CONNECT WITH US  

ಚಾರ್ಮಾಡಿ ಘಾಟಿ: ಭೂರಮೆಯ ಸ್ವರ್ಗದಲ್ಲಿ ಸಂಚಾರ ಸಂಕಷ್ಟ

ಮಕ್ಕಳು, ಮಹಿಳೆಯರು, ವೃದ್ಧರಿಗೆ ಕಷ್ಟ | ಪ್ರಯಾಣದ ವೇಳೆ ಜತೆಗಿರಲಿ ತಿಂಡಿ, ನೀರು

ಕೆಟ್ಟು ನಿಂತಿರುವ ಬಸ್‌.

ಬೆಳ್ತಂಗಡಿ: ಚುಮು ಚುಮು ಚಳಿಯ ನಡುವೆ ಪ್ರಯಾಣಿಕರ ಮನಕ್ಕೆ ಮುದ ನೀಡುವ ಹಚ್ಚ ಹಸುರಿನ ಕಾನನದ ಮಧ್ಯೆ ಹಾದು ಹೋಗುವ ಚಾರ್ಮಾಡಿ ಘಾಟಿ ಕಣಿವೆ ರಸ್ತೆಯಲ್ಲಿನ ಪ್ರಯಾಣ ಈಗ ಬಹಳ ತ್ರಾಸದಾಯಕವಾಗಿದೆ. ಘಾಟಿ ರಸ್ತೆಯಲ್ಲಿ ತಾಸುಗಟ್ಟಲೆ ಸಂಚಾರ ಸ್ಥಗಿತ, ಹೊಂಡ-ಗುಂಡಿಗಳಿಂದ ಕೂಡಿದ ಕಡಿದಾದ ತಿರುವಿನ ಸಂಚಾರದಿಂದಾಗಿ ಪ್ರಯಾಣಿಕರ ಕಷ್ಟ ಹೇಳತೀರದಂತಾಗಿದೆ.

ಸಂಚಾರ ಅಸ್ತವ್ಯಸ್ತ
ಸಂಪಾಜೆ ಘಾಟಿ ರಸ್ತೆಯಲ್ಲಿ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿ ದಿನಂಪ್ರತಿ ತಾಸುಗಟ್ಟಲೆ ಬ್ಲಾಕ್‌ ಆಗುತ್ತಿದ್ದು, ಪ್ರಯಾಣಿಕರು ಅರಣ್ಯದ ಮಧ್ಯೆಯೇ ಪರದಾಡುವಂತಾಗಿದೆ. ರಾತ್ರಿ ಸಂಚಾರ ಸ್ಥಗಿತವಾದರೆ ಬೆಳಗಿನ ಜಾವದ ವರೆಗೂ ಘಾಟಿ ಪ್ರದೇಶದಲ್ಲಿಯೇ ಹಸಿವು, ನಿದ್ದೆ ಬಿಟ್ಟು ಪರಿತಪಿಸುವ ಸ್ಥಿತಿ ಪ್ರಯಾಣಿಕರದ್ದು. ಇದರಿಂದಾಗಿ ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು ಕಷ್ಟ ಅನುಭವಿಸುವಂತಾಗಿದೆ.

ಕಿರಿದಾದ ಹದಗೆಟ್ಟ ರಸ್ತೆ
ಘಾಟಿ ರಸ್ತೆಯ ಅಂಚಿನಲ್ಲಿ ಹೊಂಡಗಳಿದ್ದು, ಡಾಮರು ರಸ್ತೆಯಿಂದ ಕೆಳಗೆ ವಾಹನಗಳನ್ನು ಇಳಿಸಲು ಸಾಧ್ಯವಾಗುತ್ತಿಲ್ಲ. ರಾತ್ರಿಯ ವೇಳೆ ಚಾಲಕ ರಸ್ತೆಯ ಅಂಚಿಗೆ ಇಳಿಸಿದ್ದಲ್ಲಿ ಪ್ರಪಾತಕ್ಕೆ ಜಾರುವ ಸಾಧ್ಯತೆ ಅಧಿಕ. ಕಿರಿದಾಗಿರುವ ಪ್ರದೇಶಗಳಲ್ಲಿ ಬಸ್‌ ಗಳು ಹಾಗೂ ಸರಕು ತುಂಬಿದ ಲಾರಿಗಳು ಮುಖಾಮುಖೀಯಾದರೆ ಕಷ್ಟಪಟ್ಟು ಹಾದು ಹೋಗಬೇಕಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಆಗಾಗ ಸಂಚಾರದಲ್ಲಿ ಅಡಚಣೆ ಉಂಟಾಗುತ್ತಿದೆ. ಈಗಾಗಲೇ ರಸ್ತೆ ಕುಸಿಯುವ ಭೀತಿ ಎದುರಾಗಿರುವ ಕೆಲವು ಸ್ಥಳಗಳಲ್ಲಿ ಮರಳನ್ನು ತುಂಬಿದ ಚೀಲಗಳನ್ನು ಇಡುವ ಮೂಲಕ ತಾತ್ಕಾಲಿಕ ರಕ್ಷಣೆ ಮಾಡಲಾಗಿದೆ.

ಸಂಪರ್ಕ ಕೊಂಡಿ
ಈಗ ಜಿಲ್ಲೆಗಿರುವ ಏಕೈಕ ಹತ್ತಿರದ ಸಂಪರ್ಕ ರಸ್ತೆ ಚಾರ್ಮಾಡಿ. ಮಂಗಳೂರು ಹಾಗೂ ಧರ್ಮಸ್ಥಳ ಸಹಿತ ಇತರ ಯಾತ್ರಾಸ್ಥಳಗಳಿಗೆ ಬರುವ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತಿವೆ. ಘಾಟಿಯಲ್ಲಿ ಸಣ್ಣ ಅವಘಡಗಳಾದರೂ ತಾಸುಗಟ್ಟಲೆ ವಾಹನ ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ವಾಹನ ದಟ್ಟಣೆಯನ್ನು ನಿಯಂತ್ರಿಸಲು ಇಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಯಾವುದೇ ಅಗತ್ಯ ಬಂದರೂ 30 ಕಿ. ಮೀ. ದೂರದ ಬೆಳ್ತಂಗಡಿಯಿಂದ ಪೊಲೀಸರು ಇಲ್ಲಿಗೆ ಬರಬೇಕಾಗಿದೆ. ಮಾರ್ಗ ಮಧ್ಯೆ ವಾಹನಗಳು ಕೆಟ್ಟು ನಿಂತು ಸಂಚಾರದಲ್ಲಿ ವ್ಯತ್ಯಯವಾಗುತ್ತಿದ್ದು, ವಾಹನಗಳ ತೆರವಿಗೆ ಕ್ರೇನ್‌ನ ವ್ಯವಸ್ಥೆಯನ್ನು ಕಲ್ಪಿಸಿದರೆ ಅನುಕೂಲವಾಗುತ್ತದೆ.

ಮೂಲ ಸೌಕರ್ಯವಿಲ್ಲ
ಚಾರ್ಮಾಡಿಯಿಂದ ಕೊಟ್ಟಿಗೆಹಾರದವರೆಗೆ ಸುಮಾರು 20 ಕಿ. ಮೀ. ರಸ್ತೆ ದಟ್ಟವಾದ ಅರಣ್ಯದಲ್ಲಿ ಹಾದು ಹೋಗುತ್ತದೆ. ವಾಹನ ಸಂಚಾರದಲ್ಲಿ ಅಡಚಣೆಯಾದರೆ ಅರಣ್ಯದ ನಡುವೆಯೇ ಜನರು ರಾತ್ರಿ ಕಳೆಯಬೇಕಾಗಿದೆ. ಯಾವುದೇ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲಿ ಲಭ್ಯವಿಲ್ಲ.

ನೀರು, ತಿಂಡಿ ಜತೆಗಿರಲಿ
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಎಷ್ಟು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತದೆ ಎಂಬ ಅರಿವು ಹೆಚ್ಚಿನವರಿಗೆ ಇರುವುದಿಲ್ಲ. ಪ್ರಯಾಣದ ವೇಳೆ ತಿಂಡಿ, ನೀರು ಮೊದಲಾದ ಅಗತ್ಯ ವಸ್ತುಗಳನ್ನು ಜತೆಯಲ್ಲಿ ತೆಗೆದುಕೊಂಡು ತೆರಳುವುದು ಉತ್ತಮ. ಇಲ್ಲವಾದರೆ ಅರಣ್ಯದ ಮಧ್ಯೆ ನೀರಿಗೂ ಕಷ್ಟವಾದೀತು.

ಅನುದಾನ ಬರಬೇಕಿದೆ
ಈಗಾಗಲೇ ತಾತ್ಕಾಲಿಕ ಕಾಮಗಾರಿಗಳು ಮುಗಿದಿವೆ. ಮುಂದಿನ ದಿನಗಳಲ್ಲಿ ಕಾಯಂ ಪರಿಹಾರಕ್ಕಾಗಿ ಅನುದಾನ ಬರಬೇಕಿದೆ. ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಹೀಗಾಗಿ ಅದಕ್ಕೆ ಅನುಮೋದನೆ ಸಿಕ್ಕ ಬಳಿಕವೇ ತೀರ್ಮಾನವಾಗಬೇಕಿದೆ.
-ಸುಬ್ಬರಾಮ ಹೊಳ್ಳ 
ಕಾರ್ಯಪಾಲಕ ಎಂಜಿನಿಯರ್‌, ರಾ.ಹೆ.ಮಂಗಳೂರು


Trending videos

Back to Top