CONNECT WITH US  

ಮುಂಗಾರು ಹೊತ್ತಲ್ಲೇ ಬರ ಛಾಯೆ

ರಾಯಚೂರು: ಮುಂಗಾರು ಮಳೆಯ ಪ್ರಮುಖ ಕಾಲಘಟ್ಟವಾದ ಜುಲೈ ತಿಂಗಳಲ್ಲೇ ನಿರೀಕ್ಷಿತ ಮಟ್ಟದ ಮಳೆ ಸುರಿಯದ ಕಾರಣ ರಾಯಚೂರು ಜಿಲ್ಲೆಯಲ್ಲಿ ಬರದ ಛಾಯೆ ದಟ್ಟವಾಗಿ ಆವರಿಸಿದೆ. ಜಿಲ್ಲೆಗೆ ಶೇ.41ರಷ್ಟು ಮಳೆ ಕೊರತೆಯಾಗಿದ್ದು, ಬರ ನಿರ್ವಹಣೆಗೆ ಜಿಲ್ಲಾಡಳಿತ ಅದಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಆರಂಭದಲ್ಲಿ ಸುರಿದ ಅಲ್ಪಸ್ವಲ್ಪ ಮಳೆಯನ್ನೇ ನಂಬಿ ರೈತರು ಬಿತ್ತನೆ ಮಾಡಿದ್ದು, ಈಗ ಮಳೆ ಕೊರತೆಯಿಂದ ಸಸಿಗಳೆಲ್ಲ ಒಣಗಿ ಹೋಗುತ್ತಿವೆ. ಹೀಗಾಗಿ ಕೆಲವೆಡೆ ರೈತರು ಮಾಡಿದ ಬಿತ್ತನೆ ಕೆಡಿಸಿ ಹಿಂಗಾರು ಬಿತ್ತುವ ಚಿಂತನೆಯಲ್ಲಿದ್ದಾರೆ. ಒಂದು ದೊಡ್ಡ ಮಳೆಯಾದರೆ ಸಾಕು ಬೆಳೆ ಚೇತರಿಸಿಕೊಳ್ಳುತ್ತದೆ ಎಂಬ ಆಶಾಭಾವದಲ್ಲಿ ಕರಿಮೋಡಗಳನ್ನು ನೋಡುತ್ತ ಕಾಲದೂಡುತ್ತಿದ್ದಾರೆ. 

ಜಿಲ್ಲೆಯಲ್ಲಿ 3.5 ಲಕ್ಷ ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ ಕೇವಲ ಕೇವಲ 98 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ವೇಳೆಗಾಗಲೇ ಶೇ.61ರಷ್ಟು ಬಿತ್ತನೆ ಗುರಿ ತಲುಪಿದ್ದರೆ, ಈ ಜುಲೈ ಅಂತ್ಯಕ್ಕೆ ಕೇವಲ ಶೇ.32ರಷ್ಟು ಮಾತ್ರ ಗುರಿ ತಲುಪಲಾಗಿದೆ.

ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ನೀರಾವರಿ ಪ್ರದೇಶದ ರೈತರು ಒಂದು ಬೆಳೆಗೆ ನೀರು ಸಿಗುವ ವಿಶ್ವಾಸದಲ್ಲಿದ್ದಾರೆ. 1.35 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಗುರಿ ಹೊಂದಿದ್ದು, ಕೊನೆ ಭಾಗದ ರೈತರು ಕೂರಿಗೆ ಪದ್ಧತಿಯಡಿ 18 ಸಾವಿರ ಹೆಕ್ಟೇರ್‌ ಬಿತ್ತನೆ ಮಾಡಿದ್ದಾರೆ. ಉಳಿದ ರೈತರು ನೀರು ಬಿಟ್ಟ ತಕ್ಷಣ ಬಿತ್ತನೆ ಮಾಡಲಿದ್ದಾರೆ. ಆದರೆ, ಬಯಲುಸೀಮೆ ರೈತರಿಗೆ ಮಾತ್ರ ಬರ ಎದುರಿಸದೆ ಬೇರೆ ಮಾರ್ಗಗಳಿಲ್ಲದಂತಾಗಿದೆ. 

ಜುಲೈ ಅಂತ್ಯಕ್ಕೆ 163 ಮಿಮೀ ಮಳೆ ಅಗತ್ಯವಿತ್ತು. ಆದರೆ, ಈವರೆಗೆ ಕೇವಲ 93 ಮಿಮೀ ಮಳೆಯಾಗಿದೆ. ಆದರೆ, ಆರಂಭದಲ್ಲಿ ಬಂದ ಅಲ್ಪಸ್ವಲ್ಪ ಮಳೆ ಆಶ್ರಯಿಸಿ ಶೇ.70ರಷ್ಟು ತೊಗರಿ ಬಿತ್ತನೆ ಮಾಡಲಾಗಿದೆ. 85 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 19 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಗುಲಾಬಿ ಕಾಯಿಕೊರಕ ರೋಗದ ಭೀತಿ ಹಾಗೂ ಮಳೆ ಆಭಾವದಿಂದಾಗಿ ಕೃಷಿ ಇಲಾಖೆ ಅಧಿಕಾರಿಗಳು ಹತ್ತಿ ಬಿತ್ತದಂತೆ ಮನವಿ ಮಾಡುತ್ತಿದ್ದಾರೆ.

ಬರ ನಿರ್ವಹಣೆಗೆ ಸಿದ್ಧತೆ: ಶೇ.41ರಷ್ಟು ಮಳೆ ಕೊರತೆ ಆಗಿರುವ ಕಾರಣ ಬಹುತೇಕ ಬರ ಆವರಿಸುವ ಮುನ್ಸೂಚನೆ ದಟ್ಟವಾಗಿದೆ. ಇದೇ ಅಂಶದ ಮೇಲೆ ಹೆಚ್ಚು ಒತ್ತು ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ ಬರ ನಿರ್ವಹಣೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಜತೆಗೆ ಸರ್ಕಾರಕ್ಕೂ ಬರಪೀಡಿತ ಜಿಲ್ಲೆ ಘೋಷಣೆಗೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ. 

ಗುಳೆ ತಪ್ಪಿಸಲು ಕ್ರಮ: ಬರ ಬಿದ್ದರೆ ಜಿಲ್ಲೆಯ ಜನ ಕೂಲಿ ಅರಸಿ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುವ ಸಂಪ್ರದಾಯ ಇನ್ನೂ ನಿಂತಿಲ್ಲ. ಅದನ್ನು ತಪ್ಪಿಸಲು ಜಿಲ್ಲಾಡಳಿತ ನರೇಗಾದಡಿ ಉದ್ಯೋಗ ಸೃಜನೆಗೆ ಒತ್ತು ನೀಡುವ ಅನಿವಾರ್ಯತೆ ಇದೆ. ಉದ್ಯೋಗ ಖಾತರಿಯಡಿ ಈವರೆಗೆ ಶೇ.25ರಷ್ಟು ಗುರಿ ತಲುಪಲಾಗಿದೆ ಎನ್ನುವ ಜಿಪಂ ಸಿಇಒ, ಕೆರೆ ಪುನಶ್ಚೇತನ, ಚೆಕ್‌ ಡ್ಯಾಂಗಳ ನಿರ್ಮಾಣ, ಕೃಷಿ ಹೊಂಡಗಳು, ಅಂಗನವಾಡಿ ಕಟ್ಟಡಗಳ ನಿರ್ಮಾಣ ಸೇರಿ ಹೆಚ್ಚು ವಿವಿಧ ಕಾಮಗಾರಿಗಳಡಿ ಕೂಲಿ ಸೃಷ್ಟಿಗೆ ಒತ್ತು ನೀಡಲಾಗುವುದು ಎನ್ನುತ್ತಾರೆ. ಪ್ರಸಕ್ತ ವರ್ಷ 50 ಲಕ್ಷ ಮಾನವ ಉದ್ಯೋಗ ಸೃಜನೆ ಗುರಿ ಹೊಂದಲಾಗಿದೆ ಎಂದು ವಿವರಿಸುತ್ತಾರೆ. 

ವಿಮೆ ಸಮಸ್ಯೆ..!: ಎರಡು ವರ್ಷಗಳ ಹಿಂದೆ ಫಸಲ್‌ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ ರೈತರಿಗೆ ಸರಿಯಾಗಿ ಹಣ ಬಾರದ ಕಾರಣ ಕಳೆದ ವರ್ಷ ನಿರೀಕ್ಷಿತ ಮಟ್ಟದಲ್ಲಿ ವಿಮೆ ಮಾಡಿಸಿರಲಿಲ್ಲ. ಕಳೆದ ವರ್ಷದಲ್ಲಿ ವಿಮೆ ಮಾಡಿಸಿದದವರಿಗೆ 52 ಕೋಟಿ ರೂ. ವಿಮೆ ಹಣ ಬರಬೇಕಿದ್ದು, ಈಗಾಗಲೇ 9 ಕೋಟಿ ರೂ. ಪರಿಹಾರ ನೀಡಲಾಗಿದೆ. ಅದರ ಜತೆಗೆ ಈ ಬಾರಿ ಬರ ಆವರಿಸುವ ಸಾಧ್ಯತೆ ಇರುವುದರಿಂದ ವಿಮೆ ಮಾಡಿಸುವಂತೆ ರೈತರಿಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಹಣ ಕಟ್ಟಿದರೂ ಪರಿಹಾರ ಸಿಗದ ಕಾರಣಕ್ಕೆ ರೈತರು ವಿಮೆ ಮಾಡಿಸಲು ಹಿಂದೇಟಾಕುತ್ತಿದ್ದಾರೆ.

ರೈತರ ಸಂಪೂರ್ಣ ಸಾಲದ ಭರವಸೆ ನೀಡಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅದರಲ್ಲೂ ಎಲ್ಲ ರೈತರನ್ನು ಗಣನೆಗೆ ಪಡೆಯದೆ ವಂಚಿಸಿದ್ದಾರೆ. ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಬರದ ಭೀತಿ ಎದುರಾಗಿದೆ. ಕೂಡಲೇ ಸರ್ಕಾರ ಸಮಗ್ರ ಮಾಹಿತಿ ಸಂಗ್ರಹಿಸಿ ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. 
 ಚಾಮರಸ ಮಾಲಿಪಾಟೀಲ,

ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಈಗಾಗಲೇ ಮುಂಗಾರು ಹಂಗಾಮಿಗೆ ಬಿತ್ತನೆ ಅವಧಿ ಮುಗಿಯುತ್ತಿದೆ. ಹೀಗಾಗಿ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಸೂಚನೆ ನೀಡುತ್ತಿದ್ದೇವೆ. ಒಂದು ಸಾಲು ತೊಗರಿ ಹಾಗೂ ಎರಡು ಸಜ್ಜೆ, ಶೇಂಗಾ, ಹೆಸರು, ಮೆಕ್ಕೆಜೋಳದಂಥ ಬೆಳೆಗಳ ಬೆಳೆಯಲು ತಿಳಿಸಲಾಗುತ್ತಿದೆ. ಹತ್ತಿಗೆ ಕಾಯಿಕೊರಕ ರೋಗದ ಭೀತಿಯಿದ್ದು, ಖರ್ಚು ಹೆಚ್ಚಾಗುವುದರಿಂದ ಬಿತ್ತನೆ ಮಾಡದಂತೆ ಮನವರಿಕೆ ಮಾಡುತ್ತಿದ್ದೇವೆ. ಜತೆಗೆ ವಿಮೆ ಮಾಡಿಸುವಂತೆಯೂ ತಿಳಿಸಲಾಗುತ್ತಿದೆ.
 ಡಾ| ಚೇತನಾ ಪಾಟೀಲ,

ಕೃಷಿ ಇಲಾಖೆ ಜಂಟಿ ನಿರ್ದೇಶ ಜಿಲ್ಲೆಗೆ ಶೇ.41ರಷ್ಟು ಮುಂಗಾರು ಮಳೆ ಅಭಾವವಾಗಿದ್ದು, ಬರದ ಮುನ್ಸೂಚನೆ
ಇರುವ ಕಾರಣ ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಟಿಬಿ ಡ್ಯಾಂನಿಂದ ನಗರ ಸೇರಿ ಜಿಲ್ಲೆಯ ಜನರಿಗೆ ಕುಡಿಯಲು ಸಂಗ್ರಹಿಸಲಾಗುತ್ತಿದೆ. ಗಣೇಕಲ್‌ ಜಲಾಶಯದಲ್ಲಿ 12.5 ಅಡಿ ನೀರು ಶೇಖರಣೆಗೊಂಡಿದೆ. ಸರ್ಕಾರಕ್ಕೆ ಸಮಗ್ರ ವರದಿ ನೀಡಲಾಗುವುದು.
 ಡಾ| ಬಗಾದಿ ಗೌತಮ್‌,  ಜಿಲ್ಲಾಧಿಕಾರಿ

„ಸಿದ್ಧಯ್ಯಸ್ವಾಮಿ ಕುಕನೂರು


Trending videos

Back to Top