CONNECT WITH US  

ರಾಜ್ಯಮಟ್ಟದ ಚದುರಂಗ: ಮಂಗಳೂರು ಪ್ರಥಮ

ಯಾದಗಿರಿ: ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಎರಡು ದಿನಗಳ ಕಾಲ ನಡೆದ 2017-18ನೇ ಸಾಲಿನ ರಾಜ್ಯ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಚದುರಂಗ (ಚೆಸ್‌) ಪಂದ್ಯಾವಳಿಯಲ್ಲಿ ಮಂಗಳೂರು ತಂಡ 33.5 ಅಂಕದೊಂದಿಗೆ ಪ್ರಥಮ, ಉಡುಪಿ ತಂಡ 33 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆಯಿತು.

ಪಂದ್ಯಾವಳಿಯಲ್ಲಿ ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಿಂದ ತಲಾ ಒಂದು ಜಿಲ್ಲೆಯಿಂದ 10 ಜನ ವಿದ್ಯಾರ್ಥಿಗಳು (ವಿದ್ಯಾರ್ಥಿ-5, ವಿದ್ಯಾರ್ಥಿನಿಯರು-5) ಸೇರಿದಂತೆ ಒಟ್ಟು 312 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಂಗಳೂರು ತಂಡದ ವಿದ್ಯಾರ್ಥಿಗಳು 9 ಸುತ್ತುಗಳಲ್ಲಿ ಉತ್ತಮ ಆಟವಾಡಿ 33.5 ಅಂಕಗಳಿಸಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ಉಡುಪಿ ವಿದ್ಯಾರ್ಥಿನಿಯರು 33 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ತುಮಕೂರು ವಿದ್ಯಾರ್ಥಿ ಶೇಟ್‌ ಪ್ರಜ್ವಲ್‌, ಮಂಗಳೂರಿನ ಶರಣರಾವ್‌ ಚಿರಾಗ ಹಿರಿಜಾ, ಪ್ರಶಾಂತ ನಾಯಕ, ಮೈಸೂರಿನ ಪವನ ಸಿ., ಕೊಡಗು ವಿದ್ಯಾರ್ಥಿನಿ ಅನನ್ಯ ಸುರೇಶ, ಮೈಸೂರಿನ ತುಳಸಿ ಎಂ., ಉಡುಪಿಯ ಮಹಿಮಾ ಶೇರಿಗಾರ, ಮಂಗಳೂರಿನ ಪಂಚಮಿ ಸರ್ಪಗೊಳ ಸಮಾಧಾನಕರ ಬಹುಮಾನ ಪಡೆದರು.

ಒಟ್ಟು 32 ಶೈಕ್ಷಣಿಕ ಜಿಲ್ಲೆಯ ತಲಾ 5 ಜಿಲ್ಲೆಗಳ ವಿದ್ಯಾರ್ಥಿ- ವಿದ್ಯಾರ್ಥಿಗಳಂತೆ ಒಟ್ಟು 10 ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸಮಾಧಾನಕರ ಬಹುಮಾನ ನೀಡಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗುರುಲಿಂಗಪ್ಪ ಮಿಣಜಿಗಿ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಗಣಚಾರಿ, ಪ್ರಾಂಶುಪಾಲರ ಸಂಘದ ರಾಜ್ಯ ಪ್ರತಿನಿಧಿ ರಘುನಾಥರೆಡ್ಡಿ ಪಾಟೀಲ, ಕೋಶಾಧ್ಯಕ್ಷ ಚನ್ನಬಸಪ್ಪ ಕುಳಗೇರಿ, ಸದಸ್ಯ ಶರಣಪ್ಪ ರಾಹುಲ್‌, ಜಿಲ್ಲಾ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಮಹಾಂತೇಶ ಕಲಾಲ, ಕೋಶಾಧ್ಯಕ್ಷ ವೆಂಕಟರಾವ್‌ ಕುಲಕರ್ಣಿ ಇದ್ದರು.

Trending videos

Back to Top