆಸ್ತಿಗೆ ಸಿಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಂಟಿ ಖಾತೆ ಇದ್ದವರು ಒಪ್ಪಿಗೆ ಪತ್ರ ಸಲ್ಲಿಸಿ ಪರಿಹಾರ ಪಡೆಯುತ್ತಾರೆ. ಆದರೆ ಕೌಟುಂಬಿಕ ಆಸ್ತಿ ಹೊಂದಿದವರು ಸಮಯಕ್ಕೆ ಸರಿಯಾಗಿ ಒಪ್ಪಿಗೆ ಪತ್ರ ಇಲ್ಲದಿದ್ದರೂ ಭೂ ಕಂದಾಯ ಪಾವತಿಸುತ್ತಾರೆ. ಆದರೆ ಕೌಟುಂಬಿಕ ಆಸ್ತಿಯಲ್ಲಿ ವಿಭಾಗ ಪತ್ರ ಆಗದೇ ಇದ್ದು, ಕೃಷಿ ಮಾಡಿದ ರೈತರಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಹಾರ ನೀಡಿ
ಪ್ರತಿದಿನವೂ ಕಾಡುಕೋಣಗಳು ತೋಟಕ್ಕೆ ಲಗ್ಗೆ ಇಟ್ಟು ಕೃಷಿಯನ್ನು ಹಾಳು ಮಾಡುತ್ತಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಅಡಿಕೆ ಸಸಿಯನ್ನು ತೋಟದಲ್ಲಿ ನೆಡಲಾಗಿದೆ. ಕಾಡುಕೋಣ, ಕಾಡು ಹಂದಿಯ ಉಪಟಳದಿಂದ ಎಲ್ಲವೂ ನಾಶವಾಗಿದೆ. ಸರಕಾರ ಮತ್ತು ಅರಣ್ಯ ಇಲಾಖೆ ಸ್ಪಂದಿಸಿ ಪರಿಹಾರ ನೀಡಬೇಕು.
- ಗೋವಿಂದ ಭಟ್ ಪೈರುಪುಣಿ,
ಅಧ್ಯಕ್ಷರು, ವಿಆರ್ಡಿಎಫ್, ಸುಳ್ಯಪದವು
ಉಪಟಳ ಹೆಚ್ಚಾಗಿದೆ
ಅಡಿಕೆ ಮತ್ತು ತೆಂಗು, ಮಿಶ್ರ ಬೆಳೆಗಳಾದ ಬಾಳೆ, ಕರಿಮೆಣಸು ತರಕಾರಿಯನ್ನು ಬೆಳೆಸುತ್ತೇನೆ. ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಕೋತಿಗಳ ದಾಳಿಯಿಂದಾಗಿ ಸೀಯಾಳ, ತರಕಾರಿಗಳು ನಾಶವಾಗಿದೆ. ಕಾಡು ಪ್ರಾಣಿಗಳ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು.
- ನಾರಾಯಣ ನಾಯ್ಕ, ರೈತ
ಮಾಧವ ನಾಯಕ್