CONNECT WITH US  

ಕೊಳೆರೋಗ: ಔಷಧ ಸಿಂಪಡಣೆಗೆ ಸಿಗುತ್ತಿಲ್ಲ ಸುಣ್ಣ

ಕಚೇರಿಯಲ್ಲೇ ಕುಳಿತು ಇಲಾಖೆ ಸರ್ವೇ; ರೈತರ ಆಕ್ರೋಶ

ಬೆಳಂದೂರು: ಭಾರೀ ಮಳೆಯಿಂದಾಗಿ ಈ ಸಲ ಅಡಿಕೆ ತೋಟಗಳಲ್ಲಿ ಕೊಳೆರೋಗದ ಹಾವಳಿ ವಿಪರೀತವಾಗಿದೆ. ಸದ್ಯ ಬಿಸಿಲು ಬೀಳುತ್ತಿದ್ದು, ಬೋರ್ಡೋ ದ್ರಾವಣ ಸಿಂಪಡಿಸಿ ಉಳಿದ ಬೆಳೆಯನ್ನಾದರೂ ರಕ್ಷಿಸಿಕೊಳ್ಳೋಣ ಎಂದರೆ ಸುಣ್ಣವೇ ಸಿಗದೆ ಕೃಷಿಕರು ಆತಂಕಗೊಂಡಿದ್ದಾರೆ. ಅಡಿಕೆ ಗಿಡದಲ್ಲಿ ಹಿಂಗಾರ ಅರಳುವ ಸಮಯದಿಂದ ಅಡಿಕೆ ಹಣ್ಣಾಗುವ ವರೆಗೆ ಮಳೆಗಾಲದ ಅವಧಿಯಲ್ಲಿ ಕನಿಷ್ಠ ಮೂರು ಸಲ ಬೋರ್ಡೋ ದ್ರಾವಣ ಸಿಂಪಡಿಸಬೇಕು. ಆದರೆ, ಒಂದು ವಾರದಿಂದ ಮಳೆ ಕಡಿಮೆಯಾಗಿದ್ದರೂ ಔಷಧ ಸಿಂಪಡಣೆ ಸಾಧ್ಯವಾಗುತ್ತಿಲ್ಲ. ಮೈಲುತುತ್ತು ಧಾರಾಳವಾಗಿ ಸಿಗುತ್ತಿದೆ. ಸರಕಾರದ ಸಬ್ಸಿಡಿಯೂ ಇದೆ. ಆದರೆ, ಚಿಲ್ಲರೆಯಾಗಿ ಅಥವಾ ರಖಂ ಅಂಗಡಿಗಳಲ್ಲಿ ಹುಡುಕಾಡಿದರೂ ಚಿಪ್ಪು ಸುಣ್ಣ ಸಿಗುತ್ತಿಲ್ಲ. ಸಹಕಾರ ಸಂಘಗಳಲ್ಲಿ 20 ದಿನಗಳಿಂದ ಸುಣ್ಣ ಪೂರೈಕೆ ಆಗಿಲ್ಲ. ಅಲಭ್ಯತೆಗೆ ಏನು ಕಾರಣ ಎನ್ನುವ ಮಾಹಿತಿಯೂ ವಿತರಕರ ಬಳಿ ಇಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ
ಕೊಳೆರೋಗದಿಂದ ಅಡಿಕೆ ಕೃಷಿ ಬಹುತೇಕ ನಾಶವಾಗಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಸರ್ವೆ ನಡೆಸಿ ಅಂದಾಜು ಪಟ್ಟಿಯನ್ನು ಸರಕಾರಕ್ಕೆ ಕಳುಹಿಸುತ್ತಿದ್ದಾರೆ. ಸುಣ್ಣದ ಕೊರತೆಯನ್ನು ನೀಗಿಸುವಲ್ಲಿ ಕೃಷಿ ಇಲಾಖೆ ಯವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕೃಷಿಕರು ಆರೋಪಿಸಿದ್ದಾರೆ.

ಶೇ. 50ರಷ್ಟು ಅಡಿಕೆ ನಾಶ
ಎರಡು ತಿಂಗಳಿನಿಂದ ಎಡೆಬಿಡದೆ ಸುರಿದ ವಿಪರೀತ ಮಳೆಯ ಕಾರಣಕ್ಕೆ ಅಡಿಕೆಗೆ ಕೊಳೆರೋಗ ಉಂಟಾಗಿದೆ. ಪುತ್ತೂರು ತಾಲೂಕಿನಲ್ಲಿ ಶೇ. 50ರಷ್ಟು ಅಡಿಕೆ ಕೊಳೆರೋಗದಿಂದ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲವೊಮ್ಮೆ ಇದರ ತೀವ್ರತೆ ಹೇಗಿರುತ್ತದೆ ಎಂದರೆ ಮರದಲ್ಲಿದ್ದ ಅಡಿಕೆಗಳು ಸಂಪೂರ್ಣ ನೆಲಕಚ್ಚುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯುವ ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಎಲ್ಲ ಭಾಗಗಳಲ್ಲಿ ಎಳೆ ಅಡಿಕೆಗಳು ಉದುರಲಾರಂಭಿಸಿವೆ.

ಕೊಳೆರೋಗ ಪರಿಹಾರ: ಅರ್ಜಿ ಅವಧಿ ವಿಸ್ತರಣೆ
ಸದ್ಯ ರೈತರ ಒಕ್ಕೊರಲ ಆಗ್ರಹದಂತೆ ಕೊಳೆರೋಗ ಪರಿಹಾರ ಅರ್ಜಿ ಸಲ್ಲಿಕೆಗೆ ದಿನಾಂಕವನ್ನು ಸೆ. 15ರ ವರೆಗೆ ವಿಸ್ತರಣೆ ಮಾಡಲಾಗಿದೆ. ಮೊದಲನೆ ಹಂತದ ಸರ್ವೇ ಕಾರ್ಯ ಮುಗಿದಿದ್ದು, ಇದೀಗ 2ನೇ ಹಂತದ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತೋಟಗಾರಿಕಾ ಇಲಾಖೆಗೆ ಸುತ್ತೋಲೆ ಯನ್ನು ಹೊರಡಿಸಿದ್ದಾರೆ. ಆದರೆ, ನಡುವೆ ಹಬ್ಬಗಳ ರಜೆ ಹಾಗೂ ರವಿವಾರ ಇರುವುದರಿಂದ ಅದನ್ನು ಸೆ. 20ರ ವರೆಗೂ ವಿಸ್ತರಿಸಬೇಕೆಂಬುದು ರೈತರ ಒತ್ತಾಯ.

ಪರಿಹಾರ ಸಾಲುವುದಿಲ್ಲ
ಕೊಳೆರೋಗದಿಂದ ಅಡಿಕೆ ನಾಶವಾದಲ್ಲಿ ನಷ್ಟದ ಪ್ರಮಾಣಕ್ಕೆ ತಕ್ಕಂತೆ ಪರಿಹಾರವೂ ಸಿಗುತ್ತಿಲ್ಲ. ತೋಟಗಾರಿಕೆ ಇಲಾಖೆಯ ವತಿಯಿಂದ ಸರ್ವೆ ನಡೆಸಿ ವರದಿ ನೀಡಿಯೂ ನಷ್ಟವಾದ ಅಡಿಕೆ ಪ್ರಮಾಣದ ಶೇ. 2ರಷ್ಟು ಪರಿಹಾರ ಮೊತ್ತ ಮಾತ್ರ ಸರಕಾರದಿಂದ ಸಿಗುತ್ತಿದೆ. ಸರಕಾರ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ಎಕರೆಗೆ ಕನಿಷ್ಠ 10 ಸಾವಿರ ರೂ. ಪರಿಹಾರ ಕೊಡಬೇಕು ಎನ್ನುವುದು ಕೃಷಿಕರ ಆಗ್ರಹ. ಸರಕಾರ ಈ ಹಿಂದೆ ಎಕರೆಗೆ 2 ಸಾವಿರ ರೂ. ಪರಿಹಾರ ನೀಡಿದ್ದು, ಯಾವ ಲೆಕ್ಕಕ್ಕೂ ಸಿಗದಂತಾಗಿದೆ. ಎಕರೆಗೆ ಕನಿಷ್ಠ 10 ಸಾವಿರ ರೂ. ಪರಿಹಾರ ಕೊಡಬೇಕು ಎನ್ನುವುದು ರೈತರ ಮನವಿ. 

ಸಬ್ಸಿಡಿಯನ್ನು ನೀಡುತ್ತಿದ್ದೇವೆ
ಸುಣ್ಣದ ಕೊರತೆಯ ವಿಚಾರ ಕೃಷಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಅಡಿಕೆ ಕೃಷಿಕರು ಮೈಲುತುತ್ತು ಖರೀದಿ ಮಾಡಿದ ಬಿಲ್ಲನ್ನು ಲಗತ್ತಿಸಿ ಅರ್ಜಿ ಹಾಕಿದ್ದಲ್ಲಿ ನಾವು ಸಬ್ಸಿಡಿಯನ್ನು ನೀಡುತ್ತಿದ್ದೇವೆ. ಮೊದಲ ಸರ್ವೆ ಕಾರ್ಯದಲ್ಲಿ ಶೇ. 50ರಷ್ಟು ಕೊಳೆರೋಗ ಪೀಡಿತವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಕೆಲವೇ ದಿನಗಳಲ್ಲಿ 2ನೇ ಹಂತದ ಸರ್ವೆ ಕಾರ್ಯ ನಡೆಸಿ ಸರಕಾರಕ್ಕೆ ವರದಿ ನೀಡುತ್ತೇವೆ.
- ರೇಖಾ, ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕಾ ಇಲಾಖೆ

 ಸುಣ್ಣದ ಕೊರತೆ ಇದೆ
ವಿಪರೀತ ಮಳೆಯಾಗಿರುವ ಕಾರಣ ಸುಣ್ಣ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಾರುಕಟ್ಟೆಯಲ್ಲಿ ಸುಣ್ಣದ ಕೊರತೆ ಉಂಟಾಗಿರುವ ಕಾರಣ ಕೃಷಿಕರಿಗೆ ತೊಂದರೆಯಾಗಿರುವುದು ನಿಜ.
- ನಯೀಂ ಹುಸೈನ್‌, ಪುತ್ತೂರು ಸಹಾಯಕ ಕೃಷಿ ಅಧಿಕಾರಿ

-- ಪ್ರವೀಣ್‌ ಚೆನ್ನಾವರ

Trending videos

Back to Top